ಎಡ ಬಲಗಳ ಇಕ್ಕಳದಲ್ಲಿ……. | ಭಾರತಿ ಎಂಬ ನನ್ನ ತಾಯಿಯ ಮೂಕ ರೋದನೆ…….. | ವಿವೇಕಾನಂದ ಎಚ್‌ ಕೆ ಮನಸ್ಸಿನ ಕನ್ನಡಿಯಲ್ಲಿ ಬರೆಯುತ್ತಾರೆ…|

December 26, 2021
8:35 AM

ಎಡಪಂಥೀಯನೆಂಬ ಮಗನೆಂದ
ಬಲಪಂಥೀಯನು ನಕಲಿ ದೇಶಭಕ್ತನೆಂದು……

Advertisement

ಬಲಪಂಥೀಯನೆಂಬ ಮಗನೆಂದ,
ಎಡಪಂಥೀಯನು ದೇಶದ್ರೋಹಿಯೆಂದು……

ಕಮ್ಯುನಿಸಂನಿಂದ ಮಾತ್ರ ಶೋಷಣಾಮುಕ್ತ ಸಮಾಜ ಸಾಧ್ಯ ಎಂದು ಅಲ್ಲೊಬ್ಬ ಹೇಳಿದ……

ಬಂಡವಾಳಶಾಹಿ ವ್ಯವಸ್ಥೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಇಲ್ಲೊಬ್ಬ ಬರೆದ……

ಶತಶತಮಾನಗಳ ಅಮಾನವೀಯ ಅಸಮಾನತೆಗೆ ಮೇಲ್ವರ್ಗದವರೇ ಕಾರಣ ಎಂದನೊಬ್ಬ……

Advertisement

ಇಲ್ಲ ಮೀಸಲಾತಿಯೇ ಇಂದಿನ ಅಸಮಾನತೆಗೆ ಕಾರಣ ಎಂದ ಇನ್ನೊಬ್ಬ…..‌‌…

ಹಿಂದೂ ನಾವೆಲ್ಲಾ ಒಂದು ಎಂದ ಒಬ್ಬ,…..

ನಾನು ಹಿಂದೂವೇ ಅಲ್ಲ ಭಾರತೀಯ ಎಂದ ಮತ್ತೊಬ್ಬ….‌

ಅಖಂಡ ಹಿಂದೂಸ್ತಾನವನ್ನು ಒಂದುಗೂಡಿಸುತ್ತೇನೆ ಎಂದ ಒಬ್ಬ……‌

ಭಾರತವನ್ನು ತುಂಡು ತುಂಡು ಮಾಡುತ್ತೇನೆ ಎಂದ ಇನ್ನೊಬ್ಬ………

Advertisement

ಹರಿದ ಸೀರೆಯ ಮಾತೃ ಹೃದಯದ ನಿಷ್ಕಲ್ಮಶ ಪ್ರೀತಿಯ ನನ್ನ 138 ಕೋಟಿ ಮಕ್ಕಳ ಹೆತ್ತಮ್ಮ ಭಾರತಿ ಮಾತ್ರ ಈ ಮಕ್ಕಳ ಕಲಹಕ್ಕೆ ಮೂರ್ಖತನಕ್ಕೆ ಸ್ವಾರ್ಥಕ್ಕೆ ಕಪಟತನಕ್ಕೆ ವಂಚಕತನಕ್ಕೆ ಪ್ರತಿಷ್ಠೆಗೆ ಅಜ್ಞಾನಕ್ಕೆ ದಿನವೂ ಕಣ್ಣೀರು ಸುರಿಸುತ್ತಿದ್ದಾಳೆ………..

ತನ್ನ ಎಷ್ಟೋ ಮಕ್ಕಳಿಗೆ ಹಾಲಿಲ್ಲ, ಊಟವಿಲ್ಲ, ನೆಮ್ಮದಿಯಿಲ್ಲ, ಕೆಲವೊಮ್ಮೆ ಕುಡಿಯಲು ನೀರೂ ಇಲ್ಲದೆ ನರಳಾಡುತ್ತಿವೆ…………

ಕಣ್ಣ ಮುಂದೆಯೇ ನರಳಿ ನರಳಿ ಜೀವ ಬಿಡುತ್ತಿವೆ.
ಬಿಸಿಲಿಗೆ ಮಳೆಗೆ ಚಳಿಗೆ ಗಾಳಿಗೆ ಸಿಕ್ಕು ಸಾಯುತ್ತಿವೆ. ಅವರನ್ನು ರಕ್ಷಿಸಲಾಗದೆ ಜೀವ ತೊಳಲಾಡುತ್ತಿದೆ…..‌‌..

ತನ್ನ ಜೀವಕ್ಕೆ ಜೀವವಾದ ದೊಡ್ಡ ಮಗ ರೈತ ದುಡಿದು ದುಡಿದು ಹೈರಾಣಾಗಿ ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಯ ಬಗ್ಗೆ ಸದಾ ಯೋಚಿಸುತ್ತಾನೆ…….

ಎರಡನೆಯ ಮಗ ಕೂಲಿ ಕಾರ್ಮಿಕ ಬೆವರು ಬಸಿದು ಬಸಿದು ಚರ್ಮ ದೇಹಕ್ಕಂಟಿದ ಮೂಳೆ ಮಾನವನಂತಾಗಿದ್ದಾನೆ……..

Advertisement

ಮುದ್ದಿನ ಮಗಳು ಈ ಕ್ರೂರ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ಮನದಲ್ಲೇ ಕೊರಗಿ ಕೊರಗಿ ರಕ್ಷಣೆಗಾಗಿ ತಾಯ ಮಡಿಲಲ್ಲಿ ಆಶ್ರಯ ಪಡೆದು ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತಳಾಗಿದ್ದಾಳೆ……..

ಆದರೆ,

ಮುದ್ದಿನಿಂದ ಹೆಚ್ಚು ಪ್ರೀತಿಯಿಂದ ಮತ್ತು ದೊಡ್ಡ ಮಕ್ಕಳ ತ್ಯಾಗದಿಂದ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ ಕೊನೆಯ ಈ ಎಡ ಬಲರೆಂಬ ಮಕ್ಕಳು ಮಾತ್ರ ದಾರಿ ತಪ್ಪಿದವು. ಅವರಿಗೆ ಕಲಿಸಿದ ಅಕ್ಷರಗಳೇ ಇಂದು ನಮ್ಮ ಪಾಲಿನ ದೌರ್ಭಾಗ್ಯವಾಗಿದೆ…..‌..

ದೊಡ್ಡ ಮಗ ರೈತ ಮತ್ತು ಎರಡನೇ ಮಗ ಕೂಲಿ ಕಾರ್ಮಿಕ ಎಷ್ಟೊಂದು ಕಷ್ಟಪಟ್ಟು ಕೊನೆಯ ಎರಡು ಮಕ್ಕಳನ್ನು ಬೆಳೆಸಿದರು ಗೊತ್ತೆ…….

ಹಣದ ತೊಂದರೆಯಿಂದ ತಾವು ಓದದೆ, ಸರಿಯಾಗಿ ಊಟ ಮಾಡದೆ, ಬಟ್ಟೆ ಹಾಕದೆ ತನ್ನ ತಮ್ಮಂದಿರನ್ನು ಕಾರ್ಲ್ ಮಾರ್ಕ್ಸ್ ಭಗವದ್ಗೀತೆ ಕುರಾನ್ ಬೈಬಲ್ ಎಂಬ ಶಾಲೆಯಲ್ಲಿ ಓದಿಸಿ ಉನ್ನತ ಪದವಿ ಶಿಕ್ಷಣ ಕೊಡಿಸಿದರು………

Advertisement

ಈಗ ಇದನ್ನೆಲ್ಲಾ ಓದಿದ ಇವರು ಹೆಂಡ ಕುಡಿದು ಚೇಳು ಕುಟುಕಿಸಿಕೊಂಡ ಕೋತಿಗಳಂತಾಗಿದ್ದಾರೆ……

ಮನೆ ಸಂಸಾರದ ಯೋಚನೆಯೇ ಇಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ…….

ತನ್ನ ತಾಯಿ ಅಣ್ಣಂದಿರು ಅಕ್ಕನ ಗೋಳು ಕೇಳಿಸಿಕೊಳ್ಳದೆ ಮೋಜು ಮಸ್ತಿ ಮಾಡುತ್ತಾ ಒಬ್ಬರಿಗೊಬ್ಬರು ತಾವೇ ಮಹಾನ್ ಬುದ್ದಿವಂತರೆಂದು ಭ್ರಮಿಸಿ ತಮ್ಮಲ್ಲೇ ಕಚ್ಚಾಡಿಕೊಳ್ಳುತ್ತಾ ತಾವೂ ನಾಶವಾಗುತ್ತಾ ನಮ್ಮ ಇಡೀ ಕುಟುಂಬವನ್ನು ನಿರ್ನಾಮ ಮಾಡುತ್ತಿದ್ದಾರೆ…….

ಯಾವುದೇ ಮಾಧ್ಯಮ – ಸಾಮಾಜಿಕ ಜಾಲತಾಣಗಳು – ಜಾಗೃತ ಮನಸ್ಥಿತಿಯ ಚರ್ಚೆಗಳು ಮುಂತಾದ ಎಲ್ಲಾ ವೇದಿಕೆಗಳಲ್ಲಿಯೂ ಈ ಎಡ ಬಲಗಳದೇ ಕಚ್ಚಾಟ. ಈ ಅತಿರೇಕ ಎಷ್ಟರಮಟ್ಟಿಗೆ ಇದೆ ಎಂದರೆ ನಾವು ಮನುಷ್ಯರು, ಭಾರತೀಯರು, ಒಂದೇ ತಾಯಿಯ‌ ಮಕ್ಕಳು ಎಂಬುದನ್ನೇ ಮರೆತಿದ್ದಾರೆ…….

ನನ್ನ ತಾಯಿ ಭಾರತಿಯದು ಬಹುದೊಡ್ಡ ಅವಿಭಕ್ತ ಕುಟುಂಬ. ಇಡೀ ಭೂಮಂಡಲದಲ್ಲೇ ಎಲ್ಲೂ ಇಲ್ಲದ ವೈವಿಧ್ಯಮಯ ಸಂಸಾರ……..‌.‌‌…..‌

Advertisement

ಪ್ರೀತಿ ವಿಶ್ವಾಸ ನೆಮ್ಮದಿ ಸಮೃದ್ದಿಗೆ ಯಾವ ಕೊರತೆಯೂ ಇರಲಿಲ್ಲ. ಭಾರತಿಯವರ ಮನೆಯೆಂದರೆ ವಿಶ್ವದಲ್ಲೇ ಒಂದು ಗೌರವ ಘನತೆ ಇತ್ತು. ಆದರೆ ಕಾಲಾಂತರದಲ್ಲಿ ಯಾಕೋ ವಿಚಿತ್ರ ಬದಲಾವಣೆಗಳಾಗಿ ಕೆಟ್ಟ ಹೆಸರು ಬರುತ್ತಿದೆ…….

ಅಣ್ಣ ತಮ್ಮಂದಿರೆ – ಅಕ್ಕ ತಂಗಿಯರೆ – ಹಿತೈಷಿಗಳೇ – ಗುರು ಹಿರಿಯರೆ,…..,

ನಿಮ್ಮ ಕಾಲು ಹಿಡಿಯುತ್ತೇನೆ. ಈ ಮಕ್ಕಳಿಗೆ ಬುದ್ದಿ ಹೇಳಿ. ದಯವಿಟ್ಟು ಒಡೆದು ಚೂರು ಚೂರಾಗುವ ಮೊದಲು ನಮ್ಮ ಸಂಸಾರ ಉಳಿಸಿ. ನಿಮ್ಮ ಋಣ ಈ ಜೀವಮಾನದಲ್ಲಿ ಮರೆಯುವುದಿಲ್ಲ……..

ಅವರಿಗೆ ಹೇಳಿ, ಈ ಪಂಥ ಆ ಪಂಥ, ನಿಮ್ಮ ಓದು ಬರಹ ಜ್ಞಾನ ವಾದ ಪ್ರತಿಭೆ ಜೀವಪರವಾಗಿಲ್ಲದೇ ಇದ್ದಲ್ಲಿ ನಿಮ್ಮ ನಾಶ ಮಾತ್ರ ಖಚಿತ…….

ಯಾವ ಸಿದ್ದಾಂತವಾದರೂ ಪ್ರೀತಿ ವಿಶ್ವಾಸ ಮಾನವೀಯತೆ ಸಮಾನತೆ ಹೊಂದಾಣಿಕೆ ಇಲ್ಲದಿದ್ದರೆ ಎಲ್ಲವೂ ವಿನಾಶಕಾರಿ………

Advertisement

ಅದು ಶ್ರೇಷ್ಠ ಇದು ಶ್ರೇಷ್ಠ ಎನ್ನದೆ ಸಮಾನತೆಯ ಪಾಠ ಕಲಿಸಿ………

ಈ ಮತಿಹೀನರಿಗೆ ಅರ್ಥಮಾಡಿಸಿ ದಯವಿಟ್ಟು…..

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಕಬ್ಬಿಗೆ ದರ ನಿಗದಿ ಮಾಡುವಂತೆ ಭಾಕಿಸಂ ಒತ್ತಾಯ
July 21, 2025
7:11 AM
by: The Rural Mirror ಸುದ್ದಿಜಾಲ
ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ರೈತರಿಗೆ ಸಲಹೆ
July 21, 2025
6:58 AM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ | ರಾಜ್ಯದ ಕರಾವಳಿಯಲ್ಲಿ ರೆಡ್ ಅಲರ್ಟ್
July 20, 2025
11:02 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group