ಭೂಕಂಪನ ಪ್ರದೇಶಗಳಲ್ಲಿ ಈಗ ಆಗಬೇಕಾದ್ದು ಏನು ? | ಅಲ್ಲಿನ ಪರಿಸ್ಥಿತಿ ಹೇಗಿದೆ ? | ಅಡಿಕೆ ಹಳದಿ ಎಲೆರೋಗದಿಂದ ತತ್ತರಿಸಿದ ಊರಲ್ಲಿ ಆತಂಕ ಏಕೆ ?

July 6, 2022
9:14 PM

ಕೊಡಗು ಜಿಲ್ಲೆಯ ಚೆಂಬು ಹಾಗೂ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಮತ್ತು ಆಸುಪಾಸಿನ ಗ್ರಾಮಗಳಲ್ಲಿ  ಕಳೆದ ಎರಡು ವಾರಗಳಿಂದ ಭೂಕಂಪನದ ಆತಂಕ ಇದೆ. ಸುಮಾರು 8 ಬಾರಿ ಭೂಮಿ ಕಂಪಿಸಿದ ಅನುಭವ ಸ್ಥಳೀಯರಿಗೆ ಆಗಿದೆ. ಆ ಬಳಿಕವೂ ಕಂಪನದ ಭಯ ಇದೆ. ಭೂಮಿ ಕಂಪಿಸುವುದಕ್ಕೆ ಕಾರಣ ತಿಳಿಯಲು ಈಗ ಅಧ್ಯಯನಗಳು ಆರಂಭವಾಗಿದೆ. ಅದರ ವರದಿ ಬರುವ ಮೊದಲು ತಕ್ಷಣಕ್ಕೆ ಅಲ್ಲಿನ ನಿವಾಸಿಗಳಿಗೆ ಆಗಬೇಕಾದ್ದು ಏನು ಎಂದು ಜನರು ತಮ್ಮ ಅಭಿಪ್ರಾಯವನ್ನು ತೆರೆದಿಡುತ್ತಾರೆ.ಈಗಾಗಲೇ ಅಡಿಕೆ ಹಳದಿಎಲೆ ರೋಗದಿಂದ ಕಂಗೆಟ್ಟಿರುವ ಇಲ್ಲಿನ ಕೃಷಿಕರು ಪರ್ಯಾಯ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಈ ಸಮಯದಲ್ಲಿ ಮತ್ತೆ ಭೂಕಂಪನ-ಭೂಕುಸಿತದ ಕಾರಣದಿಂದ ಆತಂಕಗೊಂಡಿದ್ದಾರೆ.

Advertisement
Advertisement

ಗುರುವಾರದಂದು  ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಹಾಗೂ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಬೆಳಿಗ್ಗೆ10 ಗಂಟೆಗೆ ಸುಳ್ಯ ತಾಲೂಕಿನ ಸಂಪಾಜೆ, ತೊಡಿಕಾನ ಹಾಗೂ ಅರಂತೋಡು ಭೂಕಂಪನ ಪ್ರದೇಶಗಳ ಭೇಟಿ ನೀಡಿ ಪರಿಶೀಲನೆ ನಡೆಸುವರು. ಬಳಿಕ ಸಂಜೆ ಮಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮಳೆಹಾನಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ. ಈ ನಡುವೆ ಸಂಪಾಜೆ-ಚೆಂಬು ಭೇಟಿಯ ವೇಳೆ ಅಗತ್ಯವಾಗಿ ಗಮನಿಸಬೇಕಾದ ಸಂಗತಿಗಳ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದಾರೆ.

ಚೆಂಬು ಪ್ರದೇಶದಲ್ಲಿ ಆಗಬೇಕಾದ್ದು...

ಸಂಪಾಜೆ ಚೆಂಬು ಪ್ರದೇಶದಲ್ಲಿ  ಸದ್ಯ ಭೂಕುಸಿತ ಹಾಗೂ ಭೂಕಂಪನದ ಭೀತಿ ಇದೆ.  ಕಳೆದ ಒಂದು ವಾರದಿಂದ 100 ಮಿಮೀ ಗಿಂತಲೂ ಅಧಿಕ ಮಳೆಯಾಗುತ್ತಿದೆ. ಭೂಕಂಪನದ ಕಾರಣದಿಂದ ಈಗ ಸುರಿಯುವ ಭಾರೀ ಮಳೆಯಿಂದ ಭೂಮಿ ಸಡಿಲಗೊಂಡು ಕುಸಿತವಾಗಬಹುದು  ಎನ್ನುವ ಆತಂಕ ಇದೆ. ಹೀಗಾಗಿ ಒಂದು ವೇಳೆ ತಕ್ಷಣಕ್ಕೆ ಭೂಕುಸಿತ ಸಂಭವಿಸಿದರೆ ಸ್ಥಳೀಯ ಯುವಕರು ಆಸುಪಾಸಿನ ಮನೆಯವರಿಗೆ ನೆರವಿಗೆ ಬರುತ್ತಾರೆ.

Advertisement

ಅದರ ಜೊತೆಗೆ ಮಳೆಗಾಲ ಮುಗಿಯುವವರೆಗೆ ಚೆಂಬು, ಸಂಪಾಜೆ ಪ್ರದೇಶದಲ್ಲಿ NDRF ಅಥವಾ ಅಗ್ನಿಶಾಮಕ ದಳದ ನಿಯೋಜನೆ ಮಾಡಬೇಕು, ಸ್ಥಳದಲ್ಲಿ ಅಥವಾ ಸ್ಥಳೀಯ ಶಾಲೆಗಳಲ್ಲಿ  ವೈದ್ಯಕೀಯ ತಂಡ ನಿಯೋಜನೆಯಾಗಬೇಕು,  ತಾತ್ಕಾಲಿಕ ಸ್ಥಳಾಂತರ ಕೇಂದ್ರ ಸ್ಥಾಪನೆಗೆ ಸಿದ್ಧತೆಯಾಗಬೇಕು,  ಅಪಾಯ ಅಂಚಿನಲ್ಲಿರುವ ಮನೆಗಳ ಸ್ಥಳಾಂತರ ಕಾರ್ಯ ನಡೆಯಬೇಕು,  ತುರ್ತು ಪರಿಸ್ಥಿತಿಗೆ ಮಣ್ಣು ತೆರವುಗೊಳಿಸುವ ಯಂತ್ರದ ನಿಯೋಜನೆಯಾಗಬೇಕು,  ಸಂಪರ್ಕ ಕಲ್ಪಿಸಲು 24 ಗಂಟೆಗಳ ಕಾಲವೂ ಮೊಬೈಲ್ ನೆಟ್‌ವರ್ಕ್ ಸುಸ್ಥಿತಿಯಲ್ಲಿರುವಂತೆ ಮಾಡಬೇಕು ಹಾಗೂ  ಸ್ಥಳೀಯ ಯುವಕರ ಸ್ವಯಂಸೇವಕ ತಂಡ ರಚನೆಯಾಗಬೇಕು ಎಂದು ಚೆಂಬು ಪ್ರದೇಶದ ನಿವಾಸಿಗಳ ಮನವಿಯಾಗಿದೆ.

ಇದರ ಜೊತೆಗೆ ಇಲ್ಲಿನ ಗುಡ್ಡ ಪ್ರದೇಶದಲ್ಲಿನ  ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲ ಆ ಕಾರಣದಿಂದ ಈಗ ಮಳೆ ನೀರು ರಸ್ತೆಯಲ್ಲಿ ಹರಿದು ಅಲ್ಲಲ್ಲಿ  ಇಂಗುತ್ತದೆ, ಈ ಕಾರಣದಿಂದ ರಸ್ತೆಯೂ ಹಾನಿಯಾಗುತ್ತದೆ. ಇದಕ್ಕೆ ತಕ್ಷಣದ ವ್ಯವಸ್ಥೆಯಾಗಬೇಕು, ಚೆಂಬು-ಉಂಬಾಳೆ ಸಂಪರ್ಕ ಹಾಗೂ ನೆಟ್ವರ್ಕ್‌ ಸಮಸ್ಯೆ ನಿವಾರಣೆಗೆ ಕ್ರಮವಾಗಬೇಕು ಎಂಬುದು ಚೆಂಬು ಪ್ರದೇಶದ ಜನರ ಒತ್ತಾಯ.

Advertisement

ಸರ್ಕಾರವು ಚೆಂಬು -ಸಂಪಾಜೆ ಹಾಗೂ ಆಸುಪಾಸಿನ ಪ್ರದೇಶದ ಭೂಕಂಪನ ಮತ್ತು ಭೂಕುಸಿತವನ್ನು ಗಂಭೀರವಾಗಿ ತೆಗದು ಕೊಳಬೇಕು. ಏಕೆಂದರೆ ಅಲ್ಲಲ್ಲಿ ಭೂಕುಸಿತ, ಬರೆ ಕುಸಿತ ಸಂಭವಿಸುತ್ತಿದೆ. ಭಾರೀ ಕುಸಿತದ ಮುನ್ನ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿದ್ಧತೆಯಾಗಬೇಕು. ತಕ್ಷಣಕ್ಕೆ ಜನರ ರಕ್ಷಣೆಗೆ ಬೇಕಾದ ವ್ಯವಸ್ಥೆಗಳು ಸ್ಥಳದಲ್ಲಿ ನಿಯೋಜನೆ ಆಗಬೇಕಾಗಿದೆ ಎಂದು ಜನರ ಮನವಿ.

ಹೀಗಿದೆ ಚೆಂಬು ಪ್ರದೇಶ :  ಕಳೆದ ಅನೇಕ ವರ್ಷಗಳಿಂದ ಅಡಿಕೆ ಕೃಷಿಯನ್ನೇ ನಂಬಿ ಇಲ್ಲಿನ ಜನರು ಜೀವನ ಸಾಗಿಸುತ್ತಿದ್ದರು. ಆದರೆ ಅಡಿಕೆ ಹಳದಿ ಎಲೆ ರೋಗ ಬಂದ ಬಳಿಕ ಇಲ್ಲಿನ ಕೃಷಿ ಬದಲಾವಣೆಗೆ ಆರಂಭವಾಯಿತು. ಅಡಿಕೆ ಕೃಷಿಯ ಜೊತೆಗೆ ರಬ್ಬರ್‌ ಕೃಷಿ ಕಳೆದ ಸುಮಾರು 15 ವರ್ಷಗಳಿಂದ ಇಲ್ಲಿ  ಆರಂಭವಾಗಿದೆ. ಇಲ್ಲಿ ಗುಡ್ಡದ ಸಾಕಷ್ಟು ಪ್ರದೇಶದಲ್ಲಿ ರಬ್ಬರ್‌ ಕೃಷಿ ಇದೆ. ಇಲ್ಲಿನ ಬಹುಪಾಲು ಅಡಿಕೆ ತೋಟಗಳಿಗೆ ಈಗ ನೀರುಣಿಸುವ ಅವಶ್ಯಕತೆ ಇಲ್ಲ. ಇರುವ ತೋಟಗಳಿಗೆ ಗುಡ್ಡಗಳಿಂದ ಬರುವ ನೀರೇ ಕೃಷಿಗೆ ಆಧಾರ. ಹೀಗಾಗಿ ಕೊಳವೆ ಬಾವಿ ಇಲ್ಲಿ ತೋಡುವ ಅಗತ್ಯ ತೀರಾ ಕಡಿಮೆ.

ಮಳೆ ವಿಪರೀತವಾದಾಗ ಇಲ್ಲಿನ ರಬ್ಬರ್‌ ಗುಡ್ಡದಲ್ಲಿ  ಸಾಕಷ್ಟು ನೀರು ಇಂಗುತ್ತದೆ. ಈ ಕಾರಣದಿಂದ ಗುಡ್ಡದ ತಳಭಾಗದ ತೋಟಗಳಲ್ಲಿ  ನೀರಿನ ವರತೆ ಸಾಕಷ್ಟು ಕಂಡುಬರುತ್ತದೆ. ಈಗ ರೋಗದಿಂದ ನಾಶವಾಗುತ್ತಿರುವ ಅಡಿಕೆ ಕೃಷಿಯ ಜೊತೆಗೆ  ಕೆಲವರು ಹೈನುಗಾರಿಕೆಯನ್ನು ನಡೆಸುತ್ತಿದ್ದಾರೆ. ಇನ್ನೂ ಹಲವರು ನಗರದಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಇರುವ ಕೃಷಿ ಭೂಮಿಯನ್ನು ಮಾರಾಟ ಮಾಡದೆ ಅಡಿಕೆ ಬದಲಾಗಿ ರಬ್ಬರ್‌ ಹಾಗೂ ಇತರ ಕೃಷಿ ಮಾಡಿ ಬರುವ ಆದಾಯವನ್ನು  ಪಡೆಯುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಕಣ್ಣ ಮುಂದೆಯೇ ಕೃಷಿ ನಾಶವಾಗುವುದು ಕಾಣುತ್ತಲೇ ಪರ್ಯಾಯ ಕೃಷಿ ಮಾಡಿ ಬದುಕು ಗಟ್ಟಿಯಾಗುತ್ತದೆ ಅಂದಾಗಲೇ ಈಗ ಗ್ರಾಮದಲ್ಲೇ ಉಳಿದವರಿಗೆ ಭಾರೀ ಮಳೆ, ಭೂಕಂಪನ, ಭೂಕುಸಿತ ಆತಂಕಕ್ಕೆ ಕಾರಣವಾಗಿದೆ. ಭೂಕುಸಿತವಾದರೆ ಮುಂದೇನು ? ಈ ಪ್ರಶ್ನೆ ಕಾಡುತ್ತಿದೆ. ಇದರ ಜೊತೆಗೆ ಹಲವಾರು ಮೂಲಭೂತ ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಇಲ್ಲಿ.

ಚೆಂಬು ಪ್ರದೇಶದಲ್ಲಿ ಬೆರಳೆಣಿಕೆಯ ಕೊಳವೆಬಾವಿಗಳು ಇದೆ. ಹೀಗಾಗಿ ಈ ಕಾರಣದಿಂದ ಈ ಪ್ರದೇಶದಲ್ಲಿ ಭೂಕಂಪನ ಸಾಧ್ಯವೇ ? ತಜ್ಞರು ಈ ನೆಲೆಯಲ್ಲಿ ಕೂಡಾ ಅಧ್ಯಯನ ನಡೆಸುತ್ತಿದ್ದರೆ, ಈ ಗ್ರಾಮದಿಂದ ಕೊಂಚ ದೂರಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ, ದೂರದಲ್ಲಿ ಅಣೆಕಟ್ಟು ಇದೆ, ಇದೆಲ್ಲಾ ಕಾರಣವೇ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಆದರೆ ಕಳೆದ ಸುಮಾರು 15 ವರ್ಷಗಳಿಂದ ವಿಪರೀತವಾಗಿ ನೀರು ಇಂಗುವ ವ್ಯವಸ್ಥೆ ಇಲ್ಲಿ ನಡೆಯುತ್ತಿದೆ. ರಬ್ಬರ್‌ ಕೃಷಿ, ಇಂಗುಗುಂಡಿ ಮೊದಲಾದ ಕಾರಣಗಳಿಂದ ನೀರು ಇಂಗುತ್ತದೆ.

Advertisement

ಆದರೆ ಅದೇ ಪ್ರಮಾಣದಲ್ಲಿ ನೀರಿನ ಒಸರು ಕಡಿಮೆಯಾಗುತ್ತದೆ. ದೂರದ ತಗ್ಗು ಪ್ರದೇಶದಲ್ಲಿ ಒಸರಾಗುವ ಭಾಗಗಳಲ್ಲಿ ಕಟ್ಟಡಗಳು ಇವೆ. ಈ ತಡೆಗಳು ಅಲ್ಲಲ್ಲಿ ಇದೆ.  ಇದರಿಂದ ಮಣ್ಣು ಸಡಿಲವಾಗುತ್ತಿದೆಯೇ ? ಇದೆಲ್ಲಾ ಕಾರಣದಿಂದ ಭೂಕುಸಿತ ಹೆಚ್ಚಾಗುತ್ತಿದೆಯೇ ? ಎಂಬ ಸಂದೇಹಗಳು ಇತ್ತೀಚೆಗೆ ಇದೆ. 2018 ರ ಭೂಕುಸಿತಗಳ ನಂತರ ಇದುವರೆಗೂ ಗಂಭೀರವಾಗಿ ಅಧ್ಯಯನದ ಬಗ್ಗೆ ಸರ್ಕಾರಗಳು, ಇಲಾಖೆಗಳು ಮುಂದಾಗದೇ ಇರುವುದು  ಈಗಿನ ದುರಂತಗಳಿಗೆ ಕಾರಣವಾಗುತ್ತಿದೆ.

ಚೆಂಬು ಪ್ರದೇಶದಲ್ಲಿ ಭೂಕಂಪ, ಭೂಕುಸಿತದ ಭಯದ ನಡುವೆ ಬದುಕು ಸಾಗಿಸಬೇಕಾದ ಸಂದರ್ಭ ಈಗ ಇದೆ. ಆದರೆ ಕೃಷಿ ಹಾಗೂ ಭೂಮಿ ಬಿಟ್ಟು ತಕ್ಷಣಕ್ಕೆ ಹಳ್ಳಿಯ ಪ್ರದೇಶದಿಂದ ತೆರಳುವುದು ಕೂಡಾ ಅಸಾಧ್ಯ. ಕೃಷಿ ಕಾರ್ಯಗಳು ನಿಲ್ಲಿಸಿದರೆ ಮಳೆಗಾಲದ ನಂತರದ ಬದುಕಿನ ಬಗ್ಗೆಯೂ ಆತಂಕವಿದೆ. ಹೀಗಾಗಿ ಇಲ್ಲಿ ಈಗ ಇಲ್ಲಿನ ಆತಂಕ ನಿವಾರಣೆ ಹಾಗೂ ಸೂಕ್ತವಾದ ಮಾಹಿತಿಯನ್ನು ಇಲಾಖೆಗಳೇ ಸ್ಥಳದಲ್ಲಿ ನೀಡುವ ಕೆಲಸ ಆಗಾಗ ಮಾಡಬೇಕು. ಭೂಕಂಪನ, ಭೂಕುಸಿತದ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುವ ಕೆಲಸ ಆಗಬೇಕಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group