ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕೋಲಾರ ಜಿಲ್ಲೆಯಲ್ಲಿ, ಕೃಷಿ ಚಟುವಟಿಕೆಗಳ ಜತೆಗೆ ಕುರಿ ಸಾಕಾಣಿಕೆ ರೈತರಿಗೆ ಭರವಸೆಯ ಉಪಕಸುಬಾಗಿ ರೂಪುಗೊಂಡಿದೆ. ಕಡಿಮೆ ವೆಚ್ಚ, ಕಡಿಮೆ ಅಪಾಯ ಮತ್ತು ಬೇಗ ಆದಾಯ ನೀಡುವ ಸ್ವಭಾವದಿಂದಾಗಿ, ಜಿಲ್ಲೆಯಲ್ಲಿ ಅನೇಕ ರೈತರು ಕುರಿ ಸಾಕಾಣಿಕೆಯನ್ನು ಅಳವಡಿಸಿಕೊಂಡಿದ್ದಾರೆ.
ಕುರಿಗಾಹಿಗಳು ಬಯಲು ಪ್ರದೇಶಗಳಲ್ಲಿ ದಿನವಿಡೀ ಕುರಿಗಳನ್ನು ಮೇಯಿಸುವುದರಿಂದ, ಪ್ರತ್ಯೇಕವಾಗಿ ಮೇವನ್ನು ಬೆಳೆಸುವ ಅಥವಾ ಖರೀದಿಸುವ ಅಗತ್ಯ ಕಡಿಮೆಯಾಗಿದೆ. ಕುರಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದರ ಜೊತೆಗೆ, ಗೊಬ್ಬರ ಮತ್ತು ಉಣ್ಣೆಯಿಂದಲೂ ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ.
ಲಸಿಕೆಗಳಿಂದ ಮರಣ ಪ್ರಮಾಣ ಕಡಿತ : ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸುವ ಮೂಲಕ ಕುರಿಗಳಲ್ಲಿ ಮರಣ ಪ್ರಮಾಣವನ್ನು ತಗ್ಗಿಸಬಹುದಾಗಿದೆ. ಇದರಿಂದ ಉತ್ಪಾದನೆ ಹೆಚ್ಚಾಗಿ ರೈತರ ಆದಾಯವೂ ವೃದ್ಧಿಯಾಗುತ್ತಿದೆ. ಕಳೆದ ಜಾನುವಾರು ಗಣತಿಯ ಪ್ರಕಾರ, ಕೋಲಾರ ಜಿಲ್ಲೆಯಲ್ಲಿ ಸುಮಾರು 6 ರಿಂದ 7 ಲಕ್ಷಕ್ಕೂ ಅಧಿಕ ಕುರಿಗಳು ಇದ್ದು, ಜಿಲ್ಲೆಯಲ್ಲಿ ಸಾಕಷ್ಟು ರೈತರು ಕುರಿ ಸಾಕಾಣಿಕೆಯನ್ನು ಉಪಕಸುಬಾಗಿಸಿಕೊಂಡಿದ್ದಾರೆ.
ರೈತರ ಅನುಭವ : ಕುರಿಗಾಹಿ ವಿಜಯ್ ಕುಮಾರ್ ಅವರ ಪ್ರಕಾರ, “ಮನೆಯಲ್ಲಿ 50 ಕುರಿಗಳನ್ನು ಸಾಕುತ್ತಿದ್ದೇನೆ. 25 ಕುರಿಮರಿಗಳನ್ನು ತಲಾ ₹8,000ರಂತೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದೇನೆ” ಎಂದು ಹೇಳುತ್ತಾರೆ.
ಇನ್ನೊಬ್ಬ ಕುರಿಗಾಹಿ ಮಂಜುನಾಥ್ ಅವರ ಪ್ರಕಾರ, “ಅಮೀನ್ ಘಡ, ನಾರಿ ಸುರ್ವಣ ಹಾಗೂ ಸಿಂಧನೂರು ತಳಿಯ ಕುರಿಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದೇವೆ. ಮೂರು ತಿಂಗಳ ಬಳಿಕ ಮಾರಾಟ ಮಾಡಿದಾಗ ಪ್ರತಿ ಕುರಿಮರಿಗೆ ₹3,000ರಿಂದ ₹4,000ವರೆಗೂ ಲಾಭ ಸಿಗುತ್ತಿದೆ” ಎನ್ನುತ್ತಾರೆ.
ಶ್ರೀನಿವಾಸ ಗೌಡ ಅವರ ಪ್ರಕಾರ, “ಕುರಿಮರಿಗಳನ್ನು ₹7,000ಕ್ಕೆ ಖರೀದಿಸಿ, ಮೂರು ತಿಂಗಳ ಬಳಿಕ ₹15,000ಕ್ಕೆ ಮಾರಾಟ ಮಾಡಿದ್ದೇವೆ. ಕೃಷಿಯ ಜತೆಗೆ ಕುರಿ ಸಾಕಾಣಿಕೆ ಉತ್ತಮ ಉಪಕಸುಬಾಗಿದೆ” ಎನ್ನುತ್ತಾರೆ.
ಪಶುಪಾಲನಾ ಇಲಾಖೆ ಕೂಡಾ ಕೃಷಿಕರಿಗೆ ನೆರವಾಗುತ್ತದೆ. ಕುರಿಗಳಿಗೆ ಜಂತುನಾಶಕ, ಕರಳುಬೇನೆ ಮತ್ತು ನೀಲಿನಾಲಿಗೆ ರೋಗಗಳು ಕಾಣಿಸಿಕೊಳ್ಳಬಹುದು. ಇದನ್ನು ತಡೆಗಟ್ಟಲು ಆರು ತಿಂಗಳಿಗೊಮ್ಮೆ ಉಚಿತ ಲಸಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಪಡೆದ ಬಳಿಕ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಇದರಿಂದ ಕುರಿಗಾಹಿಗಳಿಗೂ ಲಾಭ ವೃದ್ಧಿಯಾಗಲಿದೆ ಎಂದು ಹೇಳುತ್ತಾರೆ, ಮುಖ್ಯ ವೈದ್ಯಾಧಿಕಾರಿ ವಿಜಯ್ ಕುಮಾರ್ ಪಾಟೀಲ್ .
ಒಟ್ಟಿನಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕುರಿ ಸಾಕಾಣಿಕೆ ಕೃಷಿಗೆ ಪೂರಕವಾದ ಸ್ಥಿರ ಆದಾಯದ ಮಾರ್ಗವಾಗಿ ಹೊರಹೊಮ್ಮಿದ್ದು, ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ನೀಡುವ ಉಪಕಸುಬಾಗಿ ಕೋಲಾರ ಜಿಲ್ಲೆಯ ರೈತರ ಭರವಸೆಯಾಗಿದೆ.


