ರಾಜ್ಯದಾದ್ಯಂತ ವರುಣ ಮತ್ತೆ ಅಬ್ಬರಿಸಿದ್ದಾರೆ. ಅದರಲ್ಲೂ ಪಶ್ಚಿಮಘಟ್ಟದ ತಪ್ಪಲು ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಜಲ ಪ್ರಳಯದ ಪರಿಸ್ಥಿತಿ ಉಂಟಾಗಿದೆ. ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತಗೊಂಡಿದೆ. ಕೊಡಗಿನಲ್ಲೂ ಭಾರೀ ಮಳೆಯಾಗುತ್ತಿದೆ, ಸಂಪಾಜೆ ಘಾಟಿ ರಸ್ತೆಯೂ ಸಂಚಾರ ಸ್ಥಗಿತದ ಭೀತಿಯಲ್ಲಿದೆ. ಚಾರ್ಮಾಡಿಯಲ್ಲಿ ಮರ ಬಿದ್ದು ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.
ಭಾರೀ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ರಸ್ತೆ ಬದಿಯ ಭೂಕುಸಿತಕ್ಕೆ ಲಾರಿ ಉರುಳಿ ಬಿದ್ದಿದ್ದು ಲಾರಿಯ ಸಮೀಪ ಮಂಗಳೂರಿಗೆ ಹೋಗುತ್ತಿದ್ದ ಎರಡು ಕಾರುಗಳು ಮತ್ತು ಟ್ಯಾಂಕರ್ ಸಿಲುಕಿವೆ.ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ಹಳಿಗೆ ಗುಡ್ಡ ಕುಸಿದು ಮಂಗಳೂರು- ಬೆಂಗಳೂರು ರೈಲು ಸ್ಥಗಿತಗೊಂಡಿದೆ. ಮಳೆಯಿಂದ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿ ಬಳಿ ಎರಡೂ ನದಿಗಳು ಸಂಗಮವಾಗುವ ಸ್ಥಳದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸಂಗಮ ಕ್ಷೇತ್ರದಲ್ಲಿ ಎರಡೂ ನದಿ ಸಂಗಮವಾಗುವ ಲಕ್ಷಣ ಇದೆ.
ಮಳೆಯ ಅಬ್ಬರದಿಂದ ಎನ್‌ಆರ್‌ಪುರ ತಾಲೂಕಿನ ಮಹಲ್ಗೋಡು ಸೇತುವೆ ಸಹ ಮುಳುಗಡೆಯಾಗಿದೆ. ಪರಿಣಾಮ ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಸೇತುವೆ ಜಾಲಾವೃತವಾಗಿದ್ದು ಜನ ಪರದಾಡುವಂತಾಗಿದೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಬಂದ್ ಇನ್ನೂ ಶೃಂಗೇರಿಯ ನೆಮ್ಮಾರು ಬಳಿ ಹೆದ್ದಾರಿ 169ರಲ್ಲಿ ತುಂಗಾ ನದಿ ಸೇತುವೆ ಮೇಲೆ ಹರಿಯುತ್ತಿದ್ದು, ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಇನ್ನೂ ನದಿಯ ಆರ್ಭಟ ಕಂಡು ವಾಹನ ಚಾಲಕರು ಭಯಗೊಂಡು ವಾಪಸ್ಸಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ತ್ರಿವೇಣಿ ಸಂಗಮ ಮುಳುಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆಯಿಂದ ಸುರಿದ ಭಾರಿ ಮಳೆಗೆ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯ ಮುಂಭಾಗದ ಮೆಟ್ಟಿಲುವರೆಗೆ ನೀರು ಆವರಿಸಿದೆ.ಭಾಗಮಂಡಲ ಸಂಪೂರ್ಣವಾಗಿ ಜಲಾವೃತವಾಗಿದೆ. ಕೆಳಭಾಗದ ನಾಪೋಕ್ಲು ರಸ್ತೆ ಮತ್ತು ಮಡಿಕೇರಿ ರಸ್ತೆ ಮುಳುಗಡೆಯಾಗಿದೆ. ಮಳೆ, ಗಾಳಿಯ ಆರ್ಭಟಕ್ಕೆ ಈ ಭಾಗದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಘಟಪ್ರಭಾ ನದಿಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಊರಿಗೆ ಊರೇ ಜಲ ಪ್ರಳಯದಲ್ಲಿ ಮುಳುಗಿಹೊಗಿದೆ. 500 ಮನೆಗಳ ಇಡಿ ಗ್ರಾಮವನ್ನು ಸುತ್ತುವರೆದಿರುವ ನದಿ ಹೊಲ ಗದ್ದೆ, ದೇವಸ್ಥಾನ ಮನೆಗಳು ನೀರಿನಲ್ಲಿ ತೇಲಿ ಅವಾಂತರ ಸೃಷ್ಟಿಸಿದೆ.