“ಏ ತಮ್ಮಾ ಮುಂದ ದೊಡ್ಡವರ ಆಗಾನ್ ಯಾರ್ಯಾರು ಏನೇನ್ ಆಗ್ತೀರಿ?” ಅಂತ ಕನ್ನಡ ಸಾಲಿ ಮಾಸ್ತರ್(Teacher) ಮಲ್ಲಪ್ಪ ಹುಡುಗೋರಿಗಿ ಸುಮ್ನ ಒಂದು ಪ್ರಶ್ನೆ ಕೇಳಿದ್ರು… “ಭೀಮ್ಯಾ ಎದ್ದ ನಿಲ್ಲು ಹೇಳು ಎನ್ ಆಗಾಂವ?? ಸರ್ ನಾ ಡಾಕ್ಟರ್(Doctor) ಆಗ್ತೇನ್ರಿ, ರಾಮ್ಯಾ ನಿ ಎನ್ ಆಗಾಂವ?? ನಾ ಇಂಜೆನಿಯರ್(Engineer) ಆಗ್ತೇನ್ರಿ ಕಲ್ಲವ್ವ ನೀ ಎನ್ ಆಗಾಕಿ…. ನಾ ಗಗನ ಸಖಿ(Air Hostess) ಏರ್ ಹೊಸಟ್ರೇಸ್ ಆಗ್ತನ್ರಿ ಸರ್” ಹೀಗೆ ಉತ್ತರಗಳು ಮುಂದುವರೆದಿತ್ತು….
ಕೊನೆಯ ಬೆಂಚಿನ ಹುಡುಗ ಹುಡುಗಿಯ ತನಕ ಎಲ್ಲರೂ ಒಂದಲ್ಲ ಒಂದು ಉತ್ತರಗಳನ್ನ ಅವರ ಆಸೆ ಮತ್ತು ಕನಸಿನ ಎತ್ತರಗಳನ್ನ ಹೇಳತೊಡಗಿದ್ದರು. ಐ ಎ ಎಸ್, ಐ ಪಿ ಎಸ್, ಕೆ ಎ ಎಸ್, ಪೊಲೀಸ್, ಮಿಲಿಟರಿ ಹೀಗೆ ಮಕ್ಕಳು ದೊಡ್ಡ ದೊಡ್ಡ ಗುರಿಗಳನ್ನ ಹೇಳಾತ್ತಿದ್ದರ ಮಾಸ್ತರ ಕಣ್ಣಾನ ನೀರು ನಿಧಾನಕ್ಕ ಕಪಾಳಕ್ ಇಳಿಯಾಕ ಹತ್ತಿದ್ವು ಎಲ್ಲ ಹುಡುಗೋರು “ಸರ್ ಏನಾತ್ರಿ ಸರ್ ನಾವೇನರೆ ತಪ್ಪ ಹೇಳಿವಿ ಏನ್ರಿ, ನಮ್ ಕಡೆ ಇದೆಲ್ಲ ಆಗುದಿಲ್ಲ ಅಂತ ಅಳಾಕ್ ಹತ್ತಿರಿ ಏನ್ರಿ? ನಾವು ಬಡವರ ಮಕ್ಕಳ ಅದೇವಿ ನಮ್ ಕಡೆಯಿಂದ ಆಗುದಿಲ್ಲ ಅನ್ಕೊಂಡಿರಿ ಏನ್ರಿ” ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದ್ದರೆ ಮಲ್ಲಪ್ಪ ಮಾಸ್ತರ ಒಂದ್ ಮಾತ್ ಕೇಳಿದ್ರು “ನೀವೆಲ್ಲಾ ದೊಡ್ಡ-ದೊಡ್ಡ ಆಫಿಸರ್ ಆಗ್ರಿಪಾ… ನನಗ್ ಖುಷಿ ಐತಿ ಆದ್ರ ಒಬ್ರು ರೈತರ(Farmer)ಆಗಲಿಕ್ ಮುಂದ ಅನ್ನ ಹೆಂಗ್ ಉಣ್ಣವರು ಹೊಟ್ಟಿಗೆ ಎನ್ ತಿನ್ನವರು?” ಅಂತ ಕೇಳಿದ್ದಕ್ ಹುಡುಗೋರ ಕಡೆ ಉತ್ತರ ಇರಲಿಲ್ಲ. ಅದರಾಗ ನೀಲವ್ವ ಸ್ವಲ್ಪ ತಿಳದಾಕಿ ಇದ್ಲು, ಅದಕ್ ಅಕಿನ ಸಾಲಿ ಕ್ಯಾಪ್ಟನ್ ಮಾಡಿದ್ರು, “ಅಲ್ರಿ ಸರ್ ನಮ್ ಅಣ್ಣ ರೈತ ಅದಾನ್ರಿ ಎಲ್ಲರೂ ನೌಕ್ರಿ ಇರು ಗಂಡ ಬೇಕ ಅಂತಾರು, ಮತ್ ರೈತರು, ರೈತರ ಮಕ್ಕಳಿಗೆ ಹೆಣ್ಣು ಯಾರ್ ಕೊಡವ್ರ್ ಹೇಳ್ರಿ ಸರ್ ಅದಕ ನಾವ್ ಯಾರೂ ರೈತೆಕಿ ಮಾಡಾಕ ಮನಸ್ ಇಲ್ರಿ” ಅಂದಳು….
ಹೌದು ಅಲ್ಲ ಈಗ ಇರೋ ಬರೋ ಜಮೀನ್ ಎಲ್ಲಾ ಸೈಟ್ ಆಗಾತಾವು, ಹಳ್ಳಿ ಹುಡಗೋರ್ ಎಲ್ಲಾ ಸಿಟಿಗಿ ದುಡಿಯಾಕ್ ಹೊಂಟಾವು, ದನ ಕರಗೋಳು ಕಸಾಯಿ ಖಾನೆ ಸೇರಾಕ್ ಹತ್ಯಾವು,ನೂರು ಮಂದಿ ಮೂರು ದಿನಾ ಮಾಡ್ತಿದ್ದ ಕೆಲಸ ಒಂದು ಮಶೀನ್ ಮೂರು ತಾಸಿನ್ ಒಳಗ ಮಾಡಕ್ ಹತ್ಯಾವು ಆದ್ರ ಮುಂದ ಯಾರೂ ರೈತರ ಆಗಾಕ ತಯಾರಿಲ್ಲ ಅಂದ ಮ್ಯಾಲ ನಮ್ ಭವಿಷ್ಯ ಅದ್ ಹೆಂಗ ಇರ್ಬೇಕು? ಅಂತ ನಾವೆಲ್ಲ ಒಮ್ಮೆ ಯೋಚನೆ ಮಾಡಬೇಕು. ಒಂದು ಅಕ್ಕಿ ಕಾಳು ಭತ್ತ ಅಂತ ಭಿತ್ತನೆ ಆಗಿ ನೂರಾ ಇಪ್ಪತೈದ್ರಿಂದ ನೂರಾ ಎಪ್ಪತೈದು ದಿನಕ್ಕೆ ನೂರು ಅಕ್ಕಿ ಕಾಳಾಗುತ್ತ ಆದ್ರ ಅದರ ಬಗ್ಗೆ ಗೊತ್ತೇ ಇಲ್ಲದ ನಾವು ಐದು ನಿಮಿಷದಾಗ ಕುಕ್ಕರ್ ಸೀಟೀ ಹೊಡೆಸಿ ತಾಟಿಗಿ ನಿಡ್ಕೊಂದ್ರ ಮುಗದ ಹೊತು. ಯಾರೋ ಅರ್ಧಕ್ಕ ಕೈ ತೊಳೀತಾರ್, ಇನ್ಯಾರೋ ನಂಗ್ ಅನ್ನಾನ ಬ್ಯಾಡ ಅಂತ ಬಿಟ್ ಬಿಡ್ತಾರ….
ಇನ್ನೊಂದ ಕಡೆ ಇರು ರೈತರ ಬೆಳೆಗೆ ಬೆಲೆನೇ ಸಿಗವಲ್ತು ಅಂತ ಬೀದಿಗೆ ಇಳಿಯಾಕ್ ಹತ್ತಿದ್ರ, ಈ ಕಡೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬಾಕಿ ಉಳಸ್ಕೊತಾರ, ಆ ಕಡೆ ದಲ್ಲಾಳಿಗಳು ಮನಸಿಗಿ ಬಂದ್ ಹಂಗ ಕಡಿಮಿ ರೇಟ್ ಕೇಳಿ ಉಳ್ಳಾಗಡ್ಡಿ, ಟೊಮ್ಯಾಟೊ, ತೊಗರಿಬೇಳೆ, ಸೇರಿದಂಗ ಎಲ್ಲಾ ಬೆಳೆಗಳು ಕೈಗ್ ಬಂದ್ರು ಬಾಯಿಗ್ ಬರಲಾರದ ಹಂಗ ಮಾಡಿ ಇಡ್ತಾರ.. ಹಿಂಗಾಗಿ ರೈತರ ಜೀವನ ಕಷ್ಟ ಅಂತ ತಿಳದು ಅಲ್ಲಿ-ಇಲ್ಲಿ ಆಗೋ ಆತ್ಮಹತ್ಯೆ ಸುದ್ದಿ ಕೇಳಿ ಮನಸು ಬಾಳ ಅಂದ್ರೆ ಭಾಳ ಮರಗಾಕ್ ಹತ್ತೇತಿ, ಒಂದು ಕಡೆ ಸರ್ಕಾರ ಸಾಲ ಮನ್ನಾ ಮಾಡಿದ್ರು ಸಾಲದ ಸುಳಿಯಿಂದ ರೈತರು ಹೊರಗ ಬರಲಾಕ ಆಗವಾತಲ್ಲ ಇದಕ ಮತ್ತು ನೂರೆಂಟು ಕಾರಣ ಅದಾವು….
ಒಂದು ಕಡೆ ದೊಣ್ಣೆ ಹುಳದ ಕಾಟ, ಕಾಂಡ ಕೊರಕ ಹುಳದ ಕಾಟ, ನುಸಿ ರೋಗದ ಕಾಟ, ಬಿಳಿ ಚುಕ್ಕಿ ಕಾಟ, ಸೈನಿಕ ಹುಳಗಳ ಕಾಟ, ಹಿಂಗ ನೂರೆಂಟು ನಮೂನಿ ಕೀಟಗಳ ಕಾಟಕ್ಕ ನೂರೆಂಟು ನಮೂನಿ ಔಷಧ ಸಿಂಪಡನೆ ಮಾಡಿ, ಹಕ್ಕಿ ಕಾದು ರಾಶಿ ಮಾಡಿ, ತರೋದ್ರ ವಳಗ ಅಕಾಲಿಕ ಮಳಿ ಒಮ್ಮೊಮ್ಮೆ ರೈತರನ್ನ ಹೈರಾಣ ಮಾಡಿದ್ರ, ಇನ್ ಒಮ್ಮೊಮ್ಮೆ ಮಳಿ ಸರಿಯಾಗಿ ಆಗಲಾರದ ರೈತರ ಕಣ್ಣಾಗಿನ ನೀರು ಕಪಾಳಕ್ಕ ಬರ್ತಾವು. ಇಷ್ಟೆಲ್ಲದರ ನಡಬಾರಕ ನಮ್ದೇಲ್ಲಿ ಇಡೂನು ಅಂತ ನಕಲಿ ಬೀಜ, ನಕಲಿ ರಸಗೊಬ್ಬರ, ದೊಡ್ಡ ಉದ್ದಿಮೆ ಸ್ಥಾಪನೆ ಮಾಡಾಕ, ಅಷ್ಟೇ ಅಲ್ಲದ ರಾಜ್ಯ ಮತ್ತು ರಾಷ್ಟೀಯ ಹೆದ್ದಾರಿ ಅಂತ ಅಭಿವೃದ್ಧಿ ಹೆಸರ ಒಳಗ ರೈತರ ಜಮೀನು ವಶಕ್ಕೆ ಪಡದು ರೈತರನ್ನ ಮಣ್ಣ ಮಾಡಕೂ ಜಮೀನ್ ಇಲ್ದಂಗ ಮಾಡು ಹುನ್ನಾರಗಳು ನಡಿಯೋದಂತೂ ನಿಂತಿಲ್ಲ ನೋಡ್ರಿ..
“ಒಕ್ಕದಿರೆ ರೈತ ಬಿಕ್ಕುವದು ಜಗವೆಲ್ಲ…ರೈತನ ಹಸಿರೇ ಈ ಜಗದ ಉಸಿರು…ರೈತ ನಮ್ಮ ದೇಶದ ಬೆನ್ನೆಲುಬು” ಅನ್ನುವಂತ ಮಾತು ಬರೇ ಭಾಷಣದಾಗ ಮತ್ತು ಬಾಯಿ ಮಾತಿನ ಒಳಗ ಉಳದ್ರ ಮುಂದೊಮ್ಮೆ ಮನಷ್ಯರೂ ಬೇವಿನ ತಪ್ಪಲ ತಿಂದು ಬದುಕು ಪರಿಸ್ಥಿತಿ ಬಂದಿತು ಅನ್ನು ಭಯ ನನ್ನ ಕಾಡಾಕ ಹತ್ತೇತಿ ಇದೆಲ್ಲ ಕಾಡುವ ಕಾಟದ ವಿಷಯ ಆದ್ರ…. ಇನ್ನ ನಮ್ ರೈತರು ಎನ್ ಕಮ್ಮಿ ಇಲ್ಲ ಬಿಡ್ರಿ.. ಅಕ್ಕಿ, ಗೋಧಿ, ಜ್ವಾಳಾ, ಬ್ಯಾಳಿ-ಕಾಳಾ, ತರಕಾರಿ ಬೆಳಿಯೋದು ಬಿಟ್ಟು ತಂಬಾಕು, ಅರಿಸಿನ, ಕಬ್ಬು, ಅಂತ ಬರೇ ಫಾಯ್ದೆ ಕೊಡು ಬೆಳೆಗಳನ್ನ ಬೆಳದು ಸ್ವಲ್ಪ ದಿನಾನೂ ಕಷ್ಟ ಪಡೋದು ಬಿಟ್ಟು, ಕಡಿಮಿ ಮೆಂಟೇನೆನ್ಸು ಹೆಚ್ಚಿನ ಲಾಭಾ ಅಂತ ಹುಚ್ಚರ ಹಂಗ ವರ್ಸ, ವರ್ಸ, ಒಂದೇ ಬೆಳಿ ಬೆಳದು ಭೂಮಿ ಫಲವತ್ತತೇನು ಹಾಳ ಮಾಡ್ಕೊಂಡು ಮತ್ ಸಾಲದ ಸುಳಿಗಿ ಸಿಗ್ತಾರು.
ಆದ್ರ ಇದನ್ನೆಲ್ಲಾ ಮೀರಿ ಹೊಸ ಹೊಸ ಪ್ರಾಯೋಗಿಕ ಬೆಳೆಗಳನ್ನ, ಮಿಶ್ರ ಬೇಸಾಯ, ಹನಿ ನೀರಾವರಿ, ಸಾವಯವ ಕೃಷಿ ಜೊತೆಗೆ ಸೀಜನಲ್ ಕಾಲಕ್ಕೆ ತಕ್ಕ ಬೆಳೆಗಳನ್ನ ಬೆಳೆಯುವ ರೈತರು ಮತ್ತು ಉಪ ಕಸುಬುಗಳಾದ ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡುತ್ತಾ ತಮ್ಮ ಜಾಣತನದಿಂದ ಯಶಸ್ವಿ ರೈತರು ಅನ್ನಿಸಿಕೊಂಡವರು ಗೆದ್ದು ಬಿಡ್ತಾರು. ಅದಕ್ ನಮ್ ಜಮೀನು ಎಷ್ಟು ಎಕರೆ ಐತಿ ಅನ್ನೋದು ಮುಖ್ಯ ಆಗುದಿಲ್ಲ ಇರು ಭೂಮಿಯೊಳಗ ಹೆಂತಾ ಬೆಳೆ ಬೆಳಿತೀವಿ, ಎಷ್ಟು ದಕ್ಕಿಸಿಕೊಳ್ತೀವಿ? ಮತ್ತು ನಾಲ್ಕ್ ಮಂದ್ಯಾಗ ಹೆಂಗ್ ಸೈ ಅನ್ನಿಸ್ಕೊತೇವಿ ಅನ್ನೋದು ಭಾಳ ಅಂದ್ರ ಭಾಳ ಮುಖ್ಯ ಆಗ್ತದ.
“ದಾನೆ-ದಾನೆ ಪೇ ಲಿಖಾ ಹೇ ಖಾನೆವಲೆ ಕಾ ನಾಮ್ ” ಅನ್ನು ಮಾತು ಮುಂದೊಮ್ಮೆ ನಮಗ ಎದುರಾಗೋಕು ಮೊದಲು ನಾವೆಲ್ಲ ಎಚ್ಛೆತ್ತುಕೊಂಡು ಅನ್ನದಾತನ ಋಣ ತೀರಸಾಕ ಮುಂದಾಗೋಣ. ರೈತರ ಬಟ್ಟೆ ನೋಡಿಯೊ, ಅವರ ಬೆವರಿನ ವಾಸನೆ ನೋಡಿಯೊ ಮುಖ ಹೊರಳಿಸುವ ಬದಲು ಅವರ ತ್ಯಾಗದ ಗುಣಕ್ಕೆ ತಲೆ ಬಾಗೋಣ. ಸಹಜ ಕೃಷಿಯತ್ತ ಯುವ ಜನತೆ ಮುಖ ಮಾಡುವಂತಾಗಲಿ, ಡಾಕ್ಟರ್ ಮಗ ಡಾಕ್ಟರ್ ಆಗದೆ ಇದ್ದರೆ ಇಂಜನಿಯರ್ ಮಗ ಮತ್ತೊಬ್ಬ ಇಂಜನಿಯರ್ ಆಗದೇ ಇದ್ದರೂ ಜಗತ್ತು ನಡೆದಿತು. ಆದರೆ ರೈತನ ಮಗನೊಬ್ಬ ಕೃಷಿಯಿಂದ ವಿಮುಖನಾಗದ ಹಾಗೆ ಕೃಷಿ ಎಂದರೆ ಮೂಗು ಮುರಿಯದ ಹಾಗೆ ನೋಡಿಕೊಳ್ಳುವ ಪ್ರಯತ್ನ ಮಾಡೋಣ ಒಂದು ಹೊತ್ತಿನ ಮೊದಲ ತುತ್ತು ಹೊಟ್ಟೆಗೆ ಇಳಿಯುವ ಮುನ್ನ ಅನ್ನದಾತನ ಹೊಟ್ಟೆ ತಣ್ಣಗಿರಲಿ ಅಂತ ನಾವು ನೀವೆಲ್ಲ ಆ ದೇವರಲ್ಲಿ ಪ್ರಾರ್ಥಿಸೋಣ ಜೈ ಜವಾನ್ ಜೈ ಕಿಸಾನ್ ಏನಂತೀರಿ???