ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತುಸು ನಿಧಾನಗತಿಯಲ್ಲಿ ಸಾಗುತ್ತಿರುವ ಮುಂಗಾರು ಮಳೆಯು ಜೂನ್ 25ರಿಂದ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿವೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ರೈತರಿಗೆ ಇದು ಅನುಕೂಲಕರ ಬೆಳವಣಿಗೆಯಾಗಿದೆ.
ಕರಾವಳಿ ಜಿಲ್ಲೆಗಳು : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 24ರ ಬೆಳಿಗ್ಗೆ 8 ಗಂಟೆಯವರೆಗೆ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯೂ ಇದೆ.
ಈಗಿನ ಹವಾಮಾನ ಪರಿಸ್ಥಿತಿ ಮುಂದುವರಿಯಲಿದ್ದು, ಜೂನ್ 25ರಿಂದ ಮಳೆಯ ತೀವ್ರತೆ ಹೆಚ್ಚಾಗಿ ಮಳೆಯ ನಡುವಿನ ಬಿಡುವಿನ ಅವಧಿ ಕಡಿಮೆಯಾಗುವ ಸಾಧ್ಯತೆಗಳಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮಲೆನಾಡು ಜಿಲ್ಲೆಗಳು : ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುವ ನಿರೀಕ್ಷೆ ಇದೆ. ಹಾಸನ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಜೂನ್ 25ರಿಂದ ಮಲೆನಾಡಿನಲ್ಲಿ ಎಂದಿನ ಮುಂಗಾರು ಚಟುವಟಿಕೆಗಳು ಆರಂಭಗೊಂಡು ಮಳೆಯ ಪ್ರಮಾಣದಲ್ಲಿ ಏರಿಕೆ ಕಂಡುಬರಬಹುದು.
ಉತ್ತರ ಒಳನಾಡು : ಹಾವೇರಿ, ಗದಗ ಹಾಗೂ ರಾಯಚೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇರಬಹುದು.
ಜೂನ್ 24ರಿಂದ 26ರ ಅವಧಿಯಲ್ಲಿ ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಸ್ಥಳೀಯ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು : ದಾವಣಗೆರೆ, ವಿಜಯನಗರ ಹಾಗೂ ಮೈಸೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಬಹುದು.
ಮುಂದಿನ 10 ದಿನಗಳವರೆಗೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಲಕ್ಷಣಗಳಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮುಂಗಾರು ಚುರುಕಿಗೆ ಕಾರಣವೇನು? : ಉತ್ತರ ಫಿಲಿಪ್ಪೀನ್ಸ್ ಪ್ರದೇಶದಲ್ಲಿ ಉಂಟಾಗಿರುವ ಪ್ರಬಲ ಚಂಡಮಾರುತದ ಪರಿಣಾಮ ಬಂಗಾಳಕೊಲ್ಲಿಯ ಗಾಳಿಯು ಆ ದಿಕ್ಕಿಗೆ ಸೆಳೆಯಲ್ಪಡುತ್ತಿದೆ. ಇದರ ಪರಿಣಾಮವಾಗಿ ಮುಂಗಾರು ಮಾರುತಗಳಿಗೆ ಹೆಚ್ಚಿನ ಬಲ ದೊರೆಯುವ ನಿರೀಕ್ಷೆ ಇದ್ದು, ಕರ್ನಾಟಕದಲ್ಲಿಯೂ ಮಳೆಯ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಹವಾಮಾನ ಸಂಬಂಧಿತ ನಿಮ್ಮ ಅಭಿಪ್ರಾಯ-ಪ್ರತಿಕ್ರಿಯೆಗಳಿಗೆ ಇಲ್ಲಿ ಕಮೆಂಟ್ ಮಾಡಿ…
Monsoon activity over Karnataka is expected to strengthen from June 25. Coastal and Malnad regions may witness increased rainfall with shorter dry spells, while scattered rains are likely across interior districts. The enhanced monsoon flow is attributed to atmospheric changes associated with a strong cyclone near northern Philippines.

