ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮನೆಯಲ್ಲಿ ಒಬ್ಬರೇ ಕುಳಿತು ಕಲಿಯುವ ಮತ್ತು ಶಾಲೆಗಳಲ್ಲಿ ತರಗತಿಗಳಲ್ಲಿ ಒಟ್ಟಾಗಿ ಕಲಿಯುವಂತಹ ಎರಡೂ ಬಗೆಯ ಅವಕಾಶಗಳಿವೆ. ಅಂದರೆ ಮಗು ಮನೆಗೆ ಹಿಂದಿರುಗಿದ ಬಳಿಕ ಅದಕ್ಕೆ ತನ್ನ ಇಷ್ಟದ ಕಲಿಕೆಯಲ್ಲಿ ತೊಡಗಲು ಸಾಧ್ಯವಿದೆ. ಈ ಕಲಿಕೆಯು ಚಿತ್ರ ಬಿಡಿಸುವುದಾಗಿರಬಹುದು, ತನ್ನಷ್ಟಕ್ಕೆ ಹಾಡುವುದಾಗಿರಬಹುದು, ಪಾಠೇತರ ಪುಸ್ತಕವನ್ನು ಓಡುವುದಾಗಿರಬಹುದು ಹೀಗೆ ಮಗುವಿನ ಆಸಕ್ತಿಗನುಗುಣವಾಗಿ ವೈವಿಧ್ಯತೆ ಹೊಂದಲು ಸಾಧ್ಯವಿದೆ. ಮಗುವಿನ ಇಂತಹ ಚಟುವಟಿಕೆಗೆ ಮನೆಯಲ್ಲಿ ಹೆತ್ತವರಿಂದ ಪ್ರೋತ್ಸಾಹ ಸಿಗಬೇಕಾದ ಅಗತ್ಯವಿದೆ.
ನಾನು ಇತ್ತೀಚೆಗೆ ಬಂಧುಗಳೊಬ್ಬರ ಮನೆಯ ಹುಡುಗನ ಓದುವ ಸಾಮರ್ಥ್ಯ ನೋಡಿ ಅಚ್ಚರಿಗೊಂಡೆ. ಆತನಿನ್ನೂ ನಾಲ್ಕನೇ ವಯಸ್ಸಿನ ಹುಡುಗ. ಅಕ್ಷರಾಭ್ಯಾಸ ಆಗಿರುವ ಸಾಧ್ಯತೆ ಇರಲಿಲ್ಲ. ಆದರೆ ಅವನು ಹನುಮಂತನ ಕಥೆ ಪುಸ್ತಕವನ್ನು ಕೈಗೆತ್ತಿಕೊಂಡರೆ ಪುಟಪುಟಗಳನ್ನು ತಿರುಗಿಸಿ ಕಥೆ ಓದುತ್ತಿದ್ದ. ಕ್ಲಿಷ್ಟಕರ ಶಬ್ದಗಳನ್ನು ತಪ್ಪಿಲ್ಲದೆ ಉಚ್ಚರಿಸುತ್ತಿದ್ದ. ಪ್ರಶ್ನೆಗಳನ್ನು ಕೇಳಿದರೆ ಹನುಮಂತನ ತಾಯಿ ಯಾರು? ತಂದೆಯ ಹೆಸರೇನು? ಕಿಷ್ಕೆಂಧೆ, ಜಾಂಬವ, ವಾಲಿ, ಸುಗ್ರೀವ, ಅಂಗದ ಮುಂತಾದ ಪಾತ್ರಗಳ ಬಗ್ಗೆಯೂ ಅವನಿಗೆ ಗೊತ್ತಿತ್ತು. ನಾನು ಬೇರೊಂದು ಪುಸ್ತಕ ಕೊಟ್ಟು ಓದಲು ಹೇಳಿದಾಗ ಅವನಿಂದ ಆಗುವುದಿಲ್ಲವೆಂದ. ಹಾಗಿದ್ದರೆ ಹನುಮಂತನ ಪುಸ್ತಕ ಮಾತ್ರ ಓದಲು ಸಾಧ್ಯವಾಗುವುದೇಕೆ?
ಅದರಲ್ಲೇನೂ ಮ್ಯಾಜಿಕ್ ಇರಲಿಲ್ಲ. ಆ ಹುಡುಗನ ಅಮ್ಮ ದಿನಾಲೂ ಸಂಜೆ ಹನುಮಂತನ ಪುಸ್ತಕ ಕೈಗೆ ತೆಗೆದುಕೊಂಡು ಪುಟ ಪುಟಗಳಲ್ಲಿದ್ದುದ್ದನ್ನೂ ಓದುತ್ತ ಕಥೆ ಹೇಳುತ್ತಿದ್ದರು. ಕೆಲವೇ ದಿನಗಳಲ್ಲಿ ಹುಡುಗನೇ ಪುಸ್ತಕವನ್ನು ತನ ಕೈಗೆ ತೆಗೆದುಕೊಳ್ಳತೊಡಗಿದ. ಒಂದೊಂದು ಪುಟದ ಕಥೆ ಓದಿ ಆಗುತ್ತಲೇ ಅಮ್ಮ ಪುಟ ತಿರುಗಿಸಲು ಹೇಳುತ್ತಿದ್ದರು. ಏಕೆಂದರೆ ಅವರಿಗೆ ಓದಲು ಆ ಪುಟ ಕಾಣಬೇಕಿತ್ತು. ಅದು ಚಿತ್ರ ಕಥೆಯಾಗಿದ್ದುದರಿಂದ ಮಗುವಿಗೆ ಕಥೆಯನ್ನು ಅರ್ಥೈಸಿಕೊಳ್ಳಲು ಚಿತ್ರಗಳು ಸಹಾಯಕವಾಗಿದ್ದುವು. ಹೀಗೆ ಚಿತ್ರ ಮತ್ತು ಪಠ್ಯ ಇವೆರಡೂ ಜೊತೆಯಾಗಿ ಮಗುವಿನ ಮನಸ್ಸಿನಲ್ಲಿ ಛಾಪಿಸಲ್ಪಟ್ಟಿದ್ದವು. ಪುಸ್ತಕವನ್ನು ಕೈಗೆತ್ತಿಕೊಂಡು ಮೊದಲ ಪುಟವನ್ನು ತೆರೆಯುತ್ತಲೇ ಅಲ್ಲಿ ಕಾಣುತ್ತಿದ್ದ ಚಿತ್ರದೊಂದಿಗೆ ಮಗುವಿಗೆ ಅದರ ಪಠ್ಯವೂ ಸ್ಮರಣೆಗೆ ಬರುತ್ತಿತ್ತು. ಹೀಗಾಗಿ ಆತನೇ ಸ್ವತಃ ಓದುತ್ತಿರುವಂತೆ ನಮಗೆ ಅನ್ನಿಸುತ್ತಿತ್ತು. ಅವನ ಪಾಲಿಗೆ ಅದೊಂದು ಸಹಜ ಕ್ರಿಯೆಯಾಗಿತ್ತು. ಯಾವುದೇ ಪ್ರದರ್ಶನವಾಗಿರಲಿಲ್ಲ. ಆದರೆ ನನಗೊಂದು ತಿಳಿಯಿತು. ಅಮ್ಮಂದಿರು ಬಯಸಿದರೆ ಹಾಗೂ ಜೊತೆಯಲ್ಲಿ ಕುಳಿತು ಓದಿದರೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಸಾಮರ್ಥ್ಯವನ್ನು ಬೆಳೆಸಬಹುದು!
ಪಾಠಪುಸ್ತಕ ಮಾತ್ರವಲ್ಲ, ಆ ಹುಡುಗ ಸ್ತೋತ್ರಗಳ ಪುಸ್ತಕವನ್ನು ಕೈಗೆ ತೆಗೆದುಕೊಂಡು ಅಜ್ಜನೊಂದಿಗೆ ಕುಳಿತು ಪುಟ ತೆರೆದು ಸ್ತೋತ್ರಗಳನ್ನು ಓದತೊಡಗಿದ. ಸಂಸ್ಕೃತ ಸ್ತೋತ್ರಗಳನ್ನು ಹಾಡುವಾಗ ಇದ್ದ ಉಚ್ಚಾರ ಶುದ್ಧಿಯ ಪಠ್ಯವನ್ನು ಓದಿಯೇ ಬಂದದ್ದೆನ್ನುವಷ್ಟ ಹೊಂದಿಕೊಂಡಿತ್ತು. ನಾನು ಹತ್ತಿರ ಹೋಗಿಯೇ ನೋಡಿದ. ಶ್ಲೋಕಗಳು ಮುಂದೆ ಹೋದಂತೆ ಪುಟಗಳೂ ಬದಲಾಗುತ್ತಿದ್ದುವು. ನಾನು ಹೊಗಳಿದರೂ ಅವನು ಅದನ್ನು ಭಾರೀ ಎನ್ನುವಂತೆ ಪರಿಗಣಿಸಲಿಲ್ಲ. ತನ್ನ ಓದನ್ನು ಮುಂದುವರಿಸಿದ.
ಆ ಹುಡುಗ ಅಧ್ಬುತವೆಂದೇನೂ ನನ್ನ ಪ್ರಸ್ತಾಪ ಇರುವುದಿಲ್ಲ. ಬದಲಾಗಿ ಮಗುವಿನಲ್ಲಿರುವ ಅಂತಹ ಒಂದು ಸಾಮರ್ಥ್ಯದ ಹಿಂದೆ ಇರುವ ಎರಡು ಸಂಗತಿಗಳನ್ನು ಚರ್ಚಿಸಬಹುದಾಗಿದೆ. ಒಂದನೇಯದಾಗಿ ಅಮ್ಮನು ತೋರಿಸಿದ ಆಸಕ್ತಿಯಿಂದ ಪುಸ್ತಕ ಕೈಗೆ ಬಂತು. ಆ ಚಿತ್ರ ಕಥೆಯ ಪುಸ್ತಕವನ್ನು ಮಗುವಿಗಾಗಿಯೇ ತಂದು ತೋರಿಸಿ ಓದಲು ತೊಡಗಿದ್ದಾಗಿತ್ತು. ಆ ಪುಟ್ಟ ಕಂದನಿಗೆ ಆ ಪುಸ್ತಕದ ಮೇಲೆ ಒಂದು ಸ್ವಾಮ್ಯ ((Ownership) ಬಂತು. ಪುಸ್ತಕವನ್ನು ಅಮ್ಮ ತನಗಾಗಿ ತೆರೆದು ಓದಿದಾಗ ಮಗುವೂ ನುಗ್ಗಿ ಚಿತ್ರವನ್ನು ಪುಟವನ್ನು ನೋಡತೊಡಗಿತು. ದಿನಾಲೂ ಅದೇ ಪುಟ ಅದೇ ಕಥೆಯನ್ನು ಓದುತ್ತಿದ್ದಂತೆ ಮಗುವಿನ ಮನಸ್ಸಿನಲ್ಲಿ ಅದು ಅಚ್ಚೊತ್ತಿದಂತಾಯಿತು. “ಯಾವಾಗಲೂ ಓದಿದ್ದನ್ನೇ ಏನು ಓದುವುದೆಂದು” ಅಮ್ಮ ಉದಾಸೀನ ತೋರಿಸಿದ್ದರೆ ಪುಸ್ತಕ ಪಠನ ಯಾವಾಗಲೇ ನಿಂತು ಹೋಗುತ್ತಿತ್ತು. ಆದರೆ ಅಮ್ಮನೂ ಉದಾಸೀನ ಮಾಡದೆ ಮಗುವಿಗೆ ಸಮಯ ನೀಡಿದ್ದರಿಂದ ಆ ಓದುವ ಪ್ರವೃತ್ತಿ ಬೆಳೆಯಿತು. ಇದರಿಂದ ಮಗುವಿಗೆ ಶಬ್ದಗಳ ಪರಿಚಯ ಮೊದಲೇ ಆಗಿದ್ದು ಅಕ್ಷರಗಳ ಪರಿಚಯವಾಗಲು ಸುಲಭವಾಗುತ್ತದೆ. ಈ ಸ್ವಸಾಮರ್ಥ್ಯ ಬೆಳೆದಂತೆ ಹೊಸಪುಸ್ತಕ ಓದುವ ಆಸಕ್ತಿ ಮತ್ತು ಆತುರಗಳು ಬೆಳೆಯುತ್ತವೆ. ಆಗ ಹೆತ್ತವರು ಚೌಕಾಸಿ ಮಾಡದೆ ಪುಸ್ತಕಗಳನ್ನು ತಂದು ಕೊಟ್ಟರೆ ಮಗುವಿಗೆ ಓದುವ ಆಟ ಸುಲಲಿತವಾಗುತ್ತದೆ.
ಇನ್ನೊಂದು ಸಂಗತಿಯೆಂದರೆ ಪುಸ್ತಕದ ವಸ್ತು ಹನುಮಂತನ ಕಥೆ. ಅದು ಮಕ್ಕಳಿಗೆ ಇಷ್ಟವಾಗುವ ಕಥೆ. ಅದರಲ್ಲಿ ಮಂಗನಾಟವೂ ಇದೆ, ದೇವರಾಟವೂ ಇದೆ. ಆಂಜನೇಯನ ಅಸಾಮಾನ್ಯ ಶಕ್ತಿಯ ರೋಮಾಂಚಕ ಚಿತ್ರಣ ಮಗುವಿಗೆ ಸಿಗುತ್ತದೆ. ನಾನು ಕಂಡಿರುವ ಈ ಮಗು ವಿಶಿಷ್ಟ ಸಾಮರ್ಥ್ಯದ ಮಗುವೇನೂ ಅಲ್ಲ. ಅದೂ ಎಲ್ಲ ಮಕ್ಕಳಂತೆ ತಂಟೆ, ಕೀಟಲೆ, ಚೆಲ್ಲಾಟ ಮಾಡುತ್ತದೆ. ಅದರೊಂದಿಗೆ ಓದುವ ಉತ್ಸಾಹವೂ ಇದೆ. ಇದು ಅಮ್ಮನ ನಿರ್ದೇಶನದಿಂದ ಬಂದಿದೆ. ಹಾಗೆಯೇ ಅಮ್ಮನ ಭಾಗವಹಿಸುವಿಕೆಯಿಂದಲೂ ಬಂದಿದೆ ಎನ್ನಬಹುದು. ಈ ಉದಾಹರಣೆಯನ್ನು ನೋಡಿದರೆ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವಲ್ಲಿ ಶಾಲೆಯಿಂದ ಹೊರತಾದ ಮನೆಯ ಪಾತ್ರವೂ ಇದೆ. ಮನೆಯಲ್ಲಿ ಹೋಂ ವರ್ಕ್ ಮಾತ್ರ ಎಂಬ ಮಿತಿಯಿಂದ ಹೊರಗೆ ಬಂದು ಕಲಿಕೆಗೂ ಮನೆಯಲ್ಲಿ ಪ್ರಾಶಸ್ತ್ಯ ಸಿಗಬೇಕು. ಅದೂ ಪಾಠೇತರ ಪುಸ್ತಕವಾಗಿದ್ದರೆ ಒಳ್ಳೆಯದು. ಈ ಪುಸ್ತಕಗಳ ಆಯ್ಕೆಯನ್ನು ತಾಯಿಯೂ ಮಾಡಬಹುದು. ಆದರೆ ಮಕ್ಕಳಿಗೂ ಆಯ್ಕೆಯ ಅವಕಾಶ ನೀಡಬಹುದು. ಒಂದು ವೇಳೆ ಮಕ್ಕಳ ಆಯ್ಕೆ ಮತ್ತು ಪುಸ್ತಕದ ಬೆಲೆ ನಮಗೆ ಇಷ್ಟವಾಗದಿದ್ದರೂ ನೇರ ತಿರಸ್ಕರಿಸದೆ ನಯವಾಗಿ ಬದಲಿ ಆಯ್ಕೆಯ ಸಲಹೆ ನೀಡಬಹುದು. ಅಂತೂ ಮಕ್ಕಳ ಓದುವ ಅಭ್ಯಾಸಕ್ಕೆ ಸಾಮಗ್ರಿಗಳ ಕೊರತೆ ಆಗಬಾರದು. ಅಂತಹ ಕೊರತೆಯಾದರೆ ಮತ್ತೆ ಮಕ್ಕಳಲ್ಲಿರುವ ಆಸಕ್ತಿ ಹಾಗೂ ಸಾಮರ್ಥ್ಯ ಎರಡೂ ಸ್ಥಬ್ಭವಾಗುತ್ತವೆ. ಹೀಗಾಗಲು ಬಿಟ್ಟಾಗ ಮಕ್ಕಳು ಬದಲಿ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಅವುಗಳು ಆಟ, ಜಾಣ್ಮೆ ಲೆಕ್ಕ, ಹಾಡು, ಚಿತ್ರಗಳಾದರೆ ಪರವಾಗಿಲ್ಲ. ಅದು ಬಿಟ್ಟು ಮೊಬೈಲ್, ಟಿ.ವಿ. ಗಳಿಗೆ ದಾಸರಾದರೆ ಮತ್ತು ಮಕ್ಕಳ ಚಟವನ್ನು ಬಿಡಿಸುವುದು ಕಷ್ಟ. ಅಂದರೆ LKG, UKG ,1ನೇ ಮತ್ತು 2ನೇ ತರಗತಿಗಳಲ್ಲಿರುವಾಗಲೇ ಹೊಸ ಪುಸ್ತಕಗಳನ್ನು ಓದಲು ಎತ್ತಿಕೊಳ್ಳುವ ಹುಚ್ಚನ್ನು ಬೆಳೆಸಲು ಸಾಧ್ಯ. ಹೆಚ್ಚು ಓದಿದಷ್ಟು ಮಕ್ಕಳಲ್ಲಿ ವಿಚಾರ ವಿಮರ್ಶೆ ಮಾತುಕತೆ. ಉದಾಹರಣೆಗಳು, ಉಲ್ಲೇಖಗಳ ವಿವರಗಳನ್ನು ಹೇಳುವ ಸಾಮರ್ಥ್ಯವೂ ಬೆಳೆಯುತ್ತದೆ. ಅದೇ ಶಿಕ್ಷಣದ ಗಟ್ಟಿ ಪಂಚಾಂಗವಾಗುತ್ತದೆ.
ಓದುವುದು ಎಂಬುದು ಜ್ಞಾನ ಸಂಗ್ರಹದ ಒಂದು ಪ್ರಕ್ರಿಯೆ ಅಲ್ಲದೆ ಅದು ಪ್ರಬಲವಾದ ಪ್ರಕ್ರಿಯೆ. ನಾನು ಆರಂಭದಲ್ಲಿ ಹೇಳಿದ ಹುಡುಗನದ್ದು ಪುನರುಕ್ತಿಯ ಮಾರ್ಗವೇ ಆಗಿದ್ದರೂ ಪುಸ್ತಕವನ್ನು ನೋಡುತ್ತ ಓದುವ ಅಭ್ಯಾಸವು ಹೆಚ್ಚಿನ ಓದನ್ನು ಪ್ರೇರಿಸುತ್ತದೆ. ಅಂದರೆ ನಾವು ಮಕ್ಕಳಿಗೆ ಕಲಿಕಾ ಸೌಲಭ್ಯಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಅನೇಕ ಸಲ ಈ ಜವಾಬ್ದಾರಿಯ ನಿರ್ವಹಣೆಯಲ್ಲಿ ಆಗುವ ವ್ಯತ್ಯಯವೇ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದಕ್ಕೆ ಕಾರಣವಾಗುತ್ತದೆ. ಯಾವಾಗಲೂ ಪಾಠವನ್ನು ಓದು ಎನ್ನುತ್ತ ಶಾಲೆಯಲ್ಲಿ ಶಿಕ್ಷಕರೂ ಮನೆಯಲ್ಲಿ ಹಿರಿಯರೂ ಒತ್ತಡ ಹೇರುತ್ತಿದ್ದರೆ ಮಕ್ಕಳಲ್ಲಿ ಈ ಒತ್ತಡದಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕುವ ಕೌಶಲ ಬೆಳೆಯುತ್ತದೆ. ಅದು ಓದಿದಂತೆ ನಟಿಸುವುದಾಗಲೀ, ಬೇರೆ ಕೆಲಸಗಳಿರುವ ನೆಪ ಹೇಳುವುದಾಗಲೀ, ಪುಸ್ತಕ ಕಾಣೆ ಎಂಬ ದೂರು ಹೇಳುವುದಾಗಲೀ ಇರಬಹುದು. ಆದರೆ ತನಗೆ ಪ್ರಿಯವಾದ ಪುಸ್ತಕವನ್ನು ಓದುವ ಮುಕ್ತತೆ ಇದ್ದು ಅಂತಹ ಪುಸ್ತಕಗಳನ್ನು ಒದಗಿಸುತ್ತಿದ್ದರೆ ಹೆತ್ತವರ ಅಪೇಕ್ಷೆಗೆ ತಕ್ಕಂತೆ ಮಕ್ಕಳ ಬೆಳವಣಿಗೆ ಆಗುತ್ತದೆ.
ಇಂತಹ ಒಂದು ಅವಕಾಶವನ್ನು ಮಕ್ಕಳಿಗೆ ನೀಡಲು ನಮಗೆ ಒಂದು ಅವಕಾಶ ಒದಗಿ ಬಂತು. ಹಳೆಯ ಚಂದಮಾಮಾ, ಬೀರಬಲ್ ನ ಕಥೆಗಳು, ತೆನ್ನಾಲಿರಾಮನ ಕಥೆಗಳೂ ನೀತಿ ಕಥೆಗಳು, ರಾಮನ ಕಥೆಗಳು, ಕೃಷ್ಣನ ಕಥೆಗಳು ಹೀಗೆ ವೈವಿಧ್ಯಮಯ ಚಿತ್ರಕಥಾ ಕೃತಿಗಳನ್ನು ಒಬ್ಬ ವಿತರಕರು ಮೈಸೂರಿನಿಂದ ತಂದರು. ಆಗಲೇ ನನ್ನ ಬಂಧುವಿನ ಮಗನ ಚಿತ್ರ ಕಣ್ಣ ಮುಂದೆ ಬಂತು. ಮಕ್ಕಳಿಗೆ ಓದಲು ಕೊಡೋಣವೆಂದು ಸುಮಾರು 9000 ರೂಪಾಯಿಗಳ ಪುಸ್ತಕಗಳನ್ನು ಕೊಂಡುಕೊಂಡೆ. ನಂತರ ಇವುಗಳನ್ನು ಮಕ್ಕಳಿಗೇ ಖರೀದಿಸಿ ಓದಲು ಹೇಳಿದರೆ ಹೇಗೆ ಅಂತ ಅನ್ನಿಸಿತು. ಎಳೆಯ ಮಕ್ಕಳಿಗೆ ಪುಸ್ತಕಗಳನ್ನು ತೋರಿಸಿದಾಗ ಪ್ರತಿಯೊಂದು ಮಗುವೂ ಪುಸ್ತಕ ಬೇಕೆಂದಿತು. ಪೋಷಕರೂ ಒಪ್ಪಿದ್ದಾರೆಂಬುದು ಸಂತಸದ ಮಾತು.
ತರಗತಿಯಲ್ಲಿ ಕಲಿಯುವ ವಿಷಯಕ್ಕೆ ಪೂರಕವಾಗಿ ಮನೆಯಲ್ಲಿ ಕಲಿಯುವುದು ಅಗತ್ಯ. ಶಾಲೆಯಲ್ಲಿ ಪಾಠಪಟ್ಟಿಗನುಸಾರವಾಗಿ ಶಿಕ್ಷಕರ ಪಾಠಗಳನ್ನು ಕಲಿಯಲೇ ಬೇಕು. ಆದರೆ ಶಿಕ್ಷಣವೆಂದರೆ ಅಷ್ಟೇ ಅಲ್ಲ. ತರಗತಿಯಲ್ಲಿ ಕಲಿಸಿದ್ದಕ್ಕೆ ಪೂರಕವಾಗಿ ಓದುವ ಮತ್ತು ಬರೆಯುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ಅದನ್ನು ಪುನರಪಿ ಪುನರಪಿ ಮಾಡುವುದರಿಂದಷ್ಟೇ ಸ್ವಚ್ಛ ಬರಹ ಮತ್ತು ಸ್ಪಷ್ಟ ಓದುವ ಸಾಮರ್ಥ್ಯಗಳು ಬರಲು ಸಾಧ್ಯ. ಮನೆಯಲ್ಲಿಯೂ ಎಳೆಯ ಮಕ್ಕಳನ್ನು ಉಕ್ತಲೇಖನ, ಬಾಯಿಲೆಕ್ಕ, ಮಗ್ಗಿ ಕಲಿಕೆ ಇತ್ಯಾದಿ ಅಭ್ಯಾಸಗಳಲ್ಲಿ ಹೆತ್ತವರು ತೊಡಗಿಸಿದರೆ ಮಾತ್ರ ಶಾಲಾ ಶಿಕ್ಷಣವು ಫಲಪ್ರದವಾಗುವುದು ಒಂದು ತರಗತಿಯಲ್ಲಿ ವಿವಿಧ ಸಾಮರ್ಥ್ಯಗಳ ವಿದ್ಯಾರ್ಥಿಗಳಿದ್ದಾಗ ಕಲಿಕೆಯ ವಾತಾವರಣವು ಸ್ಪರ್ಧಾತ್ಮಕವಾಗಿರುತ್ತದೆ. ಕೇವಲ ಮನೆಯಲ್ಲಿ ಕಲಿಯುವವರಿಗೆ ಇಂತಹ ವಾತಾವರಣವು ಸಿಗುವುದಿಲ್ಲ. ಹಾಗಾಗಿ ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಾರೆ ಎಂಬುದನ್ನು ತಿಳಿದುಕೊಂಡು ಮನೆಯಲ್ಲಿ ಪೂರಕ ಕಲಿಕೆಯನ್ನು ಜೋಡಿಸಬೇಕು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel