ನಾವು ಯಾವ ಧ್ವಜದಡಿಯಲ್ಲಿ ನಿಂತಿದ್ದೇವೆಯೋ, ಆ ಧ್ವಜದ ಗೌರವ, ರಕ್ಷಣೆಯ ಭಾರವೂ ನಮ್ಮದೇ, ನಾವು ಅಳಿದರೂ ಧ್ವಜದ ಗೌರವಕ್ಕೆ ಲೋಪ ತರಬಾರದು” ಲಾಲ್ ಬಹಾದ್ದೂರ್ ಶಾಸ್ತ್ರಿ “ಶತೃವನ್ನು ವಶಪಡಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಅವನನ್ನು ಮೊದಲು ನಮ್ಮ ಮಿತ್ರನನ್ನಾಗಿ ಮಾಡಿಕೊಳ್ಳುವುದು.”
ಇದು ಭಾರತ ಪಾಕ್ ಯುದ್ಧಾನಂತರ ರಷ್ಯಾದ ಪ್ರಧಾನಿ ಕೊಸಿಗಿನ್ ತಾಷ್ಕಂಟ್ಗೆ ಶಾಂತಿ ಒಪ್ಪಂದಕ್ಕೆ ಕರೆದಾಗ ಲಾಲ್ ಬಹಾದ್ದೂರ್ ರವರು ಹೇಳಿದ ಮುತ್ತಿನಂತಹ ಮಾತು. “ನಾನೀಗ ಸೋವಿಯತ್ ಅಧಿಕಾರ ಯುಕ್ತ ಹಸ್ತಗಳಲ್ಲಿ ಸಂಪೂರ್ಣ ಬಂದಿಯಾಗಿದೇನೆ ಯುದ್ಧ ಬಂದಿಯಲ್ಲ ಸ್ನೇಹ ಬಂಧಿ, ಪ್ರೇಮ ಬಂಧಿ”
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥರಾದವರು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ, ಆದರೆ ತನ್ನ ಧೈರ್ಯ, ಸಾಹಸಗಳಿಂದ ಸಾಮ್ರಾಜ್ಯವನ್ನು ಕಟ್ಟಿ ಜನರ ಮನಸಿನಾಳದಲ್ಲಿ ನೆಲೆಯಾದವನು. ನೆಪೋಲಿಯನ್ ಕುಳ್ಳ, ಜಗತ್ತನ್ನೇ ನಡುಗಿಸಿದವನು. ಲಾಲ್ ಬಹದ್ದೂರ್ ರವರು ಇವರೆಲ್ಲರಿಗಿಂತ ಎತ್ತರದವರೂ ಅಲ್ಲ, ಆದರೆ ಸಾಹಸ ,ಸಹನೆ, ಚಾತುರ್ಯ, ಬುದ್ಧಿವಂತಿಕೆ ಕೌಶಲ್ಯಗಳಿಗೆ ಯಾರಿಗೂ ಕಮ್ಮಿಯಿಲ್ಲ. ಈ ಎಲ್ಲಾ ಗುಣಗಳು ಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ. ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳು.
2 ಅಕ್ಟೋಬರ್ 1904 ರಲ್ಲಿ ಕಾಶಿಯ ಬಳಿಯಿರುವ ಮೊಘಲ್ ಸರಾಯ್ ಎಂಬ ಊರಿನಲ್ಲಿ ಜನಿಸಿದರು. ತಂದೆ ಶಾರದಾ ಪ್ರಸಾದ್, ತಾಯಿ ರಾಂ ದುಲಾರಿ. ಆರಂಭದಲ್ಲಿ ತಂದೆ ಬಡ ಅಧ್ಯಾಪಕ. ಆಮೇಲೆ ಗುಮಾಸ್ತರಾಗಿ ಕೆಲಸ ಮಾಡಲಾರಂಭಿಸಿದರು. ಲಾಲ್ ಬಹಾದ್ದೂರ್ ರಿಗಿನ್ನೂ ಒಂದು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಇವರ ಅಜ್ಜ ಜವಾಬ್ದಾರಿ ತೆಗೆದುಕೊಂಡರು. ಅಜ್ಜ ಇವರನ್ನು 6 ನೇ ತರಗತಿಯವರೆಗೆ ಅವರ ಊರಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಆಮೇಲೆ ಕಾಶಿಯಲ್ಲಿ ಓದಲು ವ್ಯವಸ್ಥೆ ಮಾಡಿದರು. ಅವರಲ್ಲಿದ್ದ ಧೈರ್ಯ ಆತ್ಮಾಭಿಮಾನ ಬಾಲ್ಯದಿಂದಲೇ ಬಂದ ಗುಣಗಳು.
ಬಾಲ್ಯದ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಯಾವಾಗಲೂ ಅಳಿಸಲಾಗದ ಪರಿಣಾಮವನ್ನುಂಟು ಮಾಡುತ್ತದೆ. ಲಾಲ್ ಬಹಾದ್ದೂರ್ ದ ಜೀವನದ ಮೇಲೆ ಪ್ರಭಾವ ಬೀರಿದ ಒಂದು ಘಟನೆ ಹೀಗಿದೆ ನೋಡಿ.
ಒಂದಷ್ಟು ಹುಡುಗರು ಹಣ್ಣಿನ ತೋಟಕ್ಕೆ ನುಗ್ಗಿದರು. ಅವರಲ್ಲಿ ಸಣ್ಣ ಹುಡುಗ ಲಾಲ್ ಬಹಾದ್ದೂರ್. ಉಳಿದವರೆಲ್ಲಾ ಮರ ಹತ್ತಿ ಹಣ್ಣುಗಳನ್ನು ಕೊಯ್ದು ಗಲಾಟೆ ಮಾಡುತ್ತಿದ್ದರೆ ಈ ಪುಟ್ಟ ಬಾಲಕ ಪಕ್ಕದಲ್ಲಿದ್ದ ಹೂವು ವನ್ನು ಕೊಯ್ದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಿದ್ದ. ಅದೇ ಹೊತ್ತಿಗೆ ತೋಟದ ಮಾಲಿ ಕೋಲು ಹಿಡಿದು ಕೊಂಡು ಬಂದ. ಅವನನ್ನು ನೋಡಿ ದೊಡ್ಡ ಮಕ್ಕಳು ಓಡಿ ಹೋಗಿ ಪೆಟ್ಟಿನಿಂದ ತಪ್ಪಿಸಿಕೊಂಡರು. ಕೈಗೆ ಸಿಕ್ಕ ಹುಡುಗನಿಗೆ ಚೆನ್ನಾಗಿ ಬಾರಿಸಿದನು ಮಾಲಿ. ಹುಡುಗ ಅಳುತ್ತಾ ನಾನು ತಂದೆ ಇಲ್ಲದ ಹುಡುಗ ಹೊಡೆಯಬೇಡಿ ಎಂದು ಅಳಲಾಂಭಿಸಿದ. ಕರುಣೆಯಿಂದ ನೋಡುತ್ತಾ ಮಾಲಿ ‘ “ತಂದೆಯಿಲ್ಲದ ಹುಡುಗನಾದ್ದರಿಂದ ಒಳ್ಳೆಯ ಗುಣನಡತೆ ಕಲಿಯಬೇಕಪ್ಪಾ ” ಎಂದ ಮಾಲಿಯ ಮಾತು ಗಾಢವಾದ ಪರಿಣಾಮವನ್ನು ಬೀರಿತು. ಇನ್ನೂ ಮುಂದೆ ಯಾವತ್ತೂ ಕೆಟ್ಟ ಕೆಲಸ ಮಾಡಲಾರೆ , ತಪ್ಪು ಹೆಜ್ಜೆಯನ್ನು ಇಡಲಾರೆ ಎಂಬ ಧೃಡ ನಿರ್ಧಾರವನ್ನು ಆ ಸಂದರ್ಭದಲ್ಲಿಯೇ ತೆಗೆದುಕೊಂಡರು.
‘ಲಾಲ್ ಬಹಾದ್ದೂರ್ ಶ್ರೀ ವಾಸ್ತವ್ ‘ ಎಂಬುದು ಅವರ ಪೂರ್ಣ ಹೆಸರು. ದೊಡ್ಡವರಾದ ಮೇಲೆ ತಮ್ಮ ಹೆಸರಿನಿಂದ ಶ್ರೀ ವಾಸ್ತವ ಎಂಬುದನ್ನು ತೆಗೆದುಹಾಕಿದರು ಶ್ರೀವಾಸ್ತವ ‘ ಎಂಬುದು ಅವರ ಜಾತಿಯನ್ನು ಸೂಚಿಸುತ್ತಿತ್ತು. ಜಾತಿಯ ಹೆಸರಿನಿಂದ ಗುರುತಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಆಮೇಲೆ ಅವರ ಹೆಸರಿನೊಂದಿಗೆ ಸೇರಿದ ‘ಶಾಸ್ತ್ರಿ’ ಎಂಬುದು ಕಾಶಿ ವಿದ್ಯಾಪೀಠ ಕೊಟ್ಟ ಬಿರುದು.
ದೇಶದ ಏಳಿಗೆಗಾಗಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು. ಮನಗೆದ್ದು ಊರುಗೆಲ್ಲುವ ಅಪ್ರತಿಮ ಸಾಹಸಿ. 1921 ರಲ್ಲಿ ಲಾಲಲಜಪತರಾಯರು ಸ್ಥಾಪಿಸಿದ ‘ಜನಸೇವಕ ಸಂಘ’ ದ ಅಜೀವ ಸದಸ್ಯರಾಗಿ ಸೇರಿದರು. ದೇಶದ ಉನ್ನತಿಗಾಗಿ ದುಡಿಯ ಬಲ್ಲ ಸ್ವಯಂ ಸೇವಕರನ್ನು ತಯಾರು ಮಾಡುವುದು ಇದರ ಉದ್ದೇಶ. ಕನಿಷ್ಠ 20 ವರ್ಷಗಳ ಕಾಲ ಸಂಸ್ಥೆಯಲ್ಲಿ ದುಡಿಯುವ ಹಾಗೂ ಅಜೀವ ಪರ್ಯಂತ ಸರಳ ,ನೇರ, ಬದುಕು ನಡೆಸುವ ಪ್ರತಿಜ್ಞೆಯನ್ನು ಪ್ತತಿಯೊಬ್ಬ ಸದಸ್ಯನೂ ಮಾಡಬೇಕಿತ್ತು. ತೆಗೆದುಕೊಂಡ ಪ್ರತಿಜ್ಞೆಯನ್ನು ಶಿರಸಾವಹಿಸಿ ಪಾಲಿಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ಸ್ವಂತಕ್ಕಾಗಿ ಮನೆಯನ್ನೂ ಬಯಸದ ವ್ಯಕ್ತಿ. ‘ಗೃಹವಿಲ್ಲದ ಗೃಹಮಂತ್ರಿ ‘ಎಂದೇ ಖ್ಯಾತರಾದವರು.
1930 ರಲ್ಲಿ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗಿತ್ತು. ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿಯವರು ಆರಂಭಿಸಿದರು. ಇದರಲ್ಲಿ ಲಾಲ್ ಬಹಾದ್ದೂರ್ ರವರು ಪ್ರಮುಖ ಪಾತ್ರವಹಿಸಿದರು. ಮೊದಲ ಬಾರಿಗೆ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಮಾಡಿದಾಗ 17ರ ಹರೆಯದಲ್ಲಿದ್ದ ಲಾಲ್ ಬಹಾದ್ದೂರ್ ರನ್ನು ಬಂಧಿಸಿ ಬಿಟ್ಟಿದ್ದರು. ಆದರೆ ಸರ್ಕಾರಕ್ಕೆ ಕಂದಾಯ ಕಟ್ಟ ಬೇಡಿ ಎಂಬ ಉಪದೇಶ ಮಾಡುತ್ತಿದ್ದ ಲಾಲ್ ಬಹಾದ್ದೂರ್ ರವರನ್ನು ಸರ್ಕಾರ ಬಂಧಿಸಿ ಜೈಲಿಗಟ್ಟಿತು. ತೀವ್ರ ಸ್ವರೂಪದ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಬಹದ್ದೂರ್ ವರು ಒಟ್ಟುಏಳು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಮಗಳ ಅಸೌಖ್ಯ ಮಗನ ಕಾಯಿಲೆ ಯಾವುದಕ್ಕೂ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಇರಲಿಲ್ಲ. ಮಗಳಿಗೆ ಹುಷಾರಿಲ್ಲವೆಂದು ರಜೆ ಕೇಳಿ , ಅದು ಸಿಕ್ಕಿ ಮನೆಗೆ ಬಂದಾಗ ಮಗಳು ಇಹಲೋಕ ತ್ಯಜಿಸಿಯಾಗಿತ್ತು. ಇನ್ನು ಮಗನ ಆರೋಗ್ಯ ಸುಧಾರಣೆಯಾಗುವುದರೊಳಗೆ ಜೈಲಿಗೆ ಮತ್ತೆ ಹೋಗಬೇಕಾಯಿತು. ವೈಯಕ್ತಿಕ ವಿಷಯಗಳನ್ನೆಲ್ಲಾ ಬದಿಗಿಟ್ಟು ದೇಶವೇ ಮುಖ್ಯವಾಗಿತ್ತು ಲಾಲ್ ಬಹಾದ್ದೂರವರಿಗೆ.
ದೇಶದ ನಾಯಕನಿಗೆ ಇರಲೇಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟು ಕೊಡದ ನಿಶ್ಚಲತೆ ಲಾಲ್ ಬಹಾದ್ದೂರ್ ರವರದು. ಮಗಳ ಸಾವು, ಮಗನ ಅನಾರೋಗ್ಯ, ಬಡತನ ಯಾವುದೂ ಅವರನ್ನು ಅಡ್ಡ ಹಾದಿ ಹಿಡಿಯುವಂತೆ ಮಾಡಲಿಲ್ಲ. ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿ ಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿ ಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೆ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದಜನತೆ ಸ್ಪಂದಿಸಿದರು. ಪ್ರತಿ ಸೋಮವಾರದಂದು ಉಪವಾಸ ಮಾಡಲು ಇಡೀ ದೇಶವೇ ಕೈ ಜೋಡಿಸಿತು. ಭಾರತ – ಪಾಕ್, ಭಾರತ – ಚೈನಾ ಯುದ್ಧಗಳ ನಿರ್ಣಾಯಕ ಸಂಧರ್ಭದಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೆ ಧೃಡ ನಿರ್ಧಾರ ತೆಗೆದುಕೊಂಡು ಸಫಲನಾದ ನಾಯಕ.
ಯುದ್ಧದ ಸಂಧರ್ಭದಲ್ಲಿ ವಿಶ್ವ ಸಂಸ್ಥೆಯ ಕದತಟ್ಟದೆ , ಅಂತರಾಷ್ಟ್ರೀಯ ಬೆದರಿಕೆಗಳಿಗೆ ಬಗ್ಗದೆ ತಕ್ಷಣ ಸೈನ್ಯಗಳಿಗೆ ಮಾರ್ಗ ದರ್ಶನ ಮಾಡಿದವರು. ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯದಂತೆ ನಡೆದವರು. ಮಾತು, ಮನಸ್ಸು, ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕನ ಅಂತ್ಯ ಸಂಶಯಾಸ್ಪದ ರೀತಿಯಲ್ಲಿ ಆದದ್ದು ಭಾರತೀಯರ ದುರಂತ. ಕೇವಲ 17 ತಿಂಗಳ ಪ್ರಧಾನ ಮಂತ್ರಿ ಪಟ್ಟದಲ್ಲಿದ್ದರೂ ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು. ನಮ್ಮ ನೆಚ್ಚಿನ ಆದರ್ಶ ನಾಯಕ “ಲಾಲ್ ಬಹದ್ದೂರ್ ಶಾಸ್ತ್ರಿ ” ಹೆಮ್ಮೆಯಿಂದ ಅವರ ಹುಟ್ಟುಹಬ್ಬವನ್ನು ಇಂದು ಅಕ್ಟೋಬರ್ ೨ ರಂದು ಆಚರಿಸೋಣ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ