ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಲಕ್ ಪತಿ ದೀದಿ’ ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಈ ಯೋಜನೆ ಮೂಲಕ ಕೃಷಿ ಕಾರ್ಮಿಕರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ಹಾಗೂ ವೃತ್ತಿ ತರಬೇತಿ ನೀಡಲಾಗುತ್ತದೆ.
ಮುಳಬಾಗಿಲು ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಕೃಷಿ ಸಖಿ ಮತ್ತು ಪಶು ಸಖಿಯರು ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಮಹಿಳಾ ಸ್ವಸಹಾಯ ಸಂಘದಿಂದ ಸಾಲ ಪಡೆದು ತಾವು ಟೈಲರಿಂಗ್ ವೃತ್ತಿ ಕೈಗೊಂಡಿದ್ದು, ಅದರಿಂದ ಆರ್ಥಿಕವಾಗಿಯೂ ದೃಢವಾಗಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕೋಲಾರದ ಸುಮಿತ್ರಮ್ಮ.
ಏನಿದು ಲಕ್ ಪತಿ ದೀದಿ : ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು ಲಕ್ ಪತಿ ದೀದಿ ಯೋಜನೆಯ ಉದ್ದೇಶ. ಮಹಿಳಾ ಸ್ವಯಂ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವ 9 ಕೋಟಿ ಮಹಿಳೆಯರಿದ್ದಾರೆ. ಸ್ವಸಹಾಯ ಗುಂಪುಗಳ ಸಹಾಯ ಪಡೆದು ಇವರೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಪಟ್ಟಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯ ಹೆಚ್ಚಿಸಲು ಲಕ್ ಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲಿ ಸ್ವಂತವಾದ ಉದ್ಯಮವನ್ನು ಪ್ರಾರಂಭ ಮಾಡುವಂತಹ ಮಹಿಳೆಯರಿಗೆ 1 ಲಕ್ಷ ರೂ.ಗಳಿಂದ ಪ್ರಾರಂಭಿಸಿ ಒಂದು ಕೋಟಿ ರೂಪಾಯಿಗಳ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲು ಹೊರಟಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷ ರೂ.ಗಳ ವರೆಗೆ ಸುಲಭ ರೂಪದಲ್ಲಿ ಈ ಯೋಜನೆಯ ಮೂಲಕವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಉದ್ದೇಶ: ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ, ಆರ್ಥಿಕ ಸಾಕ್ಷರತಾ ಕಾರ್ಯಾಗಾರಗಳು.
ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಸಾಲ ಸೌಲಭ್ಯಗಳು,ಡಿಜಿಟಲ್ ಸಾಕ್ಷರತೆ ಮೊದಲಾದ ಸೌಲಭ್ಯಗಳು ಸಿಗುತ್ತವೆ.
ಈ ಯೋಜನೆಯಿಂದಾಗಿ ಮಹಿಳೆಯರ ಆದಾಯ ಹೆಚ್ಚಳ ಮತ್ತು ಆರ್ಥಿಕ ಸ್ಥಿತಿ ಸುಧಾರಣೆ, ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳ ವೃದ್ಧಿ, ಮಹಿಳೆಯರ ಸಾಮಾಜಿಕ ಸ್ಥಾನಮಾನ ಹೆಚ್ಚಳ ಸೇರಿದಂತೆ ವಿವಿಧ ಪ್ರಯೋಜನಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತದೆ.


