ಕಸ್ತೂರಿ ರಂಗನ್ ವರದಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಜನಾಂದೋಲನ ಆರಂಭವಾಗಿದೆ. ಈ ವರದಿಯ ವಿರುದ್ಧ ಗ್ರಾಮೀಣ ಭಾಗದಲ್ಲಿ ಚರ್ಚೆ ಹಾಗೂ ವಿರೋಧದ ಅಲೆ ಹೆಚ್ಚಾಗಿದೆ. ಇದೀಗ ನ.27 ರಂದು ಸುಳ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಇದಕ್ಕೂ ಪೂರ್ವಬಾವಿಯಾಗಿ ವಿವಿಧ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರಾಜಕೀಯ ರಹಿತವಾಗಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಗೆ ಪೂರ್ವತಯಾರಿ ನಡೆಯುತ್ತಿದೆ. ಈ ಸಭೆಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ನ.21 ರಂದು ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಟು ಸುಳ್ಯದಲ್ಲಿ ಸಮಾರೋಪಗೊಂಡಿತು.
ಸುಬ್ರಹ್ಮಣ್ಯದಲ್ಲಿ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹಾಗೂ ರಾಜಕೀಯ ನೇತಾರ ಹರೀಶ್ ಇಂಜಾಡಿ ಸಭೆಯನ್ನುದ್ದೇಶಿ ಮಾತನಾಡಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ,ಕಸ್ತೂರಿ ರಂಗನ್ ವರದಿಯು ಜಿಪಿಎಸ್ ಆಧಾರಿತ ಸರ್ವೇಯ ಫಲಶ್ರುತಿಯಾಗಿದೆ.ಜಿಪಿಎಸ್ ಆಧಾರಿತ ಸರ್ವೆಯು ಸತ್ಯಾಂಶಕ್ಕೆ ದೂರವಾಗಿರುತ್ತದೆ.ಗ್ರಾಮೀಣ ಭಾಗದ ಜನರ ಅಭಿಪ್ರಾಯವನ್ನು ಪಡೆಯದೆ ಜಿಪಿಎಸ್ ತಂತ್ರಜ್ಞಾನದ ಮೊರೆ ಹೋಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ಶೋಚನೀಯ. ಆದುದರಿಂದ ಈ ಯೋಜನೆಯ ವಿರುದ್ದವಾಗಿ ಜನತೆ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಹೋರಾಟವೇ ಬದುಕಲ್ಲ ಆದರೆ ಬದುಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಇದೀಗ ಗ್ರಾಮೀಣ ರೈತರಿಗೆ ಬಂದೊಂದಗಿದೆ. ರಾಜಕೀಯ ರಹಿತವಾಗಿ ಇಂತಹ ಯೋಜನೆಗಳ ವಿರುದ್ದ ಜನತೆ ಹೋರಾಟ ಮಾಡಬೇಕಾದುದು ಅನಿವಾರ್ಯವಾಗಿದೆ.ಕೃಷಿಕರ ಬದುಕಿಗೆ ತೊಂದರೆಯಾಗುವ ಇಂತಹ ಯೋಜನೆಗಳ ವಿರುದ್ದ ಜನತೆ ಜಾಗೃತರಾಗಬೇಕು. ಆದರೆ ಎಲ್ಲಾ ಜನಪರವಾದ ಯಾವುದೇ ಹೋರಾಟಗಳನ್ನು ರಾಜಕೀಯ ಕಣ್ಣಿನಿಂದ ನೋಡುವುದನ್ನು ಬಿಡಬೇಕು, ಜನರ ರಕ್ಷಣೆಯತ್ತ, ಧೈರ್ಯ ನೀಡುವತ್ತ ಗಮನಹರಿಸಬೇಕಿದೆ ಎಂದರು.
ಈ ಸಂದರ್ಭ ಪ್ರಮುಖರಾದ ಹರೀಶ್ ಇಂಜಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ, ರವೀಂದ್ರ ಕುಮಾರ್ ರುದ್ರಪಾದ, ಕಮಲಾಕ್ಷ ಮುಳ್ಳುಬಾಗಿಲು, ಬಾಲಕೃಷ್ಣ ಮರೀಲ್, ಮೋಹನದಾಸ ರೈ, ಸುರೇಶ್ ಉಜಿರಡ್ಕ, ಜಯರಾಮ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ದ್ವಿಚಕ್ರ ವಾಹನ ಜಾಥಾವು ಆರಂಭಗೊಂಡಿತು. ಜಾಗೃತಿ ಜಾಥಾವು ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ಮೂಲಕ ಸಂಚರಿಸಿ ಗುತ್ತಿಗಾರನ್ನು ತಲುಪಿತು.ಗುತ್ತಿಗಾರಿನಲ್ಲಿ ಜನಜಾಗೃತಿಸಭೆಯು ನಡೆಯಿತು.ಸಭೆಯನ್ನು ಉದ್ದೇಶಿಸಿ ಪ್ರಮುಖರಾದ ನಿತ್ಯಾನಂದ ಮುಂಡೋಡಿ, ವೆಂಕಟ್ ದಂಬೆಕೋಡಿ, ಲಕ್ಷ್ಮೀಶ ಗಬ್ಲಡ್ಕ ಮಾತನಾಡಿದರು. ವಿವಿದೆಡೆ ನಡೆದ ಜಾಗೃತಿ ಸಭೆಯಲ್ಲಿ ಪ್ರಮುಖರು ಮಾತನಾಡಿದರು.