ಕೆಲದಿನಗಳ ಹಿಂದೆ ಸಂಜೆಯ ಹೊತ್ತು ಗದ್ದೆಯ ಬದಿಗೆ ಹೋಗಿದ್ದೆ. ಸ್ಥಳೀಯರೊಬ್ಬರು ಹಡಿಲು ಬಿದ್ದ ಗದ್ದೆಯನ್ನು ವೀಕ್ಷಿಸುತ್ತಿದ್ದರು. ನನ್ನನ್ನು ಕಂಡೊಡನೆ ನಮಸ್ಕಾರಗಳ ವಿನಿಮಯದೊಂದಿಗೆ, ಈ ವರ್ಷ ಗದ್ದೆ ಬೇಸಾಯ ಮಾಡಿದರೆ ಹೇಗೆ?ಎಂದು ಆಲೋಚಿಸುತ್ತಿದ್ದೇನೆ ಅಂದರು. ಮನೆಯಲ್ಲಿ ಕುಳಿತು ಕುಳಿತು ಬೇಸರವಾಗುತ್ತಿದೆ, ಮನಸ್ಸಿನ ನೋವು ಪರಿಹಾರವಾಗಲು ಗದ್ದೆ ಬೇಸಾಯ ಸಹಾಯಕವಾಗಬಹುದು ಎನ್ನುವ ದೃಷ್ಟಿಯಿಂದ ಆಲೋಚನೆ ಬಂತು ಅಂತಂದರು.
ಮನಸ್ಸಿನ ನೋವು,ಗದ್ದೆ ಬೇಸಾಯ ಈ ಎರಡು ವಿಷಯಗಳು ನನಗೇಕೋ ಕುತೂಹಲವುಂಟಾಯಿತು. ಅವರು ಮುಂದುವರಿದು ಹೇಳಿದ ವಿಷಯ ಮಾತ್ರ ತುಂಬಾ ಆಘಾತಕಾರಿ ಮತ್ತು ಸರ್ವರಿಗೂ ಎಚ್ಚರಿಕೆಯ ಗಂಟೆ ಎಂದು ನನ್ನ ಮನಸ್ಸಿಗೆ ಅರಿವಾಯಿತು.
ಇನ್ನೂ ಚಿಕ್ಕಪ್ರಾಯದ ಮಗಳು, ಮದುವೆಯಾಗಿ ವರುಷ ಎರಡಾಯಿತು. ಆಗಾಗ ಬಂದ ಅಸೌಖ್ಯದ ಕಾರಣದಿಂದ ಆಸ್ಪತ್ರೆಗೆ ಭೇಟಿ ನೀಡಿತು. ಆಧುನಿಕ ಪರೀಕ್ಷೆಗಳ ಮೂಲಕ ಗರ್ಭಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಇದೆ ಎಂಬ ಉತ್ತರ ಬಂತು. ಮಗಳ ಜೀವ ಉಳಿಸುವುದಕ್ಕಾಗಿ ಗರ್ಭ ಕೋಶವನ್ನು ತೆಗೆದದ್ದೂ ಆಯಿತು. ಮುಂದೇನು?ಎಂಬ ಭವಿಷ್ಯದ ಯೋಚನೆಯಲ್ಲಿ ಮನೆಯಲ್ಲೇ ಕುಳಿತರೆ ಮತ್ತಷ್ಟು ನೋವು ಜಾಸ್ತಿ ಆಗುವ ಸಂಭವವನ್ನು ತಪ್ಪಿಸುವುದಕ್ಕಾಗಿ ಗದ್ದೆ ಬೇಸಾಯದ ಕಡೆಗೆ ಮನ ಮಾಡಿದೆ ಎಂಬ ಮಾತು ಮುಗಿಸುವಾಗ ನನ್ನ ಅಂತರಂಗದಲ್ಲಿಯೇ ನೋವುಗಳು ಉಲ್ಬಣಿಸಿ ಬಂತು. ನನ್ನ ಅರಿವಿಗೆ ಬಾರದಂತೆ ಕಣ್ಣಂಚಿನಲ್ಲಿ ಅಲ್ಪಸ್ವಲ್ಪ ನೀರೂ ಜಿನುಗಿತು.
ಇದು ಇಲ್ಲಿಗೆ ಮುಗಿಯಲಿಲ್ಲ, ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಮನೆಗಳಲ್ಲೂ ಇದೆ ಮತ್ತು ಓರ್ವ ಹುಡುಗಿ ಅಕಾಲ ಮೃತ್ಯುವಶ ಆಗಿದ್ದಾಳೆ ಎಂದೆನ್ನುವಾಗ ಭಯವೂ ಆಯಿತು.
ಆ ನಂತರದ ದಿನಗಳಲ್ಲಿ ನನ್ನ ಮನಸ್ಸನ್ನು ಈ ವಿಷಯ ಕೊರೆಯುತ್ತಿತ್ತು. ಉಣ್ಣುವ ಆಹಾರವನ್ನು ಬೆಳೆಸುವಲ್ಲಿ ಬಳಸುವ ವಿಷ, ಬೆಳೆದು ಬಂದದ್ದನ್ನು ಸಂಗ್ರಹಿಸಿ ಕಾಪಿಡುವಲ್ಲಿ ಬಳಸುವ ವಿಷ, ಅಯ್ಯೋ ಕಳೆಗಳೇ ಎಂದು ಬಳಸುವ ಕಳೆನಾಶಕ , ಬೇಕೋ ಬೇಡವೋ ಎಂಬ ಅರಿವಿಲ್ಲದೆ ಅವರಿವರ ಮಾತನ್ನು ಕೇಳಿ ಬಳಸುವ ಕೀಟನಾಶಕಗಳು ನನ್ನ ಕಣ್ಣ ಮುಂದೆ ಧುತ್ತೆಂದು ಬಂತು.
ಆಧುನಿಕ ಬದುಕಿನ ವ್ಯಾಯಾಮ ರಹಿತ ಜೀವನಶೈಲಿ, ರಂಗುರಂಗಿನ ಬೇಕರಿ ತಿಂಡಿಗಳು, ಗಲ್ಲಿಗಲ್ಲಿಗಳಲ್ಲಿ, ಬೀದಿಬೀದಿಗಳಲ್ಲಿ, ಮಾಲುಗಳಲ್ಲಿ ದೊರೆಯುವ ಸಾಲು ಸಾಲು ಜಂಕ್ ಫುಡ್ ಗಳ ದುರ್ವಾಸನೆ ಮೂಗಿಗೆ ಅಪ್ಪಳಿಸುತ್ತಿತ್ತು. ಅಭಿವೃದ್ದಿಯ ಪಥವನ್ನು ಉದ್ಘೋಷಿಸಿಕೊಂಡು ಹೋಗುವ ಸಮಾಜ ಎತ್ತ ಸಾಗುತ್ತಿದೆ, ಮತ್ತು ಅವನತಿಯ ಹತ್ತಿರ ಸಾಗುತ್ತಿದೆಯೇ?ಎಂಬ ಚಿಂತೆ ಮನದಲ್ಲಿ ಮೂಡಿತ್ತು.
ವಾಟ್ಸಪ್ ಗುಂಪೊಂದರಲ್ಲಿ ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಕಾಗೆ, ಗುಬ್ಬಿ ಕೆಲವೊಂದು ಹಾವುಗಳು, ಜೀವಿಗಳ ಬಗ್ಗೆ ವಿಮರ್ಶೆಯೊಂದು ನಡೆಯುತ್ತಿತ್ತು. ಅದನ್ನು ಓದುತ್ತಿದ್ದಂತೆ ಮೇಲಿನ ಪ್ರಕರಣಕ್ಕೂ ಅದಕ್ಕೂ ತಾಳೆ ಬಂತು. ಈಗಿನ 30 ವರ್ಷಗಳಲ್ಲಿ ನಮ್ಮ ಕಣ್ಣೆದುರಲ್ಲೇ ನಾಶವಾದ ಅನೇಕ ಜೀವ ಸಂತಾನಗಳು ಅದೆಷ್ಟು ನರಕ ಯಾತನೆ ಅನುಭವಿಸಿರಬಹುದು, ತಮ್ಮ ಕಣ್ಣೆದುರೇ ನಾಶವಾಗುವ ಭವಿಷ್ಯದ ಕುಡಿಗಳಿಗೋಸ್ಕರ ಬೇಸರಿಸಿರಬಹುದು ಎಂಬುದನ್ನು ಯೋಚಿಸುವಾಗ ನಾವೂ ಆ ದಿಕ್ಕಿನಲ್ಲಿಯೇ ಸಾಗುತ್ತಿದ್ದೇವೆ ಎಂಬ ಎಚ್ಚರಿಕೆ ಗಂಟೆ ಇರಬಹುದೆಂದು ಮನಸ್ಸು ಕೂಗಿ ಹೇಳುತ್ತಿತ್ತು. ಅದೆಷ್ಟೋ ನಾಗರೀಕತೆಗಳು ನಾಶವಾಗಿ ಹೋಗಿದೆಯಂತೆ, ಅದೆಷ್ಟೋ ಸಂಸ್ಥಾನಗಳು ಅಳಿದು ಹೋಗಿದೆಯಂತೆ, ಅಂತೆಯೇ ಈ ನಾಗರೀಕತೆಯು ನಾಶದತ್ತ ಸಾಗುತ್ತಿದೆಯೇ? ಎಂಬ ಪ್ರಶ್ನೆ ಮನದಲ್ಲಿ ಮೂಡಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…