ಕುಂಭಸ್ನಾನ ಮತ್ತು ವಿಜ್ಞಾನ

February 27, 2025
9:25 PM
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್ ಸೆಲ್‍ಹೈಮ್ ಎಂಬ ವಿದೇಶೀ ಚಿಂತಕನೊಬ್ಬ ಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಜಾಲತಾಣದಲ್ಲಿ ಧ್ವನಿ ಮುದ್ರಣ ಮಾಡಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾನೆ.

“ಗಂಗಾ ಸ್ನಾನಂ ಮತ್ತು ತುಂಗಾಪಾನಂ”, “ಹರಿಯುವ ನೀರಿಗೆ ದೋಷವಿಲ್ಲ, “ಸಂಗಮ ಸ್ನಾನವು ಪುಣ್ಯದಾಯಕ” ಮುಂತಾದ ಮಾತುಗಳನ್ನು ಸಾಂಸ್ಕೃತಿಕವಾಗಿ ಅರಗಿಸಿಕೊಂಡವರು ನಾವು. ಸಮುದ್ರ ಸ್ನಾನವು ಆರೋಗ್ಯಕರವಾದದ್ದು ಎಂಬುದನ್ನೂ ತಿಳಿದಿದ್ದೇವೆ.………ಮುಂದೆ ಓದಿ……..

Advertisement
Advertisement

ಸ್ನಾನವು ಚಿತ್ತಶುದ್ಧಿ ಮತ್ತು ದೇಹಶುದ್ಧಿ ಎರಡನ್ನೂ ಮಾಡುತ್ತದೆ. ಯಾವುದೇ ನದಿಯ ತಣ್ಣೀರಿನಲ್ಲಿ ಒಮ್ಮೆ ಒದ್ದೆಯಾಗಿ ಚಳಿ ಬಿಟ್ಟರೆ ಮತ್ತೆ ನೀರಿನಿಂದ ಏಳುವ ಮನಸ್ಸು ಬರುವುದಿಲ್ಲ. ಸ್ನಾನದ ಕೊನೆಗೆ ದೇಹ ಉಲ್ಲಾಸಗೊಂಡು ಮನಸ್ಸೂ ಆಹ್ಲಾದಗೊಳ್ಳುತ್ತದೆ. ಇದಕ್ಕೆ ಪುಣ್ಯದ ಭಾವನೆಯೂ ಸೇರಿದರೆ ಅಂತಹ ಸ್ನಾನದ ಅವಕಾಶವನ್ನು ಯಾರು ಬಿಡುತ್ತಾರೆ? ಹಾಗಾಗಿಯೇ ದೇಶ ವಿದೇಶಗಳಿಂದ ಈ ಸಲದ ಪ್ರಯಾಗ್‍ರಾಜ್‍ನ ಕುಂಭ ಮೇಳದಲ್ಲಿ  ಅಂದರೆ ಶಿವರಾತ್ರಿಯಂದು (26-2-2025) ಕೊನೆಗೊಂಡಲ್ಲಿಗೆ ಸುಮಾರು 64 ಕೋಟಿ ಭಕ್ತರು ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆಂದು ವರದಿಯಾಗಿದೆ. ಆ ಸಂಖ್ಯೆಯಲ್ಲಿ ನನ್ನದೂ ಒಂದು ಸೇರಿದೆ. ಅರ್ಥಾತ್ ನನಗೂ ಗಂಗಾಸ್ನಾನದ ಉಲ್ಲಾಸ ಲಭ್ಯವಾಗಿದೆ.

ಉತ್ತರ ಭಾರತದಲ್ಲಿ ಜರಗುವ ಕುಂಭಮೇಳಕ್ಕೆ ಪರ್ಯಾಯವಾಗಿ ದಕ್ಷಿಣ ಭಾರತದಲ್ಲಿಯೂ ಆರಂಭವಾಗಿದೆ. ಕರ್ನಾಟಕದ ಟಿ. ನರಸೀಪುರದಲ್ಲಿ ಕೆಲವು ಮಠಾಧೀಶರ ಪ್ರೇರಣೆಯಿಂದ ಮೂರು ದಿನಗಳ ಕುಂಭಮೇಳವು 1989ರಲ್ಲಿಯಷ್ಟೇ ಪ್ರಾರಂಭವಾಯಿತು. ಅದೇನೂ ಪೌರಾಣಿಕ ಕಾಲವಲ್ಲ, ಆಧುನಿಕ ವಿಜ್ಞಾನದ ಪ್ರಭಾವ ವಿಸ್ತಾರವಾಗಿದ್ದ ಕಾಲ. ಆದರೆ ಅದು ಪ್ರಸಿದ್ಧವೂ ಆಗಿ ಅನುಚಾನವಾಗಿ ನಡೆಯುವ ಪರಂಪರೆ ಮುಂದುವರಿದಿದೆ. ಇಲ್ಲಿ ಕಾವೇರಿ, ಕಪಿಲಾ ಮತ್ತು ಅದೃಶ್ಯ ಸ್ಪಟಿಕ ಸರೋವರಗಳ ಸಂಗಮವೆಂಬುದಾಗಿ ಪ್ರಚುರ ಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಗಂಗಾ ಯಮುನಾ ಮತ್ತು ಅದೃಶ್ಯ ಸರಸ್ವತಿ ನದಿಗಳ ಸಂಗಮ ಇರುವುದಾದರೆ ನಮ್ಮ ದಕ್ಷಿಣ ಭಾರತದಲ್ಲಿಯೂ ತ್ರಿವೇಣಿ ಸಂಗಮವಿದೆಯೆಂಬ ಪ್ರತಿಪಾದನೆ ದಕ್ಷಿಣದ ಕುಂಭಮೇಳಕ್ಕೆ ಕಾರಣವಾಗಿದೆ. ಆದರೆ ಇದೆಲ್ಲ ಮೂಢನಂಬಿಕೆ, ತುಂಬಾ ಮಂದಿ ಒಮ್ಮೆಲೇ ಸ್ನಾನ ಮಾಡಿದಾಗ ನೀರು ಕಲ್ಮಶಗೊಳ್ಳುತ್ತದೆ, ರೋಗಗಳು ಹಬ್ಬುವ ತಾಣವಾಗುತ್ತದೆ ಇತ್ಯಾದಿ ಯಾವ ತಕರಾರುಗಳು ಇಲ್ಲದೆ ಟಿ. ನರಸೀಪುರದ ಸಂಗಮದಲ್ಲಿ ಈ ವರ್ಷ (2025 ಫೆಬ್ರವರಿ 10ರಿಂದ) ಮೂರು ದಿನಗಳ ಕುಂಭಮೇಳ ಸಂಪನ್ನಗೊಂಡಿತು.ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡಿದರು.

ಆದರೆ ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಪುಣ್ಯಸ್ನಾನದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಏಕೆಂದರೆ ಅದು ಪ್ರೌರಾಣಿಕ ಪ್ರಣೀತ ಪರಂಪರೆಯಾಗಿದ್ದು ಹಿಂದೂ ಧರ್ಮದ ಸಂಘಟನೆಯ ನೇಯ್ಗೆ ಬಲಗೊಳ್ಳುತ್ತದೆಂಬ ಆತಂಕ ಹೊಂದಿದವರು ಆಕ್ಷೇಪವೆತ್ತಿದ್ದಾರೆ. ನೀರಿನ ಶುಭ್ರತೆಯ ಪ್ರಶ್ನೆಯನ್ನು ವಿಜ್ಞಾನದ ನೆಲೆಯಲ್ಲಿ ಎತ್ತುವ ಮೂಲಕ ಭಯ ಹುಟ್ಟಿಸುವ ತರ್ಕಗಳು ಹರಿದಾಡುತ್ತಿವೆ. ಆದರೆ ಪ್ರಯಾಗದ ಕುಂಭಸ್ನಾನವೆಂದರೆ ಅದು ಮೈತೊಳೆದುಕೊಳ್ಳುವುದಲ್ಲ. ನದಿಯಲ್ಲಿ ಮೂರು ಮುಳುಗು ಹಾಕುವುದರ ಮೂಲಕ ಭಕ್ತಿಯ ಸೆಲೆ ಸಕ್ರಿಯವಾಗುತ್ತದೆ. ಹಾಗಾಗಿ ಭಕ್ತಿಯಿಂದ ಗಂಗೆಯಲ್ಲಿ ಮುಳುಗಿ ಎದ್ದು ಅವ್ಯಕ್ತ ಅನುಭೂತಿ ಉಂಟಾಯಿತೆಂದು ಹೇಳುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೊಂದು ದೂರಕ್ಕೆ ಹೋಗಿ ಲಕ್ಷಾಂತರ ಜನರ ಮಧ್ಯದಲ್ಲಿ ಮೈಲುಗಟ್ಟಲೆ ಸರತಿಯ ಸಾಲಿನಲ್ಲಿ ಸಾಗುವವರು ವಿಜ್ಞಾನದ ಹೆಸರಲ್ಲಿ ನೀಡುವ ಎಚ್ಚರಗಳನ್ನು ಲೆಕ್ಕಿಸದೆ ಗಂಗೆಗೆ ಇಳಿಯುತ್ತಾರೆ.

ಮೂಲ ವಿಷಯವೇನೆಂದರೆ ಭಾರತೀಯ ಚಿಂತನೆಯಲ್ಲಿ ಮನುಷ್ಯನೂ ಪ್ರಕೃತಿಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿದ್ದಾನೆ. ಆದರೆ ಪಾಶ್ಚಾತ್ಯ ಚಿಂತನೆಯಲ್ಲಿ ಮನುಷ್ಯನನ್ನು ಪ್ರಕೃತಿಗಿಂತ ಮೇಲೆ ಎಂದು ಪರಿಗಣಿಸಲಾಗಿದೆ. ಅಂದರೆ ಪ್ರಕೃತಿಯು ಮಾನವರ ಅಧೀನ ಎಂಬ ಧೋರಣೆ ಇದ್ದು ಮಾನವನು ಪ್ರಕೃತಿಯನ್ನು ಹಾಳುಗೈಯಬಹುದು, ಪ್ರಾಣಿಗಳನ್ನು ಕೊಲ್ಲಬಹುದು ಹಾಗೂ ಸುಡಬಹುದು. ಆದರೆ ಭಾರತೀಯರಿಗೆ ಪ್ರಕೃತಿಯೆಂದರೆ ದೇವರೆಂಬ ಭಾವನೆ ಇದೆ. ಹಾಗಾಗಿ ಗಂಗೆಯಲ್ಲಿ ಒಂದು ಮುಳುಗೇಳುವುದೆಂದರೆ ಅದೊಂದು ದೈವಿಕಕ್ರಿಯೆ. ಸನಾತನ ಚಿಂತನೆಯಲ್ಲಿ ನದಿಯೂ, ಪರ್ವತಗಳೂ, ಕಲ್ಲುಗಳೂ, ಪ್ರಾಣಿ, ಪಕ್ಷಿಗಳೂ ದೇವರುಗಳೇ. ಮಾನವನು ಪ್ರಕೃತಿಯನ್ನು ಅವಲಂಬಿಸಿದ್ದಾನೆಯೇ ಹೊರತು ಪ್ರಕೃತಿಯು ಮನುಷ್ಯನನ್ನಲ್ಲ! ಪ್ರಕೃತಿ ಮುನಿದರೆ ಭೂಕಂಪವೋ, ಸುನಾಮಿಯೋ, ಜ್ವಾಲಾಮುಖಿಯೋ ಆವಿರ್ಭವಿಸಿ ಮನುಷ್ಯನನ್ನು ಎತ್ತಿ ಹೊತ್ತು ಹಾಕಬಹುದು. ಹಾಗಾಗಿ ಪ್ರಕೃತಿಯನ್ನು ಆರಾಧಿಸುವುದರಲ್ಲಿಯೇ ಮನುಷ್ಯನ ಕ್ಷೇಮವಿದೆ. ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್ ಸೆಲ್‍ಹೈಮ್ ಎಂಬ ವಿದೇಶೀ ಚಿಂತಕನೊಬ್ಬ ಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಜಾಲತಾಣದಲ್ಲಿ ಧ್ವನಿ ಮುದ್ರಣ ಮಾಡಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾನೆ.

Advertisement

ಕುಂಭಮೇಳವು ಸ್ನಾನದ ಮೂಲಕ ಸಾಮೂಹಿಕವಾಗಿ ಪ್ರಕೃತಿ ಪೂಜೆಯನ್ನು ಮಾಡಿ ತನ್ನ ಗೌರವವನ್ನು ಸಲ್ಲಿಸುವ ಒಂದು ವಿಶಿಷ್ಟ ಸನ್ನಿವೇಶವೆಂದು ಆತ ಬಣ್ಣಿಸಿದ್ದಾನೆ. ಸೂರ್ಯದೇವನು ವಿಶಿಷ್ಟವಾದ ಶಕ್ತಿಯನ್ನು ಹೊಂದಿರುವಂತೆ ಹಿಮಾಲಯದಿಂದ ಹರಿದು ಬರುವ ಗಂಗೆಯು ದೈವಿಕ ಶಕ್ತಿಯನ್ನು ಹೊಂದಿದ ನದಿಯೆಂದು ತಿಳಿಯುವುದರಲ್ಲಿ ಆತಂಕ ಬೇಡವೆಂದು ವಿಜ್ಞಾನದ ನೆಲೆವೀಡಾದ ಯುರೋಪ್‍ನಿಂದ ಬಂದಿರುವ ಆತ ಹೇಳಿದ್ದಾನೆ.
ವಾಸ್ತವವಾಗಿ ನೋಡಿದರೆ ಈ ಪ್ರಕೃತಿ ಮತ್ತು ಭೂಮಿ ನಮ್ಮ ಎಷ್ಟೆಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿದೆ ಎಂಬುದೇ ಒಂದು ಅಚ್ಚರಿ. ಅದು ಕೊಡುತ್ತಿರುವುದು ನೀರನ್ನಷ್ಟೇ ಅಲ್ಲ, ಅದರೊಂದಿಗೆ ಅನೇಕ ಬಗೆಯ ಸತ್ವಗಳನ್ನು ಹಂಚುತ್ತಿದೆ. ಅಲ್ಲದೆ ಅದಕ್ಕೆ ಸ್ವತಃ ಶುದ್ಧೀಕರಣದ ಶಕ್ತಿಯೂ ಇದೆ. ಅದು ಹಾನಿಕಾರಕ ಬೆಕ್ಟೀರಿಯಾಗಳನ್ನು ನಿರ್ಜೀವಗೊಳಿಸಿ ಉಪಯುಕ್ತ ಬೆಕ್ಟೀರಿಯಾಗಳನ್ನು ಮಾತ್ರ ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬುದಾಗಿ ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ. ಅಜಯ್ ಸೋನ್‍ಕರ್ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಮಹಾಕುಂಭದಲ್ಲಿ ಸುಮಾರು 60 ಕೋಟಿ ಜನರು ಮೂರು ಮೂರು ಮುಳುಗು ಹಾಕಿ ಎದ್ದರೂ ಗಂಗೆ ಶುಚಿಯಾಗಿಯೇ ಇದ್ದಾಳೆ ಎಂಬುದು ಅವರು ನಡೆಸಿದ ಅಧ್ಯಯನದ ಫಲಿತಾಂಶವಾಗಿದೆ. ರಾಷ್ಟ್ರಪತಿ ಅಬ್ದುಲ್ ಕಲಾಂರಿಂದ ಪ್ರಶಂಸಿಸಲ್ಪಟ್ಟ ಅಜಯ್ ಸೋನ್‍ಕರ್‍ರವರು ಗಂಗೆಯ ಶಕ್ತಿಯನ್ನು ಸಮುದ್ರಕ್ಕೆ ಹೋಲಿಸಿದ್ದಾರೆ. ಸಮುದ್ರವು ಹೇಗೆ ತನ್ನಲ್ಲಿಗೆ ಸೇರುವ ಕಲ್ಪಶಗಳನ್ನು ನಿರ್ನಾಮಗೊಳಿಸುತ್ತದೋ ಹಾಗೆಯೇ ಗಂಗೆಯೂ ನಿರಂತರವಾಗಿ ತನ್ನನ್ನು ಶುಚಿಗೊಳಿಸಿಕೊಳ್ಳುತ್ತಾಳೆ. ಹಾಗಾಗಿ ಮುಳುಗು ಹಾಕುವರಿಗೆ ಯಾವುದೇ ಅಪನಂಬಿಕೆ ಅಥವಾ ಭಯ ಅಗತ್ಯವಿಲ್ಲ. ಇದು ಒಬ್ಬ ವಿಜ್ಞಾನಿಯೇ ಹೇಳಿದ್ದರೂ ಪರಂಪರೆಯನ್ನು ಟೀಕಿಸುವವರಿಗೆ ಅರ್ಥವಾದೀತೆಂದು ಹೇಳಲಾಗದು.

ಗಂಗಾ ನದಿಯು ಭಕ್ತರ ಸ್ನಾನಕ್ಕಿಂತ ಹೆಚ್ಚಾಗಿ ವಿಜ್ಞಾನದ ಉಪಲಬ್ಧಗಳಾದ ಕೈಗಾರಿಕೆಗಳ ಕಷ್ಮಲಗಳು ಸೇರಿ ಕಲುಷಿತಗೊಳ್ಳುತ್ತದೆ. ಅದನ್ನೂ ಇತ್ತಿಚೆಗೆ ನಿಯಂತ್ರಿಸಲಾಗಿದೆ. ಆದರೆ ನದಿಯಲ್ಲಿ ಕೊಳಚೆ ನೀರು ಸೇರುತ್ತಿರುವುದನ್ನೂ ಕಸದ ರಾಶಿಯನ್ನು ನದಿಯ ಬದಿಯಲ್ಲಿ ಸುರಿಯುವುದನ್ನೂ ಕಾಣುತ್ತೇವೆ. ಅಂತಹ ಸ್ಥಳಗಳಲ್ಲಿ ಸ್ನಾನ ಮಾಡಲು ಯಾರೂ ಇಳಿಯುವುದಿಲ್ಲ. ಆದರೆ ಸಂಗಮ ಸ್ಥಳದಲ್ಲಿ ಶುದ್ಧತೆಯ ಬಗ್ಗೆ ಸಾಕಷ್ಟು ಎಚ್ಚರ ವಹಿಸಿದ್ದು ಕಂಡುಬರುತ್ತದೆ. ಹಾಗಾಗಿ ನೀರಿಗಿಳಿಯಲು ಯಾರೂ ಹಿಂದುಮುಂದು ನೋಡುವುದಿಲ್ಲ. ಭಕ್ತರಲ್ಲಿ ಶ್ರದ್ಧೆಯೊಂದಿಗೆ ಆತ್ಮಸ್ಥೈರ್ಯವೂ ಇತ್ತೆಂಬುದು ಸ್ಪಷ್ಟ.
ದಕ್ಷಿಣ ಭಾರತದಿಂದ ಹೋದವರು ಪ್ರಯಾಗದಲ್ಲಿ ಸ್ನಾನ ಮುಗಿಸಿ ಅಯೊಧ್ಯೆ ಮತ್ತು ಕಾಶಿಗೆ ಭೇಟಿನೀಡಿದ್ದಾರೆ. ಹಾಗಾಗಿ ಆ ಎರಡು ಕ್ಷೇತ್ರಗಳಲ್ಲೂ ಮಹಾಕುಂಭದಂತೆಯೇ ಜನಸಂದಣಿ ತುಂಬಿತ್ತು. ಟ್ರಾಫಿಕ್ ಜ್ಯಾಂ ಎಂಬುದು ಈ ನಗರಗಳ ನಡುವೆಯೂ ಅವುಗಳ ಒಳಗೆಯೂ ಕಾಡಿತು. ಕಾಶಿ ವಿಶ್ವನಾಥನ ದರ್ಶನಕ್ಕೆ ನಾಲ್ಕೈದು ಸಾಲುಗಳಲ್ಲಿ ಮೂರ್ನಾಲ್ಕು ಕಿಲೊಮೀಟರ್ ಉದ್ದ ಸರತಿಯ ಸಾಲುಗಳಲ್ಲಿ ನಿಂತು ಕಾಯುತ್ತಿರುವವರನ್ನು ಕಂಡರೆ ಅಚ್ಚರಿಯಾಗುತ್ತದೆ. ಒಂದು ಕ್ಷಣದ ದರ್ಶನ ಸಿಕ್ಕುವುದಕ್ಕಾಗಿ ಅವರು ಶ್ರಮ ಪಡುವುದರ ಹಿಂದೆ ಇರುವ ಭಕ್ತಿ ಭಾವನೆಯ ಆಳವೆಷ್ಟೆಂಬುದೇ ಒಂದು ವಿಸ್ಮಯ. ಈ ಕ್ಯೂದಲ್ಲಿ ಕಾಯಲಾಗದ ನನ್ನಂತಹ ನಿರಾಕಾರ ಭಕ್ತಿಯವರೂ ಇದ್ದರು. ಒಬ್ಬನಂತೂ ಗಟ್ಟಿಯಾಗಿ ಫೋನ್ ಮಾಡಿ ಮನೆಯವರಿಗೆ ಹೇಳುತ್ತಿದ್ದ: ಕಾಶಿ ವಿಶ್ವನಾಥನ ದರ್ಶನಕ್ಕೆ ನಾನು ಇನ್ನೊಮ್ಮೆ ಬರಬೇಕಷ್ಟೇ. ನನ್ನೊಳಗಿನ ಮಾತೂ ಅದೇ ಆಗಿತ್ತು.

ಬರಹ :
ಚಂದ್ರಶೇಖರ ದಾಮ್ಲೆ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |
July 22, 2025
2:26 PM
by: ಜಯಲಕ್ಷ್ಮಿ ದಾಮ್ಲೆ
ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..
July 22, 2025
1:18 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಬದುಕು ಪುರಾಣ | ರಾಮಬಾಣದ ಇರಿತ
July 20, 2025
7:39 AM
by: ನಾ.ಕಾರಂತ ಪೆರಾಜೆ
ಭಾರತದಲ್ಲಿ ಅಡಿಕೆ ಕೃಷಿ ಹೇಗಿದೆ..? ಎಷ್ಟು ಉತ್ಪಾದನೆಯಾಗುತ್ತಿದೆ…?
July 19, 2025
7:56 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group