ಕೊರೋನಾ ಲಾಕ್ಡೌನ್ ಜಾರಿಗಾಗಿ ಹಾಗೂ ಕೊರೋನಾ ಮಾರ್ಗಸೂಚಿಗಳ ಅನುಷ್ಟಾನಕ್ಕಾಗಿ ಪೊಲೀಸರು ಅನಗತ್ಯವಾಗಿ ಬಲ ಪ್ರಯೋಗ ಮಾಡಬಾರದು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಬಲಪ್ರಯೋಗ ಸೇರಿದಂತೆ ಕೊರೋನ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ, ಲಾಕ್ಡೌನ್ ಜಾರಿಗಾಗಿ ಪೊಲೀಸರು ಅನಗತ್ಯವಾಗಿ ಸಾರ್ವಜನಿಕರ ಮೇಲೆ ಬಲ ಪ್ರಯೋಗಿಸಬಾರದು ಎಂದು ಸೂಚಿಸಿದೆ.
ಈ ನಡುವೆ ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ವಾಹನಗಳು ಓಡಾಟ ನಡೆಸಬಾರದು ಎಂಬ ನಿಯಮವನ್ನು ಮೀರಿ ರಸ್ತೆಗೆ ಇಳಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 19,949 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮೇ 10 ರಿಂದ ಪ್ರಾರಂಭವಾದ ಲಾಕ್ಡೌನ್ ಮೇ. 24 ರವರೆಗೆ ಇರಲಿದೆ. ನಿಯಮದ ಪ್ರಕಾರ ಅಲ್ಲಿಯವರೆಗೂ ವಾಹನಗಳು ರಸ್ತೆಗೆ ಇಳಿದರೆ ಪೊಲೀಸ್ ವಶವಾಗಲಿದೆ.
ದ ಕ ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ನಿಯಮ ಉಲ್ಲಂಘನೆಯ ಒಂದು ಪ್ರಕರಣ ದಾಖಲಾಗಿದ್ದರೆ ಮಾಸ್ಕ್ ಧರಿಸದ 291 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದ್ದು ಒಟ್ಟು 63 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದ ಕ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.