ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ನವೆಂಬರ್ 9ರಿಂದ ರಾಜ್ಯದಾದ್ಯಂತ ಉತ್ತರ ಭಾರತದ ಕಡೆಯಿಂದ ಶುಷ್ಕ ಗಾಳಿ ಬೀಸುವ ಸಾಧ್ಯತೆಯಿದ್ದು, ಮಳೆಯ ವಾತಾವರಣ ಕ್ರಮೇಣ ಕಡಿಮೆಯಾಗಬಹುದು.
ಇನ್ನೊಂದೆಡೆ, ನವೆಂಬರ್ 11ರ ಸುಮಾರಿಗೆ ಅರಬ್ಬಿ ಸಮುದ್ರದ ದಕ್ಷಿಣ ಭಾಗ ಹಾಗೂ ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಏಕಕಾಲದಲ್ಲಿ ವಾಯುಭಾರ ಕುಸಿತದಂತಹ ಹವಾಮಾನ ತಿರುವಿಕೆ ಉಂಟಾಗುವ ಸಾಧ್ಯತೆಗಳಿವೆ. ಈ ಎರಡೂ ಪ್ರದೇಶಗಳಲ್ಲಿ ರೂಪುಗೊಳ್ಳಬಹುದಾದ ಹವಾಮಾನ ವ್ಯವಸ್ಥೆಗಳ ಚಲನೆ ಹಾಗೂ ತೀವ್ರತೆಯನ್ನು ಗಮನಿಸಬೇಕಾಗಿದೆ. ಸದ್ಯಕ್ಕೆ ಅವುಗಳ ಮುಂದಿನ ಬೆಳವಣಿಗೆ ಸ್ಪಷ್ಟವಾಗಿಲ್ಲ.
ಇದರ ಜೊತೆಗೆ ರಾಜಸ್ಥಾನ ಭಾಗದಲ್ಲಿನ ಅಧಿಕ ಒತ್ತಡದ ಹವಾಮಾನ ತಿರುವಿಕೆಯ ಪರಿಣಾಮವಾಗಿ ನವೆಂಬರ್ 9 ಮತ್ತು 10ರಿಂದ ರಾಜ್ಯದಾದ್ಯಂತ ಉತ್ತರ ಭಾರತದ ಕಡೆಯಿಂದ ಶುಷ್ಕ ಗಾಳಿ ಬೀಸುವ ಸಾಧ್ಯತೆಗಳಿವೆ. ಇದರಿಂದ ಮಳೆಯ ಚಟುವಟಿಕೆ ಮತ್ತಷ್ಟು ಕಡಿಮೆಯಾಗಬಹುದು.
ಮುಂದಿನ ದಿನಗಳಲ್ಲಿ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ಹವಾಮಾನ ವ್ಯವಸ್ಥೆಗಳ ಚಲಿಸುವ ಪಥದ ಆಧಾರದಲ್ಲಿ ಕರ್ನಾಟಕದಲ್ಲಿ ಮತ್ತೆ ಮಳೆಯ ಸಾಧ್ಯತೆಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.
ರೈತರು ಗಮನಿಸಬೇಕಾದ ಅಂಶಗಳು : ಕರಾವಳಿ ಮತ್ತು ಮಲೆನಾಡಿನ ರೈತರು ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕೆಲಸಕ್ಕೆ ಆದ್ಯತೆ ನೀಡಬಹುದು. ಆದರೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆಯ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಕರಾವಳಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಸೆಖೆಯ ವಾತಾವರಣ ಇರಲಿದ್ದು, ಸಂಜೆ ಮತ್ತು ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಬಹುದು. ಪ್ರಸ್ತುತ ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 9ರಿಂದ ಮಳೆಯ ಸಾಧ್ಯತೆಗಳು ಕಡಿಮೆಯಾಗುವ ಲಕ್ಷಣಗಳಿವೆ.
ಮಲೆನಾಡು: ಕೊಡಗು, ಸಕಲೇಶಪುರ ಭಾಗಗಳಲ್ಲಿ ಗುಡುಗು ಸಹಿತ ಮಳೆ : ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ, ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಬಹುದು. ಮಲೆನಾಡು ಜಿಲ್ಲೆಗಳಲ್ಲಿಯೂ ನವೆಂಬರ್ 9ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು: ಶುಷ್ಕ ಗಾಳಿಯಿಂದ ಮಳೆಯ ಸಾಧ್ಯತೆ ಕಡಿಮೆ : ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪರಿಣಾಮವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಗಳು ಕಡಿಮೆಯಾಗಿವೆ. ಒಣಹವೆ ಮುಂದುವರಿಯುವ ಲಕ್ಷಣಗಳಿವೆ.
ದಕ್ಷಿಣ ಒಳನಾಡು: ಹಲವು ಜಿಲ್ಲೆಗಳಲ್ಲಿ ಸಂಜೆ ಗುಡುಗು ಸಹಿತ ಮಳೆ : ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಪ್ರಸ್ತುತ ಮುನ್ಸೂಚನೆಯ ಪ್ರಕಾರ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ನವೆಂಬರ್ 9ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ.


