ಭತ್ತಕ್ಕೆ ನ್ಯಾಯಯುತ ಬೆಲೆ ಬರಲಿ | ಕೃಷಿಯನ್ನೂ ಆಪೋಷನ ತೆಗೆದುಕೊಳ್ಳುತ್ತಾ ಕಂಪನಿಗಳು..!

April 9, 2024
9:04 PM

ಅನ್ನದಾತೋ ಸುಖಿಭವ… ನಾನೂ ಒಬ್ಬ ಅಡಿಕೆ ಬೆಳೆಗಾರ ಕೃಷಿಕ(Arecanut Farmer). ಆದರೆ ನಾನು ಅನ್ನದಾತ ಅಥವಾ ನೇಗಿಲ ಯೋಗಿ ಅಲ್ಲ. ಯಾರು ಅನ್ನದಾತ…? ಕಳೆದ ಮೂವತ್ತು ವರ್ಷಗಳಿಂದ ನಮ್ಮ ನಾಡಿನೆಲ್ಲೆಡೆ ನೇಗಿಲಯೋಗಿ ಅನ್ನದಾತ ನಷ್ಟದಲ್ಲೇ ಭತ್ತ(Paddy) ಬೆಳೆಯುತ್ತಿದ್ದ. ಪ್ರತಿ ಕೆಜಿ ಭತ್ತವನ್ನೂ ನಷ್ಟದಲ್ಲೇ ಬೆಳೆಯುತ್ತಿದ್ದ. ಕಿಲೋ ಭತ್ತಕ್ಕೆ ಐವತ್ತು ರೂಪಾಯಿಯಿಂದ ಅರವತ್ತು ರೂಪಾಯಿ ಖರ್ಚು ಮಾಡಿ ಹದಿನೈದು ರೂಪಾಯಿ ಯಿಂದ ಇಪ್ಪತ್ತು ರೂಪಾಯಿ ಮಾತ್ರ ಪಡೆದು ಕೊಳ್ಳುತ್ತಿದ್ದ. ನಾನು ನೋಡಿದ ಹಾಗೆ ಕಳೆದ ವರ್ಷ ಮಾತ್ರ ಭತ್ತ ಕ್ವಿಂಟಾಲ್ ಗೆ ನಾಲ್ಕು ಐದು ಸಾವಿರ ರೂಪಾಯಿಗಳ ದೊಡ್ಡ ಮೊತ್ತದ ಲಾಭ ನೋಡಿದ್ದು. ತಮಿಳುನಾಡಿನ(Tamilnadu) ಕಾವೇರಿ ಹರಿವಿನ ಭತ್ತದ ಕಣಿವೆ… ಕರ್ನಾಟಕದ(Karnataka) ಗಂಗಾವತಿಯ ಭತ್ತದ ವಲಯ , ಆಂದ್ರ, ಪಂಜಾಬ್ ಇತರೆ ರಾಜ್ಯದ ನದಿ ಮುಖಜ ಭೂಮಿಯಲ್ಲಿ ಭತ್ತವನ್ನು ವರ್ಷಕ್ಕೆ ಎರಡು ಮೂರು ಬೆಳೆ ಯನ್ನು ಹೆಚ್ಚಿನ ಇಳುವರಿಯಲ್ಲಿ ಬೆಳೆದು ಬರೀ ಭತ್ತ ದ ಬೆಳೆಯಲ್ಲೇ ಲಾಭದಾಯಕ ಜೀವನ ನೆಡೆಸುವ ರೈತರಿದ್ದಾರೆ‌ . ಆದರೆ ಅವರಿಗೂ ಅಡಿಕೆಯಂತಹ ವಾಣಿಜ್ಯ(Commercial) ಬೆಳೆಯ ಎಕರೆವಾರು ಆದಾಯದೊಂದಿಗೆ ಹೋಲಿಸಿದರೆ ಖಂಡಿತವಾಗಿಯೂ ಆ ಮಟ್ಟದ ಲಾಭವಲ್ಲ.

Advertisement
Advertisement
Advertisement

ಆದರೆ, ನಮ್ಮ ಮಲೆನಾಡು ಕರಾವಳಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನೇಕ ರೈತರು ಪ್ರಕೃತಿ ವಿಕೋಪ, ಕೂಲಿ ಕಾರ್ಮಿಕರ ಕೊರತೆ ಮತ್ತು ಹಾಕಿದ ಬಂಡವಾಳದ ಹೂಡಿಕೆಗಿಂತ ಹಲವಾರು ಪಟ್ಟು ನಷ್ಟ ಆಗುತ್ತದೆ ಎಂದು ಗೊತ್ತಿದ್ದೂ ನಾವು ರೈತರು, ಒಕ್ಕಲು ತನ ನಮ್ಮ ಜೀವ -ಜೀವನ , ನಮ್ಮ ಹಕ್ಕು ನಾವು ಬತ್ತ ಬೆಳೆ ಯಲೇ ಬೇಕು ಎಂದು ನಷ್ಟದಲ್ಲೂ ಬತ್ತ ಬೆಳೆವ ರೈತರು ನಿಜವಾದ ಅನ್ನದಾತರು ಮತ್ತು ನೇಗಿಲ ಯೋಗಿಗಳು.

Advertisement

ನಮ್ಮ ಮಲೆನಾಡು ಕರಾವಳಿ ಮತ್ತು ಸುತ್ತ ಮುತ್ತಲಿನ ರೈತರು ಅಡಿಕೆ ಬೆಲೆ – ಬೆಳೆ ಅಬ್ಬರದ ನಡುವೆಯೂ ಭತ್ತ ಬೆಳೆವ
ಪೂಜನೀಯ “ಭಾವನಾತ್ಮಕತೆಯ ” ಕಾರಣದಿಂದ ಬತ್ತ ಬೆಳೆಯುವ ಕಾರಣಕ್ಕಾಗಿ ಈ ಭಾಗದ ಲಕ್ಷಾಂತರ ಗೋವುಗಳು ಉಳಿದಿದೆ…. ಸರ್ಕಾರ ಅನ್ನ ಭಾಗ್ಯ ಅಕ್ಕಿ ಸಿಗುವ ಮೊದಲು ಕೋಟ್ಯಂತರ ಜನರಿಗೆ ಕೊಂಡು ಉಣ್ಣುವ ಬಜೆಟ್ ಸ್ನೇಹಿ ಜೇಬು ಸುಡದಷ್ಟು ದರದಲ್ಲಿ ಅಕ್ಕಿ ಈ ಭಾಗದ ರೈತರ ಬೆವರ ಶ್ರಮದಿಂದ ಲಭ್ಯವಾಗುತ್ತಿತ್ತು. ಈ ಅನ್ನದಾತರನ್ನ ಅನ್ನ ಉಣ್ಣುವ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸಬೇಕು…

ಅನ್ನದಾತೋ ಸುಖಿಭವ … ಎಂದು ಅನ್ನ ಉಂಡವರು ಹರಿಸಲು ಇಂತಹ ನೂರು ಕಾರಣಗಳಿವೆ… ಕೆಲವೊಮ್ಮೆ ಭತ್ತದ ಬೀಜ ಬಿತ್ತಿ ಸಸಿ ಮಾಡಲೂ ಅಗೇಡಿ ಸಿದ್ದ ಮಾಡಲೂ ನೀರು ಇರದು… ಸಸಿ ಬಂದು ನೆಡುವ ಅವಧಿ ಮುಗಿಯುತ್ತಾ ಬಂದರೂ ಮಳೆ ಬರದು.. ಗದ್ದೆ ನೆಟ್ಟು ಹೊಡೆ ಬರುವ ಸಮಯದಲ್ಲಿ ಮಳೆ ಕೈ ಕೊಟ್ಟು ಗದ್ದೆ ಕುಗರ ತೊಡಗುತ್ತದೆ….. ನೀರಿನ ಕೊರತೆ ,ಮಿಡತೆಯ ಕಾಟ… ಗದ್ದೆ ಚಿಪ್ಪು ಒಡೆದು ಆಗಸದತ್ತ ಮುಖ ಮಾಡುತ್ತಿರುವಾಗಲೇ ಕಾಡು ಪ್ರಾಣಿಗಳ ಹಾವಳಿ ಶುರುವಾಗುತ್ತದೆ..
ಗದ್ದೆ ನೆಟ್ಟ ಒಂದು ತಿಂಗಳ ನಂತರ ಮಲೆನಾಡಿನ ಕೆಲವು ಕಡೆಯಲ್ಲಿ ಗದ್ದೆಯಲ್ಲೇ ಹಕ್ಕೆ ಮನೆ ಮಾಡಿ ರಾತ್ರಿ ಗದ್ದೆಗೆ ದಾಳಿ ಮಾಡುವ ಕಾಡು ಹಂದಿಗಳ ಕಾಯಬೇಕು…

Advertisement

ಈ ಕಾಡು ಹಂದಿಗಳನ್ನಾದರೂ ಸೋಲಾರ್ ಬೇಲಿಗಳಿಂದ ತಡೆ ಮಾಡಬಹುದು ಆದರೆ ಮಂಗಗಳ ಕಾಟ ದಿಂದ ಬತ್ತ ಉಳಿಸಿಕೊಳ್ಳಲು ಬತ್ತದ ಬೆಳೆ ಗಾರ ಕೊನೆಯಲ್ಲಿ ಬತ್ತದ ಮೂಟೆ ಮಾಡಿ ಮನೆಯ ಗೋದಾಮು ಸೇರಿಸುವ ತನಕವೂ ಹೋರಾಟ ಮಾಡಬೇಕು…

ನಮ್ಮ ಮಲೆನಾಡಿನ ಅನೇಕ ಕಡೆಗಳಲ್ಲಿ ಗದ್ದೆ ಬೇಸಾಯ ಮಾಡುವುದನ್ನು ಅನ್ನದಾತ ರೈತ ಮಿತ್ರರು ಸಂಪೂರ್ಣ ಬಿಟ್ಟರೆ ಸುತ್ತ ಮುತ್ತಲಿನ ಅಡಿಕೆ ಬೆಳೆಗಾರರು ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಬತ್ತದ ಬೆಳೆ ಇದ್ದರೆ ಅಡಿಕೆ ರಸ ತುಂಬುವ ಸಮಯದಲ್ಲಿ ಮಂಗಗಳ ಅಡಿಕೆ ಯ ಮೇಲೆ ದಾಳಿ ಮಾಡುವುದು ಸ್ವಲ್ಪಮಟ್ಟಿಗೆ ತಡೆಯಾಗುತ್ತದೆ. ಈಗ ಬತ್ತದ ಬೆಳೆ ಬಹುತೇಕ ಯಾಂತ್ರಿಕ ವಾಗಿ ಒಂದಷ್ಟು ಸಮಸ್ಯೆ ಕಡಿಮೆ ಯಾದರೂ ಬತ್ತ ಕೊಯ್ಲಿಗೆ ಬಂದಾಗ ಮಳೆ ಬಂದರೆ ತೀರಾ ಅಪಾಯ. ಕೆಲವು ಚಿಕ್ಕ ಚಿಕ್ಕ ಬತ್ತದ ಗದ್ದೆ ಯಲ್ಲಿ ಬತ್ತ ಬೆಳೆವ ಬತ್ತದ ಬೆಳೆಗಾರರು ಬತ್ತ ಕೊಯ್ಲು ಮಾಡಲು ಕಾರ್ಮಿಕರನ್ನು ಒಟ್ಟು ಮಾಡಲು ಪಡಿಪಾಟಿಲು ಪಡುವುದು ಅತ್ಯಂತ ಕಷ್ಟ. ಅನೇಕ ಸರ್ತಿ ಬತ್ತ ಕೊಯ್ಲು ಮಾಡಿ ದಡಿ ಒಣಗಲು ಬಿಟ್ಟು ಎರಡು ದಿನ ಬಿಟ್ಟಾಗಲೇ ದಿಡೀರಾಗಿ ಮಳೆ ಬಂದರೆ ಒಂದು ಸೀಝನ್ ಬತ್ತ ಬೆಳೆಯಲು ರೈತ ಪಟ್ಟ ಶ್ತಮ ನೀರಿನಲ್ಲಿ ಹೋಮ… ಬತ್ತದ ಕೊಯ್ಲಿನ‌ ಸಂಧರ್ಭದಲ್ಲಿ ರೈತನ ದುಗುಡ ಆತಂಕಗಳು ಮೇರೆ ಮೀರಿರುತ್ತದೆ. ಬತ್ತ ಒಣಹುಲ್ಲನ್ನ ಅಕಾಲಿಕ ಮಳೆಯ ನಡುವೆ ಹಾಳಾಗದಂತೆ ಉಳಿಸಿಕೊಳ್ಳುವ ಹೋರಾಟದಲ್ಲಿ ರೈತ ಕಂಗಾಲಾಗಿರುತ್ತಾನೆ.

Advertisement

ಇಷ್ಟೆಲ್ಲಾ ಶ್ರಮ ಪಟ್ಟ ರೈತ ತನಗೆ ಸಾಕಾಗಿ ಉಳಿದ ಬತ್ತ ಮತ್ತು ಒಣ ಹುಲ್ಲನ್ನು ಮಾರುಕಟ್ಟೆದಾರ ಕೊಟ್ಟ ಬೆಲೆಗೆ ಮಾರಿ ತೃಪ್ತಿ ಪಡೆಯಬೇಕು.ಆದರೆ ಇತ್ತೀಚಿನ ವರ್ಷಗಳಲ್ಲಿ ಬತ್ತದ ಹುಲ್ಲಿಗೆ ಕೊಂಚ ತೃಪ್ತಿ ದಾಯಕ ಬೆಲೆ ಬಂದಿದೆ. ಈ ತೃಪ್ತಿ ದಾಯಕ ಬೆಲೆ ಪಾಪದ ಅನುತ್ಪಾದಕ ಎಂಬ ಹಣಪಟ್ಟಿಯ ಮಲೆನಾಡು ಗಿಡ್ಡ ತಳಿ ಗಳ ಹೊಟ್ಟೆ ಯ ಮೇಲೆ ಹೊಡೆದು ಮಲೆನಾಡು ಗಿಡ್ಡ ಸಾಕಲು ಗೋಪಾಲಕರಿಗೆ ನಷ್ಟ ವಾಗಿ ಗೋಪಾಲಕರು ಮಲೆನಾಡು ಗಿಡ್ಡ ಸಿಕ್ಕ ಸಿಕ್ಕವರಿಗೆ ಮಾರಿ ಅವು ತಿನ್ನುವವರ ಹಕ್ಕಾಗಿ ಪರಿವರ್ತನೆ ಯಾಗುತ್ತಿರುವುದು ಹುಲ್ಲಿನ ಬೆಲೆ ಹೆಚ್ಚಳದ ದುಷ್ಪರಿಣಾಮ. ಆದರೆ ಇದರ ನಡುವೆಯೂ ಒಂದಷ್ಟು ದೇಸಿ ಹಸುಗಳಿಗೆ ಮಲೆನಾಡು ಕರಾವಳಿಯ ರೈತ ಬತ್ತ ಬೆಳೆಗಾರರಿಂದ ಮೇವು ಲಭ್ಯವಾಗುತ್ತಿದೆ.

ಈಗಲೂ ಅನೇಕ ಊರುಗಳಲ್ಲಿ ವಿಸ್ತಾರ ವಾದ ಬತ್ತದ ಗದ್ದೆ ಬಯಲಿನ ಕಾರಣ ಒಂದಷ್ಟು ಗೋವುಗಳಿಗೆ ಮೇವು ಲಭ್ಯ ವಾಗುತ್ತಿದೆ. ಒಂದು ಕಾಲದಲ್ಲಿ ನಮ್ಮ ಮಲೆನಾಡಿನಲ್ಲಿ ಕಂದಕದ ಕಣಿವೆಯ ನಡುವೆ ಮಾತ್ರ ನೆಲೆ ಗೊಂಡಿದ್ದ ಅಡಿಕೆ ಬೆಳೆ ಇಂದು ನೀರಾವರಿ ಕ್ರಾಂತಿಯಿಂದ ಮಲೆನಾಡಿನ ಗುಡ್ಡ ಬೆಟ್ಟ ಬಯಲು ಬ್ಯಾಣ ಕಾಡು ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ. ಈ ಆಹುತಿ ಯ ಆಸ್ವಾದನೆಯಲ್ಲಿ ಮಲೆನಾಡಿನ ಬೃಹತ್ ನೀರಿಂಗಿಸುವ ಟ್ಯಾಂಕ್ ಆಗಿದ್ದ ಸಮೃದ್ಧ ಬತ್ತದ ಗದ್ದೆಯನ್ನೂ ಆಹುತಿ ಮಾಡಿಕೊಂಡು ಅಡಿಕೆ ತೋಟವಾಗಿ ಪರಿವರ್ತನೆ ಮಾಡಿ ಕೊಂಡಾಗಿದೆ. ಇದರ ದುಷ್ಪರಿಣಾಮ ನೇರವಾಗಿ ಮಲೆನಾಡಿನ ಅಂತರ್ಜಲ ದ ಮೇಲಾಗಿದೆ.ಏಪ್ರಿಲ್ ತಿಂಗಳ ನಂತರ ಬಹುತೇಕ ಯಾವುದೇ ಬಾವಿಯಲ್ಲೂ ನೀರಿಲ್ಲ.

Advertisement

ಮಲೆನಾಡಿನಲ್ಲಿ ಇಂದು ಕುಡಿಯುವ ನೀರಿಗೂ ಬೋರ್ ವೆಲ್ ಆಶ್ರಯ ಎನ್ನುವುದು ಅತ್ಯಂತ ವಿಷಾಧನೀಯ ಸಂಗತಿ. ಭತ್ತ ಬೆಳೆವುದನ್ನ ಬಿಟ್ಟು ಒಕ್ಕಲು ತನದ ಭೂಮಿಯ ಜೊತೆಗಿನ ಭಾಂದವ್ಯ ಕಳೆದುಕೊಂಡ ಅನ್ನದಾತ ಇಂದು ಗುಟ್ಕಾ ದಾತ ಮಾತ್ರ. ನಾವು ಅಡಿಕೆ ಬೆಳೆಗಾರರು ಖಂಡಿತವಾಗಯೂ ಬತ್ತ ಬೆಳೆವ ಭಾವನಾತ್ಮಕ ಅನ್ನದಾತ ರೈತನಂತೆ ನಷ್ಟ ಮಾಡಿಕೊಂಡು ಅಡಿಕೆ ಬೆಳೆಯುತ್ತೀವ…?ಮಲೆನಾಡು ಕರಾವಳಿಯ ನೇಗಿಲಯೋಗಿ ಅನ್ನದಾತ ರು ಸಂಪೂರ್ಣವಾಗಿ ಬತ್ತ ಬೆಳೆಯುವುದರಿಂದ ಹಿಂದೆ ಸರಿದರೆ ಖಂಡಿತವಾಗಿಯೂ ಮಲೆನಾಡು ಸಂಪೂರ್ಣ ಬರನಾಡು ಆಗುವುದರಲ್ಲಿ ಸಂಶಯವಿಲ್ಲ…

ಭತ್ತ ಕ್ಕೆ ನ್ಯಾಯಯುತ ಬೆಲೆ ಬರಲಿ : ಬತ್ತ ಬೆಳೆಗಾರನಿಗಾಗುವ ಪ್ರಾಕೃತಿಕ ವಿಕೋಪದ ಸಂಧರ್ಭದಲ್ಲಿ ಆಗುವ ನಷ್ಟ ಕ್ಕೆ ಸರ್ಕಾರ ನ್ಯಾಯಯುತ ಪರಿಹಾರ ನೀಡಲಿ… ಬತ್ತ ಬೆಳೆಯ ರೈತರಿಗೆ ಕೃಷಿ ಇಲಾಖೆ ಪ್ರತಿ ಎಕರೆ ಇಷ್ಟು ಎಂಬಂತೆ ಪ್ರೋತ್ಸಾಹ ಧನ ನೀಡಲಿ…. ಸಮಾಜ ಸಾವಯವ ಬತ್ತದ ಕೃಷಿ ಯನ್ನು ಪ್ರೋತ್ಸಾಹಿಸಿ ಉತ್ತಮ ಬೆಲೆ ಕೊಟ್ಟು ಬತ್ತದ ಬೆಳೆಯನ್ನು ಕೊಂಡು ಭತ್ತ ಬೆಳೆವ ಭತ್ತದ ಬೆಳೆಗಾರರ ಚೈತನ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ. ಇವತ್ತು ನಮ್ಮ ನಡುವಿನ ಮುಕ್ಕಾಲು ಪಾಲು ಜನರಿಗೆ ಮಧುಮೇಹ (ಷುಗರ್ ) ಜನ ಮಿಲ್ ಅಕ್ಕಿ ಅಂಗಡಿಯಲ್ಲಿ ರೆಡಿ ಮೇಡ್ ಅಕ್ಕಿ ಕೊಂಡರೆ ಎಷ್ಟೇ ಚೆನ್ನಾಗಿದೆ ಎಂದರೂ ಅಕ್ಕಿ ಮಾರಾಟಗಾರ ಪಾಲೀಷ್ ಅಕ್ಕಿ ಬೆರಸಿ ಬೆರಕೆ ಅಕ್ಕಿಯನ್ನೇ ಗ್ರಾಹಕ ರಿಗೆ ಮಾರಾಟ ಮಾಡುವುದು. ಮಧುಮೇಹಿಗಳೂ ಪಾಲೀಷ್ ಇಲ್ಲದ ಅಕ್ಕಿ ಬಳಸಿ ಅನ್ನ ಮಾಡಿ ಉಂಡರೆ ಮಧು ಮೇಹ ನಿಯಂತ್ರಣ ಸಾಧ್ಯ. ನಮ್ಮ ಮಲೆನಾಡಿಗರನೇಕರಿಗೆ ಇತ್ತೀಚಿನ ವರ್ಷಗಳಲ್ಲಿ ಸ್ವಂತ ಬತ್ತ ಬೆಳೆಯುವುದನ್ನು ಬಿಟ್ಟು ಮಾರುಕಟ್ಟೆ ಯಲ್ಲಿ ರೆಡಿಮೇಡ್ ಅಕ್ಕಿ ಕೊಂಡು ಮನೆಗೆ ತಂದು ಅನ್ನ ಮಾಡಿ ಉಣ್ಣುವಾಗ ಸ್ವಂತ ಬತ್ತ ಬೆಳೆದು ಅಕ್ಕಿ ಮಾಡಿಸಿ ಉಣ್ಣುವ ಬೆಲೆ ಏನೆಂದು ಅರ್ಥ ವಾಗುತ್ತಿದೆ.

Advertisement

ಎಷ್ಟೇ ದುಡ್ಡು ಕೊಟ್ಟರೂ ರೆಡಿಮೇಡ್ ಅಕ್ಕಿ ಉತ್ತಮವಲ್ಲ‌ . ಬತ್ತ ಕೊಳ್ಳವವರು ನೇರವಾಗಿ ಬತ್ತದ ಬೆಳೆಗಾರ ಉತ್ತಮ ಗುಣಮಟ್ಟದ ಬತ್ತ ಕೊಟ್ಟರೆ ಅದೃಷ್ಟ.ಯಾವಾಗ ನಾವು ರೈತರು ನಮ್ಮ ಅವಶ್ಯಕತೆ ಯ ಕೃಷಿ ಉತ್ಪನ್ನ ವನ್ನು ಮಾರುಕಟ್ಟೆಯಿಂದ ಕೊಳ್ಳಲು ಆರಂಭಿಸು ತ್ತೀವೋ ಆಗಿನಿಂದ ಸ್ವತಃ ಕೃಷಿಕ ರಾಗಿ ನಮಗೇ ಸ್ವಯಂ ಕೃಷಿಯ ಮಹತ್ವ ಅರಿವಿಗೆ ಬರುತ್ತದೆ. ಯಾರೂ ತರಕಾರಿ ಬೆಳೆಯೋಲ್ಲ.. ವಾರ ವಾರವೂ ಪಟ್ಟದ ಸಂತೆ ಗ್ರಾಹಕ ರಿಂದ ಕಿಕ್ಕಿರಿಯುತ್ತದೆ… ಸಂಪೂರ್ಣ ರಾಸಾಯನಿಕ ಯುಕ್ತ ಅನಾರೋಗ್ಯಕರ ತರಕಾರಿ ಕೊಂಡು ತಿಂದು ಅನಾರೋಗ್ಯ ಪಡೆಯುತ್ತೀವಿ. ಮನೆ ಖರ್ಚಿಗಾಗುವಷ್ಟಾದರೂ ಬೆಲ್ಲ ವನ್ನು ನಾವು ಉತ್ಪಾದನೆ ಮಾಡಿಕೊಳ್ಳುತ್ತಿದ್ದೆವು… ಈಗ ನಾವು ಬೆಲ್ಲ ಬೆಳೆಯೋಲ್ಲ. ಮಾರುಕಟ್ಟೆ ಯ ಸುಣ್ಣದ ಸಕ್ಕರೆಯ ಬೆಲ್ಲ ಕೊಂಡು ತಂದು ಕೃತಾರ್ಥ ರಾಗುತ್ತಿದ್ದೇವೆ.. ನಮ್ಮ ಸರ್ಕಾರದ ನೀತಿಗಳು, ಮಾರುಕಟ್ಟೆ ವ್ಯವಸ್ಥೆ, ಹವಾಮಾನ, ಕಾಡು ಪ್ರಾಣಿಗಳ ಹಾವಳಿ, ಕೂಲಿ ಕಾರ್ಮಿಕರ ಕೊರತೆ ಇತ್ಯಾದಿ ವಿಚಾರಗಳು ಈ ದೇಶದ ಕೃಷಿ ಯನ್ನು ಕೊಲ್ಲುತ್ತಿದೆ.

ನಮ್ಮ ಮಾಜಿ ಪ್ರದಾನಿ ಮನ ಮೋಹನ್ ಸಿಂಗ್ ರವರು ನಮ್ಮ ದೇಶದ ಕೃಷಿ ಅವಲಂಬನೆಯನ್ನು ನಲವತ್ತೈದು ಪ್ರತಿಶತ ದಿಂದ ಐದು ಪ್ರತಿಶತ ಕ್ಕೆ ಇಳಿಸ ಬೇಕು ಎಂದು ಹೇಳಿಕೆ ನೀಡಿದ್ದರು. ಅವರೇಕೆ ಹಾಗೆಂದಿದ್ದರು ಎಂದರೆ ಜಾಗತಿಕರಣವಾದ ಮೇಲೆ ಮುಕ್ತ ಕೃಷಿ ಆಯತ ನಿರ್ಯತದ ಕಾರಣದಿಂದಾಗಿ ಇಡೀ ಪ್ರಪಂಚದ ಕೃಷಿ ಭೂಮಿಯಲ್ಲಿ ಬೆಳೆ ಇಳುವರಿ ಭಾರತದ ಕೃಷಿ ಮತ್ತು ಕೃಷಿಕ ಬದುಕಿನ ಮೇಲಾಗುತ್ತಿದೆ. ಭಾರತೀಯ ಕೃಷಿ ಮಾರುಕಟ್ಟೆಗಳು ಇದೀಗ ಬಹುತೇಕ ಕೃಷಿ ಉತ್ಪನ್ನ ಗಳಿಗೆ ಕೇವಲ ಭಾರತೀಯ ಕೃಷಿಕ ರ ಮೇಲೆ ನೆಚ್ಚಿಕೊಂಡಿಲ್ಲ….!!

Advertisement

ಎಲ್ಲೋ ದೂರದ ಬ್ರೆಜಿಲ್ ನಲ್ಲಿ ಅತಿ ಹೆಚ್ಚು ಕಾಫಿ ಇಳುವರಿ ಬಂದರೆ ಇಲ್ಲಿ ಮಲೆನಾಡಿನ ಕೊಡಗು ಚಿಕ್ಕ ಮಗಳೂರಿನ ಕಾಫಿ ಬೆಳೆಗಾರನ ಉತ್ಪತ್ತಿ ಯ ಮೇಲೆ ಪ್ರಹಾರವಾಗುತ್ತದೆ. ಮಲೇಷಿಯಾ ಥಾಯ್ಲಾಂಡ್ ಶ್ರೀ ಲಂಕಾದ ಹೆಚ್ಚುವರಿ ಅಡಿಕೆ ಮಲೆನಾಡು ಬಯಲು ಸೀಮೆಯ ಅಡಿಕೆ ಬೆಳೆಗಾರರ ಆರ್ಥಿಕತೆಯ ಮೇಲೆ ಹೊಡೆತ ನೀಡುತ್ತದೆ. ‌ಅಲ್ಲೆಲ್ಲೋ ದಕ್ಷಿಣ ಆಫ್ರಿಕಾದ ಬತ್ತದ ಬೆಳೆ ನಮ್ಮ ಗಂಗಾವತಿ ಬತ್ತದ ಬೆಳೆಗಾರನ ಶ್ರಮಕ್ಕೆ ನಷ್ಟ ಪೆಟ್ಟು ನೀಡುತ್ತದೆ… ಹೌದು ಇಂದು ಭಾರತೀಯ ರೈತ ಜಾಗತಿಕರಣದ ನಂತರ ನಾನು ಅನ್ನದಾತ ಎನ್ನುವ ಆತ್ಮ ವಿಶ್ವಾಸ ಕಳೆದುಕೊಂಡಿರು ವುದು ಸತ್ಯ… ಜಾಗತಿಕರಣದ ನಂತರದ ವರ್ಷಗಳಲ್ಲಿ ಯಾವುದೇ ರೈತರೂ “ನಾವಿಲ್ಲದೇ ಜಗತ್ತಿಲ್ಲ ” ಎಂಬ ಭಾವ ಮಾಡಿಸಿಕೊಳ್ಳಲು ಸಾದ್ಯವಿಲ್ಲ. ಇವತ್ತು ಕೃಷಿ ಕೃಷಿಕರು ಅನಿವಾರ್ಯ ವಲ್ಲ ಎನ್ನುವ ಸ್ಥಿತಿಗೆ ಬಂದಿದೆ. ಕೃಷಿ ಯಲ್ಲಿ ಬಹುತೇಕ ಯಾಂತ್ರಿಕತೆ ಮತ್ತು ಭಾವನಾತ್ಮಕತೆ ಸತ್ತ ವ್ಯವಸ್ಥೆ ಯ ಕಾರಣ ನಿಜವಾದ ಅನ್ನ ದಾತರೂ ನಾವು ರೈತರು ನಾವು ಅನ್ನದಾತ ರು ಎಂಬ ಹೆಮ್ಮೆ ಪಡುವ ಹಾಗಿಲ್ಲ. ಭಾರತೀಯರಂತೂ ಹಾಗೆ ಅಹಮು ಮೂಡಿಸಿಕೊಳ್ಳುವ ಹಾಗಿಲ್ಲ…!!

ಜಾಗತಿಕ ಬಂಡವಾಳ ಷಾಹಿ ಕಂಪನಿಗಳು ಇಡೀ ಭಾರತದಲ್ಲಿ ಉಳಿದಿರುವ ಏಕೈಕ “ಭಾರತೀಯತೆಯಾದ ಕೃಷಿ” ಯನ್ನೂ ಆಪೋಷಣ ತೆಗೆದುಕೊಳ್ಳುವತ್ತ ಸಾಗುತ್ತಿರುವುದಂತೂ ನಿಚ್ಚಳ… ಈ ಎಲ್ಲಾ ಹೋರಾಟ ಗೊಂದಲ ಗಳ ನಡುವೆ ಸಮಸ್ತ ಭಾರತೀಯರಿಗಾಗಿ ಬತ್ತ ರಾಗಿ ಜೋಳ ಗೋಧಿ ಸಿರಿಧಾನ್ಯಗಳ ಬೆಳೆವ ನಿಜವಾದ “ಅನ್ನದಾತ” ರಿಗೆ ನಮೋ ನಮಃ….

Advertisement
ಬರಹ :
ಪ್ರಬಂಧ ಅಂಬುತೀರ್ಥ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror