ಬದುಕು-ಆದರ್ಶ | ಒಂದೊಂದು ಪೈಸೆಯೂ ಅವರಿಗೆ ಕೋಟಿ ರೂಪಾಯಿಗೆ ಸಮವಾಗಿತ್ತು…! |

September 23, 2021
10:07 PM

ಕಾಸರಗೋಡು ಜಿಲ್ಲೆಯ ಕೂಡ್ಲು ವಿಷ್ಣುಮಂಗಲ ದೇವಳದ ಸನಿಹ ‘ಮಥುರಾ’ದಲ್ಲಿ ವಾಸ್ತವ್ಯವಿರುವ ಕೂಡ್ಲು ಕೃಷ್ಣ ಮಯ್ಯರು (78) ಸೆಪ್ಟೆಂಬರ್ 21ರಂದು ಮುಂಜಾನೆ ವಿಧಿವಶರಾದರು.

Advertisement
Advertisement

ಮಯ್ಯರ ಜನನ 28-4-1943. ಪುರೋಹಿತರಾಗಿ ಜನಾನುರಾಗಿ. ತಾನು ಮಾಡುವ ಕರ್ಮಾಂಗಗಳಲ್ಲಿ ರಾಜಿಯಿಲ್ಲದ ನಿರ್ವಹಣೆ. ಹಾಗಾಗಿ ಅವರನ್ನು ಹೋಮ-ಪೂಜಾದಿಗಳಿಗೆ ಹುಡುಕಿ ಬರುವವರ ಸಂಖ್ಯೆ ಸಣ್ಣದಲ್ಲ. ಈಚೆಗಿನ ಕೆಲವು ವರುಷಗಳಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಹೊಂದಿ ಅಧ್ಯಯನ ಮಾಡುತ್ತಿದ್ದರು.

Advertisement

ಯಾವುದೇ ಆರ್ಥಿಕ ಸುದೃಢತನವು ಇಲ್ಲದೆ ಬೆವರಿನಿಂದ ಕಟ್ಟಿದ ಸ್ವ-ರೂಢಿತ ಬದುಕು. ಒಂದೊಂದು ಪೈಸೆಯೂ ಅವರಿಗೆ ಕೋಟಿ ರೂಪಾಯಿಗೆ ಸಮವಾಗಿತ್ತು. ಎಚ್ಚರದ ಆರ್ಥಿಕ ನಿರ್ವಹಣೆ, ತನುಶ್ರಮವನ್ನು ಮರೆತ ದುಡಿಮೆ, ಸ್ವ-ಹಿತಕ್ಕಾಗಿ ಕೈಚಾಚದ ವ್ಯಕ್ತಿತ್ವ, ಗುರುತರವಾದ ಸಾಮಾಜಿಕ ಕಾಳಜಿಗಳು ಮಯ್ಯರನ್ನು ಸಾಮಾಜಿಕವಾಗಿ ಗುರುತಿಸುವಂತೆ ಮಾಡಿತ್ತು.

ಕೂಡ್ಲುಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಶ್ರೀ ಶೇಷವನ ದೇವಸ್ಥಾನದ ಆಗು ಹೋಗುಗಳಲ್ಲಿ ಯಥಾಸಾಧ್ಯ ಭಾಗವಹಿಸುತ್ತಿದ್ದರು. ಶೇಷವನದ ಕುರಿತು ತುಂಬಾ ಗೌರವ, ಅಭಿಮಾನ ಹೊಂದಿದ್ದರು. ಬದುಕಿನ ಪೂರ್ವಾರ್ಧದಲ್ಲಿ ಕಾಸರಗೋಡು ಜಿಲ್ಲೆಯ ಸಹಕಾರಿ ಸ್ಟೋರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ತನ್ನ ಸೇವೆಯಿಂದ ಗ್ರಾಹಕ ಸ್ವೀಕೃತಿಯನ್ನು ಪಡೆದಿದ್ದರು.

Advertisement

ಪುಸ್ತಕ, ಪತ್ರಿಕೆಗಳನ್ನು ಓದುವುದು ಮಯ್ಯರ ಮೆಚ್ಚಿನ ಹವ್ಯಾಸ. ಅದರಲ್ಲೂ ‘ಹೊಸದಿಗಂತ’ದ ಖಾಯಂ ಓದುಗ. ಪತ್ರಿಕೆಯ ಸಂಪಾದಕೀಯ ಪುಟಗಳ ಲೇಖನಗಳನ್ನು ಓದುತ್ತಿದ್ದರು. ಸಮಾನ ಮನಸ್ಸಿನವರೊಡನೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಜಾಗತಿಕ ಆಗು ಹೋಗುಗಳನ್ನು ಚರ್ಚಿಸುತ್ತಿದ್ದರು. ರಾಜಕೀಯಕ್ಕಿಂತಲೂ ದೇಶ, ಸಂಸ್ಕೃತಿ, ಆಚಾರ, ವಿಚಾರಗಳ ಮಾತುಕತೆಗಳಲ್ಲಿ ತೆರೆದುಕೊಳ್ಳುತ್ತಿದ್ದರು.

ಯಾವುದೇ ವಿಚಾರಗಳನ್ನು ‘ನನಗೆ ಅದರಲ್ಲಿ ಆಸಕ್ತಿಯಿಲ್ಲ’ ಎಂದವರಲ್ಲ. ಯಕ್ಷಗಾನ, ನಾಟಕ.. ಮೊದಲಾದ ಕಲೆಗಳಲ್ಲಿ ಆಸಕ್ತ. ಕ್ರಿಕೆಟ್ ಅವರ ಮೆಚ್ಚಿನ ಕ್ರೀಡೆ. ಕ್ರಿಕೆಟಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಬಲ್ಲವರು. ಅದನ್ನು ಚರ್ಚಿಸಬಲ್ಲರು.

Advertisement

ಆಧುನಿಕವಾದ ಯಾವುದೇ ರಂಗಸಜ್ಜಿಕೆಗಳಿಲ್ಲದ ಸಮಯದಲ್ಲಿ ನಾಟಕ ರಂಗವು ಜನಮಾನಸದಲ್ಲಿ ತನ್ನ ಬೇರನ್ನು ಇಳಿಬಿಟ್ಟಿದ್ದ ಕಾಲದಲ್ಲಿ ಮಯ್ಯರು ಸ್ವಲ್ಪ ಕಾಲ ಕಲಾವಿದರಾಗಿದ್ದರು. “ನಾವು ಮಯ್ಯರ ಅಂಗಳದಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದೆವು. ಅವರದೇ ಆತಿಥ್ಯ. ಅವರೂ ಪಾತ್ರ ಮಾಡುತ್ತಿದ್ದರು. ನಾಟಕ ರಂಗದಲ್ಲಿ ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ಮಯ್ಯರದು ಗುರುತರ ಅಭಿವ್ಯಕ್ತಿ.” ಹೀಗೆಂದವರು ರಂಗ ಕಲಾವಿದ ಚಿದಾನಂದ ಕಾಮತ್ ಕಾಸರಗೋಡು. ಈಗವರು ವಿಧಿವಶ.

ಸಾಂಸಾರಿಕವಾಗಿ ನೆಮ್ಮದಿಯಾಗಿದ್ದು, ನಿಸ್ಪೃಹ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದ ಮಯ್ಯರ ಕೊನೆಯ ಕ್ಷಣ ಮರೆಯಲಾಗದು. ಕೆಲವು ವರುಷಗಳಿಂದ ಬಾಧಿಸುತ್ತಿದ್ದ ಕಫವೇ ಮೊದಲಾದ ವಯೋಸಹಜ ತೊಂದರೆಗಳಿಗೆ ಯೋಗ, ಮುದ್ರೆಗಳಿಂದ ಪರಿಹಾರವನ್ನು ಕಂಡುಕೊಂಡಿದ್ದರು. ಸೆ.21ರಂದು ಬೆಳಿಗ್ಗೆ ಸುಮಾರು ಆರುವರೆ ಗಂಟೆ ಇರಬಹುದು. ದೈನಂದಿನ ಅನುಷ್ಠಾನದ ವಿಚಾರಗಳನ್ನು ಮಗನೊಂದಿಗೆ ಚರ್ಚಿಸಿ ಯೋಗ ಮಾಡಲು ತನ್ನ ಕೋಣೆಗೆ ತೆರಳಿದ್ದರು. ಯೋಗದ ಕೊನೆಗೆ ‘ಶವಾಸನ’ದಲ್ಲಿರುವಾಗಲೇ ಇಹಲೋಕ ತ್ಯಜಿಸಿದರು.

Advertisement

ಮೂರು ವರುಷದ ಹಿಂದೆ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಕೂಡ್ಲು’ ಇವರು ಕೃಷ್ಣ ಮಯ್ಯರನ್ನು ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ’ ನೀಡಿ ಪುರಸ್ಕರಿಸಿದ್ದರು.

ಮಡದಿ ಗಂಗಮ್ಮ. ಐವರು ಮಕ್ಕಳು. ಮಗಳಂದಿರಾದ ಗೀತಾ, ವೀಣಾ, ಪ್ರಶಾಂತಿ, ಪ್ರತಿಮಾ ಹಾಗೂ ಮಗ ರಾಮಪ್ರಸಾದ ಮಯ್ಯ. ಅಳಿಯಂದಿರು : ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕ ರಘುರಾಮ ಕಾರಂತ, ಪುತ್ತೂರಿನ ನಾರಾಯಣ ಕಾರಂತ, ಅರ್ಚಕರಾದ ಮಂಗಳಾದೇವಿಯ ಸುಬ್ರಹ್ಮಣ್ಯ ಐತಾಳ ಮತ್ತು ತ್ರಿಶೂರಿನ ಸುಧೀರ್ ನಾವುಡ. ಮೊಮ್ಮಕ್ಕಳು : ಭಾರ್ಗವ, ಶಿವಾಂಗಿ, ಸುಕನ್ಯಾ, ವೈಶಾಲಿ, ಅಶ್ವಿನ್

Advertisement

ಕಳೆದ ವರುಷವಷ್ಟೇ ತನ್ನ ಪುತ್ರನ ವಿವಾಹವು ಶ್ರೀಲಕ್ಷ್ಮೀಯೊಂದಿಗೆ ಜರುಗಿತ್ತು. ಆ ಸಮಯದಲ್ಲಿ “ನನ್ನ ಬದುಕಿನ ಬಹುದೊಡ್ಡ ಜವಾಬ್ದಾರಿ ಮುಗಿಯಿತು.” ಎಂದಿದ್ದ ಕೃಷ್ಣ ಮಯ್ಯರು ತನ್ನೆಲ್ಲಾ ಜವಾಬ್ದಾರಿಯನ್ನು ಮುಗಿಸಿ ಕಾಣದ ಲೋಕಕ್ಕೆ ತೆರಳಿದರು. ಬದುಕಿನಲ್ಲಿ ಬದ್ಧತೆಯನ್ನು ರೂಢಿಸಿಕೊಂಡಿದ್ದ ಹಿರಿಯ ಚೇತನ ಮಯ್ಯರಿಗೆ ಅಕ್ಷರ ನಮನವಿದು.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror