“ಬಾನೊಳಿರುವುದೇ ಪಕ್ಷಿ ಪಾರ್ವ ದಾರಿಯ ನಕ್ಷೆ
ಮೀನು ನೀರೊಳು ನುಸುಳೆ ಪಥ ನಿಯಮವಿಹುದೇ
ಏನೋ ಜೀವನವನೆಳೆಯುದು
ಅದೇನೊ ನೂಕುವುದದನು
ನೀನೊಂದು ಗಾಳಿಪಟ ಮಂಕುತಿಮ್ಮ”Advertisement
ಡಿವಿಜಿಯವರು ಮೇಲಿನ ಕಗ್ಗದಲ್ಲಿ ಅಂದಂತೆಯೇ ಪ್ರಯಾಗದ ಸುತ್ತಣ ನೂರು ಕಿಮೀ ವ್ಯಾಪ್ತಿಯಲ್ಲಿ ಎಲ್ಲರೂ ಗಾಳಿ ಪಟಗಳೇ….ಯಾವ ರಸ್ತೆಯಲ್ಲಿ ಸಾಗಬೇಕೋ ತಿಳಿಯಲಾರದು, ಎಲ್ಲಾ ರಸ್ತೆಗಳೂ ವಾಹನಗಳಿಂದ ತುಂಬಿ ಗೂಗಲಣ್ಣನ ಕಣ್ಣು ಕೆಂಪು ಕೆಂಪು…. ಕೆಲವು ಜಾಗಗಳಲ್ಲಿ ಟ್ರಾಫಿಕ್ ಬ್ಲಾಕ್, ಕಾರಣ ನಾವೇ, ಅಂದರೆ ನಾ ಮುಂದೆ ನಾ ಮುಂದೆ ಎಂಬ ಧಾವಂತ , ಸಿಕ್ಕ ಸಿಕ್ಕಲ್ಲಿ ಮುಂದೊತ್ತುವ ಧಾವಂತ, ಆಗ ಸಹಜವಾಗಿಯೇ ಮುಂದೆ ಸಾಗುವವರು ಮತ್ತು ಹಿಂದೆ ಬರುವವರ ನಿಬಿಡತೆಯಿಂದ ರಸ್ತೆ ಬಂದ್…ಇಂತಹ ಬಂದ್ ಗಳನ್ನು ದಾಟಿ ದಾಟಿ ಸಾಗುತ್ತಾ ಇದ್ದಾಗ ಮೌವು ಎನ್ನುವಲ್ಲಿ, ನಮಗೇನು ಯಮುನೆಯ ಉತ್ತರ ಭಾಗದಲ್ಲಿ ತಿಹಾಲ್ ಪುರ , ಕೌಶಾಂಬಿಯಾಗಿ ಸಾಗಿ ಪ್ರಯಾಗದ ಮಧ್ಯ ಭೂಮಿಕೆ ಪ್ರವೇಶಿಸಬೇಕು ಎನ್ನುವುದು ಇತ್ತೋ, ಅದು ತಪ್ಪಾಗಿ ಹೋಯಿತು, ಮೌವು ವೃತ್ತದಲ್ಲಿ ಇದ್ದ ಪೋಲೀಸಪ್ಪನೂ ನಮ್ಮನ್ನು ದಿಕ್ಕುತಪ್ಪಿಸಿಬಿಟ್ಟ…
ಅಂದರೆ ನಾವು ಕಲ್ಚಿಹಾ, ಶಂಕರ್ ಘರ್,ಆಗಿ ಇರಾದತ್ ಗಂಜ್ ಮೂಲಕ ಪ್ರಯಾಗಕ್ಕೆ ಸಾಗುವ ಯಮುನೆಯ ದಕ್ಷಿಣ ತಟದಲ್ಲೇ ಚಲಿಸುವಂತಾಯಿತು. ಅಂತೂ ಮಂದಗತಿಯಲ್ಲಿ ಸಾಗುತ್ತಾ ಸಾಗುತ್ತಾ ಪ್ರಯಾಗದ ಹೊರವರ್ತುಲ ಇರಾದತ್ ಗಂಜ್ ಗೆ ತಲುಪಿದಾಗ, ಗಂಟೆ ಹನ್ನೊಂದು ಆಗಿತ್ತು, ಸೂರ್ಯ ನೆತ್ತಿಯಮೇಲಿದ್ದು ಕುಂಭಮೇಳಕ್ಕೆ ಬಂದವರನ್ನು ದಾಖಲಿಸಿಕೊಳ್ಳುತಿದ್ದ. ರಸ್ತೆ ಸಂಪೂರ್ಣ ಬಂದ್ ಆಗಿತ್ತು. ನಮಗೆ ಬೆಳಗಿನ ಉಪಾಹಾರ ಆಗಿಲ್ಲದಿದ್ದರೂ ನಮ್ಮ ಆಹಾರ ವಿಭಾಗ ಮಜಬೂತಾಗಿತ್ತು ಹಾಗೂ ಶಕ್ತಿಯೂಟ, ಅಂದರೆ ಊರಿನಿಂದಲೇ ಕಟ್ಟಿ ತಂದ ಒಣ ದ್ರಾಕ್ಷಿ, ಖರ್ಜೂರ , ಬಾಳೆಹಣ್ಣು, ಬಿಸ್ಕತ್ತು, ನೀರು ನಮಗೆ ಚೈತನ್ಯ ತುಂಬುತಿತ್ತು. ಸಂಗಮ ಪ್ರದೇಶಕ್ಕೆ ಇನ್ನೂ ಇಪ್ಪತೈದು ಕಿಮೀ ಇದ್ದರೂ ರಸ್ತೆಯ ಬಂದ್ ಮುಗಿಯುವ ಯಾವುದೇ ಲಕ್ಷಣಗಳು ಗೋಚರಿಸುತಿರಲಿಲ್ಲ, ನನ್ನ ಬಾವ ಶಂಕರರಿಗೆ ಮನದಲ್ಲೊಂದು ತುಮುಲ….ನಾವು ಆ ಭಾಗದ ರಸ್ತೆಯಲ್ಲಿ ಸಾಗಬೇಕಿತ್ತು, ಅಲ್ಲಿ ಈ ರಸ್ತೆ ತಡೆ ಇರಲಾರದು ಮತ್ತು ನಾವು ಯಮುನೆ ಮತ್ತು ಗಂಗೆಯರ ಸಂಗಮದ ಮಧ್ಯೆ ಪ್ರವೇಶಿಸಬಹುದಿತ್ತು ಎನ್ನುವ ಆಶಯ, ಆದರೆ ಗಂಗಾಮಾತೆಯ ತೀರ್ಮಾನವೇ ಅಂತಿರಬಹುದು, ನಾವು ಯಮುನೆಯ ತಟದಲ್ಲೇ ಸಾಗಬೇಕೆಂದು.
ಹಾ….ನಾವು ನೋಡ ನೊಡುತಿದ್ದಂತೆಯೇ ಎಷ್ಟೋ ಬೈಕುಗಳು ಯಾತ್ರಿಕರನ್ನು ಹೊತ್ತೊತ್ತು ಸಾಗಿ ಸಾಗಿ ಗುರಿ ಮುಟ್ಟುತಿದ್ದವು, ನಾವೂ ನಮ್ಮ ವಾಹನವನ್ನು ಅಲ್ಲೇ ಬದಿಗೊತ್ತಿ ಬೈಕುಗಳನ್ನು ಹಿಡಿಯೋಣವೇ ಎಂದು ಆಲೋಚನೆ ಮಾಡುತ್ತಿರಬೇಕಾದರೆ ನನ್ನ ಪಡಾರು ಬಾವ , ಸ್ವಲ್ಪ ಕಾಯೋಣ,ನಮ್ಮ ಕಾರೇ ಮುಂದೆ ಹೋದೀತು ಎಂಬ ಧನಾತ್ಮಕ ಆಶಯ ವ್ಯಕ್ತಪಡಿಸಿದ್ದರು ಹಾಗೂ ಕಾರು ನಿಧಾನವಾಗಿ ಚಲಿಸಲಾರಂಭಿಸಿತು….ಅಂತೂ ಸುಮಾರು ಒಂದೂ ವರೆ ಗಂಟೆಯ ಸಮಯಕ್ಕೆ ನಾವು ಮೊದಲ ಪಾರ್ಕಿಂಗ್ ಪ್ರದೇಶದಲ್ಲಿದ್ದೆವು. ಅಲ್ಲೇ ಪಾರ್ಕಿಂಗ್ ಮಾಡೋಣವೆಂದು ಅಲೋಚಿಸುತ್ತಿರುವಾಗ ಬೈಕ್ ಸಾಗಾಟಗಾರನೊಬ್ಬ…. ಮುಂದುವರಿಯಿರಿ…. ಇಲ್ಲೇ ನಿಂತರೆ ಹದಿನೈದು ಕಿಮೀ ನಡೆಯಬೇಕಾದೀತು, ಕಾರುಗಳು ಯಮುನೆಯ ತಟದುದ್ದಕ್ಕೂ ಸಾಗುತ್ತದೆ…. ಮುಂದುವರಿಯಿರಿ ಎಂದಂತೆಯೇ ನಾವು ಸಾಗಿಯೇ ಸಾಗಿದೆವು…. ಅನತಿದೂರದಲ್ಲಿ ಯಮುನೆ ಗಂಗೆಯನ್ನು ಸಂಗಮಿಸಲೋಸುಗ ಓಡೋಡಿ ಹರಿಯುತಿದ್ದಳು…. ನಾವು ಚಲಿಸುವ ಕಚ್ಚಾ ರಸ್ತೆ ನಮ್ಮನ್ನು ಹಳ್ಳಿ ಕೊಳ್ಳ, ಗದ್ದೆ ಬದುಗಳು, ಓಣಿ ಬೀದಿಗಳಲ್ಲಿ, ಕೃಷಿ ಬದುಕ ಜನರ ಮನೆಯಂಗಳದಲ್ಲಿ,ದನಕರುಗಳು ಮೇಯುವ ಹಸಿರ ಅಂಚುಗಳಲ್ಲಿ, ಧೂಳು ಕೇರಿಗಳಲ್ಲಿ ಸಾಗಿ ಸಾಗಿ ಬಂದಾಗ ಯಮುನೆ ನಮ್ಮನ್ನು ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿದ್ದಳು.
ಯಮುನೆಯ ತಟದಲ್ಲೇ ಸಾಗಿದ ನಾವು ಕೊನೆಗೂ ಗಮ್ಯ ಸ್ಥಾನಕ್ಕೆ ನಾಲ್ಕೈದು ಕಿಮೀ ದೂರದಲ್ಲಿದ್ದೆವು.ಗಂಟೆ ಸಂಜೆ ಮೂರಾಗಿತ್ತು. ಕಾರನ್ನು ಒಂದು ಸ್ಥಳದಲ್ಲಿಟ್ಟು , ನಾವು ಬರುವ ತನಕ ಚಂದ ನಿದ್ದೆ ಮಾಡು ಎಂದು ನಮಗೆ ಬೇಕಾದ ಕನಿಷ್ಠ ಬಟ್ಟೆಗಳನ್ನು ,ಕುಡಿಯುವ ನೀರನ್ನು ಹೆಗಲಿಗೇರಿಸಿ ಮುನ್ನಡೆದಾಗ , ಬೈಕುಗಳನ್ನೇರಿ ಸಾಗುತಿದ್ದ ಜನರನ್ನು ಕಂಡೂ ನಾವೂ ಬೈಕಲ್ಲಿ ಹೋಗುವುದೆಂದು ನಿರ್ಧಾರ ಮಾಡಿದೆವು…. ಮೂರು ಬೈಕುಗಳನ್ನು ಸಾವಿರದ ನೂರು ರುಪಾಯಿಗೆ ನಿಗದಿಮಾಡಿ ಬೈಕನ್ನೇರಿದೆವು…. ಬೈಕ್ ಸವಾರರು ಟರಟರನೆ ಧಢಭಢನೆ, ಯಮುನೆಯ ತಟದ ಏರಿಳಿತಗಳಲ್ಲಿ ನಮ್ಮನ್ನು ಸಾಗಹಾಕುತಿದ್ದರು….ತಟದಲ್ಲಿ ಕಿಮೀಠರ್ ಗಟ್ಟಲೆ ತಾತ್ಕಾಲಿಕ ರಸ್ತೆಗಳನ್ನು ಕಬ್ಬಿಣದ ತಗಡುಗಳನ್ನು ಹೊದಿಸಿ ನಿರ್ಮಿಸಿದ್ದರು, ಅಲ್ಲಲ್ಲಿ ಊರುಗಳಿಂದ ಯಮುನೆಯನ್ನು ಕೂಡುವ ತೊರೆಗಳಿಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದರು…. ರಸ್ತೆಯ ಇಕ್ಕೆಲಗಳಲ್ಲೂ ಸ್ನಾನ ಗೃಹಗಳು, ಶೌಚಾಲಯಗಳಿದ್ದವು….. ಅಂತೂ ಸುಮಾರು ಮೂರು ಕಿಮೀ ಸಾಗಿದ ಬೈಕ್ ಯಾನ ಪೋಲಿಸ್ ಚೌಕಿಯ ಸಮೀಪ ಕೊನೆಗೊಂಡಿತು, ಹಾಗೂ ನಾವು ಅವರ ಬಾಡಿಗೆ ಪಾವತಿಸಿ ಎಲ್ಲರೊಂದಿಗೆ ಪಾದಾಚಾರಿಗಳಾದೆವು. ಎಲ್ಲಿ ನೋಡಿದರಲ್ಲಿ ನಡೆನಡೆದು ಗಮ್ಯದತ್ತ ಸಾಗುವ ಭಕ್ತ ಜನ….ದಾರಿಯ ಇಕ್ಕೆಲಗಳಲ್ಲೂ ಉತ್ತರ ಪ್ರದೇಶ ಪ್ರವಾಸೀ ಇಲಾಖೆಯ ಸ್ಟಾಲುಗಳು , ಸರಕಾರೀ ಇಲಾಖೆಗಳ ಸಹಾಯವಾಣಿ, ತಂಡಗಳು, ವಿವಿಧ ಸ್ಟಾಲ್ಗಳು,ವಿವಿಧ ಸೇವಾ ಸಂಸ್ಥೆಗಳು, ಆರೋಗ್ಯ ರಕ್ಷಕ ಸಂಸ್ಥೆಗಳು,ಹೂವು, ಹಣ್ಣು ಹಂಪಲು, ತಿಂಡಿತಿನಸು ವ್ಯಾಪಾರಗಳು, ಸ್ತಭ್ದರಾಗಿ ಕುಳಿತ ಯೋಗಿ ಮಹಾಂತರು…. ಆಹಾ….ಭರತ ಬೂಮಿಯೇ…. ದೂರದಲ್ಲಿ ಎಲ್ಲರನ್ನೂ ಕೈಬೀಸಿ ಜನಮಾನಸದ ಕೊಳೆಯ ಕಳೆಯಲು ತನ್ನತ್ತ ಕರೆಯುತಿದ್ದ ಗಂಗಾಯಮುನಾ ಸರಸ್ವತಿ ಮಹಾ ಮಾತೆಯರ ಸಂಗಮ ಪ್ರದೇಶ ಕಂಡು ಬರುತಿತ್ತು…
(ಮುಂದುವರಿಯುವುದು : ನಾಳೆ…ಸಂಗಮದಲ್ಲಿ ಮಹಾ ಕುಂಭಸ್ನಾನದ ಯೋಗ )