ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |

March 11, 2025
7:00 AM
ಕುಂಭಮೇಳದ ಪಯಣದ ಅನುಭವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರು ಕಳೆದ 8 ದಿನಗಳಿಂದ ಬರೆದಿದ್ದಾರೆ. ಇಡೀ ಪಯಣದ ಕೊನೆಗೆ ಧಾರ್ಮಿಕ ಅನುಭವದ ಜೊತೆಗೆ ಸಾಮಾಜಿಕವಾಗಿ ಬದಲಾಗಬೇಕಾದ ವಿಷಯಗಳ ಬಗ್ಗೆ ಅವರು ಹೀಗೆ ಉಲ್ಲೇಖಿಸಿದ್ದಾರೆ, "ಜನಮಾನಸದಲ್ಲಿ ಭೌತಿಕ ಅಭಿವೃದ್ಧಿಯೊಂದಿಗೆ ಭೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ. ಪ್ರಧಾನಿ ಮೋದಿಯವರ ಆಶಯದ ಶುಚಿತ್ವ ಇನ್ನೂ ದೂರವಿದೆ. ಹಳ್ಳಿಗಳಲ್ಲಿ ಇನ್ನೂ ನಾವು ಊಹಿಸದಂತಹ ಬಡತನವಿದೆ..."

ಎಲ್ಲರಿಗಮೀಗ ನಮೋ
ಬಂಧುಗಳೆ ಭಾಗಿಗಳೆ
ಉಲ್ಲಾಸವಿತ್ತವರೆ,
ಮನವ ತೊಳೆದವರೆ
ಟೊಳ್ಳು ಜಗ ಸಾಕು ಬಾಳ್
ಎನಿಸಿ ಗುರುವಾದವರೆ
ಕೊಳ್ಳಿರೀ ನಮನವನು ಮಂಕುತಿಮ್ಮ…………ಮುಂದೆ ಓದಿ……..

ಎಂಬ ಕವಿ ವಾಣಿಯಂತೆ ಈ‌ ನಮ್ಮ ಜೀವಿತಾವಧಿಯ ಅತ್ಯಮೂಲ್ಯ ಪಯಣಕ್ಕೆ ಕಾರಣರಾದ ಬಂಧುಗಳಿಗೆ, ಹೋಗಿ ಅನುಭವ ಗಾಥೆಯನ್ನು ಹಂಚಿ ಉಲ್ಲಾಸವಿತ್ತವರಿಗೆ, ಅಲ್ಲಿ ಹೇಗೋ ಏನೋ ಎಂಬ ಗೊಂದಲಗಳ ಕಳೆದವರಿಗೆ ಬದುಕಿನ ನಿತ್ಯ ಜಂಜಾಟಗಳು ಟೊಳ್ಳೆಂದೂ ಈ ಜಗತ್ತು ಚರವೆಂದೂ ,ಅದರೊಂದಿಗೆ ಸಾಗಿದಾಗ ಬದುಕು ನಿಜವೆಂದೂ ಸಾರಿ ಸಾರಿ ತಿಳಿಹೇಳಿ ಗುರುವಾದವರಿಗೂ ಹಾಗೂ ವಿಶೇಷವಾಗಿ ಪಯಣದುದ್ದಕ್ಕೂ ನಮ್ಮ ಜೊತೆಯಾದ ನಮ್ಮ ಬಾವ ಪಡಾರು ಜಯಶ್ರೀ ತಿರುಮಲೇಶ್ವರ ಭಟ್ ದಂಪತಿಗಳಿಗೆ, ನಮ್ಮ ಯಾನದ ಸಮರ್ಥ ನಾವಿಕರಾದ ಬಾವ ಶಂಕರರಿಗೆ ಪ್ರೀತಿಯ ನಮನಗಳು ಅಭಿವಂದನೆಗಳು.

ಕುಂಭಮೇಳಕ್ಕೆ ಹೋಗಬೇಕು ಎಂದು ಮನ ತುಡಿಯುತಿತ್ತು, ಹಾರೈಸುತಿತ್ತು. ಎಲ್ಲಾ ತಲೆಮಾರುಗಳಿಗೆ ,ಬೇಕೆಂದರೂ ದೊರೆಯದ ಅಪರೂಪದ ರಾಷ್ಟ್ರೀಯ ಹಬ್ಬವಾಗಿತ್ತು. ಅರುವತ್ತು ಕೋಟಿಗೂ ಮಿಕ್ಕಿ ಜನರನ್ನು ಆಕರ್ಷಿಸಿದ ಆ ಶಕ್ತಿಯೆಡೆಗೆ ಹೋಗಲೇ ಬೇಕಿತ್ತು. ಎಲ್ಲವೂ ಪೂರ್ವ ನಿರ್ಣಯ, ಅವನಿಚ್ಚೆ. ನನ್ನ ಬಾವ ಡಾಕ್ಟರ್ ಸದಾಶಿವ ರಾವ್ ಮತ್ತು ತಂಗಿ ಆಶಾ ಜನವರಿ ತಿಂಗಳ ಆದಿಯಲ್ಲೇ ನಮ್ಮನ್ನು ಕುಂಭಮೇಳಕ್ಕೆ ಹೋಗೊಣವೆಂದು ಹುರಿದುಂಬಿಸಿದ್ದರು, ಆದರೆ, ಅಲ್ಲಿ ಇರಬಹುದಾದ ಚಳಿಗೆ ಹೆದರಿ ನಾವು ಬರಲಾರೆವೆಂದು ನಿರಾಕರಿಸಿದ್ದೆವು. ಅಂತೂ ಕುಂಭಮೇಳ ಪ್ರಾರಂಭವಾಗಿಯೇ ಬಿಟ್ಟಿತ್ತು, ಜನ ಸಿಹಿಯೆಡೆಗೆ ಆಕರ್ಷಿತವಾಗುವ ಇರುವೆಗಳಂತೆ ಸಾಗುತಿದ್ದರು, ನಮಗೂ ಆಸೆಯಿತ್ತು. ಜನವರಿ ಇಪ್ಪತ್ತಾರರಂದು ನಮ್ಮ ಮಾವ ಬೈಲು ಕುರಿಯ ರಾಜನವರು (ವಿಶ್ವೇಶ್ವರ) ತಮ್ಮ ಮನೆ ಮಂದಿ ಜೊತೆಯಾಗಿ ಸರಾಗವಾಗಿ ಕುಂಭಮೇಳಕ್ಕೆ ಹೋಗಿ ಬಂದುದ ನೋಡಿ ನಮಗೂ ಹೋಗಬಹುದು, ಹೋಗಬೇಕು ಎಂಬ ಹಂಬಲ ಬಲಗೊಂಡಿತು. ಮನೆಯಲ್ಲಿ ಪ್ರಸ್ತಾಪಿಸಿದಾಗ ಸಿಕ್ಕ ಇಂಬು, ಮಗಳು ಅನೂಷಾಳು, ಅತ್ತೆ ಮಾವನವರನ್ನೂ (ಪಡಾರು ತಿರುಮಲೇಶ್ವರ ಭಟ್ ದಂಪತಿಗಳು) ಕೇಳಿ, ನೀವು ಹೇಳಿದರೆ ಹೊರಟಾರು ಎಂದಂತೆ ಬಾವನವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಸರಿ ಹೊರಡೋಣ ಎಂದರು. ಮನೆಮನದ ಒಡತಿಯೂ ನನ್ನನ್ನು ಅನುಸರಿಸುವಲ್ಲಿ ಸೈ ಎಂದಾಗ, ಈ ವಿಷಯವನ್ನು ನನ್ನ ಸೋದರ ಮಾವನವರಲ್ಲಿ (ದರ್ಭೆ ವೆಂಕಟರಮಣ ಭಟ್ಟರಲ್ಲಿ) ತಿಳಿಸಿದಾಗ ಅವರೂ ಕುಂಭಮೇಳಕ್ಕೆ ಹೋಗುವವರೇ ಎಂದೂ ಅವರು ಹೋಗಿ ಬಂದ ಕೂಡಲೇ ನಮ್ಮ ಜೊತೆ ಬಾವ ಶಂಕರರನ್ನೂ ಜೊತೆಯಾಗಿಸುವುದಾಗಿಯೂ ತಿಳಿಸಿದರು. ಬಾವನಲ್ಲಿ ಮಾತನಾಡಿದಾಗ ತನಗೂ ಬರುವ ಆಸೆಯಿದೆ, ಜೊತೆಯಾಗುವೆನೆಂದರು. ಈ ಮಧ್ಯೆ ಕುಂಭಮೇಳಕ್ಕೆ ಹೊರಟ ನಮ್ಮ ಮಾವನವರು ಪ್ರಯಾಗದಿಂದ ನೂರಿಪ್ಪತ್ತು ಕಿಮೀ ದೂರದಲ್ಲಿ ಸುಮಾರು ಹದಿನೈದು ಗಂಟೆ ಬ್ಲಾಕ್ ಆದ ವಿಚಾರ ತಿಳಿದು ನಮಗೆಲ್ಲ ಗೊಂದಲ ಮೂಡಿತು. ಅಂತೂ ನಿಶ್ಚಯಿಸಿದಂತೆ ಹೊರಡುವುದೇ ಎಂಬ ನಿರ್ಣಯಕ್ಕೆ ಬಂದೇ ಬಿಟ್ಟ ನಾವು ಯಾವುದೇ ತೊಂದರೆ ಆಗದೆ, ಕೇವಲ ನಾಲ್ಕು ಗಂಟೆಗಳ ಬ್ಲಾಕ್ ಗೆ ಸಿಲುಕಿ ಬಹಳ ಚೆನ್ನಾಗಿ ಕುಂಭಮೇಳಕ್ಕೆ ಹೋಗಿ ಬಂದುದು ಈಗ ಮಧುರ ನೆನಪುಗಳು ಮಾತ್ರ.

ಹೌದು…, ಕುಂಭಮೇಳದತ್ತಣ ಪಯಣ ಕೇವಲ ಪಯಣವಲ್ಲ, ನನ್ನ (ನಮ್ಮ) ದೇಶದತ್ತ ಒಂದು ಇಣುಕುನೋಟವಾಗಿತ್ತು. ಜನಮಾನಸದಲ್ಲಿ ಭೌತಿಕ ಅಭಿವೃದ್ಧಿಯೊಂದಿಗೆ ಭೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ. ಪ್ರಧಾನಿ ಮೋದಿಯವರ ಆಶಯದ ಶುಚಿತ್ವ ಇನ್ನೂ ದೂರವಿದೆ. ಹಳ್ಳಿಗಳಲ್ಲಿ ಇನ್ನೂ ನಾವು ಊಹಿಸದಂತಹ ಬಡತನವಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳೇ ಜನರ ಜೀವನಾಧಾರ. ಬಾವ ತಿರುಮಲೇಶ್ವರ ಭಟ್ಟರು ಹೇಳುವಂತೆ ಸುಮಾರು ಮೂವತ್ತು ವರ್ಷಗಳ ಹಿಂದೆ ಅವರು ಉತ್ತರ ಭಾರತದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಕಂಡಿದ್ದ ಭಾರತಕ್ಕೂ ಈಗಿನ ಭಾರತಕ್ಕೂ ತುಂಬಾ ಬದಲಾವಣೆ ಆಗಿದೆಯೆನ್ನುತ್ತಾರೆ. ನೀರಾವರಿ ಯೋಜನೆಗಳ ಮೂಲಕ ಲಕ್ಷಾಂತರ ಹೆಕ್ಟೇರ್ ಒಣ ಭೂಮಿ ಇಂದು ಕೃಷಿ ಜಮೀನುಗಳಾಗಿ ದೇಶಕ್ಕೆ ಆಹಾರ ನೀಡುತ್ತಿದೆ. ಹೆದ್ದಾರಿ ರಸ್ತೆಗಳಂತೂ ಊಹಿಸಲಾರದಷ್ಟು ಅಭಿವೃದ್ಧಿ ಆಗಿದೆ. ಆದರೆ ಹಳ್ಳಿಗಳ ಒಳಗೆ ಇನ್ನೂ ಕಚ್ಚಾ ರಸ್ತೆಗಳೇ ಇದೆ, ವಿದ್ಯೆ, ವಿದ್ಯುತ್ ಇನ್ನೂ ದೂರದ ಬೆಟ್ಟವಾಗೇ ಉಳಿದಿದೆ. ಮೂಲಭೂತ ಸೌಕರ್ಯಗಳು ನಮ್ಮೂರಿಗೆ ಹೋಲಿಸಿದರೆ ಇನ್ನೂ ಪ್ರಪಾತದಲ್ಲೇ ಇದೆ. ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ,ಶುಚಿತ್ವ, ನಿಯಮ, ಆಚರಣೆಗಳು ಇನ್ನೂ ಚೌಕಟ್ಟಿನೊಳಗೆ ಬರಬೇಕಷ್ಟೆ. ಆದರೆ , ನಾವು ಪಯಣಿಸಿದ ಪುಣ್ಯ ಕ್ಷೇತ್ರಗಳಲ್ಲಿ ಪೋಲೀಸ್ ಹಸ್ತಕ್ಷೇಪ ಅಥವಾ ಇರುವಿಕೆ ಕಂಡುಬರಲೇ ಇಲ್ಲ, ಜನರಿಗೆ ಇನ್ನೂ ತಮ್ಮ ಶ್ರಧ್ದಾ ಕೇಂದ್ರಗಳ ಬಗ್ಗೆ ಭಯ ಭಕ್ತಿ ಇದ್ದೇ ಇದೆ, ಆದರೆ ಈ ಶ್ರಧ್ದೆಯ ಆಸ್ತೆಯನ್ನು ನೇರದಾರಿಗೆ ತರುವ ಲಕ್ಷ್ಮಣ ರೇಖೆಯ ಗುರುತನ್ನು ಮಾಡಬೇಕಿದೆ.

ಹೊರರಾಜ್ಯಗಳ ವಿಚಾರ ಬಿಡೋಣ , ನಮ್ಮದೇ ರಾಜ್ಯ ಕರ್ನಾಟಕದ ಉತ್ತರ ಭಾಗದ ಜನಜೀವನ ‌ಅತೀ ಕಠಿಣವಾಗಿದೆ, ನೀರಾವರಿ ಇಲ್ಲ, ಕೃಷಿ ಇಲ್ಲ, ವಿದ್ಯೆ , ರಸ್ತೆಗಳಿಲ್ಲ, ತಿಳಿಹೇಳುವ ಸಮರ್ಥ ನಾಯಕತ್ವವಿಲ್ಲ. ಕಿತ್ತೂರು, ಸಂಕೇಶ್ವರ, ಝಳಕಿ ಮುಂತಾದ ನಾವು ಕಂಡ ಊರುಗಳಲ್ಲಿ , ಹಿಂಡು ಹಿಂಡಾದ , ಒತ್ತೊತ್ತಾದ ಮನೆಗಳು, ಮನೆಗಳೆಂದರೆ ಮಣ್ಣ ಹೆಂಟೆಯ ಗೋಡೆ ತಡಿಕೆಗಳು, ರಸ್ತೆಗೆ ಅಭಿಮುಖವಾದ ಮನೆಯ ಎದುರಲ್ಲೇ ಅಡುಗೆ, ಶೌಚ, ಜಾನುವಾರುಗಳು, ಅವುಗಳ ಉಚ್ಚಿಷ್ಟ, ಅವುಗಳೆಲ್ಲವೂ ಚರಂಡಿಯಂತೆ ರಸ್ತೆಯ ಮದ್ಯದಲ್ಲೇ ಹರಿದು ಹೋಗುವ ದುರವಸ್ಥೆ, ಅವುಗಳ ಮದ್ಯೆಯೇ ಓಡಾಡುವ ಜನರು. ಶಾಲೆಯ ಮುಖನೋಡದ ಮಕ್ಕಳು ಅಬ್ಬಬ್ಬಾ…. ಇದನ್ನೆಲ್ಲ ಎಲ್ಲಿಂದ ಸರಿ ಪಡಿಸಬಹುದು ಎಂದರೆ ಸ್ವಯಂ ಜಾಗೃತಿ ಒಂದೇ ಉತ್ತರ.

ದೂರದ ಪಯಣದ ಸಂಧರ್ಭದಲ್ಲಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಜನವಿದ್ದಾಗ ಪಯಣ ಸುಲಭ. ನಮ್ಮ ಜತೆಯಲ್ಲಿ ದಾರಿಯುದ್ದಕ್ಕೂ ಸೇವಿಸಲು ನೀರು, ಹಣ್ಣುಗಳು, ಒಣ ದ್ರಾಕ್ಷಿ, ಖರ್ಜೂರಗಳಿದ್ದರೆ ಆಯಾಸದ ಅನುಭವವಾಗಲಾರದು. ಪ್ರತೀದಿನದ ರಾತ್ರಿ ಕನಿಷ್ಟ ಐದಾರು ಗಂಟೆಗಳ ವಿಶ್ರಾಂತಿ ತೆಗೆದುಕೊಳ್ಳಲೇಬೇಕು.

ಅಂತೂ ನಮ್ಮ, ಕುಂಭಮೇಳದತ್ತಣ ಪಯಣ ಸುಖಕರ, ಸಂತಸದಾಯಕವಾಗಿತ್ತು, ಇದಕ್ಕೆ ಪೂರಕರಾದ ಎಲ್ಲರಿಗೂ ನಮೋ ನಮಃ.

ಬರಹ :
ಟಿ ಆರ್‌ ಸುರೇಶ್ವಂದ್ರ , ಕಲ್ಮಡ್ಕ

 

ಕುಂಭಮೇಳ | ಸಮಯ ಬಾರದೆ ಒಂದಿನಿತೂ ಮುಂದೆ ಸಾಗದು…

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಕುಂಭಮೇಳ | ಸಮಯ ಬಾರದೆ ಒಂದಿನಿತೂ ಮುಂದೆ ಸಾಗದು…
March 10, 2025
7:24 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಕುಂಭಸ್ನಾನ ಮುಗಿಸಿ ಹೊರಟಾಗ….
March 9, 2025
8:31 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಜಯಜಯ ಗಂಗೇ….. ಜಯಜಯ ಗಂಗೇ
March 8, 2025
6:03 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಯಮುನೆಯ ತಟದಲ್ಲಿ ಸಾಗಿದಾಗ ಖುಷಿಯಾಯಿತು…!
March 7, 2025
11:26 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror