Advertisement
MIRROR FOCUS

ಭೂಮಿಯ ಆರಾಧನೆ | ಜೀವನೋತ್ಸಾಹ ಹೆಚ್ಚಿಸುವ ಕೆಡ್ಡಸ |

Share

ಮನೆ ತುಂಬಾ ಏಲಕ್ಕಿ ಪರಿಮಳ ಬರುತ್ತಿದ್ದರೆ ಅದಾಗಷ್ಟೇ ಜ್ವರದಿಂದ ಚೇತರಿಸುತ್ತಿದ್ದ ಶಾಂತಮ್ಮನಿಗೆ ಏನೆಂದು ಅರ್ಥವಾಗಲಿಲ್ಲ. ಮನೆಯಲ್ಲಿ ಏನು ಗೌಜಿಯಪ್ಪಾ? ನೆಂಟರು ಬಂದಿರಬಹುದೇ? ಅಥವಾ ಮಕ್ಕಳ ಹುಟ್ಟು ಹಬ್ಬವೇನಾದ್ರೂ ಇತ್ತಾ? ನಾನೇ ಮರೆತು ಬಿಟ್ಟೆನಾ ? ಪೂರ ಗೊಂದಲಮಯವಾದ ಮನಸು. ಅಡುಗೆ ಮನೆಯಲ್ಲಿ ಪಾತ್ರಗಳ ಸಪ್ಪಳ ಬಿಟ್ಟರೆ ಯಾರೂ ಬಂದ ಸೂಚನೆ ಕಾಣುತ್ತಿಲ್ಲ. ವಚನ ಯಾಕೆ ಏನೂ ಹೇಳುತ್ತಿಲ್ಲ… ಎರಡು ದಿನದಿಂದ ಮನೆ ಕೆಲಸದವರೂ ನಾಪತ್ತೆ. ಎದ್ದು ಹೋಗಿ ನೋಡೋಣವೆಂದರೆ ತಲೆ ಯಾಕೋ ಭಾರ ಭಾರ. ಅಷ್ಟರಲ್ಲಿ ಇವರ ಮನಸು ಅರ್ಥವಾಯಿತೋ ಎಂಬಂತೆ ಸೊಸೆ ವಚನ ಅಲ್ಲಿಗೆ ಹಾಜರು. ಕೈಯಲ್ಲಿ ಸೌಟು ಬೇರೆ. ನೋಡಿ ಅತ್ತೆ ಒಮ್ಮೆ ಪಾಕ ಬಂತಾ? ಸಾಕ ಅಂತ? ಏನು ಎತ್ತ ಅರ್ಥವಾಗದೆ ಯಾವುದಕ್ಕೇ ಇದು, ಎಂತ ಮಾಡುತ್ತಿರುವೆ ಎಂದರೆ ಶಾಂತಮ್ಮನನ್ನೇ ವಚನ ವಿಚಿತ್ರವಾಗಿ ನೋಡ ತೊಡಗಿದಳು. ಅತ್ತೆ ನೀವು ಮರೆತಿರಾ? ನಾಳೆ ಏನು ವಿಶೇಷ ಅಂತ. ಜ್ವರದ ಸುಸ್ತಲ್ಲಿ ಇದ್ದ ಶಾಂತಮ್ಮನಿಗೆ ಏನೂ ಗೊತ್ತಾಗಲಿಲ್ಲ. ನಾಳೆ ಕೆಡ್ಡಸ ಅಲ್ವಾ. ಹಾಗೆ ತಂಬಿಟ್ಟು ಉಂಡೆ ಮಾಡಲು ಹೊರಟಿರುವೆ. ನೀವು ಒಂದು ಬಾರಿಯೂ ತಪ್ಪಿಸಲಿಲ್ಲ. ಹಾಗಾಗಿ ಈ ಬಾರಿ ನಾನೇ ಮಾಡ ಹೊರಟೆ. ಪಾಕ ಒಂದು ನೋಡಿ ಹೇಳಿ. ಅನ್ನುತ್ತಲೇ ಅಚ್ಚರಿ ಪಡುವ ಸರದಿ ಶಾಂತಮ್ಮನದ್ದು.

ನಾವು ಎಷ್ಟೇ ಒತ್ತಡಗಳಲ್ಲಿದ್ದರೂ , ಸಂಕಷ್ಟಗಳಲ್ಲಿದ್ದರೂ ಹಬ್ಬಗಳೆಂದರೆ ಏನೋ ಚೈತನ್ಯ , ಉಲ್ಲಾಸ ಮನಸಿನಲ್ಲಿ ಗರಿಗೆದರುತ್ತದೆ.

ನಾವು ಕರಾವಳಿಗರು ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಅವುಗಳಲ್ಲಿ ಹೆಚ್ಚಿನವು ಕೃಷಿಗೆ ಸಂಬಂಧ ಪಟ್ಟ ಹಬ್ಬಗಳು. ಹಬ್ಬಕ್ಕೂ ಪ್ರಕೃತಿಗೂ ನೇರಾನೇರ ಸಂಬಂಧ ಇಲ್ಲಿನ ವಿಶೇಷ.

ಅವುಗಳಲ್ಲಿ ಮುಖ್ಯವಾದ ಹಬ್ಬಗಳಲ್ಲಿ ಒಂದು ಈ ಕೆಡ್ಡಸ. ಕೆಡ್ಡಸವನ್ನು ಭೂಮಿ ತಾಯಿಯ ಮಿಯಾದ ಹಬ್ಬವೆನ್ನುತ್ತಾರೆ. ನಮಗೆ ಹಾಗೂ ಭೂಮಿ ತಾಯಿಗೆ ನೇರವಾಗಿ ಸಂಭಂದಿಸಿದ ಹಬ್ಬ. ಇಲ್ಲಿ ಆ ಮನೆಯ ಹಿರಿಯ ಹೆಣ್ಣು ಮಗಳೇ ನಿರ್ವಹಿಸುವ ಹಬ್ಬ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಮುಖ್ಯತೆ. ಅದರಂತೆ ಭೂಮಿಯನ್ನು ತಾಯಿ ಎಂದು ಗೌರವ ಕೊಡುವ ಮನಸು ನಮ್ಮದು. ಹಾಗಾಗಿ ವರುಷವಿಡೀ ಉತ್ತಿ ಬಿತ್ತಿ ಅಗೆದು ಕೆಲಸ ಮಾಡಿದ ರೈತ ಹಾಗೂ ದಣಿದ ಭೂಮಿಗೆ ವರುಷದ ನಾಲ್ಕು ದಿನಗಳ ಕಾಲ ವಿಶ್ರಾಂತಿಯ ಕಾಲ. ಇದು ಯಾವಾಗಲೂ ಬರುವುದು ತುಳು ತಿಂಗಳ ಪೊನ್ನಿ( ಪೊಯಿಂತೆಲ್) ಯ ೨೭ ರಿಂದ ಕುಂಭ ಸಂಕ್ರಮಣ ದವರೆಗಿನ ದಿನಗಳಲ್ಲಿ. ಅಂದರೆ ಫೆಬ್ರವರಿ ತಿಂಗಳಿನ 9 ರಿಂದ 12 ರವರೆಗೆ. ಕೆಲವರು ಇದನ್ನು 3 ದಿನಗಳ ಆಚರಣೆ ಹಾಗೂ ಇನ್ನೂ ಕೆಲವರು 4 ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರಮಿಕ ವರ್ಗದವರೇ ಹೆಚ್ಚಾಗಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ.

ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು. ಮುಂದಿನ ಸೃಷ್ಟಿಗೆ ಸಿದ್ಧಳಾಗುತ್ತಾಳೆ ಎಂಬ ಸಂಕೇತ. ಕೆಡ್ಡಸ ಕಳೆದ ನಂತರ ಬೆಳೆ ಕಟಾವಿಗೆ ಸಿದ್ಧವಾಗುತ್ತದೆ. ಹಾಗಾಗಿ ಕೃಷಿಕರ ಒಂದು ವಿಶ್ರಾಂತಿಯ ಅಗತ್ಯವನ್ನು ಈ ಹಬ್ಬ ಪೂರೈಸುತ್ತದೆ. ಈ ನಾಲ್ಕು ದಿನಗಳು ಭೂಮಿ ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ಮೊದಲ ದಿನ ಮನೆಯ ಗಂಡಸರು ಕತ್ತಿ , ಹಾರೆ , ನೇಗಿಲು ಮೊದಲಾದ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತೊಳೆದು , ಪೂಜಿಸಿ ತೆಗೆದಿಡುತ್ತಾರೆ. ಇನ್ನೂ ನಾಲ್ಕು ದಿನ ಭೂಮಿ ತಾಯಿಗೆ ಗಾಯ ಮಾಡುವಂತಿಲ್ಲ. ಅಗೆಯುವುದು , ಕಡಿಯುವುದು ಎಲ್ಲಾ ಕಾರ್ಯಗಳೂ ನಿಷಿದ್ಧ. ಮನೆಯ ಸುತ್ತಲೂ ಸ್ವಚ್ಛ ಗೊಳಿಸಿ ನವಧಾನ್ಯಗಳನ್ನು ಒಳಗೊಂಡಂತೆ ಪೌಷ್ಟಿಕ ಆಹಾರವನ್ನು ಸಿದ್ಧಗೊಳಿಸಲಾಗುವುದು. ಕುಚುಲಕ್ಕಿಯನ್ನು ಉಪ್ಪು ನೀರು ಹಾಕಿ ಬಾಣಲೆಯಲ್ಲಿ ಹುರಿದು ಕುಟ್ಟಿ ಹುಡಿ ಮಾಡ ಬೇಕು. ಅದಕ್ಕೆ ಕಾಯಿ, ಬೆಲ್ಲ ,ತುಪ್ಪ ,ಬಾಳೆಹಣ್ಣು ಮಿಶ್ರ ಮಾಡಿ ವಿಶೇಷ ತಿಂಡಿ ತಯಾರಿಸುವ ಕ್ರಮವಿದೆ. ಈ ತಿಂಡಿಯೇ ‘ನನ್ಯರಿ’. ಕುಸುಲಕ್ಕಿ ಹುರಿದು ಪುಡಿಮಾಡಿ ಹಿಂದಿನ ದಿನವೇ ಇಡಲಾಗುವುದು.

ಮಾರನೇಯ ದಿನ ಅಂದರೆ ನಡು ಕೆಡ್ಡಸದ ದಿನ ಮನೆಯ ಹಿರಿಯ ಮಹಿಳೆ ಬೆಳಗ್ಗೆ( ಸೂರ್ಯೋದಯ ಕ್ಕೆ ಮೊದಲು) ತುಳಸಿ ಕಟ್ಟೆಯ ಪಕ್ಕ ಸಗಣಿ ಸಾರಿಸಿ ಒಂದು ಬಾಳೆ ಎಲೆಯಲ್ಲಿ ಈ ಪೌಷ್ಟಿಕಾಂಶ ಪದಾರ್ಥಗಳನ್ನು ಇಟ್ಟು ಭೂಮಿ ತಾಯಿಗೆ ಸಮರ್ಪಿಸುತ್ತಾಳೆ. ಆಮೇಲೆ ಮನೆಯವರೆಲ್ಲರೂ ಬಾಳೆಹಣ್ಣಿನೊಂದಿಗೆ ಮಿಶ್ರಣ ಮಾಡಿ ನನ್ಯರಿಯನ್ನೇ ತಿಂಡಿಯಾಗಿ ಸೇವಿಸುತ್ತಾರೆ. ಕೆಲವು ಮನೆಗಳಲ್ಲಿ ಈ ದಿನ ಮಾಂಸದೂಟ ಆಗಲೇ ಬೇಕು. ಉಳಿದವರು ಬದನೆ ನುಗ್ಗೆಯ ಪದಾರ್ಥವನ್ನು ( ಸಾಂಬಾರು ) ಮಾಡಿ ಊಟಮಾಡುತ್ತಾರೆ. ಇನ್ನೊಂದು ವಿಷಯ ಏನಪ್ಪಾ ಅಂದರೆ ಕೆಡ್ಡಸ ಪದದ ಅರ್ಥ ‘ಕೇಟ’ ಎಂದರೆ ಬೇಟೆ. ಕೆಡ್ಡಸಕ್ಕೂ ಬೇಟೆಗೂ ಬಹಳ ಹತ್ತಿರದ ನಂಟು. ಕೃಷಿ ಕೈ ಸೇರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಬೆಳೆಗಳ ಮೇಲಾಗುತ್ತದೆ. ಕಾಡು ಹಂದಿ ಹಾಗೂ ಕಾಡು ಕೋಳಿಗಳ ಉಪದ್ರ ಹೇಳತೀರದು. ಅವುಗಳಿಂದ ಬೆಳೆಗಳ ರಕ್ಷಣೆಯೂ ಅಗತ್ಯ. ಆದುದರಿಂದ ಕೆಡ್ಡಸದ ನೆಪದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವ ಪರಿಪಾಠ ಬೆಳೆದು ಬಂದಿದೆ. ಅಲ್ಲದೆ ಬೇಟೆ ರೈತರಿಗೊಂದು ಮನರಂಜನಾ ಕಾರ್ಯಕ್ರಮವೂ ಹೌದು. ಸಿಕ್ಕಿದ ಬೇಟೆಯನ್ನು ಊರಿನವರೆಲ್ಲರೂ ಹಂಚಿ ತಿನ್ನುವ ಅಭ್ಯಾಸ.

ಇನ್ನೂ ಕೊನೆಯ ದಿನ ವಿಶೇಷವಾಗಿ ಗಮನ ಸೆಳೆಯುತ್ತದೆ. ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡುತ್ತಾಳೆ. ದೀಪ ಬೆಳಗುತ್ತಾಳೆ. ಒಂದು ಕಲಶದಲ್ಲಿ ನೀರು, ಬಾಳೆಎಲೆಯಲ್ಲಿ ಸೀಗೆ, ಅಂಟುವಾಳಕಾಯಿ ,ಕನ್ನಡಿ, ಬಾಚಣಿಗೆ, ಬೊಟ್ಟು, , ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ ಭೂಮಿಗೆ ಎಣ್ಣಿ ಬಿಟ್ಟು ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌ ನಮಸ್ಕರಿಸುತ್ತಾಳೆ.

ಭೂಮಿ ತಾಯಿ, ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು. ಕೆಡ್ಡಸ ವೆಂದರೆ ನಮಗೂ ಭೂಮಿತಾಯಿಗೂ ಇರುವ ಸಂಬಂಧವನ್ನು, ಆತ್ಮೀಯತೆಯನ್ನು ಗಟ್ಟಿಗೊಳಿಸುವ ಹಬ್ಬ. ಕೆಡ್ಡಸವನ್ನು ಸಂಭ್ರಮಿಸೋಣ ಅಲ್ಲವೇ?

ಬರಹ :
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

9 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

14 hours ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

14 hours ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

14 hours ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

15 hours ago

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

1 day ago