ಭೂಕುಸಿತದ ಪ್ರವಾಹದಿಂದ ಕೊಚ್ಚಿ ಹೋದ ಸೇತುವೆ ಇನ್ನೂ ದುರಸ್ತಿಯಾಗಿಲ್ಲ…! | ಕೊಲ್ಲಮೊಗ್ರದ ಬೆಂಡೋಡಿಯ ಕತೆ ಇದು |

August 3, 2024
4:40 PM

ವಯನಾಡು ಜಿಲ್ಲೆಯ ಮಂಡಕ್ಕೈ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಘಟನೆ ಈಗ ಚರ್ಚೆಯಾಗುತ್ತಿದೆ. ಹಲವು ಉಪಕ್ರಮಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರ್ಕಾರಗಳು ಹಲವು ಭರವಸೆಗಳನ್ನು ನೀಡುತ್ತಿವೆ. ಆದರೆ ಈ ಹಿಂದೆ ನಡೆದಿರುವ ಭೂಕುಸಿತ ಹಾಗೂ ಪ್ರಾಕೃತಿಕ ವಿಕೋಪದ ನಂತರ ಅಲ್ಲಿನ ಪರಿಸ್ಥಿತಿ ಹೇಗಿದೆ..? ಈ ಬಗ್ಗೆ ವಿಶೇಷವಾದ ವರದಿ ಇಲ್ಲಿದೆ……..ಮುಂದೆ ಓದಿ….

Advertisement
Advertisement

ಎರಡು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಪ್ರದೇಶವಾದ ಸುಳ್ಯ ತಾಲೂಕಿನ ಕಲ್ಮಕಾರು ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು. ಮಳೆಯಾಗುತ್ತಿದ್ದಂತೆಯೇ ಗುಡ್ಡ ಪ್ರದೇಶದಲ್ಲಿ ಕುಸಿತ ಆರಂಭವಾಗಿ ಪ್ರವಾಹ ಸೃಷ್ಟಿಯಾಯಿತು. ಕಲ್ಮಕಾರು, ಕೊಲ್ಲಮೊಗ್ರ ಹಾಗೂ ಹರಿಹರ ಪಲ್ಲತ್ತಡ್ಕ ಪ್ರದೇಶದ ನದಿ ಅಕ್ಕಪಕ್ಕದ ಕೃಷಿ ಭೂಮಿ, ಮನೆಗಳಿಗೆ ಹಾನಿಯಾಯಿತು. ಆದರೆ ಇಲ್ಲಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಅಷ್ಟೊಂದು ಮನೆಗಳು ಇರಲಿಲ್ಲ ಹಾಗೂ ಮೇಘಸ್ಫೋಟ ಹಾಗೂ ಭೂಕುಸಿತದ ಪ್ರಭಾವ ಕಡಿಮೆ ಇತ್ತು. ಹೀಗಾಗಿ ಹಾನಿಗಳು ಕಡಿಮೆಯಾದವು. ಇಲ್ಲೂ ಕೂಡಾ 3 ಗ್ರಾಮಗಳ ನದಿ ಪಕ್ಕದ ಮನೆಗಳಿಗೂ ಹಾನಿಯಾಗಿತ್ತು. ಅದೇ ಮಾದರಿಯಲ್ಲಿ ಸಂಪಾಜೆ, ಚೆಂಬು ಪ್ರದೇಶದಲ್ಲಿ ಅದೇ ಮಾದರಿಯಲ್ಲಿ ಕುಸಿತವಾಗಿತ್ತು, ಭಾರೀ ಮಳೆಯೂ ಆಗಿತ್ತು. ಮಳೆಯ ಕಾರಣದಿಂದ ಬೆಟ್ಟದಲ್ಲಿ ಭಾರೀ ಸದ್ದು ಕೇಳುತ್ತಾ ಕುಸಿತವಾಗಿತ್ತು ಬೆಟ್ಟ. ಅದರ ವ್ಯಾಪ್ತಿಯೂ ಸಾಕಷ್ಟು ದೂರದವರೆಗೆ ಅಪಾರ ಹಾನಿಯಾಗಿತ್ತು. 

ಈ ಘಟನೆ ನಡೆದು ಎರಡು ವಾರಗಳ ಕಾಲ ಅನೇಕ ಸ್ವಯಂಸೇವಾ ಸಂಘಟನೆಗಳು , ಸರ್ಕಾರ, ಆಡಳಿತವು ಸ್ಥಳಕ್ಕೆ ಆಗಮಿಸಿ ಗ್ರಾಮದ ಜನರಿಗೆ ನೆರವು ನೀಡಿದರು. ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಆಗ ಸ್ಥಳಕ್ಕೆ ಆಗಮಿಸಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಹಾನಿಯಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮರುಸ್ಥಾಪನೆ ಮಾಡುವುದಾಗಿ ಭರವಸೆ ನೀಡಿ ತೆರಳಿದ್ದರು. ಮಾಧ್ಯಮಗಳ ಮುಂದೆ ಲಕ್ಷ-ಕೋಟಿಯ ಅನುದಾನಗಳ ಬಗ್ಗೆಯೂ ಹೇಳಿದ್ದರು. ಆ ಭರವಸೆಗಳಿಗೆಲ್ಲಾ ವರ್ಷ ಎರಡು ಕಳೆದಿದೆ. ಇಂದಿಗೂ ಕೆಲವು ಕಡೆ ಜನರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಮಳೆಗಾಲ ವಾಹನ ಸಂಚಾರವೂ ಇಲ್ಲದೆ ದ್ವೀಪದ ಮಾದರಿಯ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೊಂದು ಉದಾಹರಣೆ ಕಲ್ಮಕಾರು-ಕೊಲ್ಲಮೊಗ್ರ ಭಾಗದ ಬೆಂಡೋಡಿ ಎನ್ನುವ ಊರು.

ಕಲ್ಮಕಾರಿನಲ್ಲಿ ಉಂಟಾದ ಭೂಕುಸಿತದಿಂದ ಸುಮಾರು 4 ಕಿಮೀ ದೂರದಲ್ಲಿರುವ ಕೊಲ್ಲಮೊಗ್ರದ  ಬಳಿಯ ಬೆಂಡೋಡಿ ಸೇತುವೆ ಕೊಚ್ಚಿ ಹೋಗಿತ್ತು.ಕೆಸರು ಮಣ್ಣಿನ ಜೊತೆ ಭಾರೀ ಪ್ರಮಾಣದ ಮರದ ರಾಶಿಗಳೂ ಹರಿದು ಬಂದಿದ್ದರಿಂದ ಹಲವು ಸೇತುವೆಗಳಲ್ಲಿ ಬಿರುಕು ಬಿಟ್ಟಿತ್ತು, ಹಾನಿಗೊಳಗಾಗಿತ್ತು.  ಅನೇಕ ಮನಗೆಳಿಗೆ , ಕಟ್ಟಡಗಳಿಗೆ ಹಾನಿಯಾಗಿತ್ತು. ಅದರಲ್ಲಿ ಬೆಂಡೋಡಿ ಸೇತುವೆಯೂ ಒಂದು.

ಅಂದು ಕೊಲ್ಲಮೊಗ್ರದಿಂದ ಬೆಂಡೋಡಿ ಸಂಪರ್ಕ ರಸ್ತೆ ತೀವ್ರವಾಗಿ ಹಾನಿಗೊಳಗಾಗಿ ಸುಮಾರು 250 ಮನೆಗಳು ನಗರದ ಸಂಪರ್ಕ ಕಳೆದುಕೊಂಡಿದ್ದವು. ಪ್ರವಾಹಕ್ಕೂ ಮುನ್ನ ಈ ಊರು ಸಂಕಷ್ಟದಿಂದ ಪಾರಾಗಲು ಸೇತುವೆ ನಿರ್ಮಾಣ ಮಾಡಿ ಕೆಲ ಸಮಯವಷ್ಟೇ ಆಗಿತ್ತು. ಅಷ್ಟರಲ್ಲೇ ಪ್ರವಾಹಕ್ಕೆ ಸಿಲುಕು ಅರ್ಧ ಭಾಗ ಕೊಚ್ಚಿ ಹೋಗಿತ್ತು. ಆ ನಂತರ ಸ್ಥಳೀಯರ ಪ್ರಯತ್ನದಿಂದ ಮೋರಿ ಅಳವಡಿಕೆ ಮಾಡಿದರು, ಅದೂ ಮತ್ತೆ ಕೊಚ್ಚಿ ಹೋಯಿತು. ಆ ಬಳಿಕ ಮೂರು-ನಾಲ್ಕು ಬಾರಿ ಈ ಮೋರಿ ಕೊಚ್ಚಿ ಹೋಗಿತ್ತು, ಸ್ಥಳೀಯರು ಅಳವಡಿಕೆ ಮಾಡಿದ್ದ ಕಾಲು ಸಂಕವೇ ಗತಿಯಾಗಿತ್ತು. ಈಗ ತಾತ್ಕಾಲಿಕವಾಗಿ ದುರಸ್ತಿಯಾದರೂ ಇನ್ನೊಮ್ಮೆ ಮಳೆಯಾದರೆ ಮತ್ತೆ ಕೊಚ್ಚಿ ಹೋಗುವುದೂ ನಿಶ್ಚಿತ. ಈ ನಡುವೆ ಈಗ ಸ್ಥಳೀಯ ಪಂಚಾಯತ್‌ ಇಲ್ಲಿ ಎಚ್ಚರಿಕೆ ಫಲಕ ಅಳವಡಿಕೆ ಮಾಡಿದೆ, ಸೇತುವೆ ಶಿಥಿಲವಾಗಿರುವ ಬಗ್ಗೆ ಪಂಚಾಯತ್‌ ಕೂಡಾ ಹೇಳುತ್ತದೆ.

ಎರಡು ಸಲ ಭೂಕುಸಿತ ಹಾಗೂ ಪ್ರವಾಹ ಬಂದಾಗ ಇಡೀ ಬೈಲು ಮುಳುಗಿ ಹೋಗಿತ್ತು. ಆಗ ಎಲ್ಲರೂ ಬಂದಿದ್ದಾರೆ, ಪರಿಹಾರ ಅಂತ ಹೇಳ್ತಾರೆ, ಆದರೆ ಯಾರಿಗೂ  ಏನೂ ಸಿಗಲಿಲ್ಲ. ಅವತ್ತು ನಾವು ಮುಂದೆ ಹೇಗೆ ಬದುಕುವುದು ಎನ್ನುವ ಸ್ಥಿತಿ ಇತ್ತು, ತೋಟ ಎಲ್ಲಾ ಮುಳುಗಡೆಯಾಗಿತ್ತು ಎಂದು ಬೆಂಡೋಡಿಯ ನಾರಾಯಣ ಅವರು ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

ಪ್ರವಾಹದ ನಂತರ ಈ ಸೇತುವೆಗಾಗಿ ಸ್ಥಳೀಯರು ಅನೇಕ ಬಾರಿ ಮನವಿಯನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದಾರೆ. ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೂ ಸೇತುವೆ ಕಾಯ ನಡೆದಿಲ್ಲ. ಈ ಬಾರಿ ನೂತನ ಸಂಸದರಿಗೂ ಸ್ಥಳೀಯರು ಮನವಿ ಮಾಡಿದ್ದಾರೆ. ಸುಮಾರು 250 ಮನೆಗಳಿಗೆ ಈ ಸೇತುವೆ ಅವಶ್ಯಕತೆ ಇದೆ.  ಬೆಂಡೋಡಿಯ ಶಾಲೆಯ ಸಂಪರ್ಕಕ್ಕೂ ಈ ಸೇತುವೆ ಅಗತ್ಯ ಇದೆ. ಈಚೆಗೆ ಈ ಶಾಲೆಯ ಮಕ್ಕಳು ವಿಧಾನಸಭೆಗೂ ತೆರಳಿದ ವೇಳೆ ಅಲ್ಲೂ ಮನವಿ ಮಾಡಿದ್ದಾರೆ.

ಪ್ರವಾಹ ಬರುವಾಗ ಎಲ್ಲರೂ ಬರುತ್ತಾರೆ ನಂತರ ಯಾರೂ ಇಲ್ಲ, ನಮಗೆ ಯಾವಾಗಲೂ ಇದೇ ಪರಿಸ್ಥಿತಿ ಎಂದು ಹೇಳುತ್ತಾರೆ ಬೆಂಡೋಡಿ ಪುರುಷೋತ್ತಮ.

ಪತ್ರಕರ್ತರ ಗ್ರಾಮ ವಾಸ್ತವ್ಯದ ವೇಳೆಯೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆನ್‌ಲೈನ್‌ ಮೂಲಕವೂ ಮನವಿ ಮಾಡಿದ್ದಾರೆ ಗ್ರಾಮಸ್ಥರು. ಇದೆಲ್ಲಾ ಎಲ್ಲೋ ಒಂದು ಕಡೆ ದಾಖಲಾಗಿ ನಂತರ ಸದ್ದಿಲ್ಲದಾಗುತ್ತದೆ. ಫಲಿತಾಂಶ ಮಾತ್ರಾ ಶೂನ್ಯ. ಹಲವು ಬಾರಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾದರೂ ಕಣ್ಣೆತ್ತಿಯೂ ನೋಡಲಿಲ್ಲ ಅಧಿಕಾರಿಗಳು, ಪ್ರತಿನಿಧಿಗಳು.  ಪ್ರವಾಹದ ನೆಪದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡಿ ಮರೆಯಾಗುವ ಚಾಳಿ ಹೆಚ್ಚಾಗಿದೆ. ಎರಡು ವರ್ಷ ಕಳೆದರೂ ಗ್ರಾಮೀಣ ಭಾಗದ ಸಂಪರ್ಕವನ್ನು ಸಾಧಿಸಲು ವ್ಯವಸ್ಥೆ ಮಾಡಲು ಈ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಇದು ಎನ್ನಲೇಬೇಕಿದೆ.

ಅಂದಿನ ಪ್ರವಾಹದ ಸಂದರ್ಭ ನಮ್ಮ ಕೃಷಿ ಭೂಮಿಗೆ ಹಾನಿಯಾಗಿತ್ತು. ಕಳೆದ ವರ್ಷದಿಂದ ನಮಗೆ ಇಳುವರಿ ಕಡಿಮೆಯಾಗಿದೆ. ಈ ಬಗ್ಗೆ ಪರಿಹಾರ ಕೇಳಿಲ್ಲ. ಆದರೆ ನಮಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಎಂದಷ್ಟೇ ನಾವು ಕೇಳಿರುವುದು ಎಂದು ಹೇಳುತ್ತಾರೆ ಬೆಂಡೋಡಿಯ ಮೋಹನ. 

ಸಂಪಾಜೆ, ಚೆಂಬು ಭಾಗದಲ್ಲೂ ಅದೇ ರೀತಿಯ ಪರಿಸ್ಥಿತಿ ಅಂದು ಉಂಟಾಗಿತ್ತು. ಸೇತುವೆ ಕೊಚ್ಚಿ ಹೋಗಿರುವುದು, ಮನೆಗಳಿಗೆ ಹಾನಿ, ಕೃಷಿ ನಾಶವೂ ಆಗಿತ್ತು. ಎಲ್ಲೋ ಕೆಲವು ಕಡೆ ಪರಿಹಾರದ ಸಿಕ್ಕಿದೆ, ಇನ್ನೂ ಅನೇಕರಿಗೆ ಯಾವುದೂ ಸಿಗಲಿಲ್ಲ ಎನ್ನುತ್ತಾರೆ ಸ್ಥಳೀಯರು.

ನೀವು ಇಲ್ಲಿ ಪ್ರತಿಕ್ರಿಯೆ ನೀಡಬಹುದು…..

Two years ago, there was heavy rainfall in the Kalmakaru area of Sullia taluk in the Western Ghats. The downpour led to landslides in the hilly regions and resulted in flooding. Agricultural land and houses were severely damaged along the river in Kalmakaru, Kollamogra, and Harihar Pallattadka areas.

After the arrival of all the people’s representatives at the location, the officials made assurances to restore all the damaged infrastructure . They also informed the media about the substantial grants allocated for this purpose. However, two years have elapsed since those promises were made, and in some areas, people still struggle with ongoing challenges. During the rainy season, certain areas experience a situation akin to being isolated due to lack of vehicular traffic.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror