ಕೆಎಂಎಫ್ ಮತ್ತು ಕೃಷಿಕರು ಕಟ್ಟಿಕೊಂಡ ಬದುಕು….| ಈ ಬದುಕಿನ ಬಗ್ಗೆ ಮನಸಿನ ಕನ್ನಡಿಯಲ್ಲಿ ಬರೆಯುತ್ತಾರೆ ವಿವೇಕಾನಂದ ಎಚ್‌ ಕೆ |

December 17, 2021
8:48 AM

ನಿಜಕ್ಕೂ ಒಂದು ಇಡೀ ಸಮುದಾಯವನ್ನು – ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ ಆರೋಗ್ಯ ವಸತಿ ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗದ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಕಾಮಧೇನು ಕರ್ನಾಟಕ ಹಾಲು ಮಹಾ ಮಂಡಲ.

Advertisement

ಬಹುಶಃ ರೈತ ಆತ್ಮಹತ್ಯೆಗಳು ಇನ್ನಷ್ಟು ನಿಯಂತ್ರಣ ಮೀರಿ ಹೋಗದಿರಲು ಕಾರಣ ಈ ಕ್ರಮಬದ್ಧ ಹೈನುಗಾರಿಕೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಗ್ರಾಮೀಣ ಬದುಕಿನ ಬಡತನದ ನಿವಾರಣೆಯಲ್ಲಿ ಈ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದು. ಅದರಲ್ಲೂ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಕೆ ಎಂ ಎಫ್ ಅನ್ನು ಮರೆಯಲು ಸಾಧ್ಯವೇ ಇಲ್ಲ.

ಎಷ್ಟೊಂದು ಜನ ಹಸು ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಿದ್ದಾರೆ, ಎಷ್ಟೊಂದು ಜನ ಇದರಲ್ಲಿ ಸಂಪಾದಿಸಿದ ಹಣದಿಂದ ಮನೆಕಟ್ಟಿಕೊಂಡಿದ್ದಾರೆ, ಎಷ್ಟೊಂದು ಜನ ಇದರಿಂದಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡಿದ್ದಾರೆ ಎಂಬುದನ್ನು ಗಮನಿಸಿದಾಗ ಅದರ ಬಗ್ಗೆ ಹೆಮ್ಮೆಯಾಗುತ್ತದೆ.

ಹಾಲಿನ ಬೆಲೆಯಲ್ಲಿ ಮೂಲ ರೈತರಿಗೆ ಸ್ವಲ್ಪ ಕಡಿಮೆ ಹಣ ಪಾವತಿಯಾಗುತ್ತಿರುವುದು ನಿಜ. ಆದರೆ ಹಾಲಿನ ಗುಣಮಟ್ಟ, ಹಾಲು ಉತ್ಪಾದಕರಿಗೆ ಸಮಯಕ್ಕೆ ಸರಿಯಾಗಿ ಹೆಚ್ಚಿನ ಮೋಸವಿಲ್ಲದೆ ಕ್ರಮಬದ್ಧ ಹಣ ಪಾವತಿ, ಇಡೀ ರಾಜ್ಯದ ಜನರಿಗೆ ಸಮಯಕ್ಕೆ ಸರಿಯಾಗಿ ಹಾಲು ತಲುಪಿಸುವ ವ್ಯವಸ್ಥೆ, ಹಾಲಿನ ಇನ್ನಿತರ ಅತ್ಯಂತ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ಉತ್ಪನ್ನಗಳು ಹೀಗೆ ಒಂದು ದೊಡ್ಡ ಸಾಧನೆ ಹಾಲು ಮಹಾ ಮಂಡಲ ಮಾಡಿದೆ ಮತ್ತು ಮಾಡುತ್ತಲಿದೆ.

ಸರ್ಕಾರದ ಸ್ವಾಯತ್ತ ಸಂಸ್ಥೆ‌ಯಾದ್ದರಿಂದ ರಾಜಕೀಯ, ಭ್ರಷ್ಟಾಚಾರ, ಅವ್ಯವಹಾರ ಎಲ್ಲವೂ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಒಟ್ಟಾರೆಯಾಗಿ ಕೆಳ ಮಧ್ಯಮ ವರ್ಗದ ಜನರಿಗೆ ಈಗಲೂ ಆಶಾಕಿರಣವಾಗಿರುವುದು ವಾಸ್ತವಿಕ ಸತ್ಯ.

ಕ್ಷೀರ ಕ್ರಾಂತಿ, ವರ್ಗೀಸ್ ಕುರಿಯನ್, ಮಹಾ ಮಂಡಲದ ಸ್ಥಾಪನೆ ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಅದಕ್ಕೆ ಸಂಬಂಧಿಸಿದ ಎಲ್ಲೆಡೆಯೂ ಲಭ್ಯವಿದೆ. ಅದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಆದರೆ ಒಂದಷ್ಟು ಕೊರತೆಗಳ ನಡುವೆಯೂ ಹಣ್ಣು ತರಕಾರಿ ಬೇಳೆಕಾಳುಗಳು ಮುಂತಾದ ಕೃಷಿ ಉತ್ಪನ್ನಗಳ ವಿಷಯದಲ್ಲಿ ಈ ರೀತಿಯ ಅಥವಾ ಇದಕ್ಕೆ ಸ್ವಲ್ಪ ಹತ್ತಿರದ ಕ್ರಮಬದ್ಧವಾದ ಒಂದು ಸಂಸ್ಥೆಯನ್ನು ಸ್ಥಾಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ.

ಹಾಲಿಗಿಂತ ಭಿನ್ನವಾದ ಕೆಲವು ಕಠಿಣ ಸಮಸ್ಯೆಗಳು ಕೃಷಿ ಬೆಳೆಗಳಲ್ಲಿ ಇದೆ ಎಂಬುದು ನಿಜ. ಆದರೆ ಒಂದು ಬದ್ದತೆಯಿರುವ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗದ ಮೂಲಕ ಪರಿಹಾರ ಹುಡುಕುವುದು ಕಷ್ಟವೇನಲ್ಲ.

ಬಹುಶಃ ಹಾಗೇನಾದರೂ ಒಂದು ಕ್ರಮಬದ್ಧತೆ ಆಹಾರದ ಬೆಳೆಗಳಲ್ಲಿ ಸಾಧ್ಯವಾದರೆ ರೈತರ ಬಹುತೇಕ ಮಾರುಕಟ್ಟೆ ಸಮಸ್ಯೆಗಳಿಗೆ ಒಂದು ಪರಿಹಾರ ಸಿಗಬಹುದು. ಈಗಾಗಲೇ ಎ ಪಿ ಎಂ ಸಿ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ. ಆದರೆ ಅದು ಕೆ ಎಂ ಎಫ್ ರೀತಿ ಯಶಸ್ವಿಯಾಗದೆ ದಲ್ಲಾಳಿಗಳು ಮತ್ತು ರಾಜಕೀಯ ಕಾರಣಗಳಿಗಾಗಿ ತೃಪ್ತಿದಾಯಕವಾಗಿಲ್ಲ.

ಕೃಷಿಗೆ ಸಂಬಂಧಿಸಿದ ಒಂದಕ್ಕೊಂದು ಅವಲಂಬಿತ ಪ್ರಕೃತಿಯೂ ಸೇರಿ ಮನುಷ್ಯನ ನಿರೀಕ್ಷೆಗೆ ಮೀರಿದ ಅನೇಕ ಸಮಸ್ಯೆಗಳು ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಸಾಧ್ಯವಾದಷ್ಟು ಪರಿಹರಿಸಲು ಮತ್ತು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂಬುದು ವಾಸ್ತವಿಕ ಸತ್ಯ.

ಒಂದು ಯಶಸ್ವಿ ಸಂಸ್ಥೆಯ ಮಾದರಿ ನಮ್ಮ ಮುಂದೆ ಇರುವಾಗಲು ಅದರ ಉಪಯೋಗ ಪಡೆಯುವ ಪ್ರಯತ್ನ ಮಾಡದಿರುವುದು ಬೇಜವಾಬ್ದಾರಿ ಎನಿಸುತ್ತದೆ.

ಕೆಲವು ಬರಗಾಲ ಪೀಡಿತ ಪ್ರದೇಶಗಳು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಪಶುಸಂಗೋಪನೆ ಅನೇಕ ಜನರ ಜೀವನಾಧಾರ ಎಂಬುದನ್ನು ಗಮನಿಸಿ ಒಮ್ಮೆ ನಿಮ್ಮ ಗಮನಕ್ಕೆ ತರುವ ಒಂದು ಸಣ್ಣ ಪ್ರಯತ್ನ.

ಕಾರಣ ಅನೇಕ ಕುಂದು ಕೊರತೆಗಳ ನಡುವೆಯೂ ಮಾದರಿ ಸಂಸ್ಥೆಗಳು ನಮಗೆ ಸ್ಪೂರ್ತಿಯಾಗಿ ಅದು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲಿ ಎಂಬ ಆಶಯದಿಂದ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

# ವಿವೇಕಾನಂದ. ಹೆಚ್.ಕೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ
February 20, 2026
7:46 AM
by: ದ ರೂರಲ್ ಮಿರರ್.ಕಾಂ
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ
February 20, 2026
7:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror