ಡಿಸೆಂಬರ್ 29, ರಾಷ್ಟ್ರ ಕವಿ ಕುವೆಂಪುರವರ(Rastrakavi Kuvempu) ಜನ್ಮ ದಿನ(Birthday), ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ!(Vishwamanava) ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ(Cast) ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.
ವಿಶ್ವ ಮಾನವ ಗೀತೆ
ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಪಂಚಮಂತ್ರ
ಪ್ರತಿಯೊಂದು ಮಗುವೂ ಹುಟ್ಟುತ್ತಲೆ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ ‘ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು.
ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ ‘ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; “ಮನುಜಮತ”. ಆ ಪಥ ಈ ಪಥ ಅಲ್ಲ; “ವಿಶ್ವಪಥ”. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ “ಸರ್ವೋದಯ”. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; “ಸಮನ್ವಯ”ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ “ಪೂರ್ಣದೃಷ್ಟಿ”.
ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.
ಸಪ್ತ ಸೂತ್ರಗಳು
ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆಸಂಪಾದಿಸಿ “ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು. ಯುಗದ ಕವಿಗೆ ಮಣ್ಣಿನ ಮಕ್ಕಳ ನುಡಿನಮನಗಳು
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…