ಕೃಷಿ ಎಂದರೆ, ವ್ಯವಸಾಯ ಎಂದರೆ ನಷ್ಟ, ರೈತನ ಬದುಕೇ ಸಂಕಷ್ಟ ಎಂಬ ಋಣಾತ್ಮಕ ಭಾವನೆ ಎಲ್ಲೆಡೆಯೂ ಇದೆ. ಆದರೆ ಕೃಷಿಯನ್ನು ಇಷ್ಟಪಟ್ಟು, ಕೃಷಿಯೇ ಉಸಿರಾದರೆ ಯಶಸ್ಸು ಸಾಧ್ಯವಿದೆ. ಇದಕ್ಕೆ ಅನೇಕ ಉದಾಹರಣೆ ಇದೆ. ಇದೀಗ ಕೇರಳದ ಯುವಕನೊಬ್ಬ ಪಾಲಕ್ ಸೊಪ್ಪು ಮಾರಾಟಕ್ಕೆ ಆಡಿ ಕಾರಲ್ಲಿ ಬಂದು ತಾನೇ ಸೊಪ್ಪು ಮಾರಾಟ ಮಾಡಿರುವುದು ಭಾರೀ ಸದ್ದು ಮಾಡಿದೆ.ಇನ್ಟಾಗ್ರಾಮ್‌ನ ರೀಲ್ಸ್ ಸದ್ದು ಮಾಡುತ್ತಿದೆ.
ರೈತ ಆಡಿ ಕಾರು ತೆಗೆಯಬಾರದೇ..?. ರೈತ ಆಡಿ ಕಾರಲ್ಲಿ ಬಂದಾಕ್ಷಣವೇ ಅದೇಕೆ ಸದ್ದಾಗುತ್ತಿದೆ..?. ಕಾರಣ ಇಷ್ಟೇ, ಕೃಷಿ ಎಂದರೆ ನಷ್ಟದ ಬದುಕು ಎಂಬ ಭಾವನೆ ಎಲ್ಲೆಡೆಯೂ ಇದೆ. ಆದರೆ ಕೃಷಿಯನ್ನು ವೈಜ್ಞಾನಿಕವಾಗಿ, ಯೋಜನಾಬದ್ಧವಾಗಿ ಮಾಡಿದರೆ ಯಶಸ್ಸು ಸಾಧ್ಯವಿದೆ ಎನ್ನುವುದಕ್ಕೆ ಕೇರಳದ ಯುವ ರೈತ ಸುಜಿತ್ ಸಾಕ್ಷಿಯಾಗಿದ್ದಾರೆ.
ರಸ್ತೆಬದಿಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಲು ಕೇರಳದ ಈ ಯುವ ರೈತ ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ. 44 ಲಕ್ಷ ರೂ.ಗಳ ಬೆಲೆಯ ಸೆಡಾನ್ ಆಡಿ ಕಾರಲ್ಲಿ ಆಗಮಿಸಿ ತನ್ನ ಬಟ್ಟೆ ಬದಲಾಯಿಸಿಕೊಂಡು ತರಕಾರಿ ಮಾರಲು ಪ್ರಾರಂಭಿಸುತ್ತಾರೆ.
ವ್ಯವಸಾಯವು ಸಾಮಾನ್ಯವಾಗಿ ದೈಹಿಕವಾದ ಬೇಡಿಕೆಯನ್ನು ಮತ್ತು ಆರ್ಥಿಕವಾಗಿ ಕಡಿಮೆ ಇಳುವರಿ ಇರುತ್ತದೆ ಎನ್ನುವ ಭಾವನೆಯನ್ನು ಹೊಂದಿದೆ. ಆದ್ದರಿಂದ, ಯುವ ಪೀಳಿಗೆಯು ಇಂತಹ ಆಯ್ಕೆಯನ್ನು ಎರಡನೇಯದ್ದಾಗಿಸುತ್ತಾರೆ. ಆದರೆ ಈಗ ಬೇಡಿಕೆಯಲ್ಲಿರುವ ಸಾವಯವ ಕೃಷಿಯಂತಹ ಆಯ್ಕೆಗಳನ್ನು ಮಾಡಿದರೆ ಉತ್ತಮ ಆರ್ಥಿಕ ಆದಾಯವನ್ನು ನೀಡುತ್ತದೆ. ಈ ಯುವ ರೈತ ಮಾಡಿರುವ ಕೆಲಸವೂ ಅದೇ. ಸಾವಯವ ಕೃಷಿ. ಕೇರಳದ ಯುವ ರೈತ ಸುಜಿತ್ ಈ ಬದಲಾವಣೆಗೆ ಉತ್ತಮ ಉದಾಹರಣೆ. ತರಕಾರಿ ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿರುವ ದೃಶ್ಯ ಈಗ ವೈರಲ್ ಆಗುತ್ತಿದೆ.
ವೆರೈಟಿ ಫಾರ್ಮರ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು.ವರದಿಗಳ ಪ್ರಕಾರ, ಸುಜಿತ್ ಈ ಐಷಾರಾಮಿ ಆಡಿ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರಾಗಿ ಖರೀದಿಸಿದ್ದಾರೆ.ಈ ವಿಡಿಯೋ ನೋಡಿದ ಬಳಿಕ ಕೆಲವು ಯುವಕರು ತಮಾಷೆ ಪ್ರತಿಕ್ರಿಯೆಗಳು ಹೀಗಿತ್ತು, ತರಕಾರಿಗಳನ್ನು ಬೆಳೆಸುವುದಕ್ಕಿಂತ, ಮಾರಾಟ ಮಾಡುವುದಕ್ಕಿಂತ ಮೊದಲು ಆಡಿ ಖರೀದಿಸಬೇಕು..! ಎಂದೂ ಪ್ರತಿಕ್ರಿಯೆ ಮಾಡಿದ್ದಾರೆ.