ಅಂಬಿಕಾ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ | ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ

September 6, 2023
4:06 PM
ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಭಗವಾನ್ ಶ್ರೀಕೃಷ್ಣನನ್ನು ನಾನಾ ನೆಲೆಯಿಂದ ಗುರುತಿಸುತ್ತಾ ಸಾಗುವುದಕ್ಕೆ ಸಾಧ್ಯವಿದೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದಿಂದ ತೊಡಗಿ ರಾಜತಾಂತ್ರಿಕ ವಿಚಾರಗಳವರೆಗೆ ಅಷ್ಟೂ ವಿಷಯಗಳಲ್ಲಿ ಶ್ರೀಕೃಷ್ಣ ನಮಗೆ ಮಾದರಿಯಾಗಿ ಕಾಣಿಸುತ್ತಾನೆ. ಆತನ ಒಂದೊಂದು ನಡೆಯ ಹಿಂದೆಯೂ ಒಂದೊಂದು ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಆತ ಕೃತಿಯ ಮೂಲಕ ತೋರಿಸಿದ್ದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಸಾಧ್ಯರಾದವರು ಆತನನ್ನು ಹೀಗಳೆಯುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದನ್ನು ಕಾಣಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.

Advertisement

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತತ್ತ್ವಶಾಸ್ತ್ರ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋಪಿಕೆಯರ ವಸ್ತ್ರಗಳನ್ನು ಅಪಹರಿಸಿದವನು ಎಂದು ಶ್ರೀಕೃಷ್ಣನ ವ್ಯಕ್ತಿತ್ವವನ್ನು ಕಿರಿದಾಗಿಸುವ ಪ್ರಯತ್ನದಲ್ಲಿ ತೊಡಗುವ ಮಂದಿಗೆ ಭಾಗವತ, ಪುರಾಣಗಳ ಅಲ್ಪಜ್ಞಾನವೂ ಇಲ್ಲ ಎಂಬುದು ತಿಳಿದುಬಿಡುತ್ತದೆ. ಆತ ವಸ್ತ್ರಾಪಹಾರ ಮಾಡುವ ಹೊತ್ತಿಗೆ ಕೇವಲ ಆರನೆಯ ವಯಸ್ಸಿನಲ್ಲಿದ್ದ ಹಾಗೂ ಗೋಪಿಕೆಯರು ನಾಲ್ಕು ವರ್ಷ ವಯಸ್ಸಿನವರಾಗಿದ್ದರೆಂಬ ವಿಚಾರ ಭಾಗವತದಲ್ಲಿ ಸ್ಪಷ್ಟ ಉಲ್ಲೇಖವಿದೆ. ಹಾಗಾಗಿ ಆ ವಯಸ್ಸಿನಲ್ಲಿ ಕಾಮದೃಷ್ಟಿಯಿಂದ ಬಟ್ಟೆ ಒಯ್ದ ಎನ್ನುವವರು ತಮ್ಮ ದೃಷ್ಟಿಯ ಬಗೆಗೆ ಆಲೋಚಿಸಬೇಕು. ಅಂತೆಯೇ ನಗ್ನ ಸ್ನಾನ ಹಾಗೂ ವಿನಾ ಕಾರಣ ರಾತ್ರಿ ಸ್ನಾನ ಪರಂಪರೆಯಲ್ಲಿ ನಿಷಿದ್ಧವಾಗಿರುವ ನೆಲೆಯಲ್ಲಿ ಶ್ರೀಕೃಷ್ಣ ಸ್ನಾನಕ್ಕೆ ಅಡ್ಡಿಪಡಿಸಿದ್ದ ಎಂಬುದರ ಕಲ್ಪನೆಯೂ ಟೀಕಿಸುವ ಜನಕ್ಕೆ ತಿಳಿದಿಲ್ಲ ಎಂದರು.

ಶ್ರೀಕೃಷ್ಣ ಹದಿನಾರು ಸಾವಿರ ಮಂದಿಯನ್ನು ವಿವಾಹವಾದ ಎಂದು ಮಾತನಾಡುವವರಿಗೆ ಅದರ ಹಿಂದಿರುವ ವಿಚಾರಗಳ ಕಲ್ಪನೆಯಿಲ್ಲ. ನರಕಾಸುರನ ಬಂಧನದಲ್ಲಿದ್ದ ಅಷ್ಟೂ ಮಂದಿಯನ್ನು ಆ ಕಾಲದಲ್ಲಿ ಸಮಾಜ ನೋಡಬಹುದಾಗಿದ್ದ ಕೀಳು ದೃಷ್ಟಿಯಿಂದ ತಪ್ಪಿಸಲು ಆತ ವಿವಾಹವಾಗಿರುವ ವಿಚಾರ ಶ್ರೀಕೃಷ್ಣನ ಬದುಕನ್ನು ಅಧ್ಯಯನದ ನೆಲೆಯಿಂದ ಕಂಡವರಿಗೆ ವೇದ್ಯವಾಗುತ್ತದೆ. ಮೂರ್ಖರು ಮಾತ್ರ ತಮಗನ್ನಿಸಿದ್ದನ್ನು ಹೇಳುತ್ತಾ ತಿರುಗಾಡುತ್ತಾರೆ. ಹದಿನಾರು ಸಾವಿರ ಮಂದಿಯನ್ನು ಕೇವಲ ವಿಷಯಾಸಕ್ತಿಯ ಕಾರಣಕ್ಕಾಗಿ ವಿವಾಹವಾಗಿದ್ದದ್ದಾದರೆ ಒಬ್ಬೊಬ್ಬರ ಜತೆ ಒಂದೊಂದು ದಿನ ಕಳೆಯುವುದಕ್ಕೂ ನಲವತ್ತಮೂರಕ್ಕಿಂತಲೂ ಅಧಿಕ ವರ್ಷಗಳು ಬೇಕಾಗುತ್ತವೆ. ಇದು ವಾಸ್ತವದ ನೆಲೆಯಿಂದ ಸಾಧ್ಯವೇ ಎಂಬುದನ್ನು ಅರ್ಥ ಮಾಡಿಕೊಳ್ಳದಿರುವವರು ತಮ್ಮ ವ್ಯಕ್ತಿತ್ವದ ಬಗೆಗೆ ಅವಲೋಕಿಸಬೇಕು ಎಂದು ನುಡಿದರು.

ರಾಜತಾಂತ್ರಿಕ ನೆಲೆಯಲ್ಲಿ ಶ್ರೀಕೃಷ್ಣನ ಬದುಕು ಸದಾ ವಿಸ್ಮಯಕಾರಿ. ಅರಗಿನ ಅರಮನೆಯಲ್ಲಿ ಪಾಂಡವರು ಸತ್ತರೆಂಬುದನ್ನು ಕೌರವನ ಆಸ್ಥಾನದಲ್ಲಿ ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುವ ಶ್ರೀಕೃಷ್ಣ ತಾನೂ ಅದನ್ನು ನಂಬಿದವನಂತೆ ವ್ಯವಹರಿಸುತ್ತಾನೆ. ಆದರೆ ದ್ರೌಪದೀ ಸ್ವಯಂವರದ ಕಾಲದಲ್ಲಿ ಅರ್ಜುನ ಮಾತ್ರ ಬೇಧಿಸಬಹುದಾಗಿದ್ದ ಮತ್ಸ್ಯಯಂತ್ರವನ್ನು ಪಣವಾಗಿಡುವುದಕ್ಕೆ ಕಾರಣನಾಗುತ್ತಾನೆ. ಹಾಗಾದರೆ ಅರ್ಜುನ ಸಹಿತವಾಗಿ ಪಾಂಡವರು ಬದುಕಿದ್ದಾರೆಂಬುದನ್ನು ಆತ ಅರಿತಿದ್ದ ಹಾಗೂ ಉದ್ದೇಶಪೂರ್ವಕವಾಗಿಯೇ ಕೌರವನ ಆಸ್ಥಾನದಲ್ಲಿ ಅರಿಯದವರಂತೆ ವ್ಯವಹರಿದ್ದ ಎಂಬುದು ತಿಳಿಯುತ್ತದೆ. ಇದು ಆತನ ರಾಜನೀತಿಯ ನಡೆಯಾಗಿತ್ತೆಂಬುದನ್ನು ಗುರುತಿಸಬೇಕು. ಇಂತಹ ಹಲವು ಘಟನಾವಳಿಗಳು ಅಧ್ಯಯನಾಸಕ್ತರಿಗೆ ಲಭ್ಯವಾಗುತ್ತಾ ಸಾಗುತ್ತದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಹಿಂದೂ ಧರ್ಮದ ಬಗೆಗೆ ಹಲವಾರು ಆಕ್ಷೇಪ ಎತ್ತುವ ಅನ್ಯಧರ್ಮಿಯರು ತಮ್ಮ ಧರ್ಮದಲ್ಲಿನ ಹುಳುಕುಗಳನ್ನು ಮರೆಮಾಚುತ್ತಾರೆ. ಆದರೆ ಹಿಂದೂ ಧರ್ಮದ ಪ್ರತಿಯೊಂದು ಆಚರಣೆಗಳಲ್ಲೂ ಸ್ಪಷ್ಟವಾದ ವೈಜ್ಞಾನಿಕ ತಳಹದಿ ಇರುವುದನ್ನು ಗುರುತಿಸಲು ಅಶಕ್ತರಾಗುತ್ತಾರೆ. ಈ ನಡುವೆ ಹಿಂದೂಧರ್ಮದ ಬಗೆಗೆ ಸ್ವತಃ ಹಿಂದೂಗಳೂ ಅಧ್ಯಯನ ನಡೆಸದೆ ಅನ್ಯಧರ್ಮೀಯನೊಬ್ಬ ವ್ಯಂಗ್ಯವಾಡುವಾಗ ಉತ್ತರ ಕೊಡಲಾಗದೆ ನಿಲ್ಲುತ್ತಿರುವುದು ದುರಂತ. ಧರ್ಮ ಜಾಗೃತಿ ಸಹಿತವಾದ ಶಿಕ್ಷಣ ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಹಾಗೂ ಅಂಕಿತಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಮುಖ್ಯಸ್ಥ ಚಂದ್ರಕಾಂತ ಗೋರೆ ವಂದಿಸಿದರು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ತರುವಾಯ ಶ್ರೀಕೃಷ್ಣಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group