ಹಾಲು ಮಜ್ಜಿಗೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಹಸಿದಾಗ ಬಟ್ಟಲು ತುಂಬಾ ವಿವಿಧ ಬಗೆಗಳಿರಬೇಕಿಲ್ಲ. ಒಂದು ಮುಷ್ಟಿ ಅನ್ನ ,ಚಿಟಿಕೆ ಉಪ್ಪು ,ನೀರು ಮಜ್ಜಿಗೆ ಸಿಕ್ಕಿದರೆ ಅಂದಿಗೆ ಅದೇ ಮೃಷ್ಟಾನ್ನ. ತಲೆಯಲ್ಲಿ ಬೇರೆ ಕೆಲಸಗಳ ಬಗ್ಗೆ ವಿಚಾರಗಳು ಓಡುತ್ತಿರುವಾಗ ಅಗತ್ಯ ವಿಷಯಕ್ಕಷ್ಟೇ ಗಮನಹರಿಸುತ್ತೇವೆ. ಇಂತಹುದೇ ಆಗ ಬೇಕು ಹೀಗೆ ಆಗ ಬೇಕು ಎಂಬ ವಿಷಯಗಳು ನಗಣ್ಯವಾಗಿರುತ್ತವೆ.
ಆದರೆ ಒಂದು ಹಂತದವರೆಗೆ ಇದು ನಡೆದು ಬಿಡುತ್ತದೆ. ನಮ್ಮದೂ ಅಂತ ಒಂದು ಮನೆ , ಕುಟುಂಬ ಬಂದಾಗ ವೈಯಕ್ತಿಕ ವಿಷಯಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಮನೆಯವರ ಆದ್ಯತೆಗಳಿಗೆ ಜಾಸ್ತಿ ಗಮನಹರಿಸ ಬೇಕಾಗುತ್ತದೆ. (ಅಪ್ಪ, ಅಮ್ಮನ ಜೊತೆಗಿರುವಾಗ ನಾವೇ ಅವರ ಆದ್ಯತೆ ಆಗಿರುತ್ತೇವಲ್ಲಾ!)ಕಲಿಕೆ ಉದ್ಯೋಗ ಅಂತ ನಮ್ಮ ಕೆಲಸ ಮಾಡಬೇಕಾಗಿ ಬಂದಾಗ ಸ್ವಲ್ಪ ಸಮಯದೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳ ಬೇಕಾಗುತ್ತದೆ. ಅಡುಗೆ, ಆಹಾರ ಅಂತ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದ್ದ ಅಲ್ಪ ಸಮಯದಲ್ಲಿ ಪೌಷ್ಟಿಕ ಆಹಾರ ಸೇವಿಸುವುದು ಬುದ್ಧಿವಂತಿಕೆ.
ಆದರೆ ಆಗಷ್ಟೇ ಕಲಿಕೆಯ ಹಂತದಲ್ಲಿರುವುದರಿಂದ ಯಾವುದು ಒಳ್ಳೆಯದು , ಹಾಳು ಎಂದು ವಿಂಗಡಿಸುವ ವಿವೇಚನೆ ಬೆಳೆದಿರುವುದಿಲ್ಲ. ಹಿರಿಯರು ಹೇಳಿದರೂ ಕೇಳುವ ತಾಳ್ಮೆ ರೂಡಿಸಿ ಕೊಂಡಿರುವುದಿಲ್ಲ. ರೆಡಿ ಟು ಈಟ್ ಪ್ಯಾಕೇಟ್ ತಂದು. ಐದು , ಹತ್ತು ನಿಮಿಷದಲ್ಲಿ ತಯಾರಿಸಿ ತಿಂದು ಪಾತ್ರೆ ತೊಳೆದಿಟ್ಟರೆ ಅಂದಿನ ಕೆಲಸ ಮುಗಿಯಿತು ಎಂಬ ಮನಸ್ಥಿತಿ. ಇಷ್ಟು ಬೇಗ ಮುಗಿಯುವ ಕೆಲಸಕ್ಕೆ ಅಮ್ಮ ಇಡೀ ದಿನ ತೆಗೆದು ಕೊಳ್ಳುತ್ತಾಳಲ್ಲ ನಾನೇ ಜಾಣೆ-ಜಾಣ ಅಮ್ಮನಿಂದ ಅನ್ನಿಸಿದರೂ ಅಚ್ಚರಿಯಿಲ್ಲ. ಆದರೆ ಈ ಎಲ್ಲಾ ಭಾವನೆಗಳು ಬದಲಾಗುವುದು ನಮಗೆ ಅಂದಾಜೇ ಆಗುವುದಿಲ್ಲ. ನಾನು , ನನ್ನದು ಹೋಗಿ ನಮ್ಮದು ಎಂಬ ಭಾವವೇ ಅಪ್ಯಾಯಮಾನ. ಬದುಕಿನ ಸಾರ್ಥಕತೆ ಇರುವುದೇ ಅಲ್ಲಿ. ತವರಲ್ಲಿ ತನಗೇ ಸಿಗುತ್ತಿದ್ದ ಪ್ರಾಶಸ್ತ್ಯ ಇಲ್ಲಿ ಜವಾಬ್ದಾರಿಯಾಗಿ ಪರಿವರ್ತಿತವಾಗುವುದು ಅಚ್ಚರಿಯೇ ಸರಿ. ತಾನು, ತನ್ನ ಹೆತ್ತವರು, ಸಹೋದರ ಸಹೋದರರಿಯರು ಅಷ್ಟೇ ಪ್ರಪಂಚ. ಇನ್ನು ಒಬ್ಬೊಬ್ಬರೇ ಮಕ್ಕಳಾದರೆ ಕೇಳುವುದೇ ಬೇಡ. ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ ಬದಲಾವಣೆಗೆ ಒಗ್ಗಿದವರು ಬೇಗ ಸಂಸಾರದಲ್ಲಿ ಗೆಲ್ಲುತ್ತಾರೆ. ಹೊಂದಿ ಕೊಳ್ಳಲು ಕಷ್ಟವಾದವರು ಸಂಸಾರದಲ್ಲಿ ಸೋಲುತ್ತಾರೆ.