ರಾಜ್ಯದಾದ್ಯಂತ 4370 ಹಳ್ಳಿಗಳು ಸ್ಮಶಾನ ಭೂಮಿಯನ್ನು ಹೊಂದಿಲ್ಲ. ಆದುದರಿಂದ ರಾಜ್ಯ ಸರ್ಕಾರವು ಈಗ ಈ ಉದ್ದೇಶಕ್ಕಾಗಿ ಭೂಮಿಯನ್ನು ಸಂಗ್ರಹಿಸಲು ಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಅದನ್ನು ಅಂತಿಮಗೊಳಿಸುವ ನಿರೀಕ್ಷೆಯನ್ನು ಹೊಂದಿದೆ.
ಇತ್ತಿಚೆಗೆ ನಡೆದ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ರಾಜ್ಯಾದ್ಯಂತ ಹಲವು ಗ್ರಾಮಗಳಲ್ಲಿ ಜಾಗದ ಕೊರತೆ, ಸ್ಮಶಾನದ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ತದನಂತರ ಒಟ್ಟು 29,438 ಹಳ್ಳಿಗಳಲ್ಲಿ 4370 ಹಳ್ಳಿಗಳು ಸ್ಮಶಾನದ ಭೂಮಿಯನ್ನು ಹೊಂದಿಲ್ಲ ಎಂಬುದಾಗಿ ವರದಿಯಾಗಿದೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳು ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಹಾಸನ, ಚಿತ್ರದುರ್ಗ, ರಾಯಚೂರು ಮತ್ತು ಕೆಲವು ಬಾಗಲಕೋಟೆ, ಕಲಬುರಗಿ, ಯಾದಗಿರಿ, ಗದಗ ಮತ್ತು ಕೊಪ್ಪಳದಲ್ಲಿದೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡದ ನಾಲ್ಕು, ಚಿಕ್ಕಬಳ್ಳಾಪುರದ ಆರು ಮತ್ತು ಬೆಂಗಳೂರು ಗಾಮಾಂತರ ಜಿಲ್ಲೆಯ ಎಂಟು ಗ್ರಾಮಗಳಿಗೆ ಸ್ಮಶಾನ ಭೂಮಿ ಇಲ್ಲ. ಮಾತ್ರವಲ್ಲದೆ ಮಲೆನಾಡು ಪ್ರದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶಗಳನ್ನು ಸ್ಮಶಾನ ಭೂಮಿಯಾಗಿ ಬಳಸುತ್ತಿದ್ದಾರೆ. ಈ ಸ್ಥಳಗಳಲ್ಲಿ ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರಿಸುವಂತೆ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆದು ಪರ್ಯಾಯ ಜಮೀನು ನೀಡಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದ್ದಾರೆ.