ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಿದ್ದರೂ, ಮಧ್ಯಾಹ್ನದ ಬಳಿಕ ಹಾಗೂ ಸಂಜೆ–ರಾತ್ರಿ ವೇಳೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಸೆ.25ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಕರಾವಳಿ ಕರ್ನಾಟಕ: ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಮಧ್ಯಾಹ್ನದ ಬಳಿಕ, ಸಂಜೆ ಮತ್ತು ರಾತ್ರಿ ವೇಳೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಸೆ.25ರವರೆಗೆ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮಲೆನಾಡು: ಕೊಡಗು, ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಹಿತ ಉತ್ತಮ ಮಳೆಯ ನಿರೀಕ್ಷೆಯಿದೆ. ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಲೆನಾಡಿನಲ್ಲೂ ಸೆ. 25ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಉತ್ತರ ಒಳನಾಡು: ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದ್ದರೆ, ಉಳಿದ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಸೆ.24ರವರೆಗೆ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.
ದಕ್ಷಿಣ ಒಳನಾಡು: ದಕ್ಷಿಣ ಒಳನಾಡಿನ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸೆ. 24ರವರೆಗೆ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಲಕ್ಷಣ
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ಸೆ. 22–23ರ ವೇಳೆಗೆ ಚಂಡಮಾರುತವಾಗಿ ಬಲಗೊಳ್ಳುವ ಲಕ್ಷಣಗಳಿವೆ. ಸೆ. 25ರಂದು ಒಡಿಶಾ ಕರಾವಳಿಯತ್ತ ಸಾಗುವ ಸಾಧ್ಯತೆ ಇದೆ.
ಈ ಹವಾಮಾನ ವ್ಯವಸ್ಥೆ ಶಿಥಿಲಗೊಳ್ಳಲು ಆರಂಭಿಸಿದ ಬಳಿಕ ಕರ್ನಾಟಕದಲ್ಲಿ ಮಳೆಯ ಪ್ರಮಾಣವೂ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮುಂಗಾರು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದ್ದು, ಸೆ. 25ರ ನಂತರ ಈ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
ರೈತರು ಮುಂದಿನ ದಿನಗಳ ಕೃಷಿ ಚಟುವಟಿಕೆ, ಕೊಯ್ಲು ಮತ್ತು ಒಣಗಿಸುವ ಕೆಲಸಗಳನ್ನು ಸ್ಥಳೀಯ ಮಳೆಯ ಮುನ್ಸೂಚನೆ ಗಮನಿಸಿ ಯೋಜಿಸುವುದು ಸೂಕ್ತ.
Karnataka is likely to witness good rainfall across many districts over the next few days. Coastal areas may receive comparatively less rain, with thunderstorms possible during the afternoon, evening and night. Malnad and several interior districts are expected to receive good rainfall until September 24–25. A low-pressure system over the Bay of Bengal may intensify into a cyclonic storm around September 22–23 and could move towards the Odisha coast around September 25. Rainfall in Karnataka may gradually decline as the system weakens, while the southwest monsoon withdrawal is likely to become more active after September 25.


