ಕುಟುಂಬದ ಆಸ್ತಿಯಲ್ಲಿ ತನಗೆ ಸಿಗಬೇಕಾದ ಪಾಲಿನಲ್ಲಿ ಅನ್ಯಾಯವಾಗಿದೆ ಎಂಬ ಅಳಲನ್ನು ಒಬ್ಬಾತ ರೈತ ನನ್ನಲ್ಲಿ ಹೇಳಿದ, “ನೀನು ನನ್ನಲ್ಲಿ ಹೇಳುವುದಕ್ಕಿಂತ ಒಬ್ಬ ಲಾಯರ್ರಲ್ಲಿ ಹೇಳು. ಕೋರ್ಟ್‍ನಲ್ಲಿ ದಾಯಾದಿಗಳ ವಿದುದ್ಧ ಕೇಸ್ ಹಾಕಬಹುದಲ್ವಾ? ನಿನ್ನ ರಕ್ಷಣೆಗೆ ನ್ಯಾಯಾಲಯ ಇದೆ” ಎಂದೆ. ಆತನ ತಕ್ಷಣದ ಪ್ರತಿಕ್ರಿಯೆ ಹೀಗಿತ್ತು: “ಕೋರ್ಟ್? ಹೆದ್ರಿಕೆ ಆಗ್ತದೆ ಸಾರ್”. ಆತನ ಧ್ವನಿಯಲ್ಲಿ ಗಾಬರಿ ತುಂಬಿತ್ತು. ಕೋರ್ಟ್‍ಗೆ ಹೋಗುವುದೆಂದರೆ ಆಗಲೇ ಜೈಲಿಗೆ ನುಗ್ಗಿದಂತಹ ಕಂಪನ ಆತನ ಧ್ವನಿಯಲ್ಲಿತ್ತು.
“ನೀನು ನ್ಯಾಯ ಕೇಳಲು ಹೋಗುವುದಲ್ವಾ? ನಿನಗೇಕೆ ಹೆದ್ರಿಕೆ? ನಿನ್ನ ಎದುರು ಪಾರ್ಟಿಯವರು ಹೆದರಬೇಕು!!”
“ಇಲ್ಲಾ ಸಾರ್, ಅದೆಲ್ಲಾ ಹೇಳಿದಷ್ಟು ಸುಲಭ ಇಲ್ಲ. ಕೋರ್ಟ್‍ಗೆ ಹೋಗಿ ನ್ಯಾಯ ಪಡೆದವರಿಗಿಂತ ಕಳಕೊಂಡವರೇ ಹೆಚ್ಚು. ನಾನು ಆ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ.” ಆತ ಹಳ್ಳಿಯ ಕೃಷಿಕನಾದರೂ ಕೋರ್ಟ್ ವ್ಯವಹಾರ ಎಂದರೆ ಅದು ಮುಳ್ಳಿನ ರಾಶಿಯನ್ನು ಮೈಮೇಲೆ ಎಳೆದುಕೊಂಡಂತೆ ಎಂಬ ವಾಸ್ತವ ಅವನ ಮನಸ್ಸಿನಲ್ಲಿ ನೆಲೆಗೊಂಡಿತ್ತು.
ಇದು ಸುಖಾಸುಮ್ಮನೆ ಆತನ ಭ್ರಮೆಯಲ್ಲ. ಇಂದಿನ ನ್ಯಾಯಾಲಯಗಳಲ್ಲಿ ನಡೆಯುವ ನ್ಯಾಯದಾನ ಪ್ರಕ್ರಿಯೆಯ ಆಮೆಗತಿಯೇ ಅಲ್ಲಿಗೆ ಕಾಲಿಟ್ಟವರನ್ನು ಹಿಂಡಿ ಹಿಪ್ಪೆ ಮಾಡಲು ಸಾಕು. Justice delayed is justice done ಆಗುವುದಿಲ್ಲ. ನಾನೂ ಪಿಎಫ್ ಸಂಸ್ಥೆಯ ಮೇಲೆ ಕೇಸ್ ಹಾಕಿ ನ್ಯಾಯಾಲಯಕ್ಕೆ ಎಡತಾಕಿದ್ದೆ. ಒಬ್ಬ ಪ್ರಾಧ್ಯಾಪಕನಾಗಿದ್ದು ನ್ಯಾಯಾಲಯಕ್ಕೆ ಹೋಗುವುದೆಂದರೆ ಅದೊಂದು ಮುಜುಗರದ ಪರಿಸ್ಥಿತಿಯಾಗಿದ್ದರೂ ನಿಧಾನಕ್ಕೆ ಮತ್ತೆ ಮತ್ತೆ ಹೋಗುತ್ತಿದ್ದಂತೆ ಆ ಮುಜುಗರ ಕಡಿಮೆಯಾಯಿತು. ಆದರೆ ಅಲ್ಲಿ ಕಾಯುವವರೆಲ್ಲರೂ ಚಿಂತಾತುರರಾಗಿಯೇ ಇರುತ್ತಾರೆ. ಆಸ್ಪತ್ರೆಗಳಲ್ಲಿ ಭೇಟಿಯಾಗುವ ರೋಗಿಗಳ ಬಂಧುಗಳಂತೆ ಕೋರ್ಟ್‍ನಲ್ಲಿ ದಾವೆದಾರರಾಗಿಯೋ ಅಪರಾಧಿಗಳಾಗಿಯೋ ಬಂದಿರುವವರು ತಮ್ಮ ಈ ಜಾಲದಿಂದ ಮುಕ್ತಿ ಪಡೆಯುವ ಚಿಂತೆಯಲ್ಲಿರುತ್ತಾರೆ. ಏಕೆಂದರೆ ಒಂದು ದೂರನ್ನು ಸಾದ್ಯಂತ ವಿಚಾರಣೆ ಮಾಡಿ ಮುಗಿಸಿ ಬಿಡುವ ಸಾಧ್ಯತೆಯೇ ನ್ಯಾಯಾಲಯದಲ್ಲಿ ಇಲ್ಲ. ಕೇಸ್ ಹಾಕಿದಿರೆಂದರೆ ವಾಯಿದೆಗೆ ಸರಿಯಾಗಿ ನಿಗದಿಪಡಿಸಿದ ದಿನ ಹೋಗುತ್ತಿರಬೇಕು. ಅಲ್ಲಿ ಮುಂಜಾನೆ ನ್ಯಾಯಾಧೀಶರೆದುರು ಹಾಜರಿಯ ಸರದಿಗಾಗಿ ಕಾಯುತ್ತಿರಬೇಕು. ನಂತರ ಅಪರಾಹ್ನ ವಿಚಾರಣೆಯ ಸರದಿಗಾಗಿ ಕಾಯಬೇಕು. ಈ ಸರದಿಯಲ್ಲಿ ತನ್ನ ಪಾಳಿ ಬಂದಾಗ ಸರಿಯಾಗಿ ಊಟ, ಕಾಫಿ ಇಲ್ಲದೆ ದೂರುದಾರ ಮತ್ತು ಆರೋಪಿತರು ದಣಿದಿರುತ್ತಾರೆ. ಒಳಗೆ ನ್ಯಾಯಾಧೀಶರಿಗೆ ಕಾಣಿಸುವಂತೆ ಹೋಗಿ ಕಟಕಟೆಯಲ್ಲಿ ನಿಂತವರಿಗೆ ನ್ಯಾಯಾಧೀಶರು ಮತ್ತು ಲಾಯರ್ರು ಮಾತಾಡುವುದು ಕಾಣಿಸುತ್ತದೆ. ನಂತರ ಲಾಯರ್ರು ಹತ್ತಿರ ಬಂದು ಮುಂದಿನ ವಾೈದೆಯ ದಿನಾಂಕವನ್ನು ತಿಳಿಸುತ್ತಾರೆ. ಅಲ್ಲಿಗೆ ಆತ ಇಂದಿನ ಕಾಯುವಿಕೆ ಮುಗೀತು ಎನ್ನುತ್ತ ಮನೆಗೆ ಧಾವಿಸುತ್ತಾನೆ. ಮುಂದಿನ ವಾೈದೆಯ ದಿನಾಂಕ ಮಾತ್ರ ಆತನನ್ನು ಅಣಕಿಸುತ್ತ ಇರುತ್ತದೆ. ಈ ಅವಸ್ಥೆಯನ್ನು ನಾನು ಅನುಭವಿಸಿಯೇ ಬರೆದಿದ್ದೇನೆ. ಕೋರ್ಟ್ ಕೇಸ್ ಎಂದರೆ ಭಯ ಎನ್ನುವುದು ನನ್ನ ಅನುಭವವೂ ಆಗಿದೆ.
ಕೋರ್ಟ್‍ನಲ್ಲಿ ತಮ್ಮ ಕರೆಗಾಗಿ ಕಾಯುವ ಕೊಠಡಿಗಳಲ್ಲಿ ಸಮಯ ಕಳೆಯುವವರ ನಷ್ಟಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಒಂದು ವಾೈದೆಗೆ ಹೋಗುವುದೆಂದರೆ ಮತ್ತು ಅಲ್ಲಿ ದಿನವಿಡೀ ಕಾಯುವುದೆಂದರೆ ಪ್ರಯಾಣ ವೆಚ್ಚ ಮಾತ್ರವಲ್ಲ, ಕೆಲಸದ ನಷ್ಟವೂ ಆಗುತ್ತದೆ. ಕೆಲವರಿಗೆ ಒಂದು ದಿನದ ಆದಾಯವೇ ಇಲ್ಲದಾಗಬಹುದು. ಆದರೆ ನ್ಯಾಯಾಧೀಶರಿಗೆ ತಾನು ಹೊಸ ಹೊಸ ವಾೈದೆಗಳನ್ನು ಕೊಡುವುದು ಸಮಾಜಕ್ಕೆ ಎಷ್ಟರ ಮಟ್ಟಿಗೆ ನಷ್ಟದಾಯಕವೆಂಬ ಲೆಕ್ಕಾಚಾರ ಸಿಗುವುದಿಲ್ಲ, ಅಥವಾ ಅದರ ಬಗ್ಗೆ ಅವರಿಗೆ ಲಕ್ಷ್ಯವೂ ಇರುವುದಿಲ್ಲ. ಬ್ರಿಟಿಷರ ಕಾಲದಿಂದ ಅನೂಚಾನವಾಗಿ ನಡೆದು ಬಂದಿರುವ ಈ ಪದ್ಧತಿ ಸಾಮಾನ್ಯ ಜನರಿಗೆ ಕಷ್ಟ ಅನ್ನಿಸಿರುವುದು ಇಂತಹ ನಷ್ಟಗಳಿಂದಷ್ಟೇ ಅಲ್ಲ, ಎಷ್ಟು ಕಾಲ ಈ ಬವಣೆ ಎಂಬ ಲೆಕ್ಕವಿಲ್ಲದಿರುವುದೂ ಕಾರಣವಾಗಿದೆ. ಕೊನೆಗೆ ದಂಡ ಕೊಟ್ಟಾದರೂ ಸರಿ, ಕೇಸ್‍ನಿಂದ ಹೊರಗೆ ಬಂದರೆ ಸಾಕು ಎಂತ ದೂರುದಾರರಿಗೇ ಅನಿಸಿದರೆ ಅಚ್ಚರಿ ಇಲ್ಲ. ಹೀಗೆ ಯಾಕೆ ಈ ಕಾಯುವ, ಮತ್ತು ನ್ಯಾಯದಾನಗಳಲ್ಲಿ ತಡವಾಗುವ ವಿಧಾನವು ಜಾರಿಯಲ್ಲಿದೆ ಎಂಬುದು ಸಾಮಾನ್ಯ ಜನರಿಗೆ ತಿಳಿಯದ ವಿದ್ಯಮಾನವಾಗಿದೆ.
ನನಗೆ ಇನ್ನೊಂದು ಅಚ್ಚರಿಯೆಂದರೆ ಸಾಮಾನ್ಯ ಜನರ ಲಕ್ಷಾಂತರ ಕೇಸ್‍ಗಳು ಪೆಂಡಿಂಗ್ ಇರುವಾಗಲೇ ಕೊಲೆಗಾರನೆಂದು ಆಪಾದಿತನಾಗಿರುವ ದರ್ಶನ್ ತೂಗುದೀಪ ಅವರ ಕೇಸ್ ಶೀಘ್ರ ವಿಚಾರಣೆಗೆ ಮುಂದೆ ಬರುತ್ತದೆ. ಸಿನೆಮಾ ಸಿಲೆಬ್ರಿಟಿಗಳ ಮತ್ತು ರಾಜಕಾರಣಿಗಳ ಕೇಸ್‍ಗಳು ಬಹುಬೇಗನೇ ಮುನ್ನಲೆಗೆ ಬರುತ್ತವೆ. ಇಂತಹ ಈಚಿsಣ ಣಡಿಚಿಛಿಞನ ಬಾಗಿಲುಗಳು ಯಾವುವು ಎಂಬುದು ಸಾಮಾನ್ಯ ಜನರಿಗೆ ತಿಳಿಯದ ಸಂಗತಿಗಳಾಗಿವೆ. ಗಣ್ಯರ ಕೇಸ್ ದಾಖಲು, ವಿಚಾರಣೆ, ತೀರ್ಪು, ಆಪೀಲು, ಇವೆಲ್ಲವುಗಳೂ ಸರಾಗವಾಗಿ ನಡೆದು ಹೋಗುತ್ತವೆ. ಪತ್ರಿಕಾ ವರದಿಗಳ ಪ್ರಕಾರ ಸಾಮಾನ್ಯವಾಗಿ ಖಚಿತವಾಗಿ ಅಪರಾಧಿ ಯಾರೆಂದು ತಿಳಿದಿದ್ದರೂ ಕೇಸ್‍ನ ತಾಂತ್ರಿಕ ದೋಪದಿಂದಾಗಿ ಗುರುತಿಸಲ್ಪಟ್ಟ ಆರೋಪಿತರು ದೋಷಮುಕ್ತರಾಗಿ ಮನೆಗೆ ಹಿಂದಿರುಗಿದ ಪ್ರಕರಣಗಳು ವರದಿಯಾಗುತ್ತವೆ. ಆಗ ನ್ಯಾಯ ನಿರೀಕ್ಷೆಯನ್ನು ಇಟ್ಟುಕೊಂಡ ಮಂದಿಗೆ ಕೋರ್ಟ್‍ಗಳು ಭಯ ಹುಟ್ಟಿಸಿದ್ದರೆ ಅಚ್ಚರಿ ಇಲ್ಲ.
ದರ್ಶನ್ ಅವರ ಜೈಲುವಾಸ, ಊಟ, ನಿದ್ರಾಹೀನತೆ, ಬೆನ್ನುನೋವು, ಸರ್ಜರಿಯೆಂಬ ಕಪಟ ಪ್ರಹಸನ, ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲು ಅನುಮತಿ, ಅವರ ಪತ್ನಿ ನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿ ಮಾಡಿದ ಪೂಜೆಗಳು, ಪ್ರೇಯಸಿಯಾಗಿದ್ದು ಮೊದಲ ಅಪರಾಧಿ ಎಂದು ಗುರುತಿಸಲ್ಪಟ್ಟಿದ್ದ ನಟಿಗೆ ಬೇಲ್ ಮೇಲೆ ಬಿಡುಗಡೆ ಹಾಗೂ ಮುಕ್ತವಾಗಿ ಓಡಾಡಲು ಅನುಮತಿ, ಸಹ ಆರೋಪಿತರಿಗೆ ವಿವಿಧ ಮಟ್ಟದಲ್ಲಿ ಬಂಧನ, ಬೇಲ್ ಇತ್ಯಾದಿಗಳ ಸುದ್ದಿಗಳು ಭಾರತೀಯ ದಂಡ ಸಂಹಿತೆಯು ಅದೆಷ್ಟು flexible ಎಂಬ ಅಚ್ಚರಿ ಮೂಡಿಸುತ್ತದೆ. ಇದೆಲ್ಲಕ್ಕೆ ಕಿರೀಟವಿಟ್ಟಂತೆ ಇತ್ತೀಚೆಗೆ ಪ್ರಕಟವಾದ ಸುಪ್ರೀಂ ಕೋರ್ಟ್‍ನ ತೀರ್ಪಿನಲ್ಲಿಮತ್ತೆ ದರ್ಶನ್‍ಗೆ ಟೆನ್ಶನ್ ಎಂಬ ವಾರ್ತೆ ಪ್ರಕಟವಾಗಿದೆ. ಅಂದರೆ ಈ ಕೇಸ್ ನಲ್ಲಿ ಹೈಕೋರ್ಟ್ ಸರಿಯಾದ ವಿವೇಚನೆಯಿಂದ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ನಿಲುವು ತಾಳಿದೆ. ಇದರಿಂದಾಗಿ ಥಾಯ್‍ಲೇಂಡ್‍ನಲ್ಲಿ ಶೂಟಿಂಗ್‍ನಲ್ಲಿ ಹಾಯಾಗಿರುವ ದರ್ಶನ್ ಮತ್ತೆ ಆತಂಕ ಎದುರಿಸುವಂತಾಗಿದೆ ಎನ್ನಲಾಗುತ್ತದೆ.
ಸಾಮಾನ್ಯ ಜನರಿಗೆ ಕಾಣುವ ವಿಚಿತ್ರವೆಂದರೆ ದರ್ಶನ್‍ಗೆ ಏನು ಬೇಕಾದರೂ ಆಗಲಿ. ಅದು ಈ ಕೇಸ್‍ನಲ್ಲಿ ಮಾತ್ರ ಕಾಣುವ ವಿದ್ಯಮಾನವೇ? ಅಲ್ಲದೆ, ಹೀಗೆ ವಿವೇಚನೆಯನ್ನು ಸರಿಯಾಗಿ ಬಳಸಿಲ್ಲದ ಅಪರಾಧಕ್ಕೆ ಹೈಕೋರ್ಟ್ ನ್ಯಾಯಾಧೀಶರಿಗೆ ಏನಾದರೂ ಶಿಕ್ಷೆ ಇದೆಯಾ? ಅಂತಹದ್ದೇನೂ ಇಲ್ಲವಾದರೆ ಇದು ದರ್ಶನ್ ಗ್ಯಾಂಗ್‍ನಿಂದ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಭಯ ಹುಟ್ಟಿಸುವ ಸಂಗತಿಯಾಗುವುದಿಲ್ಲವೆ? ಕೆಳಗಿನ ನ್ಯಾಯಾಲಯದಲ್ಲಿ ನೀಡಿದ ತೀರ್ಪು ಹೈಕೋರ್ಟ್‍ನಲ್ಲಿ ತಿರಸ್ಕರಿಸಲ್ಪಡುವುದು, ಹೈಕೋರ್ಟ್‍ನ ತೀರ್ಪು ಮತ್ತೆ ಸುಪ್ರೀಂ ಕೋರ್ಟ್‍ನಲ್ಲಿ ಬದಲಾಗುವುದು, ಮತ್ತೆ ಅಪೀಲ್ ಇಲ್ಲದಿರುವ ನಮ್ಮ ನ್ಯಾಯ ವಿಧಾನವು ಸಾಮಾನ್ಯ ಜನರ ವಿಶ್ವಾಸಕ್ಕೆ ಪಾತ್ರವಾಗುವುದು ಹೇಗೆ? ಹಾಗಿದ್ದರೂ ಭಾರತದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳಿಗಿಂತ ಹೆಚ್ಚು ಗೌರವ ಪಡೆಯುತ್ತಿರುವ ನ್ಯಾಯಾಂಗದಲ್ಲಿ ಸಮಗ್ರತೆಯನ್ನು ನಿರೀಕ್ಷಿಸಲು ಸಾಧ್ಯವೇ? ಮೇಲಿಂದ ಮೇಲೆ ಕೋರ್ಟ್‍ಗೆ ಧಾವಿಸುವ ರಾಜಕಾರಣಿಗಳ ಭವಿಷ್ಯವೂ ನ್ಯಾಯಾಲಯದ ತೀರ್ಪನ್ನು ಅವಲಂಬಿಸಿರುವುದಿಲ್ಲ. ಅವರು ಬೇಲ್ ಸಿಕ್ಕಿದ್ದನ್ನೇ ಗೆಲುವು ಎಂದು ಬಿಂಬಿಸಿ ಮೆರವಣಿಗೆ ಮಾಡುತ್ತಾರೆ. ತೀರ್ಪು ತಮ್ಮ ಪರವಾದಾಗ “ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ” ಎನ್ನುತ್ತಾರೆ. ಅದು ತಮ್ಮ ವಿರೋಧವಾದಾಗ ಅಪೀಲು ಮಾಡುತ್ತಾರೆ. ಆಗ ಅವರು ತೀರ್ಪನ್ನು ಗೌರವಿಸುವುದಿಲ್ಲ. ಆದರೆ ಈ ಸಾಧ್ಯತೆ ಸಾಮಾನ್ಯ ಜನರಿಗಿಲ್ಲ. ಏಕೆಂದರೆ ಅದಕ್ಕೆ ತುಂಬಾ ಹಣ ಬೇಕು. ಅಪೀಲು ಮಾಡಿ ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಅವರಿಗೆ ಸಾಧ್ಯವಾಗುವ ವಿಷಯವಲ್ಲ. ಏಕೆಂದರೆ ಅದು ಮುಗಿಯದ ಯುದ್ಧ.
ಇನ್ನು ಸಾರ್ವಜನಿಕ ಹಿತಾಸಕ್ತಿ ದಾವೆ (Public Interest litigation) ಅಂತ ಒಂದು ಇದೆ. ಅದರ ಪ್ರಕಾರ ಸಾರ್ವಜನಿಕ ಹಿತದ ಉದ್ದೇಶದಿಂದ ಸರಕಾರದ ಇಲಾಖೆಗಳ ಮೇಲೂ ದೂರು ದಾಖಲಿಸಬಹುದು. ಆದರೆ ಇದನ್ನು ನ್ಯಾಯಾಲಯವು ವಿಚಾರಣೆಗೆ ಎತ್ತಿಕೊಳ್ಳಲು ವರ್ಷಗಳೇ ಹೋಗುತ್ತವೆ. ಆಗ ಅಪರಾಧ ಮಾಡಿದ ಅಧಿಕಾರಿ ಅಲ್ಲಿರುವುದಿಲ್ಲ. ಆತನಿಗೆ ವರ್ಗಾವಣೆ ಆಗಿರುತ್ತದೆ. ಕೇಸ್ ವಿಚಾರಣೆಗೆ ಬರುವಾಗ ಬೇರೊಬ್ಬ ಅಧಿಕಾರಿ ನ್ಯಾಯಾಲಯಕ್ಕೆ ಹಾಜರಾಗುತ್ತಾನೆ. ಆತ ಅಮಾಯಕನಂತೆ ವರ್ತಿಸುತ್ತಾನೆ. ಒಂದು ಸಾರ್ವಜನಿಕ ಹಿತಾಸಕ್ತಿ ದೂರನ್ನು ಹೈಕೋರ್ಟ್‍ಗೆ ನಾನು ಸಲ್ಲಿಸಿ ಮೂರು ವರ್ಷ ಕಳೆದಿವೆ. ಇಷ್ಟರಲ್ಲಿ ಅಪರಾಧಿಯೆಂದು ನಾನು ಹೆಸರಿಸಿದ ಅಧಿಕಾರಿಗೆ ಪದೋನ್ನತಿಯೊಂದಿಗೆ ಬೇರೊಂದು ಇಲಾಖೆಗೆ ವರ್ಗವಾಗಿ ಇತ್ತೀಚೆಗೆ ನಿವೃತ್ತಿಯೂ ಆಗಿದೆ. ಹಾಗಾಗಿ ನ್ಯಾಯದಾನದ ನಿರೀಕ್ಷೆ ಹುಸಿಯಾಗುವುದರಲ್ಲಿ ಅನುಮಾನವಿಲ್ಲ. ಹೀಗಾದಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಕಾಯುವುದು ನಿರರ್ಥಕವೆನ್ನಿಸುತ್ತದೆ. ಇಂತಹ ಅನುಭವಗಳು ಜನಸಾಮಾನ್ಯ ರೈತನೊಳಗೆ “ಕೋರ್ಟ್ ಎಂದರೆ ಭಯ” ಎನ್ನುವುದನ್ನು ಪುಷ್ಟೀಕರಿಸುತ್ತದೆ. ಆದರೆ ನ್ಯಾಯದಾನದಲ್ಲಿ ವಿಳಂಬ ಹಾಗೂ ಅನ್ಯಾಯವಾಗುವಂತಹ ಸ್ಥಿತಿ ಅರಾಜಕತೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಕಷ್ಟಕ್ಕೊಳಗಾದವನಿಗೆ ನ್ಯಾಯದಾನ ಒದಗಿಸುವುದು ಸುರಾಜ್ಯದ ಲಕ್ಷಣವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

