ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿಯಾಗಿರುವ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್. ಹೆಗಡೆ ಅವರು ನಿವೃತ್ತ ಜೀವನದಲ್ಲಿ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಎಲ್.ಆರ್. ಹೆಗಡೆ ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಅರಣ್ಯ ವಲಯಾಧಿಕಾರಿಯಾಗಿ ನಿವೃತ್ತಿಯಾಗಿದ್ದರು. ಇದೀಗ ಹೊಸ ಶೈಲಿಯಲ್ಲಿ ಔಷಧೀಯ ಗುಣವುಳ್ಳ ಗಿಡಗಳು, ನೂರಾರು ವರ್ಷ ಬಾಳುವ ಮರಗಳನ್ನು ಬೆಳೆಸಲು ಮುಂದಾಗಿದ್ದಾರೆ. ಕಳೆದ 7 ವರ್ಷದಿಂದ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎಲ್.ಆರ್.ಹೆಗಡೆ ಅವರು ಕಲ್ಲಬ್ಬೆಯ ತಮ್ಮ ಮನೆ ಆವರಣದಲ್ಲಿ ಕಲಾನಿಕೇತನ ಅರಣ್ಯ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಔಷಧೀಯ ಗುಣಗಳುಳ್ಳ ಗಿಡಗಳನ್ನು ಬೆಳೆಸಲಾಗಿದ್ದು, ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ದೇವವೃಕ್ಷ ಸೇರಿದಂತೆ ವಿವಿಧ ಜಾತಿಯ 400 ಗಿಡಗಳನ್ನು ಬೆಳೆಸಲಾಗಿದೆ.
ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು, ವರಹಾಮಿಹೀರ ಹಾಗೂ ಇತರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ.
ನಿವೃತ್ತ ಅರಣ್ಯಾಧಿಕಾರಿಯಾಗಿ ಪರಿಸರ ಪ್ರೇಮ ಬೆಳೆಸಿರುವ ಅವರ ನಡೆಯುವ ಇತರರಿಗೂ ಮಾದರಿಯಾಗಿದ್ದು, ಪರಿಸರ ಉಳಿಸಲು ಮಹತ್ವದ ಮಾದರಿಯನ್ನು ತೋರಿಸಿದ್ದಾರೆ.