ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದರೂ, ಆಗಸ್ಟ್ 26ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಕರಾವಳಿಯಲ್ಲಿ ಮಳೆಯ ನಡುವೆ ಬಿಡುವಿನ ಅವಧಿ ಹೆಚ್ಚಾಗಲಿದ್ದು, ಮಲೆನಾಡು ಹಾಗೂ ಒಳನಾಡಿನ ಬಹುತೇಕ ಭಾಗಗಳಲ್ಲೂ ಬಿಸಿಲು-ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆಯಿದೆ. ಈ ಮುನ್ಸೂಚನೆ ಆಗಸ್ಟ್ 26ರ ಬೆಳಿಗ್ಗೆ 8 ಗಂಟೆಯವರೆಗೆ ಅನ್ವಯಿಸುತ್ತದೆ. ಕರಾವಳಿಯಲ್ಲಿ ಆಗಸ್ಟ್ 31ರವರೆಗೆ ಅಲ್ಲಲ್ಲಿ ಸಣ್ಣ ಮಳೆ ; ಗದಗ ಗಡಿಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ, ಹಿಂಗಾರು ಮಾರುತದ ಮೇಲೂ ಚಂಡಮಾರುತಗಳ ಸರಣಿ ಪರಿಣಾಮ ಬೀರುವ ಆತಂಕ ಇದೆ.
ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ ಇದೆ. ಮಳೆಯ ನಡುವೆ ಬಿಡುವಿನ ಸಮಯ ಹೆಚ್ಚಿರಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸ್ವಲ್ಪ ಕಡಿಮೆ ಇರಬಹುದು. ಈಗಿನಂತೆ ಆಗಸ್ಟ್ 26ರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಆದರೂ ದಿನದಲ್ಲಿ ಒಂದೆರಡು ಸಣ್ಣ ಪ್ರಮಾಣದ ಮಳೆಯು ಆಗಸ್ಟ್ 31ರ ಮುಂದುವರಿಯುವ ಸಾಧ್ಯತೆಗಳಿವೆ.
ಮಲೆನಾಡು : ಮೋಡದ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇವತ್ತು ಮಳೆಯ ಮುಂದುವರಿಯುವ ಮುನ್ಸೂಚನೆ ಇದೆ. ಉಳಿದ ಕೊಡಗಿನ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಹಾಸನದ ಸಕಲೇಶಪುರ., ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಪ್ರದೇಶಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಆಗಸ್ಟ್ 26ರಿಂದ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಗದಗ ಗಡಿಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ. ಉಳಿದ ಬಳ್ಳಾರಿ, ಕೊಪ್ಪಳ ಹಾಗೂ ಧಾರವಾಡ, ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಈಗಿನಂತೆ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ 26ರಿಂದ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು (ಪಾವಗಢ ಸಹಿತ) ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್ 26ರಿಂದ ಮಳೆಯ ಪ್ರಮಾಣವು ಕಡಿಮೆಯಾಗಿ ಬಿಸಿಲು ಮತ್ತು ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ರೈತರು ಏನು ಗಮನಿಸಬೇಕು? : ಮಳೆ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳಿದ್ದರೆ ಮಳೆಯ ಬಿಡುವಿನ ಅವಧಿಯನ್ನು ಬಳಸಿಕೊಳ್ಳುವುದು, ಒಣಗಿಸುವಿಕೆ ಹಾಗೂ ಸಂಗ್ರಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ. ಅದೇ ವೇಳೆ ಮಳೆ ಸಂಪೂರ್ಣ ನಿಂತಿದೆ ಎಂದು ಭಾವಿಸದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 31ರವರೆಗೆ ಅಲ್ಲಲ್ಲಿ ಸಣ್ಣ ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.
ಮುಂಗಾರು ಅಂತ್ಯದ ಹಂತದಲ್ಲಿ ಮಳೆಯ ಪ್ರಮಾಣಕ್ಕಿಂತ ಮಳೆಯ ಬಿಡುವಿನ ಅವಧಿ ರೈತರಿಗೆ ಹೆಚ್ಚು ಮಹತ್ವ ಪಡೆಯುವ ಕಾಲ ಇದು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Rainfall is likely to decrease across most parts of Karnataka from August 26, with longer dry intervals expected in the coastal, Malnad and interior regions. Coastal Karnataka may still receive light intermittent showers through August 31, while parts of Gadag and adjoining border areas may see better rainfall. Weather patterns over the Pacific, including a strong typhoon near Japan, are also being closely watched for their possible longer-term influence on India’s northeast monsoon.


