“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು” ಎಂಬ ಕವನ ನಮ್ಮ ಶಾಲಾ ಪಠ್ಯಗಳಲ್ಲಿತ್ತು. ಅದನ್ನು ಬಹಳ ವಿಸ್ತಾರವಾದ ವಿವರಣೆಗಳೊಂದಿಗೆ ನಮ್ಮ ಶಿಕ್ಷಕರು ಹೇಳಿಕೊಡುತ್ತಿದ್ದರು. “ಮಾತೃದೇವೋಭವ” ಎಂಬುದು ನಮಗೆ ಸೋದಾಹರಣವಾಗಿ ತಿಳಿಯುತ್ತಿತ್ತು. ಅದರೊಂದಿಗೆ “ಪಿತೃ ದೇವೋಭವ” ಎಂದರೆ ತಂದೆಯನ್ನು ದೇವರಂತೆ ಕಾಣಬೇಕೆಂದು ಹೇಳಿ ಕೊಟ್ಟಿದ್ದರು. ಆಚಾರ್ಯ ದೇವೋಭವ ಎಂದರೆ ಗುರುಗಳನ್ನು ಪೂಜ್ಯ ಭಾವದಿಂದ ಕಾಣುವಂತೆ ಬೋಧಿಸಿದ್ದರು. ಹೆತ್ತು ಕುಟುಂಬವನ್ನು ಪರಿಚಯಿಸಿದ ತಾಯಿ, ಹೊತ್ತು ಊರನ್ನು ಪರಿಚಯಿಸಿದ ತಂದೆ ಮತ್ತು ಜ್ಞಾನವನ್ನಿತ್ತು ಪ್ರಪಂಚವನ್ನು ಪರಿಚಯಿಸಿದ ಗುರುಗಳು ಮಗುವಿನ ಜೀವನದಲ್ಲಿ ಸಂಪೂರ್ಣ ಯಶಸ್ಸನ್ನು ಬಯಸುವವರಾಗಿರುತ್ತಾರೆ. ಅವರ ಆಶೀರ್ವಾದದ ಬಲವು ಮಗುವಿನ ಸಾಧನೆಯ ಮಾರ್ಗದಲ್ಲಿ ಶ್ರೀರಕ್ಷೆಯಾಗುತ್ತದೆ.
ಇದು ಅನೇಕರ ಬಾಳಿನಲ್ಲಿ ಸತ್ಯವಾಗುವ ವಿಚಾರ. ಆದರೆ ಅದು ಏಕಮುಖೀ ಮಾರ್ಗವಲ್ಲ. ಅಮ್ಮ, ಅಪ್ಪ ಮತ್ತು ಗುರುಗಳು ಮಕ್ಕಳಿಗೆ ಪ್ರೀತಿ, ಕ್ಷಮೆ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವುದಷ್ಟೇ ಅಲ್ಲ, ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶನವನ್ನೂ ನೀಡುತ್ತಾರೆ. ಈ ಭಾಗ್ಯ ಇರುವ ಮಕ್ಕಳಿಗೆ ಯಾವುದೇ ರೀತಿಯ ಕೊರತೆಗಳ ಕೊರಗು ಇರುವುದಿಲ್ಲ. ಯಶಸ್ಸಿನ ಗಳಿಕೆಯಲ್ಲಿ ದಾಪುಗಾಲು ಇಡುತ್ತ ಮುಂದೆ ಸಾಗಬಹುದು. ಆದರೆ ಈ ಭಾಗ್ಯವಂತರಲ್ಲಿ ಅನೇಕರು ಯಶಸ್ಸಿನ ಅಧಿಕಾರಿಗಳಾಗುವುದಿಲ್ಲ. ತಮಗೆ ಸಿಗುವ ಪೋಷಣೆಗೆ ಅನುಸಾರವಾಗಿ ಕಲಿಕೆಯಲ್ಲಿ ಪ್ರಗತಿ ತೋರಿಸುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಭಾಗ್ಯದ ಮೌಲ್ಯ ತಿಳಿದಿರುವುದಿಲ್ಲ. ತಿಳಿಯುವಷ್ಟರಲ್ಲಿ ಸಾಕಷ್ಟು ನಷ್ಟ ಆಗಿರುತ್ತದೆ.
ತಂದೆ ಇಲ್ಲದ ಮಕ್ಕಳು, ತಾಯಿ ಇಲ್ಲದ ತಬ್ಬಲಿಗಳು ಮತ್ತು ವಿಚ್ಛೇದನದಿಂದ ಬೇರಾದ ಪೋಷಕರ ಮಕ್ಕಳು ಮತ್ಯಾರದೋ ಕರುಣೆಯ ಕೂಸುಗಳಾಗಬೇಕಾಗುತ್ತದೆ. ಅವರ ಪ್ರಗತಿಯಲ್ಲಿ ಅವರೇ ಪ್ರಧಾನ ಪಾತ್ರಧಾರಿಗಳಾಗಬೇಕಾಗುತ್ತದೆ. ಆದರೂ ಒಬ್ಬ ಪೋಷಕರ ಸಹಾಯದಿಂದಷ್ಟೇ ಸಾಧಕರಾಗಿ ಬೆಳೆದವರ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.
ಇನ್ನೊಂದು ಸ್ತರದಲ್ಲಿರುವವರು ಯಾರೆಂದರೆ ಅನಾಥ ಮಕ್ಕಳು. ಯಾರದೋ ಆಶ್ರಯದಲ್ಲಿ ಅಥವಾ ಅನಾಥಾಶ್ರಮಗಳಲ್ಲಿ ಕನಿಷ್ಟ ಮಟ್ಟದ ಮಾನವೀಯ ಸಂವೇದನೆಗಳ ಆವರಣದಲ್ಲಿ ಅವರು ಬೆಳೆಯಬೇಕಾಗುತ್ತದೆ. ಆಗ ಹೊಟ್ಟೆಪಾಡಿನ ಪರಿಶ್ರಮವೇ ಅವರ ಸಾಧನೆಯ ಸಮಯವನ್ನು ತಿನ್ನುತ್ತದೆ. ಹಾಗಿದ್ದರೂ ಸ್ವಪ್ರಯತ್ನದಿಂದ ಸಾಧಕರಾದವರು ಇದ್ದಾರೆ. ವಿಶೇಷ ಚೇತನರೂ ತಮ್ಮ ಅಂಗ ವೈಕಲ್ಯವನ್ನು ಮೀರಿ ಸ್ವಾವಲಂಬನೆಯನ್ನು ಸಾಧಿಸಿದವರಿದ್ದಾರೆ.
ಇಲ್ಲಿ ಸಾಧಕರೆಂಬ ಪದವು ಏನಾದರೂ ಅದ್ಭುತ ಸಂಶೋಧನೆ ಮಾಡಿದವರು ಎಂಬ ಅರ್ಥ ಹೊಂದಿಲ್ಲ. ಈ ಸಾಧಕರು ತಮ್ಮ ಬದುಕನ್ನು ತಾವೇ ರೂಪಿಸಿಕೊಂಡವರೆಂಬುದು ಮುಖ್ಯ. ಸ್ವಾವಲಂಬಿಗಳಾಗಿ ಸಮಾಜಕ್ಕೆ ಉಪಯುಕ್ತವಾಗಿ ಬದುಕುವ ಆದರ್ಶ ಇಟ್ಟುಕೊಂಡವರು ಇವರು. ಆದರೆ ದುರಂತವೆಂದರೆ ಉತ್ತಮ ಪೋಷಕರಿದ್ದಾಗಲೂ ಬದುಕು ಕಟ್ಟಿಕೊಳ್ಳಲು ವಿಫಲರಾದ ಅನೇಕ ಯುವಜನರಿದ್ದಾರೆ. ಹಣ ಗಳಿಕೆಯ ದಾರಿ ಸಿಕ್ಕಿದರೂ ಗುಣದ ಕೊರತೆ ಕಾಣಿಸುತ್ತದೆ. ಅದಕ್ಕೆ ಮಾರ್ಗದರ್ಶನದ ವೈಫಲ್ಯವೇ ಕಾರಣ. ಏಕೆಂದರೆ ಅವರಿಗೆ ಮನೆಯಲ್ಲಿ ಯೋಗ್ಯ ಮಾರ್ಗದರ್ಶನ ಸಿಕ್ಕಿರುವುದಿಲ್ಲ. ತಂದೆ-ತಾಯಿ ಇಬ್ಬರಿಗೂ ಉದ್ಯೋಗ, ಸಂಪಾದನೆ ಮತ್ತು ಸಮಯದ ಕೊರತೆಯಿಂದಾಗಿ ಮಕ್ಕಳ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯತ್ತ ಗಮನ ಕೊಡಲಾಗುವುದಿಲ್ಲ. ಇದರಿಂದಾಗಿ ಮಕ್ಕಳು ಬೇರೆ ಮಕ್ಕಳ ಸಹವಾಸದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅಲ್ಲಿ ಅವರು ಮಾತಾಡುವ ಮತ್ತು ಯೋಚಿಸುವ ವಿಚಾರಗಳು ತಂದೆ ತಾಯಿಗೆ ತಿಳಿಯುವುದೇ ಇಲ್ಲ. ಹೀಗಾಗಿ ಮಕ್ಕಳ ಬಗ್ಗೆ ಹೆತ್ತವರು ಕಟ್ಟಿಕೊಂಡ ಕನಸುಗಳು ಕೇವಲ ಭ್ರಮೆಗಳೆನ್ನಿಸಿ ಬಿಡುತ್ತವೆ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಂದೆತಾಯಿ ಸಾಕಷ್ಟು ಗಮನ ನೀಡಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುವ ಅಗತ್ಯವಿದೆ.
ಭಾರತದ ಹೊಸ ತಲೆಮಾರಿನ ಯುವಜನರಲ್ಲಿ ಗುಣನಡತೆ ಮತ್ತು ಜೀವನದ ಗುರಿಗಳು ಪಲ್ಲಟಗೊಂಡಿವೆ. ಈ ಎಳೆಯ ಜನಾಂಗಕ್ಕೆ ಸುಲಭಶೀಲತೆಯೆಂಬುದು ರಕ್ತಗತವಾಗಿದೆ. ಶ್ರಮಸಹಿತ ಕೆಲಸ ಮತ್ತು ಕೆಲಸದ ನಿಷ್ಠೆ ಇವೆರಡರಿಂದಲೂ ಅವರು ದೂರ. ಕಚೇರಿಗಳಲ್ಲಿ ದುಡಿಯುವವರೂ ಕೂಡಾ ವಹಿಸಿಕೊಂಡ ಒಂದು ಕೆಲಸವನ್ನು ಮುಗಿಸಬೇಕೆನ್ನುವುದಕ್ಕಿಂತ “ಇಂದು ಸಮಯ ಮುಗಿಯಿತು. ಉಳಿದ ಕೆಲಸ ನಾಳೆ” ಎಂಬ ಅಸಡ್ಡೆಯಿಂದ ಎದ್ದು ಹೋಗುತ್ತಾರೆ. ಕೆಲಸ ಕೊಟ್ಟವರ ಬಗ್ಗೆ ಋಣ ಭಾವ ಇರುವುದಿಲ್ಲ. ಕೆಲಸದಲ್ಲಿ ಪ್ರಾವೀಣ್ಯತೆಯನ್ನು ಪಡೆಯಬೇಕು ಎಂಬ ಹಂಬಲವೂ ಇಲ್ಲ. “ಸಮಯವಾಯಿತು. ಎದ್ದು ಹೋಯಿತು” ಎಂಬ ಮೂಡ್‍ನಲ್ಲಿರುತ್ತಾರೆ. “ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಾವು ಕೆಲಸವನ್ನು ಪ್ರೀತಿಸುತ್ತಿದ್ದೆವು. ಯಾರನ್ನೂ ಪ್ರಭಾವಿಸುವುದಕ್ಕಲ್ಲ, ನಮ್ಮ ಇಷ್ಟದಿಂದಲೇ ಮಾಡುತ್ತಿದ್ದೆವು” ಎಂದು 15 ವರ್ಷಗಳ ಹಿಂದೆ ಅಮೇರಿಕಾಕ್ಕೆ ಉದ್ಯೋಗಿಯಾಗಿ ಹೋಗಿ ದೊಡ್ಡ ಹುದ್ದೆಯಲ್ಲಿರುವ ಇಂಜಿನಿಯರ್ ಒಬ್ಬರು ಹೇಳಿದ ಮಾತಿದು. “ಈಗ ಭಾರತದಿಂದ ಬರುವ ಹೊಸ ಇಂಜಿನಿಯರ್‍ಗಳಲ್ಲಿ ಹೆಚ್ಚಿನವರದ್ದು ಉಡಾಫೆ ವರ್ತನೆ. ತಾವೇ ಕಂಪೆನಿ ಉಳಿಸಲು ಬಂದವರಂತೆ ವರ್ತಿಸುತ್ತಾರೆ. ಹಿರಿಯ ವಯಸ್ಸಿನ ಲೀಡರ್ಸ್‍ಗಳ ಬಗ್ಗೆಯೂ ಗೌರವವಿಲ್ಲ. ತಾವು ಹೊಸ ಜ್ಞಾನವನ್ನು ಪಡೆದು ಬಂದ ತಜ್ಞರೆಂದು ಹೇಳಿಕೊಳ್ಳಲೂ ಅಂಜುವುದಿಲ್ಲ. ಅಂದರೆ ಈ ಯುವಕ ಯುವತಿಯರಿಗೆ ಸರಿಯಾದ ಸಂಸ್ಕಾರ ಆಗಿಲ್ಲದಿರುವುದು ಸ್ಪಷ್ಟವಿದೆ. Polite ಆಗಿ ಇರುವುದು ಬಿಡಿ, ಏನನ್ನಾದರೂ ಕಲಿಸಿಕೊಟ್ಟಾಗ Thanks ಹೇಳಲೂ ಗೊತ್ತಿಲ್ಲ. ಇದೆಲ್ಲಾ ಮನೆಯಲ್ಲಿ ಕೊಡಬೇಕಾದ ಪಾಠ. ಇಂದಿನ ಧಾವಂತದ ಬದುಕಿನಲ್ಲಿ ಅಮ್ಮ ಅಪ್ಪಂದಿರು ಮಕ್ಕಳಿಗೆ ವರ್ತನೆಗಳ ತರಬೇತಿ ಕೊಡುವುದಿಲ್ಲವೆನ್ನಿಸುತ್ತದೆ” ಎನ್ನುತ್ತಾರೆ ಶ್ವೇತಾ ಸೂರಂಬೈಲು.
ಮಕ್ಕಳಲ್ಲಿ ಗುಣನಡತೆ ಬೆಳೆಸುವ ಕೆಲಸ ಶಾಲೆಗಳಲ್ಲಷ್ಟೇ ಆಗುವುದಿಲ್ಲ. ಏಕೆಂದರೆ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯು ನಿಗದಿ ಪಡಿಸಿದ ಪಠ್ಯಗಳನ್ನು ಕಲಿಸಬೇಕು, ಪರೀಕ್ಷೆಗಳನ್ನು ನಡೆಸಬೇಕು. ನಂತರ ಅಂಕಗಳನ್ನು ನೀಡುತ್ತಾರೆ, ಶ್ರೇಣಿ ಹಾಗೂ ರೇಂಕ್‍ಗಳನ್ನು ಘೋಷಿಸುತ್ತಾರೆ ಮತ್ತು ಸರ್ಟಿಫಿಕೇಟ್ ಕೊಡುತ್ತಾರೆ. ಶ್ರೀಮಂತ ಶಾಲೆಯಾದರೆ ಒಂದಷ್ಟು ದುಬಾರಿ ಶುಲ್ಕ ವಿಧಿಸಿ Graduation Day ಅಂತ ಅಬ್ಬರ ಮಾಡಿ ಸರ್ಟಿಫಿಕೇಟ್ ಕೊಡುತ್ತಾರೆ. ಹೀಗಾಗಿ ಶಾಲೆಯಲ್ಲಿ ಕೇವಲ ಔಪಚಾರಿಕ ಶಿಕ್ಷಣ ನಡೆಯುತ್ತದೆ. ಅಂಕಗಳು ಮಕ್ಕಳ ಕಲಿಕೆಯ ಸೂಚಕಗಳಾಗುತ್ತವೆ. ಆದರೆ ಅವು ಅವರ ಗುಣನಡತೆಯ ಮಾಪಕಗಳಾಗಿರುವುದಿಲ್ಲ. ಅಂಕಗಳು ಮಕ್ಕಳಲ್ಲಿ ಅಹಂಕಾರವನ್ನೋ, ಆತ್ಮವಿಶ್ವಾಸವನ್ನೋ ಆತ್ಮಗ್ಲಾನಿಯನ್ನೋ ಉಂಟು ಮಾಡಬಹುದು. ಆದರೆ ಮಾನವೀಯತೆಯ ಪ್ರೇರಣೆಗೆ ಬೇಕಾದ ಕಲಿಕೆಗಳು ಮನೆಗಳಲ್ಲೇ ಆಗಬೇಕು. ಸತ್ಯ, ಸ್ವಾಭಿಮಾನ, ಧರ್ಮ, ನ್ಯಾಯ, ಕರ್ತವ್ಯನಿಷ್ಠೆ, ಸಹಕಾರ, ಸೇವೆ, ಪ್ರಾಮಾಣಿಕತೆ, ತ್ಯಾಗ, ದಾನ, ಕೃತಜ್ಞತೆ, sharing ಮುಂತಾದ ಗುಣಗಳ ಪ್ರಾಯೋಗಿಕ ಶಿಕ್ಷಣ ಮನೆಗಳಲ್ಲೇ ಆಗಬೇಕು. ಮಕ್ಕಳಿಗೆ ಮಾದರಿಯಾಗಿ ತಂದೆ ತಾಯಿಗಳಲ್ಲೇ ಆ ಗುಣಗಳು ಇರಬೇಕು. ನಮ್ಮ ತಂದೆ ತಾಯಿಯಿಂದ ಉಪಕೃತರಾದವರು ನಮ್ಮಲ್ಲಿ ತಮ್ಮ ಕೃತಜ್ಞತೆ ಹೇಳುವಾಗ ನಮಗೆ ದಾನದ ಮಹತ್ವ ತಿಳಿಯುತ್ತದೆ. “ನಿಮ್ಮ ತಂದೆ ಧರ್ಮಿಷ್ಟರು, ನ್ಯಾಯವನ್ನು ತಪ್ಪುವವರಲ್ಲ. ನಿಮ್ಮ ತಾಯಿ ಅನ್ನಪೂರ್ಣೆ, ಮನೆಗೆ ಬಂದವರನ್ನು ಹಸಿವು ಬಾಯಾರಿಕೆಗೆ ಕೊಡದೆ ಕಳಿಸುವವರಲ್ಲ” ಎಂತ ಯಾರಾದರೂ ಹೊಗಳಿದರೆ ಅಂತಹ ಗುಣಗಳು ನಮ್ಮೊಳಗೆ ಬೆಳೆಯುತ್ತವೆ. ‘ಜಗಳ ಪ್ರಯೋಜನವಿಲ್ಲ, ಸಹಕಾರದಿಂದ ನಾವೆಲ್ಲರೂ ಗೆಲ್ಲಬಹುದು’ ಎಂಬ ತತ್ವವನ್ನು ಮನೆಯ ಹಿರಿಯರು ಅನುಸರಿಸಿದ ಉದಾಹರಣೆಗಳಿದ್ದಾಗ ನಮ್ಮಲ್ಲೂ ತಾಳ್ಮೆ ಮತ್ತು ಸಹಕಾರ ಬುದ್ಧಿಗಳು ಬೆಳೆಯುತ್ತವೆ. ಹಿರಿಯರೊಂದಿಗೆ ಸೇರಿ ಕೆಲಸ ಮಾಡಿದಾಗ ಮಕ್ಕಳಿಗೆ ಪರಿಶ್ರಮದ ಬೆಲೆ ತಿಳಿಯುತ್ತದೆ. ಅಂದರೆ ಮನೆಯು ಇಂದಿಗೂ ಮೊದಲ ಪಾಠ ಶಾಲೆಯಾಗಿ ಹೊಂದಿರುವ ಪಾತ್ರವನ್ನು ಮರೆತುಬಿಡುವಂತಿಲ್ಲ.
ವಿವಿಧ ಉದ್ಯೋಗಗಳಲ್ಲಿರುವ ತಂದೆ ತಾಯಿಗೆ ಮಕ್ಕಳನ್ನು ಬೆಳೆಸುವಲ್ಲಿ ವಿವಿಧ ಅಡಚಣೆಗಳಿರುತ್ತವೆ. ಅಂಗಡಿ ಇಟ್ಟುಕೊಂಡಿರುವ ಗಂಡಸಿಗೆ ಮಕ್ಕಳ ಚಟುವಟಿಕೆಗಳತ್ತ ಲಕ್ಷ್ಯ ಕೊಡಲು ಕಷ್ಟ. ಆಗ ಮನೆಯಲ್ಲಿರುವ ಅಮ್ಮನೇ ಸದ್ಗುಣಗಳನ್ನು ಕಲಿಸಬೇಕು. ಕೃಷಿ ಕೆಲಸದಲ್ಲಿ ತೊಡಗಿರುವವರಿಗೂ ತಾವು ಮಾಡುವ ಕೆಲಸಕ್ಕೆ ಸಮಯಾಸಮಯದ ಲೆಕ್ಕವಿಲ್ಲ. ಅವರು ಮಕ್ಕಳಿಗೆ ಓದುವುದಕ್ಕಿದೆಯೆಂದು ತಮ್ಮೊಡನೆ ಕೆಲಸಕ್ಕೆ ಕರೆಯುವುದಿಲ್ಲ. ಇದರಿಂದ ಮಕ್ಕಳಿಗೆ ಮೈ ಮುರಿದು ಮಾಡುವ ಕೆಲಸದ ಬಗ್ಗೆ ತಿರಸ್ಕಾರವೂ ದೇಹದಲ್ಲಿ ಆಲಸ್ಯವೂ ಬೆಳೆಯುತ್ತದೆ. ಇನ್ನು ವಿದ್ಯಾವಂತ ಯುವ ಮಾತಾ ಪಿತೃಗಳು Work from home ಮಾಡಿದರೂ ಅವರು ಮಕ್ಕಳ ಬಿಡುವಿನ ವೇಳೆಯಲ್ಲಿ ಲಭ್ಯರಾಗುವುದಿಲ್ಲ. ಅವರ ದುಡಿಮೆಯ ಅವಧಿಯು ರಾತ್ರಿಯಲ್ಲಿಯೂ ಮುಂದುವರಿಯುತ್ತದೆ. ಹೀಗಾದಾಗ ಮಕ್ಕಳು ಸಮಯ ಕಳೆಯಲು ಟಿ.ವಿ. ಹಾಗೂ ಮೊಬೈಲನ್ನು ಅವಲಂಬಿಸುತ್ತಾರೆ. ಅಲ್ಲಿ ಅವರು ನೋಡುವ ಕಥೆಗಳ ಆಯ್ಕೆಗೆ ಯಾವುದೇ ಸೆನ್ಸಾರ್ ಇರುವುದಿಲ್ಲ. ಹಾಗಾಗಿ ಮನೆಯನ್ನು ಮಕ್ಕಳಿಗೆ ಮೊದಲ ಪಾಠ ಶಾಲೆಯನ್ನಾಗಿ ಮಾಡುವ ಕೆಲಸ ಸವಾಲಿನದ್ದಾಗಿದೆ. ಆದರೆ ಅದನ್ನು ಮಾಡಲೇ ಬೇಕಾಗಿದೆ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement