ಸುಮಾರು 20 ಕ್ಕೂ ಅಧಿಕ ಬಾರಿ ಆಪರೇಷನ್, ಹಲವು ಬಾರಿ ವಿದ್ಯುತ್ ಟ್ರೀಟ್‌ಮೆಂಟ್, ಕೀಮೋಥೆರಪಿ, 60 ಕ್ಕೂ ಅಧಿಕ ಬಾರಿ ರಕ್ತ ನೀಡುವಿಕೆ, ಮೂರು ವರ್ಷ ಪ್ರಾಯದಿಂದಲೇ ಆಸ್ಪತ್ರೆ ಓಡಾಟ ಆರಂಭ. ಸುಮಾರು 70 ಲಕ್ಷಕ್ಕೂ ಅಧಿಕ ಖರ್ಚು…!. ಅಬ್ಬಾ……!! ಇಷ್ಟು ಕೇಳುವಾಗಲೇ ಮನಸ್ಸು ಕುಸಿದೇ ಹೋಗಿ ಬಿಡುತ್ತದೆಯೋ ಏನೋ…? ಆದರೆ ಇಡೀ ಸಮಾಜಕ್ಕೆ ಸ್ಫೂರ್ತಿಯಾಗುವ ರೀತಿಯಲ್ಲಿ ಇಷ್ಟೆಲ್ಲಾ ಸಮಸ್ಯೆ ನಡುವೆಯೂ ಖುಷಿಯಿಂದ ಬದುಕು ಸಾಗಿಸುತ್ತಿರುವವರು ಸುಳ್ಯದ ಚಾಂದಿನಿ ಪುರುಷೋತ್ತಮ. ಈ ಕುಟುಂಬದ ಕತೆ ಮಾದರಿಯೂ, ಪಾಸಿಟಿವ್ ಆಗಿದೆ. “ನಿನಗೆ ನಾಳೆ ಇದೆ” ಎನ್ನುವ ಬದುಕಿನ ಟಿಪ್ಸ್ ಇವರ ಇಡೀ ಜೀವನವನ್ನು ಸಂತೋಷವಾಗಿರಿಸಿದೆ.
ಇದು ಸುಳ್ಯದ ಚಾಂದಿನಿ ಪುರುಷೋತ್ತಮ ಅವರ ಬದುಕಿನ ಕಥೆ. ಚಾಂದಿನಿ ಅವರಿಗೆ ಸುಮಾರು ಮೂರು ವರ್ಷ ಪ್ರಾಯವಿದ್ದಾಗ ಆರೋಗ್ಯದ ಸಮಸ್ಯೆ ಕಂಡುಬಂದಿತ್ತು. ಅಂದಿನಿಂದ ಆಸ್ಪತ್ರೆ ಮೆಟ್ಟಿಲು ಹತ್ತುತ್ತಲೇ ಬದುಕು ಸಾಗಿಸಿದ ಚಾಂದಿನಿಗೆ “ಬದುಕಿನಲ್ಲಿ ನಾಳೆ ಇದೆ” ಎನ್ನುವ ಭರವಸೆ, ವಿಶ್ವಾಸದಿಂದ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆರೋಗ್ಯಕ್ಕಾಗಿ ಸುಮಾರು 70 ಲಕ್ಷ ಖರ್ಚು ಮಾಡಿದ್ದಾರೆ. ಹಲವು ಬಾರಿ ಆಪರೇಷನ್ ಆಗಿದೆ. ಕೃತಕ ಉಸಿರಾಟ, ವಿದ್ಯುತ್ ಟ್ರೀಟ್‌ಮೆಂಟ್ ಹೀಗೆ ಹಲವು ಚಿಕಿತ್ಸೆಗಳು ನಡೆದಿದೆ. ಇದೆಲ್ಲದರ ನಡುವೆ, ಸಮಸ್ಯೆ ತಿಳಿದೂ ಪುರುಷೋತ್ತಮ ಎಂಬವರು ಚಾಂದಿನಿಗೆ ಬದುಕು ನೀಡಿದರು. ವಿವಾಹವಾದರು. ಈ ನಡುವೆ ಮಗುವನ್ನು ಪಡೆದರು. ಬದುಕು ನೀಡಿದ ಪತಿಗಾಗಿ ಮಗು ಪಡೆದ ಚಾಂದಿನಿ ಅಲ್ಲೂ ವೈದ್ಯಕೀಯ ಜಗತ್ತಿಗೆ ಸವಾಲಾದರು. ಈಗಲೂ ಆರೋಗ್ಯದ ಏರುಪೇರು ನಡುವೆ ಖುಷಿಯಿಂದ ಬದುಕುತ್ತಿದ್ದಾರೆ. ಭರವಸೆಯ ನಾಳೆಯೊಂದಿಗೆ.
ಸುಳ್ಯದ ಧನಂಜಯ ನಾಯ್ಕ್ ಎಂಬವರ ಪುತ್ರಿ ಚಾಂದಿನಿ. ಟೈಲರ್ ವೃತ್ತಿ ಹಾಗೂ ಸಣ್ಣ ಪುಟ್ಟ ಕೆಲಸದೊಂದಿಗೆ ಇಡೀ ಕುಟುಂಬವನ್ನು ಪೋಷಿಸುತ್ತಿದ್ದರು. ಇದರಲ್ಲಿ ಧನಂಜಯ ಅವರ ಪುತ್ರಿ ಚಾಂದಿನಿ ಅವರಿಗೆ ಮೂರು ವರ್ಷ ಪ್ರಾಯವಿದ್ದಾಗ ಆರೋಗ್ಯದ ಸಮಸ್ಯೆ ಕಂಡುಬಂದು ವೈದ್ಯರ ಬಳಿಗೆ ತೆರಳಿದಾಗ ಆರೋಗ್ಯದ ಏರುಪೇರು ತಿಳಿಯಿತು. ಅಂದಿನಿಂದ ಚಿಕಿತ್ಸೆ ನಡೆಯುತ್ತಲೇ ಇದೆ. ಶಾಲೆಗೂ ಸರಿಯಾಗಿ ತೆರಳಲಾಗಲಿಲ್ಲ. ಈ ಸಮಯದಲ್ಲಿ ಚಾಂದಿನಿ ಅವರ ತಾಯಿಯೇ ಗುರುವಾದರು. ಓದು, ಆಟ, ಪಾಠ ಸೇರಿದಂತೆ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರು. ತಾನೊಬ್ಬ ರೋಗಿ ಅಲ್ಲ ಎಂದು ಮನಸ್ಸನ್ನು ಆ ಪೋಷಕರು ಕಟ್ಟಿದರು. ಆರೋಗ್ಯ ಸುಧಾರಣೆಗೆ ಸಾಕಷ್ಟು ವ್ಯಯಿಸಿದರು. ಅಲ್ಲಿ ಇಲ್ಲಿ ಸಹಾಯ ಲಭ್ಯವಾಯಿತು.
Advertisement
ವೈದ್ಯಕೀಯ ಜಗತ್ತಿಗೆ ಸವಾಲಾದ ಚಾಂದಿನಿ ಅವರ ಆರೋಗ್ಯವು ಹಲವು ಸಮಸ್ಯೆಗಳಿಂದ ಕೂಡಿದೆ. ಈಗ ಆರ್ಗನ್ ಥೆರಪಿ ನಡೆಯುತ್ತಿದೆ. ಆರೋಗ್ಯದ ಸಮಸ್ಯೆಗಳ ಪಟ್ಟಿಯೇ ದೊಡ್ಡದಿದೆ. ಕರುಳಿನ ಸಮಸ್ಯೆ, ಲಿವರ್ ಸಮಸ್ಯೆ, ಲಾಲಾರಸದ ತೊಂದರೆ, ರಕ್ತ ಹೀನತೆ ಹೀಗೇ... ಈ ಎಲ್ಲಾ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯಲ್ಲ ಎಂದು ಮನಸ್ಸನ್ನು ಕಟ್ಟಿಕೊಂಡರು. ಸುಳ್ಯದ ಕೆಜಿವಿಯ ಡಾ.ಚಿದಾನಂದ ಅವರು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ. ಜೊತೆಗೆ ಮಂಗಳೂರಿನ ವೈದ್ಯ ಬಳಗ ಇವರಿಗೆ ಧನಾತ್ಮಕ ಶಕ್ತಿ ತುಂಬಿದೆ. ನಿನಗೆ ನಾಳೆ ಎಂದೇ ಬದುಕು ಎಂದು ಹೇಳಿದ್ದು ಬಹುದೊಡ್ಡ ತಿರುವು ಕಂಡಿತು. ಸುಮಾರು 29 ವರ್ಷಗಳಿಂದ ಆರೋಗ್ಯದ ಸಮಸ್ಯೆಯಲ್ಲಿಯೇ ಇರುವ ಚಾಂದಿನಿ, ಸಣ್ಣ ಉದ್ಯೋಗದಲ್ಲಿದ್ದಾರೆ. ಸಂದರ್ಭ ಸಿಕ್ಕಾಗ ವಿವಿಧ ಕಾರ್ಯದಲ್ಲಿ ಭಾಗವಹಿಸುತ್ತಾರೆ.
ಈ ಎಲ್ಲಾ ಸಮಸ್ಯೆಗಳ ನಡುವೆ, ಸುಮಾರು ಐದು ವರ್ಷದ ಹಿಂದೆ ಕಾಸರಗೋಡು ಜಿಲ್ಲೆಯ ಬಂದಡ್ಕದ ಪುರುಷೋತ್ತಮ ಎಂಬವರ ಜೊತೆಗೆ ವಿವಾಹವಾಗುತ್ತದೆ. ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದ್ದೂ ಯುವತಿಗೊಂದು ಬಾಳು ನೀಡುವುದು ನಿಶ್ಚಿತ ಎಂದು ಮದುವೆಯಾದ ಪುರುಷೋತ್ತಮ ಅವರು ಅಂದಿನಿಂದ ಚಾಂದಿನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಾರೆ. ಸಾಕಷ್ಟು ಖರ್ಚು ಮಾಡಿ ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನನಗೆ ಬದುಕುಕೊಟ್ಟ ಪುರುಷೋತ್ತಮರಿಗೆ ಪ್ರತಿರೂಪ ನೀಡಬೇಕೆಂದು ಮಗು ಪಡೆಯಲು ನಿರ್ಧರಿಸಿದಾಗ ವೈದ್ಯ ಲೋಕ ಇದು ಕಷ್ಟ ಎನ್ನುವ ಸಲಹೆ ನೀಡಿತು. ಆರೋಗ್ಯವೇ ಹದಗೆಡಬಹುದು, ಆಪರೇಷನ್ ಕಾರಣದಿಂದ ಹೊಟ್ಟೆಯ ಮಾಂಸಗಳು ದುರ್ಬಲವಾಗಿದೆ ಎಂದರು. ಆದರೆ ಅಲ್ಲೂ ಸವಾಲು ಸ್ವೀಕರಿಸಿ ವೈದ್ಯಕೀಯ ಸಹಾಯ ಪಡೆದು ನಿರಂತರ ಚಿಕಿತ್ಸೆ ಪಡೆಯುತ್ತಲೇ ಏಳು ತಿಂಗಳಲ್ಲಿ ಹೆರಿಗೆ ಮಾಡಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿನ ಆರೈಕೆ ಮಾಡುತ್ತಾ, ಬದುಕಿನಲ್ಲಿ ಉತ್ಸಾಹ ಹೆಚ್ಚಿಸುತ್ತಲೇ ಸಾಗಿದ್ದಾರೆ.ಈಗಲೂ ಪ್ರತೀ 6 ತಿಂಗಳಿಗೊಮ್ಮೆ ಆಸ್ಪತ್ರೆಗೆ ತೆರಳುತ್ತಾರೆ, ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಮತ್ತೆ ಉತ್ಸಾಹದಿಂದ ಓಡಾಡುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಚಾಂದಿನಿ ಅವರ ತಂದೆ ಸಾಕಷ್ಟಯ ಹಣ ವ್ಯಯಿಸಿದ್ದರು. ಅನೇಕರು ಸಹಾಯ ಮಾಡಿದ್ದಾರೆ. ಇಂದಿಗೂ ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. ಸುಳ್ಯದ ಎಂ ಬಿ ಫೌಂಡೇಶನ್ ನ ಎಂ ಬಿ ಸದಾಶಿವ ಹಾಗೂ ಅವರ ಪತ್ನಿ ಹರಿಣಿ ಸದಾಶಿವ ಅವರ ಸಹಿತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ತೊಡಗಿ ಶಾಸಕ ಹರೀಶ್ ಪೂಂಜಾ ಸಹಿತ ಹಲವು ಮಂದಿ ಸಹಾಯ ಮಾಡಿದ್ದಾರೆ. ಇಂದಿಗೂ ಹತ್ತಾರು ಮಂದಿ ಆಸ್ಪತ್ರೆಗೆ ಹಣದ ಅಗತ್ಯ ಬಿದ್ದಾಗ ತಕ್ಷಣದ ನೆರವು ನೀಡುತ್ತಿದ್ದಾರೆ.
ಬದುಕಿನ ಸ್ಫೂರ್ತಿ ಅಂದರೆ ಚಾಂದಿನಿಯವರದ್ದು. ಎಲ್ಲಾ ಆರೋಗ್ಯದ ಸಮಸ್ಯೆ ನಡುವೆ “ನಾಳೆ ಇದೆ” ಎನ್ನುವ ಭರವಸೆಯು ಇಡೀ ಸಮಸ್ಯೆಗಳನ್ನು ದೂರವಾಗಿಸಿದೆ. ಅದರ ಜೊತೆಗೆ ಎಲ್ಲಾ ಸಮಸ್ಯೆಗಳ ಅರಿವಿದ್ದೂ ಚಾಂದಿನಿ ಬದುಕಿಗೆ ಬಾಳು ನೀಡಿದ ಪುರುಷೋತ್ತಮ ಅವರೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಕುಟುಂಬದ ಪಾಸಿಟಿವ್ ಶಕ್ತಿ ಇನ್ನಷ್ಟು ವಿಸ್ತಾರವಾಗುವುದರ ಜೊತೆಗೆ ಸಮಾಜದ ಸಹಕಾರ ಇಂತಹ ಕುಟುಂಬದ ಮೇಲೆ ಇರಲಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement