ಪ್ರಧಾನಿ ನರೇಂದ್ರ ಮೋದಿಯವರು, ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್, ಉದ್ಯಮಿ ಮುಖೇಶ್ ಅಂಬಾನಿ, ನಾರಾಯಣ ಮೂರ್ತಿ, ಅರ್ನಬ್ ಗೋಸ್ವಾಮಿ, ರಾಹುಲ್ ಗಾಂಧಿ ಅವರಂತಹ ಪ್ರಭಾವಶಾಲಿಗಳು ಗಟ್ಟಿ ಧ್ವನಿಯಲ್ಲಿ “ಒಮ್ಮೆ 21,000/- ಕಟ್ಟಿ ಪ್ರತಿ ತಿಂಗಳೂ 7 ಲಕ್ಷ ಪಡೆಯಿರಿ” ಎಂದು ಹೇಳುವ ಜಾಹಿರಾತು ಕೇಳಿದವರೆಲ್ಲರೂ ಇದು ಮೋಸ ಎಂದು ಭಾವಿಸಲಾರರು. ಬದಲಿಗೆ “21,000/- ಹೋದರೆ ಹೋಗಲಿ, ಸಿಕ್ಕಿದರೆ ಲಕ್ಷಗಳಲ್ಲಿ ಸಿಗುತ್ತದಲ್ವಾ” ಎಂದು ಹಣ ಹಾಕಿದವರು ಬಲಿಪಶುಗಳಾದಾರು. ಹಾಗೇನಾದರೂ ಆದರೂ ತಾವು ಮೂರ್ಖರಾದ ವಿಷಯವನ್ನು ಅವರು ಯಾರಲ್ಲೂ ಬಾಯಿ ಬಿಡಲಾರರು. ಹೀಗಾಗಿ ಮಂಗ ಮಾಡಲು ಕುಳಿತವನಿಗೆ ಬೆಣ್ಣೆ ಸಿಕ್ಕುವುದು ಗ್ಯಾರಂಟಿ.
“ಈಗ ಅವಕಾಶ ಬಿಟ್ಟರೆ ಇನ್ನೊಮ್ಮೆ ಸಿಗಲಾರದು” ಎಂಬ ಒತ್ತಡದ ಸೂಚನೆಯೂ ಈ ಜಾಹಿರಾತಿನಲ್ಲಿ ಇರುತ್ತದೆ. ಈ ಒತ್ತಡವು ಮೂಲ ಆಮಿಷಕ್ಕೆ ತುಪ್ಪ ಬೆರೆಸಿ ಬಡಿಸಿದಂತಾಗುತ್ತದೆ. ತಕ್ಷಣ ಯೋಚಿಸದೆ ಹಣ ಕಟ್ಟಿದಾತನು ಮತ್ತೊಮ್ಮೆ ಅಂತಹುದೇ ಜಾಹಿರಾತನ್ನು ಬೇರೊಬ್ಬರ ಬಾಯಲ್ಲಿ ಕೇಳಿದಾಗ ಬೆರಗಾಗುತ್ತಾನೆ. ತಾನು ಮೋಸ ಹೋದೆನೇನೋ ಎಂಬ ಅಳುಕು ಬೆಳೆಯುತ್ತದೆ.
ಆಗಾಗ ಮೋಸದ ಜಾಲಗಳಿಗೆ ಬಲಿ ಬಿದ್ದವರ ಕಥೆಗಳು ಪ್ರಸಾರವಾಗುತ್ತಿರುತ್ತವೆ. ಕಡಿಮೆ ಹಣವನ್ನು ಡಬ್ಬಲ್ ಮಾಡಿ ಕೊಡುವ ಭರವಸೆಗಳನ್ನು ನಂಬಿದವರು ಕಷ್ಟಪಟ್ಟು ಸಂಪಾದಿಸಿ ಉಳಿತಾಯ ಮಾಡಿದ ಹಣವನ್ನು ಕೊಟ್ಟು ಕಳಕೊಂಡ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಬಂಗಾರವನ್ನೇ ಅಡವಿಟ್ಟು ಸಾಲ ಮಾಡಿ ಇಂತಹ ಬಂಡವಾಳಕ್ಕೆ ಆಸೆ ಪಟ್ಟವರು ಬಂಗಾರವನ್ನೂ ಹಣವನ್ನೂ ಕಳಕೊಳ್ಳುತ್ತಾರೆ. ವಂಚಕರು ಸರಿಯಾಗಿ ಯೋಜನೆ ರೂಪಿಸಿ ನಾಪತ್ತೆಯಾಗುತ್ತಾರೆ. ಪೊಲೀಸರು ಕೇಸ್ ಹಾಕಿ ಹುಡುಕಿ ಕೊಡುವ ಭರವಸೆ ನೀಡುತ್ತಾರೆ. ದಿನ ಕಳೆದಂತೆ ನೋವಿನ ಕಾವು ಕಡಿಮೆಯಾಗುತ್ತದೆ. ಮತ್ತೆ ಅದು ಮರೆತೇ ಹೋಗುತ್ತದೆ. ವಂಚಕರು ಬೇರೆ ಯಾವುದೋ ಊರಿನಲ್ಲಿ ಸುಖವಾಗಿರುತ್ತಾರೆ. ಒಂದು ವೇಳೆ ಸಿಕ್ಕಿ ಬಿದ್ದರೂ ಜಾಮಿನು ಪಡೆದು ಹೊರಗೆ ಬಂದು ತಮ್ಮ ಸುಖಜೀವನ ನಡೆಸುತ್ತಾರೆ. ಸಾಧ್ಯವಾದರೆ ಮತ್ತೊಂದು ಜಾಲ ಬೀಸಿ ಮತ್ತೊಮ್ಮೆ ಗಂಟು ಕಟ್ಟುತ್ತಾರೆ.
ಇಂತಹುದಕ್ಕೆ ಬಲಿ ಬೀಳುವವರು ಬಡವರೇ ಆಗಿರುತ್ತಾರೆ. ಏಕೆಂದರೆ ಸುಲಭದಲ್ಲಿ ಇಮ್ಮಡಿ ಹಣವನ್ನು ಪಡೆಯುವ ಭಾಗ್ಯದ ಕನಸು ಅವರನ್ನೇ ಸೆಳೆಯುತ್ತದೆ. ತಮ್ಮ ಕಣ್ಣೆದುರೇ ಖಚೇರಿ ತೆರೆದು ಕ್ಲಾರ್ಕ್, ಕೇಶಿಯರ್ ಆಗಿ ಸ್ಥಳೀಯರನ್ನೇ ನೇಮಿಸುತ್ತಾರೆ. ಹೀಗೆ ವಿಶ್ವಾಸ ಬೆಳೆಸಿ ಮತ್ತಷ್ಟು ಮುಗ್ಧರನ್ನು ಭೇಟಿ ಮಾಡಿ ಮನವೊಲಿಸುವಾಗ ನಂಬದಿರುವುದು ಹೇಗೆ? ಈ ಬಗೆಯ ವಿಶ್ವಾಸವು ಎಂದಾದರೊಂದು ಮುಂಜಾನೆ ಹುಸಿಯಾಗುತ್ತದೆ. ಏಕೆಂದರೆ ರಾತೋ ರಾತ್ರಿ ಹಣ ಸಂಗ್ರಹಿಸಿದವರು ಊರು ಬಿಟ್ಟು ತೆರಳಿರುತ್ತಾರೆ. ಕೆಲಸ ಕಳಕೊಂಡ ಅಮಾಯಕ ಕ್ಲಾರ್ಕ್ ಕೇಶಿಯರ್‍ಗಳು ಅಸಹಾಯಕ ಮಿಕಗಳಾಗುತ್ತಾರೆ. ಅಲ್ಲಿಗೆ ಒಂದು ಅಂಕಣ ಮುಗಿಯುತ್ತದೆ.
ಇತ್ತೀಚೆಗೆ ಹೊಸತೊಂದು ಜಾಲ ಶ್ರೀಮಂತರನ್ನು ಬಲೆಗೆ ಕೆಡಹಲು ಅಂತರ್ ಜಾಲದಲ್ಲಿ ಆಮಿಶಗಳನ್ನು ಒಡ್ಡುವ ಜಾಣ ನಡೆಯನ್ನು ಅನುಸರಿಸುತ್ತಿದೆ. ಕೆಲವು ತಿಂಗಳುಗಳಿಂದ ಕಾರ್ಯನಿರತವಾಗಿರುವ ಇದರಲ್ಲಿ ನಮಗೆ ವ್ಯಕ್ತಿಗಳ ಭೇಟಿಯಾಗುವುದಿಲ್ಲ. ಬದಲಿಗೆ ಆರಂಭದಲ್ಲಿ ಹೆಸರಿಸಿದ ಪ್ರಸಿದ್ಧ ವ್ಯಕ್ತಿಗಳೇ ಇದರ ಪ್ರಚಾರಕರಾಗಿ ಮಾತಾಡುವುದು ಕೇಳಿಸುತ್ತದೆ. ಉದಾಹರಣೆಗೆ ಇನ್ಫೋಸಿಸ್‍ನ ಸ್ಥಾಪಕರಾದ ನಾರಾಯಣ ಮೂರ್ತಿಯವರೇ ಇದರ ಆರಂಭದ ಪ್ರಚಾರಕರಾಗಿದ್ದರು. ಅವರ ಧ್ವನಿಯಲ್ಲೇ ಕೇಳಿಸುತ್ತಿದ್ದ ಮಾತುಗಳಿಗೆ ಯಾರಾದರೂ ಮರುಳುಗೊಂಡದ್ದರಲ್ಲಿ ಅಚ್ಚರಿ ಎಲ್ಲ. “ನೀವು ಕೇವಲ 21,000 ರೂಪಾಯಿ ಕಟ್ಟಿ ಈ ಸ್ಕೀಂಗೆ ಸೇರಿ. ಮತ್ತೆ ತಿಂಗಳು ತಿಂಗಳೂ ನಿಮ್ಮ ಖಾತೆಗೆ 17 ಲಕ್ಷ ರೂಪಾಯಿ ಜಮೆಯಾಗುತ್ತದೆ. ನೀವು ಯಾವುದೇ ಕೆಲಸ ಮಾಡದೆ, ಯಾವುದೇ ಒತ್ತಡಗಳಿಗೆ ಈಡಾಗದೇ ಜೀವನ ಪೂರ್ತಿ ಹೀಗೆ ಸಂಪತ್ತನ್ನು ಗಳಿಸುತ್ತ ಸುಖವಾಗಿರಬಹುದು. ನೀವು ಕೇವಲ 21 ಸಾವಿರ ಹಣವನ್ನು ಕೊಟ್ಟರೆ ಪ್ರತಿ ತಿಂಗಳೂ 17 ಲಕ್ಷ ಪಡೆಯುವಂತಹ ಅದ್ಭುತ ಯೋಜನೆಯಲ್ಲಿ ನಿಮ್ಮ ಹಣ ಹೂಡಿಕೆಯಾಗುತ್ತದೆ. ಹಾಗಾಗಿ ನಿಮ್ಮ ಕಷ್ಟವನ್ನು ನಾವು ವಹಿಸಿಕೊಂಡು ನಿಮ್ಮ ಜೀವನವನ್ನು ಸುಖದಾಯಕ ಮಾಡುತ್ತೇವೆ” ಎಂಬರ್ಥದ ಜಾಹಿರಾತು ಮೊಬೈಲಿನಲ್ಲಿ ಕೇಳಿಸುತ್ತದೆ. ಅವರ ಮಾತುಗಳನ್ನು ಕೇಳಿದ ಶ್ರೀಮಂತರು ಮತ್ತು ಮೇಲ್ ಮಧ್ಯಮ ವರ್ಗದವರು “ಹೋದರೆ 21 ಸಾವಿರ ಅಷ್ಟೇ ಅಲ್ಲವೇ? ಸಿಕ್ಕಿದರೆ ಲಕ್ಷಗಟ್ಟಲೆ ಸಿಗುತ್ತದಲ್ವಾ?” ಎನ್ನುವವರು ಈಗ ಭಾರತದಲ್ಲಿ ಸಾಕಷ್ಟಿದ್ದಾರೆ. ಅದೇ ಭರವಸೆಯಿಂದ ಮುಂದುವರಿದಿರುವ ಈ ಜಾಲದ ಪ್ರಚಾರಕರನ್ನು ಮುಖತಃ ನಾವು ಕಾಣಲಾರೆವು, ನಮ್ಮ ಹಣ ಎಲ್ಲಿ ಹೋಯಿತೆಂದು ತಿಳಿಯಲಾರೆವು, ಮೋಸ ಹೋದ ಬಳಿಕ ಮುರ್ಖರಾದ ಬಗ್ಗೆ ಮಾತಾಡಲಾರೆವು.
ಸುಲಭದಲ್ಲಿ ಹಣ ಗಳಿಸುವ ಆಮಿಶವೊಡ್ಡುವ ಆರ್ಥಿಕ ಅಪರಾಧದ ಜಾಲಗಳು ವಿಶ್ವಾದ್ಯಂತ ಇವೆ. ಆದರೆ ಪ್ರಸ್ತುತ ಕಾರ್ಯಾಚರಿಸುತ್ತಿರುವ ಈ ಅಂತರ್ಜಾಲವು ಭಾರತಕ್ಕೆ ಸೀಮಿತ ಎಂತ ಅನ್ನಿಸುತ್ತದೆ. ಏಕೆಂದರೆ “ಕೇವಲ 21,000 ರೂಪಾಯಿಗಳನ್ನು ಒಮ್ಮೆಗೆ ಕಟ್ಟಿ ಪ್ರತಿ ತಿಂಗಳೂ 17 ಲಕ್ಷ ರೂಪಾಯಿ ಆದಾಯ ಪಡೆಯುವ ಯೋಜನೆಯು ಎಲ್ಲ ಭಾರತೀಯರಿಗೂ ಲಭ್ಯವಿದೆ” ಎಂಬ ಜಾಹಿರಾತನ್ನು ಇಂದು (20-08-2025) ಬೆಳಗ್ಗೆ ಮೊಬೈಲ್ ನಲ್ಲಿ ನೋಡಿದೆ. Sajeet Manghat ಎಂಬಾತನ ಹೆಸರಿನಲ್ಲಿರುವ ಈ ಜಾಹಿರಾತು ನನಗೆ ಮುಂಜಾನೆ 4.00ಕ್ಕೆ ಸಿಕ್ಕಿದರೂ ಅದು ಇಂದೇ ಬೆಳಗ್ಗೆ 10.51ಕ್ಕೆ ಮುದ್ರಿತವಾಗಿದೆ. ಅಂದರೆ ಈ ಕೃತ್ಯದ ಮೂಲ ಯಾವುದೋ ಪೂರ್ವ ದೇಶಗಳಲ್ಲಿರಬೇಕು. ಭಾರತದೊಳಗೆ ಅಂತೂ ಅಲ್ಲ. ಏಕೆಂದರೆ ಇಲ್ಲಿಯ 10 ಗಂಟೆಗಿಂತ 6 ಗಂಟೆ ಮೊದಲೇ ಇದು ಪ್ರಕಟವಾಗಿದೆ. ಪ್ರಸಿದ್ಧ ವ್ಯಕ್ತಿಗಳ ಮಾತುಗಳ ರೂಪದಲ್ಲೇ ಕೇಳಿಸುತ್ತಿದ್ದ ಈ ಜಾಹಿರಾತು ಈ ಬಾರಿ ಮುದ್ರಿತವಾಗಿ ಸಿಕ್ಕಿದೆ. ಅದರಲ್ಲಿರುವ ವಿಚಾರ ಈ ಕೆಳಗಿನಂತಿದೆ.
“ಭಾರತದ ವಿವಿಧ ಉದ್ಯೋಗಗಳಲ್ಲಿರುವ ಜನರು ನಮ್ಮಲ್ಲಿ ಕೇವಲ ರೂ 21 ಸಾವಿರದ ಠೇವಣಿ ಇಟ್ಟು ತಿಂಗಳು ತಿಂಗಳೂ ಗಮನೀಯ ಆದಾಯ ಪಡೆಯುವಲ್ಲಿ ಸಫಲರಾಗಿದ್ದಾರೆ. ಒಂದು ಲಕ್ಷಕ್ಕೂ ಮಿಕ್ಕಿದ ಭಾರತೀಯರು ಈ ಪ್ರಾಜೆಕ್ಟ್‍ನಲ್ಲಿ ಭಾಗವಹಿಸಿದ್ದಾರೆ. ಅವರು ಈಗ ಈ ಕೆಳಗಿನ ಸಫಲತೆಯನ್ನು ಕಾಣಿಸುತ್ತಿದ್ದಾರೆ.
- ಯಾವ ದುಡಿಮೆಯನ್ನು ಮಾಡದೆ ಅವರ ಸಮಯವನ್ನೆಲ್ಲ ತಮ್ಮ ಕುಟುಂಬ ಹಾಗೂ ಮಿತ್ರರೊಂದಿಗೆ ಕಳೆಯುತ್ತಿದ್ದಾರೆ.
- ಅವರ ಎಲ್ಲಾ ಸಾಲಗಳನ್ನು ತೀರಿಸಿದ್ದಾರೆ.
- ತಮ್ಮ ಆರ್ಥಿಕ ಹೊಣೆಯನ್ನು ನಿಭಾಯಿಸಿದ್ದಾರೆ.
- ತಮ್ಮ ಕಷ್ಟದಾಯಕ ಹಾಗೂ ತೃಪ್ತಿ ನೀಡದ ಉದ್ಯೋಗಗಳನ್ನು ತೊರೆದಿದ್ದಾರೆ;
- ಉತ್ತಮವಾದ ಮತ್ತು ವಿಶಾಲವಾದ ಮನೆಗಳನ್ನು ಕಟ್ಟಿದ್ದಾರೆ;
- ಆಧುನಿಕ ಆಕರ್ಷಕ ಕಾರುಗಳನ್ನು ಖರೀದಿಸಿದ್ದಾರೆ;
- ಮಕ್ಕಳ ಶಿಕ್ಷಣದ ದುಬಾರಿ ಶುಲ್ಕಗಳನ್ನು ಸಲ್ಲಿಸಿದ್ದಾರೆ;
- ತಮ್ಮ ಕುಟುಂಬ ಸಂಬಂಧಿಗಳಿಗೆ ಹಾಗೂ ಮಿತ್ರರಿಗೆ ಆರ್ಥಿಕ ಸಹಾಯ ನೀಡಿದ್ದಾರೆ;
- ವಿಶ್ರಾಂತಿ, ಪ್ರವಾಸ ಹಾಗೂ ಸುಖಜೀವನ ನಡೆಸುವುದೇ ಅವರ ದಿನಚರಿಯಾಗಿದೆ”.
ಹೀಗೆಲ್ಲಾ ಸ್ವರ್ಗ ಸುಖ ಅನುಭವಿಸಲು ಸಿಗುವುದಾದರೆ ಯಾಕೆ ಬಿಡಬೇಕು? ಹೀಗನ್ನಿಸಿದರೂ ಕೇವಲ 21 ಸಾವಿರಕ್ಕೆ ಇಷ್ಟೊಂದು ದುಡ್ಡು ಹೇಗೆ ಕೊಡುತ್ತಾರೆ ಎಂದು ಅನ್ನಿಸದೆ ಇರದು. ಅದಕ್ಕೆ ಒಂದು ಸಮಜಾಯಿಸಿಯೂ ಈ ಜಾಹಿರಾತಿನಲ್ಲಿದೆ. ಅದೆಂದರೆ ಈ ಪ್ರಾಜೆಕ್ಟ್‍ನ ಹಿಂದೆ ಸುಧಾ ಮತ್ತು ನಾರಾಯಣಮೂರ್ತಿ, ನಿರ್ಮಲಾ ಸೀತಾರಾಮನ್, ಮುಖೇಶ್ ಅಂಬಾನಿ, ಅಮೇರಿಕಾದ ವಾರೆನ್ ಬಫೆಟ್, ಜಾರ್ಜ್ ಸೊರೋಸ್, ಪೀಟರ್ ಲಿಂಚ್, ಡೇವಿಡ್ ಟೆಪ್ಪರ್ ಮತ್ತು ಅನೇಕ ಆರ್ಥಿಕ ದಿಗ್ಗಜರು ಇದ್ದಾರೆ. ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವಯಂ ಚಾಲಿತ ಪ್ರಕ್ರಿಯೆಗಳ ಮೂಲಕ ವ್ಯವಹಾರ ಮಾಡಿ ಈ ಮಟ್ಟದ ಹಣ ಸಂದಾಯ ಮಾಡಲು ಶಕ್ತರಿದ್ದಾರೆ. ಪ್ರತಿದಿನ ಬೆಳಗ್ಗೆ ನಿಧಾನವಾಗಿ ಎದ್ದು 10 ಗಂಟೆ ಹೊತ್ತಿಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂದು ನೋಡುವುದಷ್ಟೇ ನಿಮ್ಮ ಕೆಲಸ.
ಮಾರುಕಟ್ಟೆಯ ಸಂಶೋಧನೆ, ವಿಶ್ಲೇಷಣೆ ಮತ್ತು ಲಾಭದಾಯಕ ವ್ಯವಹಾರಗಳನ್ನು ಹುಡುಕಿ ನಿರ್ಧರಿಸುವ ಕೆಲಸವನ್ನು ಕೃತಕ ಬುದ್ಧಿಮತ್ತೆ (Quantum AI) ಮಾಡುತ್ತದೆ. ನಿಮ್ಮ ಕೆಲಸ ಕೇವಲ ರೂ 21 ಸಾವಿರ ನೀಡಿ ರಿಜಿಸ್ಟರ್ ಮಾಡುವುದಷ್ಟೇ ಆಗಿದೆ. ಸ್ಟೇಟ್ ಬೇಂಕ್ ಒದಗಿಸುವ ಆರ್ಥಿಕ ಭದ್ರತೆಗೆ ಧನ್ಯವಾದ ನೀಡಿರುವ ಈ ಜಾಹಿರಾತನ್ನು ದೃಢಪಡಿಸಿಕೊಳ್ಳಲು ಮೇನೇಜರ್ ಒಬ್ಬರನ್ನು ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ. ಅದರ ಜೊತೆಯಲ್ಲೇ ಒಂದು ಸೂಚನೆಯೂ ಇದೆ. ಮೇನೇಜರರಿಗೆ ತುಂಬಾ ಕಾಲ್‍ಗಳಿರುವುದರಿಂದ ನಿಮ್ಮ ಕಾಲ್‍ಗೆ ಉತ್ತರಿಸಲು ಸಾಧ್ಯವಾಗದಿರಬಹುದು! ಅಂದರೆ ರೂ 21,000 ಕಳಿಸಿ ರಿಜಿಸ್ಟ್ರರ್ ಮಾಡಿರುವ ನೀವು ಉತ್ತರ ಸಿಗದಿದ್ದರೆ ಬೇಸರ ಮಾಡಬಾರದೆಂದು ಪೂರ್ವ ಸೂಚನೆ ಕೊಟ್ಟದ್ದನ್ನು ನೋಡಿದರೆ ಹಣ ಕಳಿಸ್ಬೇಕಾ ಬೇಡ್ವಾ ಎಂದು ಯೋಚಿಸುವ ಹೊಣೆ ನಿಮ್ಮದೇ ಆಗಿದೆ.
ಇದು (Quantum AI) ನ ದುರುಪಯೋಗ. ಒಬ್ಬ ವ್ಯಕ್ತಿ ಸ್ವತಃ ಮಾತಾಡಿದಂತೆ ತೋರಿಸಬಲ್ಲ ಕೌಶಲ ಅದಕ್ಕಿದೆ. ಆದರೆ ಈ ಜಾಲದ ಜಾಹಿರಾತಿನಲ್ಲಿ ಕಾಣಿಸಿಕೊಂಡ ಗಣ್ಯರು ಖಾಸಗಿಯಾಗಿಯಾದರೂ ತಾವು ಮತಾಡಿದ್ದಲ್ಲವೆಂಬ ಬಹಿರಂಗ ಹೇಳಿಕೆಯನ್ನು ನೀಡಬೇಕು. ಅದರಿಂದ ಆ ವಂಚಕರ ಕೃತ್ಯಕ್ಕೆ ಸ್ವಲ್ಪವಾದರೂ ಕಡಿವಾಣ ಬಿದ್ದೀತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ” WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…


