“ಹಸಿದವನಿಗೆ ತಿನ್ನಲು ಮೀನು ಕೊಡುವುದನ್ನು ನಿಲ್ಲಿಸು. ಅವನಿಗೆ ಮೀನು ಹಿಡಿಯಲು ಕಲಿಸು”. ಇದೊಂದು ಚೀನೀ ಗಾದೆ ಎನ್ನುವವರಿದ್ದಾರೆ. ಆದರೆ ಇದು ನಮ್ಮಲ್ಲೇ ಕೇಳಿದ ಗಾದೆ ಎನ್ನುವವರೂ ಇದ್ದಾರೆ. ಏನೇ ಇರಲಿ, ಮೀನು ಇರುವಲ್ಲಿ ಈ ಗಾದೆ ಇದ್ದರೆ ತಗಾದೆ ಯಾಕೆ? ನಮಗೆ ಬೇಕಾದ್ದು ಅದಲ್ಲ, ಅದು ನೀಡುವ ಸಂದೇಶ ನಮಗೆ ಬೇಕು. ಮೀನು ಕೊಟ್ಟರೆ ತಿಂದು ಕರಗುವ ತನಕವಷ್ಟೇ ಹಸಿವಿನ ಸಮಸ್ಯೆ ಪರಿಹಾರ. ಆಮೇಲೆ ಮತ್ತೊಂದು ಮೀನನ್ನು ಕೊಡಬೇಕಾಗುತ್ತದೆ. ಅದರ ಬಳಿಕ ಇನ್ನೊಂದು. ಇದು ಮುಗಿಯದ ಸರಣಿ. ಆದರೆ ಮೀನನ್ನು ಹಿಡಿಯಲು ಕಲಿಸಿದರೆ ಆಗ ತನಗೆ ಬೇಕಷ್ಟೇ ಮೀನು ಹಿಡಿದು ತಿನ್ನುತ್ತಾನೆ. ಸುಮ್ಮನೇ ಬೇಡಿ ತೆಗೆದಿಟ್ಟುಕೊಂಡು ಹಾಳು ಮಾಡುವುದಿಲ್ಲ. ಅಲ್ಲದೆ ಅವರಿಗೆ ದುಡಿಮೆಯ ಬೆಲೆ ಗೊತ್ತಾಗುತ್ತದೆ. ಆತನ ದೇಹಕ್ಕೂ ವ್ಯಾಯಾಮ ಸಿಗುತ್ತದೆ. ತಾನೇ ಸಂಗ್ರಹಿಸಿದ ಆಹಾರವೆಂದು ಆತ್ಮತೃಪ್ತಿ ಇರುತ್ತದೆ. ಹೆಚ್ಚು ಮೀನುಗಳು ಬಲೆಗೆ ಬಿದ್ದರೆ ಬೇರೆಯವರಿಗೂ ಹಂಚಲು ಸಾಧ್ಯವಾಗುತ್ತದೆ. ಅವರೂ ತಮ್ಮಲ್ಲಿದ್ದುದನ್ನು ಹಂಚುತ್ತಾರೆ. ಇದು ಸಹಬಾಳ್ವೆಗೆ ಒಂದು ಆಯಾಮ ನೀಡುತ್ತದೆ. ಅರ್ಥಾತ್, ದುಡಿದು ಅನ್ನವನ್ನು ಸಂಗ್ರಹಿಸುವುದರ ಲಾಭಗಳು ಅನೇಕ. ಇದನ್ನು ಮನಗಂಡಿರುವ ಕರ್ನಾಟಕದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶ್ರೀಷಾನಂದರು ಸರಕಾರಕ್ಕೆ ಹೇಳಿದ ಕಿವಿಮಾತು: “ಸಬ್ಸಿಡಿ ಬದಲಿಗೆ ದುಡಿದು ತಿನ್ನುವಂತೆ ಮಾಡಿ”.
ಸಾಮಾಜಿಕ ಕಾಳಜಿಯುಳ್ಳ ನ್ಯಾಯಮೂರ್ತಿಗಳೆಂಬ ಖ್ಯಾತಿ ಶ್ರೀಷಾನಂದರಿಗೆ ಇದೆ. ಬಡವರ ಅನುಕೂಲಕ್ಕಾಗಿ ಸರ್ಕಾರವು ಮಾಡಿರುವ ಆಹಾರದ ಸಬ್ಸಿಡಿ ಯೋಜನೆಯು ದುರುಪಯೋಗ ಆಗುತ್ತಿರುವುದರ ವಿದುದ್ಧ ಅವರು ಎಚ್ಚರಿಕೆ ನೀಡಿದ್ದಾರೆ. ಇಂತಹ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸುವಾಗ ಅದರ ದುರುಪಯೋಗ ಆಗದಂತೆ ಸರಕಾರವು ತಡೆಯಬೇಕು. ಇಂತಹ ಸೌಲಭ್ಯವು ಜನರ ದುಡಿದು ಗಳಿಸುವ ಮನೋಧರ್ಮವನ್ನು ಬದಲಾಯಿಸಿದೆ. ಇಂದು ದೇಶವು ಎಂತಹ ಸ್ಥಿತಿಗೆ ತಲುಪಿದೆ ಎಂದು ಯೋಚಿಸಿದರೆ ನೋವಾಗುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇದು 2024 ರ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಂದ ಪ್ರಕರಣ. ಸಾರ್ವಜನಿಕ ಅಗತ್ಯ ವಸ್ತುಗಳ ನಿಯಮಗಳ ಅಡಿಯಲ್ಲಿ ದಾಖಲಾದ ಈ ಪ್ರಕರಣದಲ್ಲಿ “ನೀಲಿ ಸೀಮೆಎಣ್ಣೆಯ ಅಕ್ರಮ ಮಾರಾಟದಲ್ಲಿ ತೊಡಗಿದ್ದ ತಪ್ಪಿತಸ್ಥರನ್ನು ಸುಮ್ಮನೇ ಬಿಡಲಾಗದು” ಎಂಬ ಧೋರಣೆಯನ್ನು ಜಡ್ಜರು ತಳೆದಿದ್ದಾರೆ. ಮೈಸೂರಿನಲ್ಲಿ 2009 ರಲ್ಲಿ ನಡೆದ ಈ ಪ್ರಕರಣದಲ್ಲಿ ರೇಷನ್ ಕಾರ್ಡುದಾರರಿಗೆ ಸರಬರಾಜು ಮಾಡಲಾಗಿದ್ದ ಎರಡು ಬ್ಯಾರಲ್ ನೀಲಿ ಸೀಮೆಎಣ್ಣೆಯನ್ನು ಡೀಸೆಲ್ ಟ್ಯಾಂಕರ್ ಲಾರಿಗೆ ತುಂಬಿದಾಗ ಅಪರಾಧಿಗಳು ಪೊಲೀಸರ ಕೈಗೆ ಸಿಕ್ಕಿದ್ದರು. ಈ ಅಪರಾಧಿಗಳಿಗೆ ಮೈಸೂರಿನ ನ್ಯಾಯಾಲಯದಲ್ಲಿ ನೀಡಲಾಗಿದ್ದ ಸಾದಾ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ ಅಪರಾಧಿಗಳ ಕೃತ್ಯವನ್ನು ವಿಶ್ಲೇಷಿಸಿದ ಶ್ರೀಷಾನಂದರು ಒಟ್ಟು ವ್ಯವಸ್ಥೆಯ ದುರ್ಬಳಕೆಯತ್ತ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ಈ ಪ್ರಕರಣದಲ್ಲಿ ಸಿಕ್ಕಿದ್ದು ಎರಡು ಬ್ಯಾರೇಲ್ ಸೀಮೆಎಣ್ಣೆ ಮಾತ್ರ. ವಾಸ್ತವದಲ್ಲಿ ದಿನಾಲೂ ಎಷ್ಟು ಬ್ಯಾರೆಲ್‍ಗಳು ಕಳವಾಗುತ್ತಿದ್ದುವೆಂಬುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಹಾಗಾಗಿ ಇದು ಒಟ್ಟು ಸಮಸ್ಯೆಯ Tip of the iceberg ಎಂದು ಹೇಳಬಹುದು. ನಮಗೆ ಕಾಣುತ್ತಿರುವುದು ನೀರಲ್ಲಿ ಮುಳುಗಿರುವ ಭ್ರಷ್ಟಾಚಾರದ ಬೃಹತ್ ನೀರ್ಗಲ್ಲ ತುದಿ ಮಾತ್ರ. ಆದರೂ ಈ ಅಪರಾಧವನ್ನು ಗಂಭೀರ ಸ್ವರೂಪದ್ದೆಂದು ನ್ಯಾಯಾಧೀಶರು ಪರಿಗಣಿಸಿದ್ದರಿಂದ ಈ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕಾದ ಅಗತ್ಯವಿದೆ.
ಉಚಿತ ಪಡಿತರ ವಿತರಣೆಯಲ್ಲಿರುವ ಅಸಮರ್ಪಕತೆಗಳ ಬಗ್ಗೆ ಅದರ ವೆಚ್ಚಗಳನ್ನು ಭರಿಸುತ್ತಿರುವ ತೆರಿಗೆದಾರರು ಪರಿಶೀಲಿಸುವುದೇ ಇಲ್ಲ. ಇನ್ನು ಅದರ ಫಲಾನುಭವಿಗಳೂ ಪರಿಶೀಲಿಸುವುದಿಲ್ಲ. ಏಕೆಂದರೆ ಅವರಿಗೆ ಏನೇನೆಲ್ಲವನ್ನು ಎಷ್ಟೆಷ್ಟು ವಿತರಿಸುತ್ತಾರೋ ಅಷ್ಟನ್ನು ತೆಗೆದುಕೊಂಡಲ್ಲಿಗೆ ತೃಪ್ತಿಯಾಗುತ್ತದೆ. ಉಚಿತ ಅಕ್ಕಿಯೊಂದಿಗೆ ಕೊಡುವ ಬೇಳೆ, ಎಣ್ಣೆ, ತುಪ್ಪ, ಸೀಮೆಎಣ್ಣೆ ಮುಂತಾದುವುಗಳನ್ನು ಕೊಟ್ಟಾಗ ತೆಗೆದುಕೊಳ್ಳುತ್ತಾರೆ. ಈ ಬಾರಿ ಬಂದಿಲ್ಲವೆಂದು ವಿತರಕರು ಹೇಳಿದರೆ ಆಯಿತೆನ್ನುತ್ತಾರೆ. ಸೀಮೆಎಣ್ಣೆ ಸಿಕ್ಕಿದಾಗ ಅದನ್ನು ಬೇರೆ ಅಂಗಡಿಗೆ ಮಾರುವವರೂ ಇದ್ದಾರೆ. ಏಕೆಂದರೆ ಮನೆಗೊಂದು ವಿದ್ಯುತ್ ದೀಪ ಬಂದ ಬಳಿಕ ಸೀಮೆಎಣ್ಣೆ ದೀಪಗಳು ಮೂಲೆ ಸೇರಿವೆ. ಅಡುಗೆ ಅನಿಲ ಬಂದ ಬಳಿಕ ಸೀಮೆ ಎಣ್ಣೆಯ ಕಳ್ಳ ಸಾಗಾಟ ನಡೆದರೆ ತಮಗೆ ಅದು ಸಿಕ್ಕಿಲ್ಲವೆಂದು ಹರತಾಳ ಮಾಡುವವರಿಲ್ಲ. ಹೀಗಾಗಿ ಪಡಿತರ ವಿತರಣೆಯ ವ್ಯವಸ್ಥೆಯನ್ನು ನಡೆಸುತ್ತಿರುವ ಏಜೆಂಟರುಗಳ ಪ್ರ್ರಾಮಾಣಿಕತೆಯ ನಿಷ್ಠೆಯು ಕನಿಷ್ಟವಾಗುತ್ತಿರುವುದರಲ್ಲಿ ಅಚ್ಚರಿ ಇಲ್ಲ!
ಉಚಿತವಾಗಿ ಸಿಕ್ಕುವುದಿದ್ದರೆ ಅಕ್ಕಿಯನ್ನು ಬೇಡವೆನ್ನುವವರು ಯಾರಿದ್ದಾರೆ? ಅದು ಕೂಡಾ ಇತ್ತೀಚೆಗೆ ಉತ್ತಮವಾದ ಸ್ವಚ್ಛ ಅಕ್ಕಿಯನ್ನು ವಿತರಿಸುತ್ತಾರೆ. ಬೇಳೆ, ಎಣ್ಣೆ, ತುಪ್ಪಗಳೂ ಗುಣಮಟ್ಟದಲ್ಲಿ ಚೆನ್ನಾಗಿರುತ್ತವೆ. ಇದನ್ನು ಪಡೆಯಲು ಬೇಕಾಗಿರುವುದು ಒಂದು ಕಾರ್ಡ್ ಮಾತ್ರ. ಅದಕ್ಕಾಗಿ ತಮ್ಮನ್ನು ಬಡತನದ ರೇಖೆಗಿಂತ ಕೆಳಗಿದ್ದಾರೆಂಬ ದೃಢಪತ್ರಿಕೆಯನ್ನು ಸೂಕ್ತ ಹುದ್ದೆಯಲ್ಲಿರುವ ಕಂದಾಯ ಅಧಿಕಾರಿಗಳಿಂದ ಪಡೆದರೆ ಆಯಿತು. ಅದರಲ್ಲೂ ಒಂದು ಬಾರಿ ಭ್ರಷ್ಟಾಚಾರ ಮಾಡಿದರೆ ಮತ್ತೆ ಎಲ್ಲವೂ ಸುಸೂತ್ರ. ಇಂತಹ ವ್ಯವಸ್ಥೆಯಲ್ಲಿ ಸರಕಾರದ ಗ್ಯಾರಂಟಿ ಯೋಜನೆಯ ವೆಚ್ಚದ ಗಾತ್ರವು ನಿಯಂತ್ರಣ ಮೀರದೆ ಇರುತ್ತದೆಯೆ? ಆಗ ಫಲಾನುಭವಿಗಳ ವರ್ಗೀಕರಣ ಮಾಡಿ ಅದೆಷ್ಟೋ ಲಕ್ಷ ಕಾರ್ಡುಗಳನ್ನು ಅಮಾನ್ಯಗೊಳಿಸಿದ ಸುದ್ದಿ ಬಂತು. ಅದರ ವಿರುದ್ಧ ಪ್ರತಿಭಟನೆಯೂ ಪ್ರಕಟವಾಯಿತು. ಮತ್ತೆ ಅದೀಗ ಹೇಗೆ ತಣ್ಣಗಾಗಿದೆ ಎಂಬುದನ್ನು ಯಾವ ತೆರಿಗೆದಾರರೂ ವಿಚಾರಿಸಿಲ್ಲ. ಅವರು ವಿಚಾರಿಸುವುದೂ ಇಲ್ಲ. ಏಕೆಂದರೆ ಇಂದು ಬಡವರಿಗೆ ಉಚಿತ ಪಡಿತರವೆಂಬುದು ಒಂದು ಸ್ವೀಕೃತ ವ್ಯವಸ್ಥೆಯಾಗಿದೆ.
ತೀರಾ ಬಡವರಿಗೆ, ಆದಾಯ ತರುವ ವ್ಯಕ್ತಿಗಳಿಲ್ಲದ ಮನೆಯವರಿಗೆ, ತಾಯಿ ಮಕ್ಕಳು ಮಾತ್ರ ಇರುವ ಬಡ ಕುಟುಂಬದವರಿಗೆ ಹೀಗೆ ಆಹಾರದ ಲಭ್ಯತೆಯೇ ಇಲ್ಲದವರಿಗೆ ಉಚಿತ ಪಡಿತರ ನೀಡುವುದರಲ್ಲಿ ಅರ್ಥವಿದೆ. ಆದರೆ ದುಡಿಯುವ ಸಾಮರ್ಥ್ಯವುಳ್ಳ ಗಂಡಸರು ಹಾಗೂ ಹೆಂಗಸರು ಎಷ್ಟೇ ಮಂದಿ ಇದ್ದರೂ ಬಿ.ಪಿ.ಎಲ್ ಕಾರ್ಡ್ ಇದ್ದವರಿಗೆಲ್ಲ ಉಚಿತವಾಗಿ ಅಕ್ಕಿ ಹಾಗೂ ಇತರ ಆಹಾರ ಧಾನ್ಯಗಳನ್ನು ನೀಡುವ ವ್ಯವಸ್ಥೆಯಲ್ಲಿ ಪೂರ್ಣ ಆಹಾರ ನೀಡುವುದು ಒಂದೆಡೆಯಾದರೆ ಆಲಸ್ಯ ತುಂಬುವುದು ಇನ್ನೊಂದೆಡೆಯ ವಿಪರ್ಯಾಸವಾಗಿದೆ. ಇದು ದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿ ಅಭಿವೃದ್ಧಿಯ ಸಾಧ್ಯತೆಗೆ ಹಿನ್ನಡೆ ಉಂಟು ಮಾಡುತ್ತದೆ.
ಇಂದಿನ ದಿನಗಳಲ್ಲಿ ಕೃಷಿ ಕೈಗಾರಿಕೆಗಳಲ್ಲದೆ ವಾಣಿಜ್ಯ ಪ್ರಪಂಚದಲ್ಲಿಯೂ ಅನೇಕ ರೀತಿಯ ಉದ್ಯೋಗಗಳು ಸೃಷ್ಟಿಯಾಗಿವೆ. ಖಾಸಗಿ ಬ್ಯಾಂಕ್, ಸಾರಿಗೆ, ವಿವಿಧ ಏಜೆನ್ಸಿಗಳು, ಕಂಪ್ಯೂಟರ್, ಮುದ್ರಣ ಇತ್ಯಾದಿ ಕ್ಷೇತ್ರಗಳಲ್ಲಿ ವೈವಿಧ್ಯಮಯ ಕೌಶಲಗಳ ಕೆಲಸಗಳಿವೆ. ಕೆಲವೊಂದು ಕೆಲಸಗಳಿಗೆ ಮಹಿಳೆಯರೇ ಸಾಕಾಗುತ್ತಾರೆ. ಹಾಗಾಗಿ “ಉದ್ಯೋಗಂ ಪುರುಷ ಲಕ್ಷಣಂ” ಎಂತ ಇದ್ದದ್ದು ಈಗ “ಉದ್ಯೋಗಂ ಸರ್ವಜನ ಲಕ್ಷಣಂ” ಎಂತ ಆಗಿದೆ.
ಉದ್ಯೋಗಾವಕಾಶಗಳನ್ನು ಹುಟ್ಟು ಹಾಕಿ ಜನರಿಗೆ ದುಡಿದು ಸಂಪಾದಿಸಲು ಬಿಡಬೇಕು. ಇದರಿಂದ ಜನರು ಸ್ವಾವಲಂಬಿಗಳಾಗುವುದಲ್ಲದೆ ಆತ್ಮಗೌರವ ಉಳ್ಳವರಾಗುತ್ತಾರೆ. ದುಡಿಯುವವರು ಹೆಚ್ಚಾಗುವುದರಿಂದಾಗಿ ಉತ್ಪಾದನಾ ವಲಯವೂ ವಿಸ್ತಾರವಾಗುತ್ತದೆ. ಅದು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ನ್ಯಾಯಮೂರ್ತಿಗಳು ಹೇಳಿದ ಅಭಿಪ್ರಾಯವು ಸಾಮಾಜಿಕ ವಲಯದಲ್ಲಿಯೂ ಇದೆ. ಆದರೆ ಅವರ ಮಾತಿಗೆ ಮಹತ್ವ ಇದೆ. ಅದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬಹುದಾಗಿದೆ. ಅದಕ್ಕಾಗಿ ಸಾರ್ವಜನಿಕ ಅಭಿಪ್ರಾಯ ಪ್ರಕಟವಾಗಬೇಕಾದ ಅಗತ್ಯವಿದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel