ಕುಕ್ಕೆ ಸುಬ್ರಹ್ಮಣ್ಯದ ಅತ್ಯಂತ ಮಹತ್ವದ ಜಾತ್ರೆ…! ರಾಜ್ಯದ ಅತೀ ದೊಡ್ಡ ಗೋವಿನ ಜಾತ್ರೆ…!. ಈಗ ಇತಿಹಾಸದ ಪುಟ ಸೇರಿದೆ. ಒಂದು ಕಾಲದಲ್ಲಿ ಹೀಗಿತ್ತು… ಎನ್ನುವ ಮಾತಿಗೆ ಬಂದಿದೆ. ಇದು ಕುಲ್ಕುಂದ ಜಾನುವಾರು ಜಾತ್ರೆ. ಈಗ ಕೇವಲ ಸಾಂಕೇತಿಕವಾಗಿ ನಡೆಯುತ್ತಿದೆ. ಗೋವಿನ ಜಾತ್ರೆಗೆ ಜನರೂ ಸೀಮಿತವಾಗಿದ್ದಾರೆ…!. ಕೃಷಿ ಸಂಸ್ಕೃತಿಯೊಂದು ಸದ್ದಿಲ್ಲದೆ ಮರೆಯಾಗುತ್ತಿದೆ ಈಗ.
ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆಯುತ್ತಿದ್ದ ಜಾನುವಾರು ಜಾತ್ರೆ ಈಗ ಸಾಂಕೇತಿಕವಾಗಿ ಕುಲ್ಕುಂದದ ದೇವಸ್ಥಾನದಲ್ಲಿ ನಡೆಯುತ್ತದೆ. ಈ ಬಾರಿಯೂ ಗೋಪೂಜೆಯ ಮೂಲಕ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಆಚರಣೆ ನಡೆಯಿತು. ಕುಲ್ಕುಂದದ ಈ ಜಾನುವಾರು ಜಾತ್ರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸ ಇದೆ. ಕುಮಾರ ಸುಬ್ರಹ್ಮಣ್ಯನು ತಾರಕಾಸುರನನ್ನು ವಧಿಸಿದ ನಂತರ ಆತನ ರಕ್ತ ಬಿದ್ದ ನೆಲದ ಶುದ್ಧತೆಗಾಗಿ ಆ ನೆಲದಲ್ಲಿ ಗೋವುಗಳ ಸೆಗಣಿ ಶುದ್ಧವಾಗುವುದು ಎಂಬ ಪರಿಹಾರದ ಕಾರಣದಿಂದ ಗೋವುಗಳನ್ನು ಕಟ್ಟಲು ಆರಂಭಿಸಿದರು. ನಂತರ ಅದೇ ದೊಡ್ಡ ಜಾತ್ರೆಯೂ ಆಗಿತ್ತು.
ಕಾರ್ತಿಕ ಮಾಸದ ಹುಣ್ಣಿಮೆಯ ನಂತರ ಊರಿನಲ್ಲಿ ಕೃಷಿ ಚಟುವಟಿಕೆ , ಕುಕ್ಕೆಯಲ್ಲಿ ಜಾತ್ರೆಯ ಸಡಗರ ಆರಂಭವಾಗುತ್ತದೆ. ರೈತರೂ ಗೋವುಗಳನ್ನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಕೆಲಸಗಳು ಆರಂಭವಾಗುತ್ತದೆ. ಹೀಗಾಗಿ ಜಾನುವಾರು ಜಾತ್ರೆಯ ವೇಳೆ ಮೂರು ರಾಜ್ಯಗಳಿಂದ ಜನರು ಆಗಮಿಸಿ ಕುಲ್ಕುಂದದಲ್ಲಿ ಒಂದಾಗಿ ಜಾನುವಾರುಗಳ ವಿನಿಮಯ ಮಾಡುತ್ತಿದ್ದರು. ಆದರೆ ಕಾಲಕ್ರಮೇಣ, ಕೇರಳದ ಕಡೆಗೆ ಗೋವುಗಳನ್ನು ಸಾಗಿಸಿ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತದೆ ಎಂದು ವಿರೋಧಗಳು ಬರಲಾರಂಭಿಸಿದರು. ಹೀಗಾಗಿ ಜಾತ್ರೆಗೆ ಬರುವ ಜಾನುವಾರುಗಳ ಸಂಖ್ಯೆ ಕಡಿಮೆಯಾಯಿತು.
ತಾರಕಾಸುರನ ರಕ್ತ ಬಿದ್ದಿದ್ದ ಕುಲ್ಕುಂದದಲ್ಲಿ ಕೊನೆ ಕೊನೆಗೆ ಗೋವುಗಳ ರಕ್ತ ಬೀಳಲು ಆರಂಭವಾಯಿತು. ಕುಕ್ಕೆಯ ಜಾತ್ರೆಗೆ ಮುನ್ನಡಿಯಾಗುತ್ತಿದ್ದ ಜಾನುವಾರು ಜಾತ್ರೆ ಕಸಾಯಿಖಾನೆಯ ಕಚ್ಚಾ ವಸ್ತುಗಳ ಜಾತ್ರೆಯೋ ಎಂಬಂತೆ ಭಾಸವಾಯಿತು. ಇದಕ್ಕೆ ಪರಿಹಾರವೇ ಇಲ್ಲದ ಕಾರಣ, ಈ ಜಾತ್ರೆಯೇ ನಿಲ್ಲುವುದು ಸೂಕ್ತ ಎನಿಸಿತು ಅಂದು.
ಆ ಬಳಿಕ 2012 ರಲ್ಲಿ ಕುಲ್ಕುಂದ ಜಾನುವಾರು ಜಾತ್ರೆಯ ಬಗ್ಗೆ ವಿವಾದ ಜೋರಾಗಿ ಆರಂಭವಾಯಿತು.ಅಂದು ಬಹುದೊಡ್ಡ ಚರ್ಚೆ, ವಿವಾದದ ನಂತರ ಮೂರು ದಿನಗಳಿಗೆ ಈ ಜಾತ್ರೆ ಸೀಮಿತವಾಯಿತು. ಆ ಬಳಿಕದ ಕೆಲವು ವರ್ಷಗಳ ನಂತರ ಕಾಲುಬಾಯಿ ರೋಗದ ಕಾರಣದಿಂದ ಮೂರು ದಿನಗಳ ಜಾತ್ರೆಗೂ ತಡೆಯಾಯಿತು. ಕೊನೆಗೆ ಮೂರು ದಿನಗಳ ಜಾತ್ರೆ ಗೋಪೂಜೆಗೆ ಸೀಮಿತವಾಯಿತು. ಅಂದೆಲ್ಲಾ ತೀರಾ ಅದ್ದೂರಿಯಾಗಿದ್ದ ಗೋಪೂಜೆ, ಗೋಸೇವೆ, ಗೋತಳಿ ಪ್ರದರ್ಶನ , ಸಭೆ ಇತ್ಯಾದಿಗಳು ಈಗ ಗೋಪೂಜೆಗೆ ಸೀಮಿತವಾಗುವಲ್ಲಿಗೆ ಬಂದಿದೆ. ಅದರಲ್ಲೂ ಈಗ ಗೋಪೂಜೆಗೂ ಪ್ರಮುಖರಿಗೆ ಬಿಡುವಿಲ್ಲದ ಕಾರಣದಿಂದ ಸಾಂಕೇತಿಕ ಗೋಪೂಜೆಗೆ ಕುಲ್ಕುಂದ ಜಾನುವಾರು ಜಾತ್ರೆ ಬಂದು ನಿಂತಿದೆ.
ಒಂದು ಐತಿಹಾಸಿಕವಾದ ಘಟನೆಯೊಂದು ಇತಿಹಾಸ ಪುಟ ಸೇರಿಹೋಗಿದೆ ಈಗ. ಯಾರಿಗೂ ಕಾಣದ, ಯಾರಿಗೂ ಕಿವಿಗೂ ಕೇಳದ, ಇಂದಿನ ಅಪ್ಡೇಟ್ ಕಾಲದಲ್ಲಿ ಯಾರಿಗೂ ಲಾಭ ಇಲ್ಲದ ಸಂಸ್ಕೃತಿಯೊಂದು ಸದ್ದಿಲ್ಲದೆ ಕಾಲವಾಗಿ ಹೋಗಿದೆ. ಒಂದು ಸಂಸ್ಕೃತಿ ನಾಶವಾಗುವುದರ ಜೊತೆಗೇ ಅವುಗಳಿಗೆ ಹೊಂದಿಕೊಂಡಿದ್ದ ಗೋವುಗಳೂ ಮಾಯವಾದವು. ಗೋವುಗಳೂ ಮಾಯವಾದಂತೆಯೇ ಸಮಸ್ಯೆಗಳೂ ಕಾಣಿಸಿಕೊಳ್ಳಲು ಆರಂಭವಾಯಿತು. ಸಂಸ್ಕೃತಿಯೊಂದನ್ನು ಉಳಿಸಬೇಕಾದ ನಾಡಲ್ಲಿ, ಪರಿಹಾರವೇ ಇಲ್ಲದಂತೆ, ಪರಿಹಾರವೇ ಆಗದಂತೆ ಕುಲ್ಕುಂದದ ಜಾನುವಾರು ಜಾತ್ರೆ ಕಾಲಕ್ಕೆ ಸೇರಿಕೊಂಡಿತು. ಸಂಸ್ಕೃತಿಯ ನಾಶದ ಬಗ್ಗೆ ಮಾತನಾಡುವ ಯಾರೊಬ್ಬರೂ ಈಗ ಚಿಂತಿಸುತ್ತಿಲ್ಲ. ಈಗ ಇಂತಹದೊಂದು ಇರುವುದೇ, ಇದ್ದುದೇ ಅನೇಕರಿಗೆ ಮರೆತೇ ಹೋಗಿದೆ…!. ಗೋಪಾಲಕರು ಸದ್ದಿಲ್ಲದೆ ತಮ್ಮ ಕಾಯಕವನ್ನು ನಡೆಸುತ್ತಿದ್ದಾರೆ. ಗೋವಿನ ಸೆಗಣಿ, ಗೋಮೂತ್ರ ಬೀಳಬೇಕಾದ ಭೂಮಿಯಲ್ಲಿ ಈಗ ಕಟ್ಟಡಗಳು ಎದ್ದು ನಗುತ್ತಿವೆ…!
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…