ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಹಲವು ಭಾಗಗಳಲ್ಲಿ ಬಿಸಿಲು ಮತ್ತು ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 17ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆಯ ಪ್ರಕಾರ, ಕರಾವಳಿ, ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಕರಾವಳಿ ಕರ್ನಾಟಕ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಸೆಖೆಯೊಂದಿಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸಂಜೆಯ ವೇಳೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಬೀಳುವ ಸಾಧ್ಯತೆ ಇದೆ.
ಈಗಿನ ಮುನ್ಸೂಚನೆಯ ಪ್ರಕಾರ, ಸೆಪ್ಟೆಂಬರ್ 21ರಿಂದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ. ಆದರೆ ಮ್ಯಾನ್ಮಾರ್ ಕರಾವಳಿಯಲ್ಲಿ ರೂಪುಗೊಳ್ಳುವ ವಾಯುಭಾರ ಕುಸಿತ ಅಥವಾ ಚಂಡಮಾರುತದ ಬೆಳವಣಿಗೆ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಮಲೆನಾಡಿನಲ್ಲಿ ಸಂಜೆ ಮಳೆ : ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ವೇಳೆ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆಯೂ ಇದೆ. ಸಕಲೇಶಪುರ ಸುತ್ತಮುತ್ತ ತುಂತುರು ಮಳೆಯ ಮುನ್ಸೂಚನೆ ಇದೆ.
ಸೆಪ್ಟೆಂಬರ್ 20ರವರೆಗೆ ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ನಂತರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಮುನ್ಸೂಚನೆಯೂ ಮ್ಯಾನ್ಮಾರ್ ಕರಾವಳಿಯಲ್ಲಿನ ಹವಾಮಾನ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ.
ಉತ್ತರ ಒಳನಾಡಿನಲ್ಲಿ ಸೆ.18ರಿಂದ ಮಳೆ ಹೆಚ್ಚಾಗುವ ಸಾಧ್ಯತೆ: ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆ ಬೀಳುವ ಸಾಧ್ಯತೆ ಇದೆ. ಉಳಿದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ವಾತಾವರಣದ ಗಾಳಿಯ ಒತ್ತಡದಲ್ಲಿ ಬದಲಾವಣೆ ಕಂಡುಬಂದರೆ ಮಾತ್ರ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನ ಮುನ್ಸೂಚನೆಯಂತೆ ಸೆಪ್ಟೆಂಬರ್ 18ರಿಂದ ಉತ್ತರ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ಹಾಗೂ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನಲ್ಲೂ ಅಲ್ಲಲ್ಲಿ ಮಳೆ : ಮೈಸೂರು ಜಿಲ್ಲೆಯ ಒಂದೆರಡು ಕಡೆ, ಹಾಸನ, ಚಾಮರಾಜನಗರದ ಕೊಳ್ಳೇಗಾಲ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಉಳಿದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗಾಳಿಯ ಒತ್ತಡ ಹೆಚ್ಚಾದರೆ ಮಾತ್ರ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನಂತೆ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 20ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ಹಾಗೂ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಮ್ಯಾನ್ಮಾರ್ ಕರಾವಳಿಯ ಬೆಳವಣಿಗೆ ನಿರ್ಣಾಯಕ : ಪ್ರಸ್ತುತ ಶ್ರೀಲಂಕಾ ಕರಾವಳಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಅಂಡಮಾನ್ ಸಮೀಪ ಇಂದು ಶಿಥಿಲಗೊಳ್ಳುವ ಲಕ್ಷಣಗಳಿವೆ. ಇದರ ನಡುವೆ ಸೆಪ್ಟೆಂಬರ್ 19ರಂದು ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದು ಚಂಡಮಾರುತವಾಗಿ ಬಲಗೊಂಡು ಒಡಿಶಾ ಕರಾವಳಿ ಸಮೀಪ ಸಾಗುವ ಸಾಧ್ಯತೆಯನ್ನು ಹೊಂದಿದೆ.
ಆದರೆ ಈ ವಾಯುಭಾರ ಕುಸಿತ ಅಥವಾ ಚಂಡಮಾರುತ ನಿರೀಕ್ಷೆಗಿಂತ ಮೊದಲೇ ದುರ್ಬಲಗೊಂಡರೆ ಕರ್ನಾಟಕದಲ್ಲಿ ಮಳೆಯ ಸಾಧ್ಯತೆಗಳು ಕಡಿಮೆಯಾಗಬಹುದು. ಹೀಗಾಗಿ ಮುಂದಿನ ಎರಡು–ಮೂರು ದಿನಗಳ ಹವಾಮಾನ ಬೆಳವಣಿಗೆ ಕರ್ನಾಟಕದ ಮಳೆಯ ಪ್ರಮಾಣವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಲಿದೆ.
ರೈತರಿಗೆ ಸೂಚನೆ: ಕರಾವಳಿ ಮತ್ತು ಮಲೆನಾಡಿನಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯ ಸಾಧ್ಯತೆ ಇರುವುದರಿಂದ ತೋಟದ ಕೆಲಸಗಳನ್ನು ಬೆಳಗಿನ ವೇಳೆಯಲ್ಲಿ ಮುಗಿಸಿಕೊಳ್ಳುವುದು ಸೂಕ್ತ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗಳನ್ನು ಹವಾಮಾನ ಮುನ್ಸೂಚನೆ ಗಮನಿಸಿ ಯೋಜಿಸುವುದು ಉತ್ತಮ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Karnataka is likely to experience hot and partly cloudy weather on September 17, with scattered normal showers and isolated thunderstorms during the evening or night in parts of coastal, Malnad, North Interior and South Interior Karnataka. Coastal Karnataka may see better rainfall from around September 21, while rainfall coverage and intensity could increase across North Interior Karnataka from September 18 and South Interior and Malnad regions from around September 20. The expected rainfall increase remains dependent on the development and movement of a possible low-pressure system or cyclone along the Myanmar coast; if the system weakens earlier than expected, rainfall prospects over Karnataka may reduce.
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…