ದೇಶದಲ್ಲಿ ಮೊದಲು ಸರ್ಕಾರಿ ಜಮೀನುಗಳ(Govt land) ಮೇಲೆ ಕಣ್ಣು ಹಾಕುವುದನ್ನು ತಪ್ಪಿಸಬೇಕು. ಇದಕ್ಕೆ ಮೊದಲು ಕ್ರಮ ತೆಗೆದುಕೊಳ್ಳಬೇಕಾದ್ದು ಸರ್ಕಾರ(Govt). ಇದೀಗ “ದೇಶದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ಜಾಗಗಳ ಸಂರಕ್ಷಣೆಗಾಗಿ(Safty) ಲ್ಯಾಂಡ್ ಬೀಟ್(Land Beat) ವ್ಯವಸ್ಥೆ ಮತ್ತು ಪಹಣಿದಾರರ ಜಮೀನುಗಳ ರಕ್ಷಣೆಗಾಗಿ ಆರ್ಟಿಸಿಯಲ್ಲಿ(RTC) ಜಮೀನು ಮಾಲೀಕರ ಭಾವಚಿತ್ರ ಜೊತೆಗೆ ಆಧಾರ್ ಜೋಡಣೆ(Adhar link) ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಲ್ಯಾಂಡ್ ಬೀಟ್ ಮತ್ತು ಆಧಾರ್ ಜೋಡಣೆ ಮಾರ್ಚ್ ತಿಂಗಳಿಂದ ಪ್ರಾರಂಭವಾಗಿದ್ದು, ಈಗಾಗಲೇ 14 ಲಕ್ಷ ಸರ್ಕಾರಿ ಜಾಗವನ್ನು ಆ್ಯಪ್ನಲ್ಲಿ ಲೋಡ್ ಮಾಡಲಾಗಿದೆ. ಮತ್ತು 1.40 ಕೋಟಿ ಆರ್ಟಿಸಿಗಳಿಗೆ ಆಧಾರ್ ಜೋಡಣೆಯಾಗಿದೆ” ಎಂದು ಕಂದಾಯ ಸಚಿವ(Revenue Minister) ಕೃಷ್ಣಬೈರೇಗೌಡ ತಿಳಿಸಿದರು.
ಸರ್ಕಾರಿ ಒತ್ತುವರಿ ಗುರುತಿಸುವ ಲ್ಯಾಂಡ್ ಬೀಟ್ ಹಾಗು ಆಧಾರ್ ಸೀಡಿಂಗ್ ಕಾರ್ಯಗಳ ಪರಿಶೀಲನೆ ನಡೆಸಲು ಸಚಿವರು ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯ, ಚೆನ್ನಾದೇವಿ ಅಗ್ರಹಾರ ಗ್ರಾಮದ ಸರ್ಕಾರಿ ಜಾಗ, ಕೆರೆ ಒತ್ತುವರಿ ಜಾಗಗಳಿಗೆ ಭೇಟಿ ನೀಡಿದರು. ನಂತರ ಮಾಧ್ಯಮಮಗಳೊಂದಿಗೆ ಮಾತನಾಡಿದ ಅವರು, “ಈ ಹಿಂದೆ ಆಡಳಿತ ನಡೆಸಿದ ಹಲವು ಸರ್ಕಾರಗಳು ಸರ್ಕಾರಿ ಜಾಗ ಸಂರಕ್ಷಣೆಗಾಗಿ ಪ್ರಯತ್ನಿಸಿವೆ. ಆದರೆ, ಪ್ರಗತಿ ಸಮಾಧಾನಕರವಾಗಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಸರ್ಕಾರಿ ಜಾಗ ಸಂರಕ್ಷಣೆಗೆ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆಯೂ ಒಂದು. ಆರು ತಿಂಗಳ ಹಿಂದೆ ಲ್ಯಾಂಡ್ ಬೀಟ್ ಆ್ಯಪ್ ಸಿದ್ಧಪಡಿಸಿದ್ದು, ಸರ್ಕಾರಿ ಜಾಗದ ವಿವರ, ಒತ್ತುವರಿ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿದೆ” ಎಂದು ಹೇಳಿದರು.
“ಈಗಾಗಲೇ ಆ್ಯಪ್ನಲ್ಲಿ 14 ಲಕ್ಷ ಸರ್ಕಾರಿ ಜಾಗಗಳನ್ನು ಅಪ್ಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಮಹಜರು ನಡೆಸಿ, ಒತ್ತುವರಿಯಾಗಿದ್ದರೆ ಅವುಗಳ ವಿವರಗಳನ್ನು ಆ್ಯಪ್ನಲ್ಲಿ ಹಂಚಿಕೊಳ್ಳಲಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಸದ್ಯ ರಾಜ್ಯಾದ್ಯಂತ 5.90 ಲಕ್ಷ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಸರ್ಕಾರಿ ಜಾಗಗಳ ಮಹಜರು ಪ್ರತಿ ಮೂರು ತಿಂಗಳಿಗೊಮ್ಮೆ ಪುನರಾವರ್ತಿತವಾಗಲಿದೆ. ಇದರಿಂದ ಒತ್ತುವರಿ, ಅತಿಕ್ರಮಣ ತಡೆಯಬಹುದಾಗಿದೆ” ಎಂದರು.
RTCಗೆ ಆಧಾರ್ ಲಿಂಕ್:ರಾಜ್ಯದಲ್ಲಿ 4.30 ಕೋಟಿ ಜಮೀನು ಮಾಲೀಕರಿದ್ದಾರೆ. ಇತ್ತೀಚೆಗೆ ಯಾರದ್ದೋ ಜಮೀನನ್ನು ಮತ್ಯಾರೋ ನೋಂದಣಿ ಮಾಡಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. RTC ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಮಾಲೀಕತ್ವಕ್ಕೆ ಖಾತ್ರಿ ಕೊಟ್ಟಂತಾಗುತ್ತದೆ. ಜೊತೆಗೆ ಖಾತೆ, ಪಹಣಿ ವಿತರಣೆಯೂ ಸರಳೀಕರಣವಾಗಲಿದೆ” ಎಂದು ಹೇಳಿದರು.
“RTC ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಒಬ್ಬರ ಜಮೀನನ್ನು ಮತ್ತೊಬ್ಬರು ಲಪಟಾಯಿಸಲು ಆಗುವುದಿಲ್ಲ. ಆಧಾರ್ ಸಂಖ್ಯೆ ಜೋಡಣೆ ಅಭಿಯಾನವನ್ನು ಮಾರ್ಚ್ ತಿಂಗಳಿಂದಲೇ ಆರಂಭಿಸಲಾಗಿದೆ. ಸದ್ಯ 1.40 ಕೋಟಿ ಆಸ್ತಿಗಳು ಲಿಂಕ್ ಆಗಿವೆ. ಇನ್ನು ಮುರ್ನಾಲ್ಕು ತಿಂಗಳಲ್ಲಿ ಎಲ್ಲ ಆಸ್ತಿಗಳ ಜೋಡಣೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದರು. “RTC- ಆಧಾರದ ಜೋಡಣೆಯಿಂದ ಪಾವತಿ ಖಾತೆ ಆಗದಿರುವ ಆಸ್ತಿಗಳ ಕುರಿತು ಸಹ ಮಾಹಿತಿ ಸಿಗಲಿದೆ. ಇದರಿಂದ ಆಡಳಿತ ಸರಳೀಕರಣಗೊಂಡು, ವೇಗವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ, ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ ಸುತ್ತಲೂ ಗ್ರೀನ್ ಫೆನ್ಸಿಂಗ್ ಹಾಕಬೇಕು. ಗಿಡಗಳನ್ನು ನೆಡಬೇಕು” ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
- ಅಂತರ್ಜಾಲ ಮಾಹಿತಿ