ಕೇಂದ್ರ ಸರ್ಕಾರವು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು(Padma Shri award) ಘೋಷಣೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 132 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾಸರಗೋಡಿನ ಭತ್ತದ ಕೃಷಿಕ(Paddy Farmer) ಸತ್ಯನಾರಾಯಣ ಬೇಲೇರಿ(Satyanarayana Beleri) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 650ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು(Paddy Breed) ಸಂರಕ್ಷಿಸುವ ಮೂಲಕ ಭತ್ತದ ತಳಿಗಳ ಸಂರಕ್ಷನಾಗಿ ಗುರುತಿಸಿಗೊಂಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮಶ್ರೀ ಘೋಷಣೆಯಾದ ಬಳಿಕ ಬರಹಗಾರ, ಉಪನ್ಯಾಸಕ ನರೇಂದ್ರ ರೈ ದೇರ್ಲ ಅವರು ತಮ್ಮ ಪೇಸ್ ಬುಕ್‌ನಲ್ಲಿ ಬರೆದ ಬರಹ ಹೆಚ್ಚು ಗಮನ ಸೆಳೆದಿದೆ. ಅದರ ಯಥಾವತ್ತಾದ ರೂಪ ಇಲ್ಲಿದೆ…ಮುಂದೆ ಓದಿ
ನನ್ನ ಗೆಳೆಯ ಸತ್ಯನಾರಾಯಣ ಬೆಳೇರಿ ಗದ್ದೆಯನ್ನು ಹೊಂದಿಲ್ಲ. ಆದರೆ 500- 600 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಉಳಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮೂರು ವರ್ಷಗಳ ಹಿಂದೆ ಯುವಕವಿ ದಯಾನಂದ ರೈ ಕಳುವಾಜೆ ನನಗೆ ಕಾಲ್ ಮಾಡಿ “ಸರ್ ನಮ್ಮೂರಲ್ಲಿ ಇಂಥ ಒಬ್ಬ ಸಾಧಕರಿದ್ದಾರೆ. ನಾನು ಅವರ ಬಗ್ಗೆ ತರಂಗಕ್ಕೆ ಲೇಖನ ಬರೆದಿದ್ದೇನೆ. ಅದು ಪ್ರಕಟವಾಗಲಿಲ್ಲ. ನೀವು ಬರೆದರೆ ಪ್ರಕಟವಾಗಬಹುದೇನೋ?” ಎಂಬ ಜಿಜ್ಞಾಸೆ ಪ್ರಕಟವಾದಾಗ ಭತ್ತದ ತಳಿಯ ಆ ಸಂಖ್ಯೆ ಸಹಜವಾಗಿಯೇ ನನ್ನನ್ನು ಪೆರ್ಚಿ ಕಟ್ಟಿಸಿತ್ತು.ಮುಂದೆ ಓದಿ
ಬೆಳೇರಿ ಇರುವುದು ವಾಣಿನಗರಕ್ಕಿಂತ ಬಹಳ ದೂರದಲ್ಲಲ್ಲ. ಶ್ರೀ ಪಡ್ರೆಯವರು ಸಾಧಕ ಕೃಷಿಕರನ್ನು ಬರೆಯದೆ ಬಿಟ್ಟವರಲ್ಲ. ಯಾಕೆ ಇನ್ನೂ ಅಡಿಕೆ ಪತ್ರಿಕೆಯಲ್ಲಿ ಅವರ ಬಗ್ಗೆ ಲೇಖನ ಬರಲಿಲ್ಲ ಎಂಬ ಪ್ರಶ್ನೆಯನ್ನು ಇಟ್ಟುಕೊಂಡೇ ನಾನು ದಯಾನಂದರ ಮಗನ ಮಾರ್ಗದರ್ಶನದಲ್ಲಿ ದೂರದ ಬೆಳೇರಿಗೆ ಹೋಗಿದ್ದೆ. ಆ ದಾರಿಯನ್ನು ಕಂಡು ಅರ್ಧದಲ್ಲಿ ವಾಪಸ್ ಆಗುವ ಮನಸ್ಸೂ ಮಾಡಿದ್ದೆ. ಕೊನೆಗೂ ಗುರಿ ಮೆಟ್ಟಿದ ಮೇಲೆ ನನಗಾದ ಆನಂದ – ಸಾರ್ಥಕ ಭಾವಕ್ಕೆ ಕೊನೆಯೇ ಇಲ್ಲ.ಮುಂದೆ ಓದಿ
ಮೇಲೆ ಹೇಳಿದ ಹಾಗೆ ಸತ್ಯನಾರಾಯಣರಿಗೆ ವಿಶಾಲವಾದ ಗದ್ದೆ ಇಲ್ಲ. ಇರುವ ಒಂದೂವರೆ ಎಕರೆ ಜಾಗದಲ್ಲಿ ಒಂದಷ್ಟು ರಬ್ಬರು ಅಡಿಕೆ ನೆಟ್ಟು ಉಳಿದಿರುವ 10 ಸೆನ್ಸು ಜಾಗದಲ್ಲಿ ಅವರು ಇಷ್ಟೊಂದು ತಳಿ ಉಳಿಸಿದ್ದಾರೆ ಎಂದರೆ ಅದಕ್ಕಿಂತ ಜೋದ್ಯದ ವಿಷಯ ಇನ್ನೊಂದಿಲ್ಲ. 600 ಕ್ಕಿಂತಲೂ ಹೆಚ್ಚು ತಳಿ ಅವರಲ್ಲಿ ಇದ್ದರೂ ಕೂಡ ನಾನು ಸಹಜವಾಗಿ ಸಂಕೋಚದಿಂದ ಸ್ವಲ್ಪ ಕಡಿಮೆ ಮಾಡಿಯೇ ಸುಧಾದಲ್ಲಿ ಬರೆದಿದ್ದೆ. ಕಾರಣ ಗದ್ದೆ ಹೊಲ ಇಲ್ಲದವ ಅಷ್ಟು ಬೀಜಗಳನ್ನ ಹೀಗೆ ಉಳಿಸಿದ್ದಾನೆ ಎನ್ನುವ ಸಹಜ ಪ್ರಶ್ನೆ ಎದುರಾಗಬಹುದೆನ್ನುವ ಸಂಕೋಚ ನನ್ನೊಳಗಡೆ ಇತ್ತು.ಮುಂದೆ ಓದಿ
ಸತ್ಯನಾರಾಯಣರು ಓದಿದ್ದು ಬಹಳ ಕಡಿಮೆ. ಆದರೆ ಅವರ ಸಾಧನೆ ಅಪಾರವಾದದ್ದು. ಕೇರಳದ ನೆಲ ಅವರಿಗೆ ಪ್ರಯೋಗ ಮಾಡುವ ಇಂಬು ಕೊಟ್ಟಿರಬೇಕು. ಬರೀ ಗ್ರೋ ಬ್ಯಾಗುಗಳನ್ನು ಇಟ್ಟುಕೊಂಡೇ, ಅವುಗಳ ಒಳಗೆ ಮರಳು, ಮಣ್ಣು ಉಮಿಕರಿಗಳನ್ನು ಸಮಪ್ರಮಾಣದಲ್ಲಿ ತುಂಬಿಸಿ ಜೀವಾಮೃತ ಕೊಟ್ಟು ಪ್ರತಿ ವರ್ಷ ಅನುಕ್ರಮಣಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ತಳಿಗಳನ್ನು ಉಳಿಸಿದ್ದಾರೆ. ನಿಮಗೆ ಗೊತ್ತಲ್ಲ? ಭತ್ತದ ತಳಿ ಪದೇ ಪದೇ ಮತ್ತೆ ಮತ್ತೆ ನೆಲಕ್ಕೆ ಬರಬೇಕು. ಮತ್ತೆ ಮತ್ತೆ ಸಸಿ ಪಾತಿ ತೊಟ್ಟೆ ಕೊಯ್ಲು ಅವುಗಳಿಗೆ ಹೆಸರು ಕೊಡುವುದು ಮೊಳಕೆ ಬರಿಸುವುದು ಎಲ್ಲ ಒಂದು ಸಿದ್ದ ನಿಯತ ಆವರ್ತನ.ಮುಂದೆ ಓದಿ
ಸತ್ಯನಾರಾಯಣ ಮೂಲತ: ಕಾಸರಗೋಡಿನ ಎಡನೀರು ಮಠದ ಹತ್ತಿರದವರು. ಮಠದ ಕೃಷಿ ಭೂಮಿ ಭೂಸುಧಾರಣೆಯ ಕಾಯ್ದೆಯಲ್ಲಿ ಇವರಿಗೆ ಲಭಿಸಿತ್ತು. ಆ ದಾರಿಯಲ್ಲಿ ಭತ್ತದ ಕೃಷಿಯ ಸೂಕ್ಷ್ಮತೆ ಸವಾಲು ಸುಖದ ಅನುಭವ ಬಾಲ್ಯದಲ್ಲಿ ಇತ್ತು. ಈಗ ಇವರು ವಾಸ್ತವ್ಯ ಇರುವ ಬೆಳೇರಿಗೆ ವಲಸೆ ಬಂದವರು. ಊರು ರಾಜ್ಯ ಭಾಷೆ ಬದಲಾದರೂ ಮೂಲಗುಣ ಆಸಕ್ತಿ ಹಾಗೆಯೇ ಉಳಿದಿತ್ತು. ‘ ಬಾಲ್ಯದಲ್ಲಿ ತನಗೆ ಗದ್ದೆಯ ಬದುವಿನಲ್ಲಿ ನಿಂತು ಸಾಗುವಳಿ ಚಟುವಟಿಕೆಯನ್ನು ಗಮನಿಸುವುದೆಂದರೆ ಸಂಭ್ರಮದ ಕೆಲಸ. ದೊಡ್ಡಪ್ಪನ ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ರಾಜಕಯಮೆ ನನಗೆ ಅತ್ಯಂತ ಪ್ರೀತಿಯ ತಳಿ. ಕೊಯ್ಲು ಆದ ತಕ್ಷಣ ಗದ್ದೆಗೆ ಇಳಿದು ಅಲ್ಲಲ್ಲಿ ಬಿದ್ದು ಹಾಳಾಗುವ ತೆನೆಗಳನ್ನು ಹೆಕ್ಕಿ ತರುವುದು ಸಂಗ್ರಹಿಸುವುದು ಇತ್ಯಾದಿ ನನ್ನ ಮೆಚ್ಚಿನ ಕೆಲಸ ‘ಮುಂದೆ ಓದಿ
ಇದೇ ರಾಜ ಕಯಮೆಯ ಉಳಿಕೆಗಾಗಿ ಈಗ ಪ್ರಶಸ್ತಿ ಲಭ್ಯವಾಗಿದೆ. ‘ 90ರ ದಶಕದಲ್ಲಿ ಕನ್ನಡದ ಒಂದು ಹುಲ್ಲಿನ ಕ್ರಾಂತಿಯ ಚೆರ್ಕಾಡಿ ರಾಮಚಂದ್ರ ರಾಯರ ಕಥನ ಗೊತ್ತಾಗಿ ಅವರಿಗೆ ಪತ್ರ ಬರೆದು ಬೀಜ ತರಿಸಿದ್ದೆ. ಬೆಳ್ತಂಗಡಿಯ ದೇವರಾಯರ ತಳಿ ಸಂಗ್ರಹ ಅವರ ಒಡನಾಟ ದೊರೆತು ನನ್ನ ಆಸಕ್ತಿ ಮತ್ತಷ್ಟು ಹೀಗಿತ್ತು’ ಎನ್ನುತ್ತಾರೆ. ಭತ್ತದ ಕೃಷಿಯಲ್ಲಿ ಯಾರೂ ಮಾಡದ ತಳಿ ಸಂಗ್ರಹ ಸಾಧನೆಯನ್ನು ಮಾಡಿ ಈಗ ಸತ್ಯನಾರಾಯಣರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಭಾರತ ಸರಕಾರದ ಕೃಷಿ ಇಲಾಖೆ ಇವರಿಗೆ ಸಸ್ಯ ತಳಿ ಸಂರಕ್ಷಕ ಎಂಬ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಮುಂದೆ ಓದಿ
ಅನೇಕರಿಗೆ ಗೊತ್ತಿಲ್ಲದ ಒಂದು ಸಂಗತಿ ಬೆಳೇರಿ ಅತ್ಯುತ್ತಮ ಕೃಷಿಕ- ಭತ್ತದ ತಳಿ ರಕ್ಷಕ ಅಷ್ಟೇ ಅಲ್ಲ. ಉತ್ತಮ ಕವಿ ಲೇಖಕ ವ್ಯಂಗ್ಯ ಚಿತ್ರಗಾರ ಅತ್ಯುತ್ತಮ ಓದುಗ. ಮೋಟರು ರಿಪೇರಿ ವೈರಿಂಗ್ ಕಲಿತು ಜೀವನದಾರಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಜೇನು ಕೃಷಿ, ಮಜಂಟಿ ಕೃಷಿ, ಮರದ ಫರ್ನಿಚರ್ ಕೆಲಸ, ಕಸಿ ಕಟ್ಟುವುದು ಇವರ ಇನ್ನಿತರ ಹವ್ಯಾಸ – ಪ್ರವೃತ್ತಿ.ಮುಂದೆ ಓದಿ
ಈ ದಶಕದಲ್ಲಿ ಪದ್ಮಶ್ರೀ ಹೊಸ ದಾರಿಗೆ ಹೊರಳಿದ್ದು ನಮಗೆ ಗೊತ್ತೇ ಇದೆ. ಸಂಪರ್ಕವೇ ಇಲ್ಲದ ಊರು – ಊರುಗಳ ನಡುವೆ ತೂಗು ಸೇತುವೆ ಕಟ್ಟಿದ ಗಿರೀಶ್ ಭಾರದ್ವಾಜ್ ‘ನೀರಿಲ್ಲದ ಬರಡು ನೆಲಕ್ಕೆ ಸುರಂಗದ ನೀರು ತಂದ ಮಹಾಲಿಂಗ ನಾಯ್ಕರು, ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ – ಇದೀಗ ಸತ್ಯನಾರಾಯಣರಿಗೆ ಇಂಥ ಪ್ರಶಸ್ತಿ ಒಲಿದು ಬಂದಾಗ ಪದ್ಮಶ್ರೀಯ ಬಗ್ಗೆ ಗೌರವ ಇಮ್ಮಡಿಯಾಗುವುದು ಸಹಜ. ಕೋಟಿ ಕೋಟಿ ಸಂಭಾವನೆ ಪಡೆದು ನಟಿಸುವ ಸಿನಿಮ ನಟರಿಗೆ ಪದ್ಮಶ್ರೀ ಸಿಗುವಾಗ ಅವರ ನಟನೆ ಕಲಾ ಅಭಿವ್ಯಕ್ತಿಯ ಬಗೆಗೆ ನನಗೆ ಖುಷಿಯಾಗುತ್ತೆ. ಆದರೆ ಇಂಥವರಿಗೆ ಪ್ರಶಸ್ತಿ ಬಂದಾಗ ವ್ಯಕ್ತಿಯ ಜೊತೆಗೆ ಆ ಪ್ರಶಸ್ತಿಯ ಬಗ್ಗೆಯೂ ಅಭಿಮಾನ ಮೂಡುತ್ತದೆ. ಅಭಿನಂದನೆಗಳು ಸತ್ಯನಾರಾಯಣರಿಗೆಮುಂದೆ ಓದಿ