ಕೊಂಕಣಿ ಲೇಖಕರ ಸಂಘವು ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರಿಗೆ ನೀಡುವ ಪ್ರಶಸ್ತಿಗೆ 2022ನೇ ಸಾಲಿನಲ್ಲಿ ಲೇಖಕಿ ಐರಿನ್ ಪಿಂಟೊ ಅವರನ್ನು ಆಯ್ಕೆ ಮಾಡಿದೆ ಎಂದು ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಫೆ.25ರಂದು ಸಂಜೆ 6:30 ಕ್ಕೆ ಮಂಗಳೂರು ನಂತೂರು ಬಜ್ಜೋಡಿಯ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಐರಿನ್ ಪಿಂಟೊ ಕೊಂಕಣಿ ಭಾಷೆಯಲ್ಲಿ ಸಣ್ಣ ಕಥೆ, ಪುಸ್ತಕ, ಧಾರಾವಾಹಿ, ಆಕಾಶವಾಣಿಯಲ್ಲಿ ಸಂದರ್ಶನದ ಮೂಲಕ ಭಾಷೆಗೆ ಕೊಡುಗೆ ನೀಡಿದ್ದಾರೆ. ಸಾಕಷ್ಟು ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ ಎಂದು ರಿಚರ್ಡ್ ಮೊರಾಸ್ ತಿಳಿಸಿದ್ದಾರೆ.
‘ರಾಕ್ಣೊ’ ಕೊಂಕಣಿ ವಾರ ಪತ್ರಿಕೆಯ ಮಾಜಿ ಸಂಪಾದಕ ಫಾದರ್ ಫ್ರಾನ್ಸಿಸ್ ರೊಡ್ರಿಗಸ್, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಎನ್.ಬೆಳ್ಳೂರ್ ಮುಖ್ಯ ಅತಿಥಿಯಾಗಿರುವರು. ಕೊಂಕಣಿ ಲೇಖಕರ ಸಂಘ ಕರ್ನಾಟಕ ಕೊಂಕಣಿ ಭಾಷೆ ಮತ್ತು ಸಾಹಿತ್ಯ ವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018 ರಲ್ಲಿ ಆರಂಭಗೊಂಡಿತು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಡೊಲ್ಫಿ ಎಫ್.ಲೋಬೊ, ಸಲಹಾ ಸಮಿತಿ ಸದಸ್ಯರಾದ ಜೆ.ಎಫ್.ಡಿಸೋಜ, ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.