ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ ಜನರು ತಮ್ಮೂರಿನ ಕೆರೆಯ ನೀರನ್ನು ಜಾನುವಾರುಗಳಿಗೆ ಮಾತ್ರ ಮೀಸಲಿಟ್ಟು ಅನ್ಯ ಚಟುವಟಿಕೆಗಳಿಗೆ ಬಳಕೆ ಮಾಡದಂತೆ ತೀರ್ಮಾನ ಕೈಗೊಂಡಿದ್ದಾರೆ.
ಬಹಳಷ್ಟು ವರ್ಷಗಳ ನಂತರ ಕೆರೆಗಳಲ್ಲಿ ನೀರು ಕಾಣಿಸುತ್ತಿದೆ. ಈ ನೀರನ್ನು ಅನ್ಯಬಳಕೆಗೆ ಉಪಯೋಗಿಸಿದರೆ ಬೇಸಿಗೆಯ ದಿನಗಳಲ್ಲಿ ನೀರಿಗೆ ತೊಂದರೆಯಾಗಬಹುದು. ಗ್ರಾಮದ ಹೆಚ್ಚಿನ ಜನರು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿರುವ ಜಾನುವಾರುಗಳಿಗೆ ನೀರಿನ ಅಗತ್ಯವಿದ್ದು ಆದ್ದರಿಂದ ನೀರನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದರೆ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಇಂತಹದೊಂದು ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ಬರಗಾಲ ಕಾಡಿದಾಗ ಗ್ರಾಮದ ಕೆರೆಯಲ್ಲಿ ನೀರು ಇಲ್ಲದೆ ಜಾನುವಾರುಗಳನ್ನು ಸಾಕಲಾಗದೆ ಜನರು ಸಂಕಷ್ಟ ಅನುಭವಿಸಿದ್ದರು. ಹೀಗಾಗಿ ಮತ್ತೆ ಇಂತಹ ಪರಿಸ್ಥಿತಿ ಮರುಕಳಿಸಬಾರದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಸಾರ್ವಜನಿಕರ ತಿಳುವಳಿಕೆಗಾಗಿ ಕೆರೆಯ ಮುಂಭಾಗದ ದಡದಲ್ಲಿ ನಾಮಫಲಕ ಅಳವಡಿಸಿ ಅದರಲ್ಲಿ ಕೆರೆಯ ನೀರನ್ನು ಜಾನುವಾರಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ಹೂಡಲಾಗುವುದು ಎಂಬ ಸೂಚನಾ ಫಲಕವನ್ನು ಹಾಕಲಾಗಿದೆ.