ಕೇರಳದ ತ್ರಿಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧ ವಿಧಿಸಲಾಗಿದೆ. ಹಾಗೆಂದು ದೇವಸ್ಥಾನದಲ್ಲಿ ದೇವರಿಗೆ ತುಳಸಿ ಅರ್ಪಣೆಯನ್ನೇ ಸ್ಥಗಿತಗೊಳಿಸಿಲ್ಲ. ವಿಷ ಸಿಂಪಡಣೆ ಮಾಡಿರುವ ತುಳಸಿ ಅರ್ಪಣೆಗಷ್ಟೇ ನಿರ್ಬಂಧ ಇದೆ.
ದೇವಸ್ಥಾನದಲ್ಲಿ ಕೀಟನಾಶಕ ಸಿಂಪಡಣೆಯ ತುಳಸಿಯನ್ನು ಬಳಸುವುದನ್ನು ಮಾತ್ರಾ ನಿರ್ಬಂಧಿಸಿದೆ. ದೇವಾಲಯದ ಸಿಬ್ಬಂದಿಗಳು ಇಂತಹ ‘ತುಳಸಿ’ಯನ್ನು ಪದೇ ಪದೇ ದೇವರಿಗೆ ಅರ್ಪಣೆ ಮಾಡುವುದರಿಂದ ಅವರಿಗೆ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಆಗಾಗ ಕಂಡುಬರುತ್ತಿದ್ದ ಬಗ್ಗೆ ದೂರುಗಳು ಬರುತ್ತಿದ್ದವು.
ಬಹುತೇಕ ಯಾತ್ರಾರ್ಥಿಗಳು ಅಂಗಡಿಗಳಿಂದ ‘ತುಳಸಿ’ಯನ್ನು ದೇವರಿಗೆ ಅರ್ಪಣೆ ಮಾಡುತ್ತಿದ್ದರು. ಹೆಚ್ಚಿನ ಪ್ರಮಾಣದ ಕೀಟನಾಶಕವನ್ನು ಬಳಸಿಕೊಂಡು ವಾಣಿಜ್ಯ ಉದ್ದೇಶಗಳಿಗಾಗಿ ತುಳಿಸಿಯನ್ನು ಬೆಳೆಸಲಾಗುತ್ತದೆ, ಇದರಿಂದಾಗಿ ಅವುಗಳನ್ನು ದಿನಗಳವರೆಗೆ ಸಂರಕ್ಷಿಸಲಾಗುತ್ತದೆ. ಕೀಟನಾಶಕ ಮಿಶ್ರಿತ ‘ತುಳಸಿ’ಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ‘ತುಳಸಿ’ ಮೇಲೆ ನಿರ್ಬಂಧ ಹೇರಲಾಗಿದೆ” ಎಂದು ದೇವಸ್ಥಾನದ ಆಡಳಿತವು ತಿಳಿಸಿದೆ.
ಆದರೆ, ದೇವಸ್ಥಾನದಲ್ಲಿ ತುಳಸಿ ಬಳಕೆಯೇ ನಿಷೇಧವಾಗಿಲ್ಲ. ತುಳಸಿ ಪ್ರಿಯ ಕೃಷ್ಣನಿಗಾಗಿ ಪ್ರತ್ಯೇಕವಾಗಿ ಕೀಟನಾಶಕ ರಹಿತವಾದ ತುಳಿಸಿಯನ್ನು ಬೆಳೆದು ಅರ್ಪಣೆ ಮಾಡಲಾಗುತ್ತಿದೆ. ಆದರೆ, ದೇವಾಲಯದಲ್ಲಿ ತುಳಸಿಯನ್ನು ನಿಷೇಧಿಸಲಾಗಿದೆ ಎಂದು ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ದೇವಾಲಯದ ನಿರ್ಧಾರದ ಹಿಂದೆ ಕೇರಳದ ಸಿಪಿಐ ಸರಕಾರವನ್ನು ದೂಷಿಸಲಾಗುತ್ತಿದೆ. ಆದರೆ ಇದಕ್ಕೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ವಿ.ಕೆ.ವಿಜಯನ್ ಹೇಳಿದ್ದಾರೆ.