ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ನಡುವೆ ಮಳೆಯ ಚಟುವಟಿಕೆ ಮತ್ತೆ ಚುರುಕುಗೊಂಡಿದ್ದು, 18.03.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ ಪ್ರಕಾರ ಕರ್ನಾಟಕದ ವಿವಿಧ ಭಾಗಗಳಲ್ಲಿ ಗುಡುಗು-ಸಹಿತ ಮಳೆಯ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಾರ್ಚ್ ಅಂತ್ಯದವರೆಗೂ ಮಳೆ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿವೆ.
ಕರಾವಳಿ ಭಾಗ : ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳಗ್ಗಿನಿಂದ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನ ನಂತರ ಮೋಡ ಕವಿಯುವ ಸಾಧ್ಯತೆ ಇದೆ. ಸಂಜೆ ವೇಳೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು-ಸಹಿತ ಮಳೆಯ ಮುನ್ಸೂಚನೆ ಇದೆ. ಗಾಳಿಯ ಪ್ರಭಾವ ಹೆಚ್ಚಿದರೆ ಕಾಸರಗೋಡು ಜಿಲ್ಲೆಯಲ್ಲೂ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಬೆಳಗಾವಿ-ಧಾರವಾಡ ಗಡಿಭಾಗಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಸಂಜೆ ಗುಡುಗು ಮಳೆಯ ಲಕ್ಷಣಗಳಿವೆ. ಈ ರೀತಿಯ ಮಳೆ ಚಟುವಟಿಕೆ ಮಾರ್ಚ್ 25ರವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಮಲೆನಾಡು ಭಾಗ : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ವೇಳೆಗೆ ಗುಡುಗು-ಸಹಿತ ಮಳೆಯ ಮುನ್ಸೂಚನೆ ಇದೆ. ಮಲೆನಾಡು ಪ್ರದೇಶಗಳಲ್ಲೂ ಮಾರ್ಚ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿಯಲಿದೆ.
ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯನಗರ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಗುಡುಗು-ಸಹಿತ ಮಳೆಯ ಸಾಧ್ಯತೆ ಇದೆ. ಗಾಳಿಯ ತೀವ್ರತೆ ಹೆಚ್ಚಿದರೆ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳವರೆಗೂ ಮಳೆ ವ್ಯಾಪಿಸಬಹುದು. ಉತ್ತರ ಒಳನಾಡಿನಲ್ಲಿ ಈ ಮಳೆ ಚಟುವಟಿಕೆ ಮಾರ್ಚ್ 29ರವರೆಗೆ ಮುಂದುವರಿಯುವ ಸೂಚನೆಗಳಿವೆ.
ದಕ್ಷಿಣ ಒಳನಾಡು : ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ-ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ಗುಡುಗು-ಸಹಿತ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನಲ್ಲಿ ಮಳೆಯು ಮಾರ್ಚ್ 20ರವರೆಗೆ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೃಷಿಕರಿಗೆ ಸೂಚನೆ : ಬೇಸಿಗೆ ಆರಂಭದಲ್ಲೇ ಈ ರೀತಿಯ ಗುಡುಗು-ಮಳೆ ಸಂಭವಿಸುವುದರಿಂದ ತೋಟಗಾರಿಕೆ ಬೆಳೆಗಳು, ಅಡಿಕೆ-ಮೆಣಸು ತೋಟಗಳು ಹಾಗೂ ಕೊಯ್ಲಿಗೆ ಬಂದಿರುವ ಬೆಳೆಗಳಿಗೆ ಮುನ್ನೆಚ್ಚರಿಕೆ ಅಗತ್ಯ. ಗಾಳಿಯೊಂದಿಗೆ ಮಳೆ ಬಂದಲ್ಲಿ ಕೊಂಬೆ ಮುರಿತ ಹಾಗೂ ಅಡಿಕೆ ಉದುರುವ ಸಮಸ್ಯೆ ಉಂಟಾಗಬಹುದು.
Thunderstorm activity is likely across many parts of Karnataka till late March. Coastal and Malnad regions may receive intermittent evening rains till March 25, while North Interior Karnataka could see rain activity till March 29. Farmers are advised to stay alert due to possible gusty winds and localized heavy showers.

