ಚುನಾವಣೆ ಬಂದಾಗ ಆಡಳಿತವೇ ಸರ್ವ ಶ್ರೇಷ್ಟ…!. ಪರಿ ಪರಿಯಾಗಿ ರೈತರೇ ಮನವಿ ಮಾಡಿದರೂ ದರ್ಪ..!. ಕೃಷಿ ಉಳಿಸಲು ಕೋವಿ ಬೇಕು ಎಂದರೂ ಕ್ಯಾರೇ ಇಲ್ಲ…ಜನರೇ ಓಟು ಹಾಕಿ ಗೆಲ್ಲಿಸುವ, ರೈತರೇ ಕ್ಯೂನಲ್ಲಿ ನಿಂತು ಮತದಾನ ಮಾಡಿ ಆಯ್ಕೆ ಮಾಡುವ ಜನಪ್ರತಿನಿಧಿಗಳು ಮಾತನಾಡುವುದಿಲ್ಲ, ಕೃಷಿ ಉಳಿಸಬೇಕು, ಬೆಳೆಸಬೇಕು ಎನ್ನುವ ಐಡಿಯಾ ನೀಡುವ ಅಧಿಕಾರಿಗಳು ಮಾತನಾಡುವುವಿಲ್ಲ… ಯಾವ ಬೇಡಿಕೆಗಳಿಗೂ ಗೌರವವೂ ಇಲ್ಲ, ಮಾನ್ಯವೂ ಇಲ್ಲ..!. ಈ ಸಮಸ್ಯೆ ಇಂದಲ್ಲ, ಹಲವು ವರ್ಷಗಳಿಂದ ಇದೆ. ಈ ಬಾರಿ ರೈತರೇ ಸರಿಯಾಗಿ ಆಡಳಿತಕ್ಕೆ ಅರಿವು ಮೂಡಿಸಿದ್ದಾರೆ. ಇನ್ನು ಮುಂದೆ ಯಾವ ರೈತರಿಗೂ ಇಂತಹ ಕಾಟ ಇರದೇ ಇರಲಿ. ಜನಪ್ರತಿನಿಧಿಗಳು ಇನ್ನಾದರೂ ಮಾತನಾಡಲಿ.
ಕಳೆದ ಹಲವು ಸಮಯಗಳಿಂದ ಚುನಾವಣೆ ಬಂದಾಗ , ಕೃಷಿಕರು ಕೃಷಿ ರಕ್ಷಣೆಗೆ ಬೆಳೆ ರಕ್ಷಣೆಗೆಂದು ಲೈಸನ್ಸ್ ಹೊಂದಿ ಇರಿಸಿಕೊಂಡಿರುವ ಕೋವಿಯನ್ನು ಡೆಪಾಸಿಟ್ ಇಡಬೇಕು ಎಂದು ಆದೇಶವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಕೆಲವು ಜಿಲ್ಲೆಗಳಲ್ಲಿ ಈ ಆದೇಶವಾಗುತ್ತದೆ. ಆದೇಶವಾದ ತಕ್ಷಣವೇ ಅಧಿಕಾರಿಗಳು ಕೃಷಿಕರನ್ನು ಪೀಡಿಸಲು ಆರಂಭ ಮಾಡುತ್ತಾರೆ. ಆದೇಶ ಪಾಲನೆ ಆಗಬೇಕು, ಇಂದೇ ಕೋವಿ ಡಿಪಾಸಿಟ್ ಇಡಿ ಎನ್ನುವುದು ಮಾಮೂಲಾಗಿದೆ. ಕೃಷಿಕರು ಈ ಆದೇಶವನ್ನು ಶಿರಸಾವಹಿಸಿ ಡಿಪಾಸಿಟ್ ಇರಿಸಿ ಬರುತ್ತಾರೆ. ಸೌಜನ್ಯದಿಂದ, ಇಲ್ಲ ಸಮಸ್ಯೆಯಾಗುತ್ತದೆ ಎಂದು ಹೇಳಿದರೂ 250- 300 ರೂಪಾಯಿ ನೀಡಿ ಡಿಪಾಸಿಟ್ ಇರಿಸಿ ಕಾನೂನು ಪಾಲನೆ ಮಾಡುತ್ತಾರೆ. ಇಂದು ಸೌಜನ್ಯಕ್ಕೆ ಬೆಲೆಯೂ ಇಲ್ಲ ಎಂದು ಅಧಿಕಾರ ವರ್ಗವೇ ಹೇಳಿದ ಹಾಗಿದೆ. ಅದೇ ಇತರ ಯಾವ ಕಾನೂನು, ನೀತಿ-ನಿಯಮಗಳು ಯಾವ ಪಕ್ಷಗಳೂ ಆಚರಿಸದೇ ಇದ್ದರೂ ಮೌನವಾಗಿರುತ್ತದೆ ಆಡಳಿತ. ಕಳೆದ ಬಾರಿ ಚುನಾವಣೆಯ ವೇಳೆ ಹಣ ಹಂಚುತ್ತಿರುವ ಬಗ್ಗೆ ಬಂದಿರುವ ದೂರಿನ ಆಧಾರದಲ್ಲಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, “ಹಾಗೆ ನಡೆದೇ ಇಲ್ಲ” ಎಂದು ವರದಿ ಮಾಡಿರುವುದೂ ಕೃಷಿಕರಿಗೆ ಅರಿವು ಇದೆ. ಆದರೆ , ಕೃಷಿಕರ ನಿಜವಾದ ಬೇಡಿಕೆಗಳು ಮಾನ್ಯವೇ ಆಗಿಲ್ಲ. ಹೀಗಾಗಿ ಕಳೆದ ಎರಡು ಚುನಾವಣೆಯಲ್ಲಿ ಕೃಷಿಕರು ನ್ಯಾಯಾಲಯದ ಮೆಟ್ಟಿಲನ್ನು ಏರಬೇಕಾಯಿತು. ಎರಡೂ ಬಾರಿಯೂ ನ್ಯಾಯಾಲಯ ಕೃಷಿಕರ ಪರವಾಗಿ ಮಾತನಾಡಿದ್ದು ಗೌರವಪೂರ್ಣವಾಗಿದೆ. ಆದರೂ ಆಡಳಿತ ಮಾತ್ರಾ ಎಡವಿದೆ.
ನ್ಯಾಯಾಲಯದ ಮೊರೆ ಹೋಗಿದ್ದ ಕೃಷಿಕರ ಪೈಕಿ ಅಳಿಕೆ ಗ್ರಾಮದ ಕೃಷಿಕ ನಿಶಾಂತ್ ನಾರಾಯಣ ಅವರೂ ಇದ್ದರು. ನ್ಯಾಯಾಲಯದ ತೀರ್ಪಿನ ಬಳಿಕವೂ ಕೋವಿ ಹಸ್ತಾಂತರ ನಡೆದಿಲ್ಲ. ಹೀಗಾಗಿ ವಿಟ್ಲ ಬಳಿಯ ಅಳಿಕೆ ಗ್ರಾಮದ ಕೃಷಿಕರು ಕಾಡುಹಂದಿ, ಕೋತಿಗಳ ಉಪಟಳದಿಂದ ಕಂಗಾಲಾಗಿದ್ದು, ಅಳಿಕೆ ಗ್ರಾಮದ ಕೃಷಿಕ ನಿಶಾಂತ್ ನಾರಾಯಣ ಬಿಲ್ಲಂಪದವು ಎಂಬವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರು, 112 ತುರ್ತು ಸಂಖ್ಯೆಗೆ ಕರೆಮಾಡುವಂತೆ ಜಿಲ್ಲಾಧಿಕಾರಿ ಸಲಹೆಯನ್ನು ನೀಡಿದ ಮೇರೆಗೆ ಬಳಿಕ 112 ತುರ್ತು ಸಂಖ್ಯೆಗೆ ಕರೆ ಮಾಡಿದರು. ಕಂಟ್ರೋಲ್ ರೂಂ ಅಧಿಕಾರಿಗಳ ಸೂಚನೆಯಂತೆ ನಿಶಾಂತ್ ಅವರ ಮನೆ ಅಂಗಳಕ್ಕೆ 112 ಸಿಬ್ಬಂದಿಗಳು ಬಂದಿದ್ದಾರೆ.ಕೋವಿ ಹಸ್ತಾಂತರ ಮಾಡಿದ್ದಾರೆ.
ಇದೇ ವೇಳೆ ಕಡಬ ತಾಲೂಕಿನ ಸವಣೂರು ಗ್ರಾಮದ ಅಗರಿ ಎಂಬಲ್ಲಿ ಕೃಷಿಕ ರತ್ನಾಕರ ಪೂಜಾರಿ ಎಂಬವರ ಮೇಲೆ ಕಾಡು ಹಂದಿ ದಾಳಿ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇಲ್ಲಿ ಹಗಲು ವೇಳೆಯೇ ದಾಳಿ ಮಾಡಿದೆ. ಈಗ ವಿದ್ಯುತ್ ಸಮಸ್ಯೆ ಹಲವು ಕಡೆ, ವಿಪರೀತ ಬಿಸಿಲಿನ ಕಾರಣದಿಂದ ಬಹುತೇಕ ಕೃಷಿಕರು ತೋಟಕ್ಕೆ ರಾತ್ರಿ ವೇಳೆಯೇ ನೀರುಣಿಸುತ್ತಾರೆ. ಹೀಗಿರುವಾಗ ಹಂದಿಗಳು ಕೂಡಾ ಈಗ ನೀರು ಕುಡಿಯುವುದಕ್ಕೆ ತೋಟದ ಆಸುಪಾಸು ಬರುತ್ತದೆ, ದಾಳಿಯಾಗುವುದೂ ಕಂಡುಬರುತ್ತದೆ.
ಕಳೆದ ವರ್ಷ ಕಡಬ ತಾಲೂಕಿನ ಕಾಡಂಚಿನ ಪ್ರದೇಶದಲ್ಲಿ ಕಾಡಾನೆ ದಾಳಿಯಾಗಿ ಕೃಷಿಕ ಗಂಭೀರ ಗಾಯಗೊಂಡಿದ್ದರು. ಕೊಲ್ಲಮೊಗ್ರ ಪ್ರದೇಶದಲ್ಲಿ ಬೆಳಗ್ಗೆ ಹಾಲು ಡೈರಿಗೆ ಹಾಕಲು ತೆರಳುವ ವೇಳೆ ಕಾಡಾನೆ ದಾಳಿ ಮಾಡಿದೆ, ಈ ವರ್ಷ ಕಲ್ಮಕಾರು ಪ್ರದೇಶದಲ್ಲಿ ಕಾಡಾನೆ ಕೃಷಿಗೆ ಹಾನಿ ಮಾಡಿದೆ. ಅಷ್ಟೇ ಅಲ್ಲ, ಹಲವು ಕಡೆ ಮಂಗಗಳು ಈ ಬಾರಿ ವಿಪರೀತ ಕಾಟ ನೀಡುತ್ತಿವೆ.ಇಷ್ಟೆಲ್ಲಾ ಇದ್ದರೂ ಆಡಳಿತಕ್ಕೂ ಕೃಷಿಕನ ಮೇಲೆಯೇ ಏಕೆ ದ್ವೇಷ..?. ಇಷ್ಟೂ ವರ್ಷದ ಇತಿಹಾಸ ನೋಡಿದರೂ ಕೃಷಿಕನ ಕೋವಿಯಿಂದ ಚುನಾವಣೆಯ ವೇಳೆ ಎಲ್ಲೂ ದಾಳಿಯಾದ ಉದಾಹರಣೆ ಎಷ್ಟಿದೆ..? ಅಚ್ಚರಿ ಎಂದರೆ ಚುನಾವಣೆಯ ವೇಳೆ ಕೋವಿಗಳಿಗಿಂತಲೂ ಮಚ್ಚು-ಲಾಂಗುಗಳಿಂದ ದಾಳಿಯಾದ ಘಟನೆಗಳು ಇವೆ. ಅವುಗಳನ್ನು ಡಿಪಾಸಿಟ್ ಇಡುವ ವ್ಯವಸ್ಥೆ ಇಲ್ಲ…!.ಚುನಾವಣೆಯ ಹೆಸರಿನಲ್ಲಿ ಕೃಷಿಕನ ಮೇಲೆ ಏಕೆ ದ್ವೇಷ..? ವಿಪರ್ಯಾಸ ಎಂದರೆ ಯಾವ ಜನಪ್ರತಿನಿಧಿಗಳೂ, ಪಕ್ಷಗಳು ಕೃಷಿಕರ ಈ ಸಮಸ್ಯೆ ಬಗ್ಗೆ ಮಾತನಾಡಿಲ್ಲ…! ಆದರೂ ಓಟು ಕೇಳಲು ಮುಲಾಜಿಲ್ಲದೆ ಕೃಷಿಕನ ಮನೆ ಮುಂದೆ ಹಾಜರು…!
ಈಗಾಗಲೇ ನ್ಯಾಯಾಲಯದ ಮೊರೆ ಹೋಗಿ ಕೃಷಿಕನ ಮನೆ ಬಾಗಿಲಿಗೆ ಕೋವಿ ತಲಪುವ ಹಾಗೆ ಆಗಿದೆ. ಇದನ್ನೇ ಫಾರ್ವಡ್ ಮಾಡುತ್ತಾ ಖುಷಿ ಪಡುವ ಬದಲಾಗಿ ಪ್ರತೀ ಕೃಷಿಕರೂ ಈ ಬಗ್ಗೆ ಧ್ವನಿ ಎತ್ತಬೇಕು. ಯಾವ ಪಕ್ಷಗಳೂ, ಜನಪ್ರತಿನಿಧಿಗಳೂ ಕೃಷಿಕರ ಪರವಾಗಿ ಮಾತನಾಡದೇ ಇರುವಾಗ ಕೃಷಿಕರೇ ಒಂದಾಗಿ ಮಾತನಾಡಬೇಕಿದೆ, ಧ್ವನಿ ಎತ್ತಬೇಕು ಎನ್ನುವುದೇ ಇಲ್ಲಿನ ಸಂದೇಶ. ಮುಂದಿನ ಚುನಾವಣೆಯ ವೇಳೆಗಾದರೂ ಕೃಷಿಕರ ಕೋವಿ ಠೇವಣಾತಿಗೆ ಇತಿಶ್ರೀ ಹಾಕುವಂತಾಗಲು ಆಡಳಿತ.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…