26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ರಾಜ್ಯದ ವಿವಿಧ ಭಾಗಗಳಲ್ಲಿ ಬೇಸಿಗೆ ಮಳೆಯ ಚಟುವಟಿಕೆ ಮುಂದುವರಿದಿದ್ದು, ಮಾರ್ಚ್ 26ರ ಬೆಳಿಗ್ಗೆ 8 ಗಂಟೆಯವರೆಗೆ ಹಲವೆಡೆ ಮಧ್ಯಾಹ್ನ ನಂತರ ಹಾಗೂ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲ ಭಾಗಗಳಲ್ಲಿ ಸಾಮಾನ್ಯ ಮಳೆಯೂ ಸಂಭವಿಸುವ ಸಾಧ್ಯತೆ ಇದೆ.
ಕರಾವಳಿ ಭಾಗ
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಧ್ಯಾಹ್ನ ನಂತರ ಹಾಗೂ ಸಂಜೆ ವೇಳೆಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಮುಂದಿನ ಒಂದೆರಡು ದಿನ ಮಳೆ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿದ್ದರೂ, ಏಪ್ರಿಲ್ 4 ಅಥವಾ 5ರವರೆಗೆ ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
ಮಲೆನಾಡು ಭಾಗ
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಸಂಜೆ ವೇಳೆಯಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೆಲ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದ್ದು, ಈ ಬೇಸಿಗೆ ಮಳೆ ಏಪ್ರಿಲ್ ಮೊದಲ ವಾರದವರೆಗೂ ಮುಂದುವರಿಯಬಹುದು.
ಉತ್ತರ ಒಳನಾಡು
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ, ವಿಜಯನಗರ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಗಾಳಿಯ ಒತ್ತಡ ಹೆಚ್ಚಾದರೆ ಮಳೆಯಾಗುವ ಲಕ್ಷಣಗಳಿವೆ. ಮಧ್ಯಮ ಸ್ತರದಲ್ಲಿ ಉತ್ತರ ಕರ್ನಾಟಕ ಹಾಗೂ ಮಧ್ಯ ಭಾರತದಲ್ಲಿ ಪ್ರತ್ಯಾವರ್ತ ಮಾರುತಗಳ ಚಲನೆಯಿಂದ ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು
ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಒಂದೆರಡು ಕಡೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಾರ್ಚ್ 28ರ ನಂತರ ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲೂ ಮಳೆ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ.

