ಕಾಸರಗೋಡು ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ, ಅಲ್ಲಿನ ಜನ ಕನ್ನಡವನ್ನೆ ಉಸಿರಾಡುತ್ತಿದ್ದಾರೆ. ಹಾಗಾಗಿ ಈ ಕನ್ನಡ ಭಾಷೆ ಮತ್ತು ಮಲಯಾಳಂ ಭಾಷೆ ಮಧ್ಯೆ ಸದಾ ಸಿಕ್ಕಿಕೊಳ್ಳುವವರು ಮಕ್ಕಳು. ಕನ್ನಡದ ಮಕ್ಕಳ ಪಾಲಿಗೆ ಮಲಯಾಳಂ ಕಬ್ಬಿಣದ ಕಡಲೆಯಾಗಿದೆ. ಕನ್ನಡ ಗೊತ್ತಿಲ್ಲದ ಶಿಕ್ಷಕರನ್ನು ನೇಮಿಸಿ, ಕನ್ನಡದ ಮಕ್ಕಳು ತಲೆ ಬಡಿದುಕೊಳ್ಳುವ ಪರಿಸ್ಥಿತಿ ಇತ್ತು. ಈ ಸಮಸ್ಯೆಗೆ ಈಗ ಕೇರಳ ಹೈಕೋರ್ಟ್ ಅಂತ್ಯ ಹಾಡಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಕನ್ನಡ ವಿಭಾಗಕ್ಕೆ ಮಲಯಾಳ ಶಿಕ್ಷಕಿ ನೇಮಕ ವಿವಾದಕ್ಕೆ ಕೇರಳ ಹೈಕೋರ್ಟ್ ಅಂತ್ಯವಾಡಿದೆ. ಕನ್ನಡ ಶಾಲೆಗೆ ಮಲೆಯಾಳಿ ಭಾಷಿಕ ಶಿಕ್ಷಕರಿರುವ ಸ್ಥಾನಕ್ಕೆ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ ಅಡೂರು ಶಾಲೆಗೆ ಮಲೆಯಾಳ ಶಿಕ್ಷಕಿ ನೇಮಕದಿಂದಾಗಿ ಸುಮಾರು ಎರಡು ತಿಂಗಳಿಂದ ಕನ್ನಡ ವಿಭಾಗದ ಮಕ್ಕಳಿಗೆ ಸಮಾಜ ವಿಜ್ಞಾನ ಪಾಠವೇ ಇಲ್ಲ ಎಂಬಂತಾಗಿತ್ತು. ಕಳೆದ ವರ್ಷ ಉದುಮ ಮತ್ತು ಹೊಸಕೋಟೆ ಸರ್ಕಾರಿ ಪ್ರೌಢಶಾಲೆಗಳ ಕನ್ನಡ ವಿಭಾಗಗಳಿಗೆ ಮಲಯಾಳ ಭಾಷೆ ಮಾತ್ರ ತಿಳಿದಿರುವ ಸಮಾಜ ವಿಜ್ಞಾನ ಶಿಕ್ಷಕರನ್ನು ನೇಮಿಸಲಾಗಿತ್ತು. ಉದುಮ ಪ್ರೌಢಶಾಲೆಗೆ ಕೂಡ ಇದೇ ರೀತಿ ಶಿಕ್ಷಕಿ ನೇಮಕಗೊಂಡಿದ್ದರು. ಕೇರಳ ಲೋಕಸೇವಾ ಆಯೋಗ ಈ ನೇಮಕಾತಿ ನಡೆಸಿತ್ತು. ಉದುಮ ಹಾಗೂ ಅಡೂರು ಶಾಲೆಗಳಿಗೆ ಮಲಯಾಳ ಭಾಷಿಕ ಶಿಕ್ಷಕರ ನೇಮಕವಾದಾಗ ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಗಡಿನಾಡಿನ ಕನ್ನಡ ಹೋರಾಟಗಾರರು ಸೇರಿ ಪ್ರತಿಭಟನೆ ನಡೆಸಿದ್ದರು. ಜೊತೆಗೆ ಈ ಕುರಿತು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿರುವುದು ಗಡಿನಾಡ ಕನ್ನಡಿಗರ ಹೋರಾಟಕ್ಕೆ ದಕ್ಕಿದ ಜಯವಾಗಿದೆ. ಆದರೆ ಕೇರಳ ಹೈಕೋರ್ಟ್‌ನ ಈ ತೀರ್ಪನ್ನು ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ವಯಿಸುವಂತೆವಾದ ಮಂಡಿಸಿದ್ದು ಸ್ವಾಗತಾರ್ಹವಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದ್ದಾರೆ.
ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕೇರಳ ಹೈಕೋರ್ಟ್‌ನಲ್ಲಿ ಮಹತ್ವದ ಜಯ ಲಭಿಸಿದ್ದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಮಲಯಾಳಿ ಭಾಷಿಕ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಅರ್ಥೈಸಿಕೊಂಡಿರುವ ನ್ಯಾಯಾಲಯ, ಕೂಡಲೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಪ್ರಾದೇಶಿಕ ಭಾಷೆಗೆ ನ್ಯಾಯಾಲಯ ನೀಡಿದ ಗೌರವವಾಗಿದೆ. ಈ ಮೂಲಕ ಅನೇಕ ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರಕ್ಕೆ, ಕೇರಳ ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕಸೇವಾ ಆಯೋಗಕ್ಕೆ ಪ್ರಸ್ತುತ ತೀರ್ಪುನ ಮೂಲಕ ಕೇರಳ ಹೈಕೋರ್ಟ್ ಚಾಟಿ ಬೀಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
Source: Online