ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಚಿವರು ಒಂದೇ ದಿನ ಎರಡು ಕಡೆ ಆಶ್ಲೇಷ ಬಲಿ ಪೂಜೆ ಮಾಡಿರುವುದು ಈಗ ಭಕ್ತರ ನಡುವೆ ಚರ್ಚೆಗೆ ಕಾರಣವಾಗಿದೆ. ಒಂದೇ ದಿನ, ಒಂದು ಕ್ಷೇತ್ರದ ಎರಡು ಕಡೆ ಒಂದೇ ಸೇವೆ ಮಾಡಿರುವುದರ ವಿಶೇಷತೆ ಏನು ಹಾಗೂ ಈ ಬಗ್ಗೆ ಇರುವ ಧಾರ್ಮಿಕ ಜಿಜ್ಞಾಸೆಗಳು ಚರ್ಚೆಯ ವಿಷಯ.
ಧಾರ್ಮಿಕ ಆಚರಣೆ ಈ ದೇಶದ ಪ್ರತಿಯೊಬ್ಬನ ಖಾಸಗಿ ವಿಷಯ. ಯಾರು ಎಲ್ಲಿ ಬೇಕಾದರೂ ಪೂಜೆ, ಸೇವೆ ಮಾಡಬಹುದು. ಯಾವ ಧರ್ಮವೂ ಇದಕ್ಕೆ ಹೊರತಲ್ಲ. ಹೇಗೆ ಬೇಕಾದರೂ ದೇವತಾ ಆರಾಧನೆ ಮಾಡಲಿ ಅದು ಖಾಸಗಿ ವಿಷಯ. ಆದರೆ ಸಚಿವರೊಬ್ಬರು ಸಾರ್ವಜನಿಕವಾಗಿ ಮಾಡುವ ಎಲ್ಲಾ ಕಾರ್ಯಗಳು ಸಮಾಜದಲ್ಲಿ ಗಮನ ಸೆಳೆಯುತ್ತದೆ. ಈಗ ಅದೇ ಮಾದರಿಯಲ್ಲಿ ಗಮನ ಸೆಳೆದ ವಿಷಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಮಾಡಿಸಿರುವ ಆಶ್ಲೇಷ ಬಲಿ ಪೂಜೆ.
ಈ ರಾಜ್ಯದ ಸಚಿವರು ಯಾವುದೇ ಕ್ಷೇತ್ರಕ್ಕೆ ಆಗಮಿಸುವ ವೇಳೆ, ಖಾಸಗಿ ಕಾರ್ಯಕ್ರಮವಾದರೂ ಸರ್ಕಾರವೇ ಎಲ್ಲಾ ವ್ಯವಸ್ಥೆ ಮಾಡುತ್ತದೆ, ಪೊಲೀಸ್ ಭದ್ರತೆಯೂ ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯವೂ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ, ಈ ರಾಜ್ಯದ ನಂಬರ್ ವನ್ ದೇವಸ್ಥಾನ. ಹೀಗಾಗಿ ಎಲ್ಲಾ ವ್ಯವಸ್ಥೆಗೂ ದೇವಸ್ಥಾನದ ವತಿಯಿಂದಲೇ ಮಾಡಲಾಗುತ್ತದೆ. ಆದರೆ ಸಚಿವರು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಬೆಳಗ್ಗೆ ಆಶ್ಲೇಷ ಬಲಿ ಪೂಜೆ ನಡೆಸಿ ಆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಸಿದರು. ಒಂದೇ ದಿನ ಎರಡು ಕಡೆ ಒಂದೇ ಸೇವೆ ಮಾಡಿಸಿರುವುದು ಈಗ ಭಕ್ತಾದಿಗಳ ನಡುವೆ ಇರುವ ಚರ್ಚೆಯ ವಿಷಯ. ಇದೇ ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಸಾಕಷ್ಟು ಚರ್ಚೆಗಳು, ವಾದ-ವಿವಾದಗಳು ನಡೆದಿತ್ತು. ಇದೀಗ ಸಚಿವರೇ ಸೇವೆಗಳನ್ನು ಎರಡು ಕಡೆ ಮಾಡಿಸಿರುವುದು ಭಕ್ತಾದಿಗಳಲ್ಲಿ ಚರ್ಚೆಗೆ ಕಾರಣವಾದ ವಿಷಯ.
ಇಲ್ಲಿ ಸರ್ಪಸಂಸ್ಕಾರ ಸೇವೆಗಳು ಕೂಡಾ ಇದೇ ಮಾದರಿಯಲ್ಲಿ ನಡೆದ ಬಗ್ಗೆ ಭಕ್ತರು ಹೇಳುತ್ತಾರೆ. ಇತರ ಭಕ್ತಾದಿಗಳು ಇಲ್ಲಿ ಸೇವೆಯನ್ನು ಎರಡು ಕಡೆ ಮಾಡಿಸಿದ್ದೂ ಇದೆ. ಇದೇ ಕಾರಣದಿಂದ ಈ ಹಿಂದೆ ಪ್ರಕರಣಗಳು ದಾಖಲಾಗಿತ್ತು. ಇದು ಧಾರ್ಮಿಕ ಸೂಕ್ಷ್ಮ ವಿಷಯವಾದ್ದರಿಂದ ಚರ್ಚೆಯಾಗದೆ , ವಿದ್ವಾಂಸರೂ ಈ ಬಗ್ಗೆ ಮೌನ ವಹಿಸಿ ಪ್ರಕರಣಗಳು ಅಲ್ಲಿಗೇ ತಿಳಿಯಾಗಿತ್ತು.
ಧಾರ್ಮಿಕ ಸಂಗತಿಗಳು ಯಾವತ್ತೂ ಖಾಸಗಿ, ಅದು ಪ್ರಶ್ನಾತೀತ, ಅದು ನಂಬಿಕೆಯ ಪ್ರಶ್ನೆ. ಇಲ್ಲಿ ಸಚಿವರು ಅಥವಾ ಪ್ರಮುಖರು ಎರಡು ಕಡೆಗಳಲ್ಲಿ ಒಂದೇ ಸೇವೆಗಳನ್ನು ಮಾಡುವಾಗ ಸಾಮಾನ್ಯ ಭಕ್ತರಲ್ಲಿ ಅದು ಚರ್ಚೆ ಹಾಗೂ ಚಿಂತನೆಗೆ ಕಾರಣವಾಗುತ್ತದೆ. ನಂಬಿಕೆಗಳ ಮೇಲೆಯೇ ಚರ್ಚೆಯಾಗುತ್ತದೆ. ಹೀಗಾಗಿ ಸಾಮಾನ್ಯ ಭಕ್ತನಿಗೆ ಈ ಮಾದರಿಯಲ್ಲಿ ಒಂದೇ ಕ್ಷೇತ್ರದಲ್ಲಿ ಎರಡೆರಡು ಕಡೆ ಒಂದೇ ಸೇವೆ ಮಾಡಿಸಲು ಸಾಧ್ಯವೇ ? ಎನ್ನುವುದು ಧಾರ್ಮಿಕ ನೆಲೆಗಟ್ಟಿನ ಚರ್ಚೆ.
ಇಲ್ಲಿ ಗೋವು ರಾಜಕೀಯ ವಿಷಯವಾಗುತ್ತದೆ, ಧರ್ಮ ರಾಜಕೀಯ ವಿಷಯವಾಗುತ್ತದೆ. ಅತಿ ಸೂಕ್ಷ್ಮ ಸಂಗತಿಯಾಗಿರುವ ಧರ್ಮವು ರಾಜಕೀಯವಾಗಿ ಚರ್ಚೆಯಾಗುವಾಗ, ರಾಜಕೀಯವಾಗಿ ಮುನ್ನೆಲೆಗೆ ಬರುವಾಗ, ಇಂತಹ ಸೂಕ್ಷ್ಮ ಸಂಗತಿಗಳೂ ಏಕೆ ರಾಜಕೀಯವಾಗಿ ಚರ್ಚೆಯಾಗುವುದಿಲ್ಲ ಎನ್ನುವುದು ಪ್ರಶ್ನೆ.
Open Talk | ಕುಕ್ಕೆ ಸುಬ್ರಹ್ಮಣ್ಯದ ಎರಡು ಕಡೆ ಆಶ್ಲೇಷ ಬಲಿ ಪೂಜೆ ನಡೆಸಿದ ಸಚಿವರು…! | https://t.co/lTziXpqho7
— theruralmirror (@ruralmirror) March 8, 2023
Advertisement