ಅತ್ಯಾಚಾರ, ಲೈಂಗಿಕ ಕಿರುಕುಳದ ಬಗ್ಗೆ ಖಡಕ್ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ರಾಜ್ಯ ಸರ್ಕಾರದ ಬಳಿ ಈಗ ನ್ಯಾಯ ಎಲ್ಲಿದೆ ಎಂದು ದೌರ್ಜನ್ಯಕ್ಕೆ ಒಳಗಾದ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿನಿ ಕೇಳುವಂತಾಗಿದೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಅದೇ ಹೊತ್ತಿಗೆ ಬಯಲಾದ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜು ವಿದ್ಯಾರ್ಥಿನಿ ಪ್ರಕರಣದಲ್ಲಿ ನ್ಯಾಯ ಲಭ್ಯವಾಗಿಲ್ಲ. ಹೈಕೋರ್ಟ್ ಆದೇಶವಾದರೂ ಆರೋಪಿ ಕಾಲೇಜು ಉಪನ್ಯಾಸಕನ ಬಂಧನವಾಗಿಲ್ಲ. ಊರಲ್ಲೆಲ್ಲಾ ಓಡಾಡಿದರೂ ಪೊಲೀಸರ ಕಣ್ಣಿಗೆ ಏಕೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಈಗ ಪ್ರಶ್ನಿಸುವಂತಾಗಿದೆ.ಇಲಾಖೆಗಳು ತಿಳಿದೂ ಕಣ್ಣುಮುಚ್ಚಿ ಕುಳಿತಿವೆ ಎನ್ನುವ ಆರೋಪ ಬಲವಾಗಿದೆ.
ಕಳೆದ ಸುಮಾರು 6 ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಅದೇ ಕಾಲೇಜಿನ ಉಪನ್ಯಾಸಕರೊರ್ವರ ವಿರುದ್ಧ ದೂರು ದಾಖಲಾಗಿತ್ತು. ಅದಾದ ಬಳಿಕ ಆರೋಪಿ ಉಪನ್ಯಾಸಕನಿಗೆ ಎರಡೇ ದಿನದಲ್ಲಿ ಜಾಮೀನಾಗಿತ್ತು. ಪ್ರಕರಣದ ಬಳಿಕ ಕಾಲೇಜು ಮುಂದೆ ಹೋರಾಟ, ಪ್ರತಿಭಟನಾ ಸಭೆಯೂ ನಡೆದಿತ್ತು. ಉಪನ್ಯಾಸಕನ ವಜಾ ಮಾಡಬೇಕು ಎಂದು ಒತ್ತಾಯ ಮಾಡಲಾಗಿತ್ತು, ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಈ ನಡುವೆ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಉಪನ್ಯಾಸಕನ ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಶಿಕ್ಷಕನ ಜಾಮೀನು ಅರ್ಜಿ ರದ್ದು ಮಾಡಿದ್ದರು. ಹೀಗಾಗಿ ಜ.25 ರಂದು ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಖುದ್ದಾಗಿ ಮಾಹಿತಿಯನ್ನೂ ನೀಡಲಾಗಿತ್ತು. ಆದರೆ ಇಂದಿನವರೆಗೆ ಆರೋಪಿ ಉಪನ್ಯಾಸಕನ ಬಂಧನವಾಗಿಲ್ಲ. ಇದೇಕೆ ಎಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಣ್ಣ ಸಣ್ಣ ಪ್ರಕರಣದಲ್ಲೂ ಕರ್ನಾಟಕ ಪೊಲೀಸ್ ಖಡಕ್ ಆಗಿ ವರ್ತಿಸುತ್ತದೆ ಹಾಗೂ ಬಲಿಷ್ಟವಾಗಿದೆ. ಲೈಂಗಿಕ ಕಿರುಕುಳ ಅದರಲ್ಲೂ ವಿದ್ಯಾರ್ಥಿನಿಯೊಬ್ಬಳಿಗೆ ಗುರುಸ್ಥಾನದಲ್ಲಿ ಇರುವ ಉಪನ್ಯಾಸಕನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಏಕೆ ಕರ್ನಾಟಕ ಪೊಲೀಸ್ ದುರ್ಬಲವಾಗಿದೆ ಎನ್ನುವುದು ಪ್ರಶ್ನೆಯಾಗಿದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಎಷ್ಟು ಬಾರಿ ಠಾಣೆಗೆ ಅಲೆಯಬಹುದು ?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಕಾಲೇಜಿನಲ್ಲಿ ನಡೆದ ಈ ಪ್ರಕರಣದಲ್ಲಿ ಆಡಳಿತ ಮಂಡಳಿಯೂ ಖಡಕ್ ನಿರ್ಧಾರ ಪ್ರಕಟಿಸಿ ಉಪನ್ಯಾಸಕನನ್ನು ವಜಾ ಮಾಡಿದೆ. ಆ ಬಳಿಕ ಯಾವುದೇ ಮುತುವರ್ಜಿ ವಹಿಸಿಲ್ಲ.ಇಲಾಖೆಗೆ ವಹಿಸಿದೆ. ಮಹಿಳಾ ಹೋರಾಟಗಾರರು, ಸಾರ್ವಜನಿಕ ಹೋರಾಟಗಾರರೂ ಈ ಪ್ರಕರಣದಲ್ಲಿ ಆಡಳಿತ ವ್ಯವಸ್ಥೆ, ಇಲಾಖೆಗಳ ನಿರ್ಲಕ್ಷ್ಯದ ಕಾರಣದಿಂದ ಮೌನ ವಹಿಸಿರುವುದು ಕಂಡುಬಂದಿದೆ. ಸಚಿವರ ತವರು ಕ್ಷೇತ್ರದಲ್ಲಿ ನಡೆದ ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಇದ್ದರೂ ಆರೋಪಿ ಬಂಧನವಾಗದಿರುವ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.( ಅಂದು ನಡೆದ ಪ್ರತಿಭಟನಾ ಸಭೆಯ ವಿಡಿಯೋ ಇಲ್ಲಿದೆ….)