ಕೃಷಿಕೋದ್ಯಮ | ಕೃಷಿಯಲ್ಲ, ಸಸ್ಯದಿಂದ ಕಳಚಿಕೊಂಡ ಉತ್ಪನ್ನಗಳನ್ನು ಉದ್ಯಮದಂತೆ ಪರಿಗಣಿಸಿದರೆ ಕೃಷಿಕನಲ್ಲಿ ಸಂತಸ ಇಮ್ಮಡಿ |

September 21, 2022
10:11 PM
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಪ್ರತಿಷ್ಠಾನದ ವತಿಯಿಂದ ನಡೆದ ಕೃಷಿಕೋದ್ಯಮ ಕಾರ್ಯಾಗಾರದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಮರಿಕೆ ಅವರು ಅನುಭವ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ.

ನಾನೊಬ್ಬ ಸಾವಯವ ಕೃಷಿಕನು ಆದುದರಿಂದ, ಸಾವಯುವದ ಮೇಲೆ ಅಪಾರ ಒಲವಿರುವುದರಿಂದ ನನ್ನ ಪ್ರಧಾನ ಗುರಿ ಇದ್ದುದೇ ಸಾವಯದ ಕುರಿತಾಗಿ ಮಾತನಾಡುವ ವೇಣು ಕಳೆಯತ್ತೋಡಿ ಅವರ ಬಗ್ಗೆ. ಅನೇಕ ಕೃಷಿ ಸಮಾವೇಶಗಳಲ್ಲಿ ಸಾವಯದ ಕುರಿತಾಗಿ ಗೋಷ್ಠಿ ಒಂದು ಇರುತ್ತದೆ. ಆದರೆ ಅದು ಇರುವುದು ಮಧ್ಯಾಹ್ನ ಊಟದ ಹೊತ್ತಿನಲ್ಲಿ. ಹೊಟ್ಟೆ ಹಸಿದಾಗ,,ಬಂದ ಊಟದ ಪಾತ್ರೆಯ ಶಬ್ದ ಕೇಳಿದಾಗ, ಪರಿಮಳವು ಮೂಗಿಗೆ ಬಡಿದಾಗ ಸಾವಯವದ ಕುರಿತು ಮಾತನಾಡಿದರೆ ಅದು ಗಾಳಿಯೊಂದಿಗೆ ಮಾತನಾಡಿದಂತೆ.

Advertisement

ಆದರೆ,ಈ ಸಭೆಯಲ್ಲಿ ಪ್ರಥಮ ಮಾತುಗಾರರೇ ವೇಣು ಅವರು. ಕೃಷಿ ಎಂದರೆ ಸೋಲು ಗೆಲುವು ಮತ್ತು ತಾಳ್ಮೆಗಳ ಸಂಗಮ. ಸಾವಯವ ಎಂದರೆ ಕೇವಲ ಕೃಷಿಯಲ್ಲ ಅದೊಂದು ಜೀವನ ಪದ್ಧತಿ. ಪ್ರಕೃತಿಯ ಲೆಕ್ಕದಲ್ಲಿ ಸಕಲ ಜೀವಿಗಳು ಎಂತೋ ಅಂತೆಯೇ ಮನುಷ್ಯ ಕೂಡ ಒಂದು ಜೀವಿ. ತನ್ನ ಸುಖ ಸಂತೋಷಕ್ಕೆ ಎಲ್ಲವನ್ನೂ ನಾಶ ಮಾಡುವ ಕೃಷಿ ಪದ್ಧತಿಯಲ್ಲಿ ನನಗೆ ನಂಬಿಕೆ ಇಲ್ಲ. ಸ್ವಾವಲಂಬನೆಯ ಮೂಲಕ ಬದುಕು ಕಟ್ಟಿಕೊಳ್ಳುವುದರಲ್ಲಿ ನನ್ನ ನಂಬಿಕೆ. ಎಲ್ಲದರಲ್ಲಿಯೂ ಅಸಲನ್ನು ಲೆಕ್ಕ ಹಾಕುತ್ತಾ ಕುಳಿತರೆ ಮಾನಸಿಕ ಒತ್ತಡ ಬಡ್ಡಿಯಾಗಿ ಬರುತ್ತದೆ. ಬದುಕಿಗೊಂದಷ್ಟು ಲೆಕ್ಕಾಚಾರ ಬೇಕು ಆದರೆ ಲೆಕ್ಕಾಚಾರವೇ ಬದುಕಾಗಿರಬಾರದು ಎಂಬ ಮಾರ್ಮಿಕ ಮಾತನ್ನು ನುಡಿದಿದ್ದರು. ಬರಗಾಲ ಬಂದು ಸೋತ ವರ್ಷ ಸ್ವಲ್ಪ ಚಿಂತಾಕ್ರಾಂತನಾಗಿದ್ದೆ. ಕೇವಲ ಎರಡು ಖಂಡಿ ಅಡಿಕೆಯಲ್ಲಿ ಜೀವನವನ್ನು ದೂಡಿ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿ ಗೆದ್ದಿರುವ ನಾನು ಇಷ್ಟೆಲ್ಲ ಇರುವಾಗ ಚಿಂತೆ ಯಾಕೆ ಎಂದು ಹೇಳಿದ ತಂದೆ ನನ್ನ ನಿಜವಾದ ಗುರುಗಳು ಅಂತಂದರು. ಅವರ ಮಾತಿಗೆ ನಾನಂತೂ ಮೂಕನಾಗಿದ್ದೆ.

ಶ್ರೀ ಹರಿಭಟ್ಟರ ರೋಪ್ ವೇ ಸದ್ದು ಮಾಡಿತ್ತು. ಎತ್ತರದಲ್ಲಿ ಮನೆಯಿದ್ದು ತಗ್ಗಿನ ತೋಟ ಇರುವವರಿಗೆ ಬಹಳ ಉಪಯೋಗಿ ಅಂತಂದರು.

ವಿಶ್ವೇಶ್ವರ ಭಟ್ಟರ ತಜ್ಞ ಮಾತುಗಳು ಸದಾ ಕೊರಗುತ್ತಿರುವ ಕೃಷಿಕರಿಗೆ ಎಚ್ಚರಿಸುವಂತಿತ್ತು. ಕೇವಲ ಅರ್ಧದಿಂದ ಒಂದು ಎಕರೆ ಜಾಗದಲ್ಲಿ ಕೃಷಿ ಮಾಡಿ ಉಪ ಉತ್ಪತ್ತಿಯಾಗಿ ಯಾವುದಾದರೂ ಕೆಲಸ ಮಾಡುತ್ತಿರುವ ರೈತರನ್ನು ನೋಡಿ, ಕೊರಗುವ ಮನಸ್ಥಿತಿಗೆ ತಡೆಯೊಡ್ದುವಂತೆ ಸಲಹೆ ನೀಡಿದರು. ಸರಕಾರದ ಆಧುನಿಕ ಕೃಷಿ ನೀತಿಯು ಇದುವೇ. ಉತ್ಪನ್ನಕ್ಕೆ ಅಧಿಕ ಬೆಲೆ ನೀಡುವುದಕ್ಕಿಂತ ಆದಾಯದ ಕಡೆಗೆ ಗಮನ ನೀಡುವಂತಹದ್ದು. ಕಾರಣ ಉತ್ಪಾದಕರ ಸಂಖ್ಯೆ 25ರಿಂದ 30 ಶೇಕಡ , ಗ್ರಾಹಕರ ಸಂಖ್ಯೆ 70 ಶೇಕಡ. ಹೊಸ ಯೋಚನೆಯನ್ನು ತೋರಿಸಿಕೊಟ್ಟಿದ್ದರು.

30 ಸೆಂಟ್ಸಿ ನಲ್ಲಿ ಏಳು ತಿಂಗಳ ಕಾಲ 300 ಬುಡ ಬಸಳೆ ಕೃಷಿಯಲ್ಲಿ ಪ್ರತಿದಿನ ರೂ 1500 ಆದಾಯ ಬರುವ ಬಗ್ಗೆ ಮಾಹಿತಿ ನೀಡಿದವರು ಸುರೇಶ್ ಗೌಡರು . ಶ್ರಮ ಜೀವನವೇ ಅವರ ಯಶಸ್ಸಿನ ಗುಟ್ಟು. ವಿಶ್ವೇಶ್ವರ ಭಟ್ಟರು ಹೇಳಿದ ಮಾತುಗಳಿಗೆ ಅಪ್ಪಟ ಉದಾಹರಣೆ ಇವರು.

ದೂರದ ಮಾಣಿಲದಿಂದ ಬಂದವರು ಗೋವಿಂದ ಭಟ್ಟರು. 25ರಷ್ಟು ಸುರಂಗಗಳ ಮೂಲಕ ನೀರಾವರಿ. ಬೀಡಿ ಗಾತ್ರದಿಂದ ಹೆಬ್ಬೆಟ್ಟು ಗಾತ್ರದವರೆಗೆ ಪ್ರತಿಯೊಂದರಲ್ಲೂ ನೀರು.ಸಂಗ್ರಹಣ ಟ್ಯಾಂಕಿಯ ಮೂಲಕ ವರ್ಷ ಇಡೀ ಕೃಷಿಗೆ ಬೇಕಾದಷ್ಟು ನೀರು. ಸುರಂಗಗಳ ಬಗ್ಗೆ ಅಧ್ಯಯನ ಮಾಡಿ ಪಿಎಚ್ಡಿ ಗಳಿಸಿಕೊಂಡ ವಿದ್ಯಾರ್ಥಿಯೊಬ್ಬನ ಪ್ರಕಾರ ಯಾವುದೇ ಲೇಬೋರೇಟರಿಗಳಲ್ಲಿ ಪರೀಕ್ಷಿಸಿ ಗೆದ್ದು ಬಂದ ಬಾಟಲ್ ನೀರು ಗಳಿಗಿಂತ ಹೆಚ್ಚು ಶುದ್ಧ ಜಲ ಇವರ ಸುರಂಗಗಳದ್ದಂತೆ. ನಮ್ಮೆಲ್ಲರ ಬಾವಿ ನೀರುಗಳು ಹಾಗೆ ಇದ್ದಿರಬಹುದು. ಆಧುನಿಕ ಕೃಷಿ ಪದ್ಧತಿ ಜಲ ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನು ಸಾಕಷ್ಟು ನೀಡಿರಬಹುದು ಎಂಬುದು ಅವರ ಅಂಬೋಣ.

ಸಾವಯವದಲ್ಲಿಯೇ ಸಣ್ಣ ಜಾಗದಲ್ಲಿ ತರಕಾರಿ ಮಾಡಿ ತಕಷ್ಟು ಉಪ ಆದಾಯ ಗಳಿಸಿದ ಬಗ್ಗೆ ಮಾತಿನ ಮೋಡಿ ಹರಿಸಿದವರು ರಾಮ ಭಟ್ಟರು. ಬೆಳಗ್ಗೆ ಒಂದು ಗಂಟೆ ಸಂಜೆ ಒಂದು ಗಂಟೆ ತರಕಾರಿಗಳ ಕಡೆಗೆ ಗಮನ. ಎಲ್ಲಾ ತರಕಾರಿಗಳಿಗೆ ಬಹು ಬೇಡಿಕೆ ಇಲ್ಲ.ಬೆಂಡೆ, ಅಲಸಂಡೆ, ತೊಂಡೆ ಇವು ಮೂರು ಆದಾಯಕ್ಕೂ ಮಾರುಕಟ್ಟೆಗೂ ಬಹು ಅನುಕೂಲ ಎಂದು ವಿವರಿಸಿದರು. ಇಳಿ ಪ್ರಾಯದಲ್ಲಿಯೂ ತರಕಾರಿಯ ಬಗ್ಗೆ ಇರುವ ಉತ್ಸಾಹ ನಮ್ಮಲ್ಲಿ ಮತ್ತಷ್ಟು ಸ್ಪೂರ್ತಿ ಬರುವಂತೆ ಆಗಿತ್ತು.

ಕರಿಕಳ ಅಶೋಕ ಕುಮಾರ್‌ ಅವರ ಯೋಚನೆ ಯೋಜನೆ ದಕ್ಷಿಣ ಕನ್ನಡದ ಸಾಂಪ್ರದಾಯಕ ಕೃಷಿಕರಿಗೆ ತುಂಬಾ ಕಷ್ಟದ ಮಾದರಿ ಎಂದು ಎನಿಸಿತ್ತು. 400 ಕೆಲಸಗಾರರೊಂದಿಗಿನ ಅವರ ಕೃಷಿ ಪದ್ಧತಿ ಬಹುಶಃ ನಮ್ಮೂರಲ್ಲಿ ಅಪರೂಪವೇ ಇರಬಹುದು. ಎಕ್ರೆಗಟ್ಟಲೆ ಕೃಷಿ, ಟನ್ನುಗಟ್ಟಲೆ ಏಕ ಜಾತಿಯ ಆಹಾರ ಉತ್ಪಾದನೆ ಮಾಡಿದರೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಅನುಕೂಲ. ಆ ಯೋಚನೆಯಲ್ಲಿ 40 ಎಕ್ಕರೆ ಹಲಸಿನ ತೋಟ ಮಾಡಿರುತ್ತೇನೆ. ಗುಣಾವಗುಣಗಳ ಬಗ್ಗೆ ಮುಂದೆ ಹೇಳಬೇಕಷ್ಟೇ ಅಂತಂದರು.

ಅಶೋಕರ ಯೋಚನೆಯನ್ನು ಸಣ್ಣ ರೈತರು ಎಲ್ಲಾ ಸೇರಿ ಒಟ್ಟಾಗಿ ಮಾಡಿದರೆ ಸಾಧಿಸಬಹುದು ಎಂದು ಪೂರಕ ಮಾಹಿತಿಯನ್ನು ಇತ್ತವರು ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮಕಿಶೋರ ಮಂಚಿ ಕಜೆ ಮತ್ತು ಇನ್ಸ್ಟಾ ಬಾಸ್ಕೆಟ್ ಸಂಸ್ಥೆಯನ್ನು ಸ್ಥಾಪಿಸಿದ ಕೃಷ್ಣ ಮೋಹನ್ .

ಹೊತ್ತು ಏರಿದುದರಿಂದಾಗಿ ನರ್ಸರಿ ಕಷ್ಟ ನಷ್ಟಗಳ ಬಗ್ಗೆ ಮಾತನಾಡಿದ ನವನೀತ ನರ್ಸರಿಯ ವೇಣು ಅವರ ಮಾತುಗಳು ಒಳಾಂಗಣಕ್ಕೆ ಇಳಿಯಲೇ ಇಲ್ಲ.

ಒಟ್ಟಿನಲ್ಲಿ ಉತ್ತಮ ಕಾರ್ಯಕ್ರಮ. ವ್ಯವಸ್ಥೆ, ಶಿಸ್ತು, ಸ್ವಾಗತ,ಉಪಚಾರ, ಸಮಯದ ಬಗ್ಗೆ ಪರಿಜ್ಞಾನ ಯಶಸ್ವಿ ಉದ್ಯಮಿಯೊಬ್ಬರ ಯಶಸ್ಸಿನ ಗುಟ್ಟನ್ನು ಸಮಾಜಕ್ಕೆ ತೋರಿಸಿಕೊಟ್ಟಿತು. ಮುಳಿಯ ಸಂಸ್ಥೆಗೆ ಈ ಬಗ್ಗೆ ಅಭಿನಂದನೆಗಳು.

ಪ್ರಾಮಾಣಿಕ ಹಿಮ್ಮಾಹಿತಿ ಕೊಟ್ಟರೆ ಮುಂದೆ ಸಂಸ್ಥೆಯಿಂದ ನಡೆಯುವ ಇನ್ನಷ್ಟು ಕಾರ್ಯಕ್ರಮಗಳಿಗೆ ಪ್ರೇರಣೆಯಾಗಬಹುದು ಎಂಬ ಕಾರಣದಿಂದ ಚಿಕ್ಕದೊಂದು ಸಲಹೆ ಮಾತ್ರ. ಅದ್ದೂರಿ ಭೋಜನಕ್ಕೆ ಹೋದಾಗ ಪಾಕೇತನಗಳ ಸಂಖ್ಯೆ ಅನೇಕ ವಿರುತ್ತವೆ. ಎಲ್ಲದರ ರುಚಿಯನ್ನು ಆಸ್ವಾದಿಸಲು ಕಷ್ಟವಾಗುತ್ತದೆ. ಅದೇ ರೀತಿ ವಿಷಯಗಳ ಸಂಖ್ಯೆ ಜಾಸ್ತಿಯಾದಾಗ ವಿಷಯಗಳನ್ನು ಗ್ರಹಿಸಿ ಮಥಿಸಲು ಸಮಸ್ಯೆಯಾಗುತ್ತದೆ. ಸಮಯಕ್ಕೆ ಮುಗಿಸಲು ಓಡಿಸುವ ಭರದಲ್ಲಿ ಮಾತನಾಡುವವರಿಗೆ ಹೇಳುವ ವಿಷಯವನ್ನು ಹೇಳಲು ಮತ್ತು ಕೇಳುಗರಿಗೆ ವಿಮರ್ಶಿಸಲು ಸ್ವಲ್ಪ ಸಮಸ್ಯೆ ಆಯಿತು ಎಂದು ನನ್ನ ಅನಿಸಿಕೆ.ಇದಕ್ಕೆ ಪೂರಕವಾಗಿ ಮಧ್ಯಾಹ್ನವಿತ್ತ ಸರಳ ಭೋಜನ ಆಸ್ವಾದಿಸಿ ಉಣ್ಣುವವರಿಗೆ ತೃಪ್ತಿದಾಯಕವಾಗಿತ್ತು.

ಕೃಷಿ ಎಂದರೆ ಜೀವ ಜೀವಿಗಳ ಸಂಬಂಧ. ಕೃಷಿಯನ್ನು ಉದ್ಯಮದಂತೆ ಪರಿಗಣಿಸಿದರೆ ಜೀವಿಗಳ ಸಂಬಂಧ ಕಡಿದು ಹೋಗುತ್ತದೆ. ಕೇವಲ ಲಾಭ ನಷ್ಟದ ಲೆಕ್ಕಾಚಾರ ಮಾತ್ರ ಅಲ್ಲಿರುತ್ತದೆ. ಕೃಷಿಯನ್ನು ಕೃಷಿಯಾಗಿಯೇ ನೋಡಿ, ಸಸ್ಯದಿಂದ ಕಳಚಿಕೊಂಡ ಉತ್ಪನ್ನಗಳನ್ನು ಉದ್ಯಮದಂತೆ ಪರಿಗಣಿಸಿದರೆ ಕೃಷಿಕನ ಬದುಕಲ್ಲಿ ಸಂತೋಷ ನೂರ್ಮಡಿಸೀತು ಎಂಬ ನನ್ನ ಅನಿಸಿಕೆಯೊಂದಿಗೆ ವಿರಮಿಸುವೆ.
ಬರಹ :
ಎ.ಪಿ. ಸದಾಶಿವ ಮರಿಕೆ.
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group