2022-23ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿ, ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಪಾಸುಗಳ ವಿತರಣೆ ಮಾಡಲಾಗುವುದು ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಣೆ ತಿಳಿಸಿದೆ.
ಈ ಯೋಜನೆಯಡಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಸಹಾ ಅವರು ಇಚ್ಛಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ ಗರಿಷ್ಟ 45 ಕಿ.ಮೀ ನಷ್ಟು ಯಾವುದೇ ಮಾರ್ಗದಲ್ಲಿಯಾದರೂ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ವಿತರಿಸಲಾಗುತ್ತದೆ.
ಈ ಪಾಸುಗಳ ವಿತರಣೆ ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯವರು ನಿರ್ವಹಿಸಲಿದ್ದಾರೆ. ಪಾಸು ನವೀಕರಣದ ಸಮಯದಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿ ನವೀಕರಣವಾಗಿರುವುದನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಿ ಪಾಸನ್ನು ಮುಂದಿನ ಅವಧಿಗೆ ಸೇವಾಸಿಂಧು ಇಲಾಖೆಯವರು ನವೀಕರಣ ಮಾಡಲಿದ್ದಾರೆ.