ಪ್ರಾಕೃತಿಕವಾಗಿ ಕಲಬುರಗಿ ಜಿಲ್ಲೆಯ ಬಹುತೇಕ ನೆಲದ ಒಳ ಪದರದಲ್ಲಿ ಸುಣ್ಣದ ಕಲ್ಲು ಒಳಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಮಣ್ಣಿಗೆ ಅತಿ ನೀರು ಅಪಾಯಕಾರಿ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಅತಿವೃಷ್ಠಿಯಿಂದ ತೊಗರಿ, ಹತ್ತಿ ಹಾಗೂ ಇತರೆ ಬೆಳೆಗೆ ಬರಬಹುದಾದ ಕೀಟ ರೋಗ ಬಾಧೆ ಹಾಗೂ ಅದರ ನಿರ್ವಹಣೆಯ ಕುರಿತು ವಿವರಿಸಲು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಈ ನೆಲದ ಮಣ್ಣು ಒಂದು ಮಳೆಗೆ 84 ದಿನ ತೇವಾಂಶ ಹಿಡಿದಿಡುವ ಶಕ್ತಿ ಹೊಂದಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 2025 ನೇ ಸಾಲಿನ ಜನವರಿ ಯಿಂದ ಸೆಪ್ಟೆಂಬರ್ ವರೆಗೆ ಈ 9 ತಿಂಗಳಲ್ಲಿ ವಾಡಿಕೆಯಂತೆ 609 ಮಿ.ಮೀ ಮಳೆಯಾಗಬೇಕಾಗಿದ್ದು, 900 ಮಿ.ಮೀ ಎಂದರೆ ಶೇ 48% ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಒಟ್ಟು 11 ತಾಲ್ಲೂಕುಗಳಲ್ಲಿ ಚಿಂಚೋಳಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕಾಳಗಿ ವಾಡಿಕೆಯಂತಾಗಿದೆ, ಉಳಿದ 9 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅದರಲ್ಲೂ ಕಳೆದ ಮೇ ತಿಂಗಳಿನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲುವ ಮೂಲಕ ಬೆಳೆಗಳಿಗೆ ಅನೇಕ ರೋಗಗಳು ಭಾದಿಸುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ ಎಂದರು. ಮುಂಬರುವ ಹಿಂಗಾರು ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆವತಿಯಿಂದ ಮುಂದಿನ ಅಕ್ಟೋಬರ್ ಮಾಹೆಯ 3 ರಿಂದ 18 ರ ವರೆಗೆ “ವಿಕಸಿತ ಕೃಷಿ ಸಂಕಲ್ಪಅಭಿಯಾನವನ್ನು” ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

